ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ

ಬದಲಾಯಿಸಿ

ಕನ್ನಡದ ಅಂಕಣಕಾರರೊಬ್ಬರು ನಾಲ್ಕಾರು ವರ್ಷಗಳ ಹಿಂದೆ ವಿವೇಕಾನಂದರ ಕುರಿತು ಬರೆದ ಲೇಖನವೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಇದು ತುಂಬಾ ವಿವಾದಾತ್ಮಕವಾದ ಲೇಖನವಾಗಿತ್ತು, ಕಾರಣ, ವಿವೇಕಾನಂದರ ಕುರಿತು ಇರುವ ಅತಿಮಾನುಷ ಕಲ್ಪನೆಗಳನ್ನು ಒಡೆಯುವುದು ತನ್ನ ಗುರಿ ಎಂಬುದೇ ಆ ಲೇಖನದ ಘೋಷಣೆ. ಆ ಲೇಖನದಲ್ಲೇ ವಿವೇಕಾನಂದರು ಮತ್ತೊಂದು ರೀತಿಯ ಅತಿಮಾನುಷರಾಗಿ ಚಿತ್ರಿತರಾದುದು ವಿಪರ್ಯಾಸ. ಅದೆಂದರೆ ಅವರು ಅಕ್ಷರಶಃ ಇಂದಿನ ಪ್ರಗತಿಪರರಂತೆ ವಿಚಾರ ಮಾಡುತ್ತಿದ್ದುದು: ಹಿಂದೂ ಧರ್ಮವೊಂದು ನರಕ, ಹಾಗಾಗಿ ಅದು ನಾಶವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು,

ಕ್ರಿಸ್ತನ ಪಾದವನ್ನು ತಮ್ಮ ರಕ್ತದಿಂದ ತೊಳೆದರೂ ಕಡಿಮೆಯೇ, ಭಾರತೀಯ ಸಂಸ್ಕøತಿಗೆ ಇಸ್ಲಾಂನ ಶರೀರ ಇರಬೇಕು, ಬ್ರಾಹ್ಮಣರು ಭಾರತಕ್ಕೆ ಶಾಪ, ಇತ್ಯಾದಿ. ಅವರು ಮಾಂಸವನ್ನು ತಿಂದಿದ್ದು, ಹುಕ್ಕಾ ಸೇದಿದ್ದು, ಹಾಗೂ ಹಲವಾರು ರೋಗಗಳಿಂದ ನರಳಿದ್ದು ಆ ಲೇಖನಕ್ಕೆ ಬಹಳ ನಿರ್ಣಾಯಕವಾಗಿ ಕಂಡಿದೆ. ಏಕೆಂದರೆ ಇಂದ್ರಿಯಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಇಲ್ಲದ ಚಟಗಳನ್ನು, ರೋಗಗಳನ್ನು ಆಹ್ವಾನಿಸಿಕೊಂಡು, ಸಮಾಜವನ್ನು( ತನಗೆ ಬೇಕಾದಾಗ) ಧಿಕ್ಕರಿಸಿ ಬದುಕುವುದು ಪ್ರಗತಿಪರ ಜೀವನ ಶೈಲಿಯ ಸಂಕೇತವಾಗಿದೆ. ಇಂಥವರಿಗೆ ವಿವೇಕಾನಂದರು ಪ್ರಗತಿಪರರಾಗಬೇಕಾದರೆ ಹೀಗೇ ಇರಬೇಕಾದುದು ಸಹಜ.

ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ. ಹಾಗೂ ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ. ಭಾರತೀಯ ಅಧ್ಯಾತ್ಮ ಪರಂಪರೆಯು ಈ ಕುರಿತು ಯಾವುದೇ ಸಂದೇಹವನ್ನೂ ಉಳಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಕಾಳಜಿ ವಹಿಸಬೇಕಾದದ್ದು ವಿವೇಕಾನಂದರ ವಿಚಾರಗಳ ಕುರಿತು ಹುಟ್ಟಿಕೊಳ್ಳಬಹುದಾದ ತಪ್ಪು ಕಲ್ಪನೆಗಳ ಕುರಿತು.

ಅವರ ವಿಚಾರಗಳ ಕುರಿತು ಏನೇನು ವಿಕೃತ ಚಿತ್ರಣಗಳು ಹುಟ್ಟಿಕೊಂಡಿವೆಯೆಂಬುದಕ್ಕೆ ಈ ಮೇಲಿನ ಲೇಖನವೂ ಒಂದು ಉದಾಹರಣೆ. ಇಲ್ಲಿ ವಿವೇಕಾನಂದರ ಭಾಷಣಗಳಿಂದ ನಾಲ್ಕಾರು ಆಯ್ದ ಸಾಲುಗಳನ್ನು ಸಂದರ್ಭದಿಂದ ಎತ್ತಿ ತಮ್ಮ ಪ್ರತಿಪಾದನೆಗೆ ಅಸಹಜವಾಗಿ ಒಗ್ಗಿಸಿಕೊಳ್ಳಲಾಗಿದೆ. ವಿವೇಕಾನಂದರ ಭಾಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂದು ಪ್ರಗತಿಪರರೆಂದು ಕರೆದುಕೊಳ್ಳುವವರು ಪ್ರತಿಪಾದಿಸಬಯಸುವ ಸಮಾಜ ಸುಧಾರಣೆಯ ಕುರಿತು ಒಟ್ಟಾರೆಯಾಗಿ ವಿವೇಕಾನಂದರ ಅಭಿಪ್ರಾಯಗಳು ಏನು ಎಂಬುದು ತಿಳಿದುಬರುತ್ತದೆ. ಈ ಕೆಳಗೆ ನಾನು ವಿವೇಕಾನಂದರ ಹೇಳಿಕೆಗಳನ್ನೇ ಸಂಕ್ಷಿಪ್ತಗೊಳಿಸಿದ್ದೇನೆ.