..........ಪ್ರವಾಸಿ...........

ಆತ ಚಿಕ್ಕವನಿದ್ದಾಗ, ಅಂದರೆ ಮದ್ರಸಾ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ... ಗಲ್ಫ್ ನಿಂದ ರಜೆಯಲ್ಲಿ ಊರಿಗೆ ಬಂದಿರುತ್ತಿದ್ದ ಪ್ರವಾಸಿಗಳು ನಮಾಝಿಗಾಗಿ ಮಸೀದಿಗೆ ಬರುವಾಗ ಅವರ ದುಬಾರಿ ಉಡುಪು, ಅವರು ಹತ್ತಿರ ತಲುಪಿದಾಗ ಘಮಘಮಿಸುತ್ತಿದ್ದ ಸುಗಂಧ ದ್ರವ್ಯದ ಸುವಾಸನೆ, ಮದ್ರಸ ಮಕ್ಕಳಿಗಾಗಿ ಅವರು ವಿದೇಶದಿಂದ ತರುತ್ತಿದ್ದ ಚಾಕೊಲೇಟ್, ಇವೆಲ್ಲವೂ ಅಂದೇ ಆತನ ಮುಗ್ದ ಮನಸ್ಸಿನಲ್ಲಿ ವಿದೇಶದ ಆಸೆ ಮೂಡಿಸಿದ್ದವು.ದುಬೈ ಎಂಬ ಮಾಯಾನಗರಿಯ ಚಿತ್ರಗಳನ್ನೂ ನೋಡ್ಕೊಂಡು ಏನೇನೂ ಕಲ್ಪನೆಗಳನ್ನು ಮಾಡಿಕೊಂಡಿದ್ದ. ಆ ಹುಚ್ಚು ಆಸೆ ಹಾಗೂ ಗಲ್ಫ್ ನಲ್ಲಿ ಅವಿದ್ಯಾವಂತರಿಗೂ ಉದ್ಯೋಗವಿದೆ ಎಂಬ ಭಂಡದೈರ್ಯದಿಂದ ಪದವಿ ಶಿಕ್ಷಣ ಮುಗಿಸಿ, ಮನೆಯಲ್ಲಿ ಉನ್ನತ ಶಿಕ್ಷಣ ಮಾಡಲು ಒತ್ತಾಯಿಸುತ್ತಿದ್ದರೂ ತಿರಸ್ಕರಿಸಿ ತನ್ನ ನೆಚ್ಚಿನ ದುಬೈ ವಿಮಾನ ಹತ್ತಿಯೇ ಬಿಟ್ಟಿದ್ದ.. ಜೀವನದ ಪ್ರಪ್ರಥಮ ವಿಮಾನಯಾನದಲ್ಲಿ ಆತನಲ್ಲಿ ಹುರುಪಿನೊಂದಿಗೆ ಹಲವು ತೆರನಾದ ಕನಸುಗಳಿತ್ತು. ವಿಶ್ವವಿಖ್ಯಾತ ದುಬೈ ವಿಮಾನ ನಿಲ್ದಾಣ ತಲುಪುವ ಹಂತ ಗಾಜಿನ ಕಿಟಕಿಯಿಂದ ಇಣುಕಿ ನೋಡಿದಾಗ, ದೀಪದಿಂದ ಅಲಂಕೃತವಾದ ನಗರ ಆತನ ಕಣ್ಣಿಗೆ ಮದುವಣಗಿತ್ತಿಯಂತೆ ಕಂಡಿದ್ದವು, ಕನಸಿನೊಳಗೆ ಇನ್ನೂ ಹಲವು ಕನಸಿನ ಕೂಸುಗಳು ಹುಟ್ಟಿಕೊಂಡಿದ್ದವು. ಅಂತೂ ವಿಮಾನದಿಂದ ಇಳಿದು ಹೊರಬಂದಾಗ ವಿಝಾ ನೀಡಿದ ಕಂಪೆನಿಯ ವಾಹನ ಆತನನ್ನು ಕರೆದೊಯ್ಯಲು ಅಣಿಯಾಗಿತ್ತು.

ವಾಹನದೊಳಗೆ ಹತ್ತಿದವ ಅಚ್ಚರಿಯಿಂದ ಬಾನೆತ್ತರದ ಕಟ್ಟಡಗಳನ್ನು ಬಿಟ್ಟ ಕಣ್ಣುಗಳಿಂದ ನೋಡತೊಡಗಿದ.. ಮಾಯಾನಗರಿಯ ಸೌಂದರ್ಯವನ್ನು ಅಹ್ಲಾದಿಸುತ್ತಾ.ತಂಪಾದ ವಾಹನದೊಳಗೆ ಮುಂದೆ ಸಾಗತೊಡಗಿತ್ತು ಆತನ ಪಯಣ.. ಮುಂದೆ ಮುಂದೆ ಸಾಗುತ್ತಾ ಕಟ್ಟಡಗಳು ಇಲ್ಲದಾಗಿ, ಬಯಲು ಮರುಭೂಮಿಗಳು ಕಾಣತೊಡಗಿದಾಗ ಹೀಗೂ ಇದೆಯೇ ಎಂಬ ಅನುಮಾನ ಕಾಡತೊಡಗಿತ್ತು.. ಕೊನೆಗೆ ವಾಹನ ಕೈಗಾರಿಕಾ ವಲಯದ ಕಂಪೆನಿಯ ಮುಂದೆ ನಿಂತಿತು.. ರೂಮಿಗೆ ಹೋಗಿ ಪಯಣದ ದಣಿವಾರಿಸಲು ಸಖತ್ತಾಗಿ ನಿದ್ರಿಸಿದ.. ಮಾರನೇ ದಿನ ಕಂಪೆನಿಗೆ ಹೋದಾಗ, ಅಲ್ಲಿದ್ದ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಸಿಕೊಂಡರು. ಒಂದೆರಡು ದಿನ ಸರಿಯಾಗಿ ಜತೆ-ಜೊತೆಯಾಗಿ ಮಾತನಾಡುತ್ತಿದ್ದರು ಸಹೋದ್ಯೋಗಿಗಳು. ಕ್ರಮೇಣ ಅವರ ವರ್ತನೆಗಳು ಬದಲಾಗತೊಡಗಿದ್ದವು. ಹಳ್ಳಿಯನ್ನು ಮೀರಿಸುವ ಕೈಗಾರಿಕಾ ವಲಯ, ಕಾರ್ಮಿಕರೊಂದಿಗೆ ದರ್ಪದಿಂದ ವ್ಯವರಿಸುತ್ತಿದ್ದ ಕಂಪೆನಿಯ ಬಾಸ್ ಮತ್ತು ಅವನ ಮಕ್ಕಳು, ತಿಂಗಳಿಗೆ ಸರಿಯಾಗಿ ವೇತನ ಸಿಗದೆ, ಮೆಸ್ ಹೋಟೆಲಿನಲ್ಲಿ ಹಣ ಕೊಡಲು ಬಾಕಿಯಿದ್ದುದರಿಂದ ಒಂದೆರಡು ದಿನ ಹೊಟ್ಟೆಗೆ ಏನೂ ತಿನ್ನದೆ ಪಾಕಿಸ್ತಾನಿ ಒಣರೊಟ್ಟಿಯನ್ನು, ರೂಮಿನಲ್ಲೇ ಯಾರಿಗೂ ಕಾಣದಂತೆ ನೀರಲ್ಲಿ ಮುಕ್ಕಿ ತಿಂದು ಹಸಿವೆ ನೀಗಿಸಿಕೊಂಡಾಗ, ಸಂಪೂರ್ಣವಾಗಿ ಮನದಟ್ಟಾಗಿತ್ತು, ತಾನು ಸಿನಿಮಾದಲ್ಲಿ, ಫೋಟೋಗಳಲ್ಲಿ ನೋಡಿದ ದುಬೈಯ ಮೆರುಗು, ಹೊಳಪುಳ್ಳದಲ್ಲಾ ನೈಜ ದುಬೈಯ ಜೀವನ ಎಂದು..

ಅದೊಂದು ದಿನ ತನ್ನ ಕಂಪೆನಿಯ ಪ್ಲೋರ್ ಕೆಲಸಗಾರ ಕೇರಳದ ಮಾಹೀನ್ ರವರ ಕಾಲು ಪೋರ್ಕ್ ಅಡಿಗೆ ಸಿಕ್ಕಿ, ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂಧರ್ಭ ಅವರ ಮನೆಯ ವಿಚಾರಗಳನ್ನು ಕೇಳಿದಾಗ "ಇಪ್ಪತ್ತು ವರ್ಷಗಳಿಂದ ನಾನಿಲ್ಲಿರುವೆ, ಕೊನೆಯ ಮಗಳ ಮದುವೆಗೆ ಇನ್ನು ಕೇವಲ ಒಂದು ತಿಂಗಳಿರುವುದು, ನನ್ನ ಅವಸ್ಥೆ ಹೀಗಾದರೆ ಖಂಡಿತವಾಗಿ ಮದುವೆ ನಡೆಯಲ್ಲ" ಎಂದು ಅಲ್ಲೇ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಾಗ ಸ್ವಲ್ಪ ಗಟ್ಟಿ ಮನಸ್ಸಿನಿಂದ ಆ ಸಮಯ ಅವರನ್ನು ಸಮಧಾನಿಸಿದನಾದನೂ, ರೂಮಿಗೆ ಬಂದು ದಿನವಿಡೀ ಕಣ್ಣೀರಿಟ್ಟಿದ್ದ.. ತನ್ನ ತಂಗಿಯ ಮದುವೆಗೂ ಊರಿಗೆ ಹಿಂತಿರುಗಲು ಅನುಮತಿ ಕೊಟ್ಟಿರಲಿಲ್ಲದ್ದರಿಂದ, ಊರಿನಲ್ಲಿ ಮದುವೆ ಸಡಗರದ ದಿವಸವೂ ಕೆಲಸಕ್ಕೆ ಹೋಗಿದ್ದ. ಆ ದಿವಸ ಊಟ ಮಾಡಲು ಆತನಿಗೆ ಸಮಯ ಸಿಕ್ಕಿದ್ದು ನಾಲ್ಕು ಗಂಟೆಗಾಗಿತ್ತು. ಮೆಸ್ ಊಟ ಮಾಡುವಾಗ ಊರಿನ ಮದುವೆ ಸಂಭ್ರಮ, ಮದುವೆಯ ಮಂಟಪ, ಮನೆಯವರನ್ನೆಲ್ಲಾ ನೆನೆದು ಕಣ್ಣುಗಳು ಒದ್ದೆಯಾಗಿಸಿಕೊಂಡಿದ್ದ.. ತನ್ನ ಇಷ್ಟ-ಕಷ್ಟ ತುಂಟಾಟಕ್ಕೆಲ್ಲಾ ಪರ ನಿಲ್ಲುತ್ತಿದ್ದ, ಕಾಲೇಜಿನಲ್ಲಿ ತುಂಟಾಟಿಕೆ ಮಿತಿಮೀರಿ, ಒಂದು ತಿಂಗಳುಗಳ ಕಾಲ ಹೊರದಬ್ಬಲ್ಪಟ್ಟಿದ್ದ ಸಂದರ್ಭದಲ್ಲೂ ಪರ ನಿಂತಿದ್ದ ತನ್ನ ತಾತ, ಈ ಲೋಕದಿಂದ ವಿದಾಯ ಹೇಳಿದ ಸಂಧರ್ಭದಲ್ಲಿ ಅಂತಿಮವಾಗಿ ಅವರ ಮುಖವನ್ನೂ ನೋಡಲಾಗಲಿಲ್ಲ ಎಂಬ ಕೊರಗುಗಳೊಂದಿಗೆ ಕಣ್ಣೀರಿಡುತ್ತಿದ್ದ..

ತ್ಯಾಗಮಯಿಗಳಾದ ಪ್ರವಾಸಿಯ ಬಗ್ಗೆ ವಿವರಿಸುವುದಾದರೆ ಸಮಯ, ವಾಕ್ಯ ಎಂದೂ ಸಾಕಾಗಲ್ಲ, ಜನರು ಪ್ರವಾಸಿಯಾಗಬೇಕು..

ಓ ಪ್ರವಾಸಿ! ತ್ಯಾಗದಿ ಯಾರಿಲ್ಲಿ ನಿನಗೆ ಸರಿಸಾಟಿ??