ಸದಸ್ಯ:Satish.Kammar/sandbox
ಲಂಬಾಣಿ ಕುಣಿತ
ಬದಲಾಯಿಸಿಮುನ್ನುಡಿ
ಬದಲಾಯಿಸಿಸಾಹಿತ್ಯ ಪ್ರಕಾರಗಳಲ್ಲಿ ಲಂಬಾಣಿ ಸಾಹಿತ್ಯ ಭಾಷೆಯು ಪ್ರಮುಖವಾದದ್ದು. ಲಂಬಾಣಿ ಕುಣಿತ ಎಂಬುದು ನೃತ್ಯ ಪ್ರಕಾರ. ಲಂಬಾಣಿ ಜನರ ಮನರಂಜನೆಯ ವಿಧವಾಗಿದೆ. ಆದರೆ ಈ ಕುಣಿತವು ಪ್ರಮುಖವಾಗಿ ಲಂಬಾಣಿ ಜನಾಂಗವನ್ನು ಮಾತ್ರ ಹೊಂದಿದೆ, ಲಂಬಾಣಿ ಜನಾಂಗ ನೃತ್ಯದ ಮೂಲಕ ತಮ್ಮದೇಯಾದ ಸಂಪ್ರದಾಯದ ದೀವಿಗೆಯನ್ನು ಹಚ್ಚುತ್ತಾರೆ. ಆದರೆ ಈ ಕುಣಿತದ ಮೂಲಕ ಪ್ರತಿಯೊಂದು ಮನೆ ಮನೆಯಲ್ಲೂ ಕಣಿತದ ಮೂಲಕ ಯಾವುದೇ ಹಬ್ಬವನ್ನು ಆಚರಿಸುತ್ತಾರೆ.
ಲಂಬಾಣಿ ಜನಾಂಗ
ಬದಲಾಯಿಸಿಕರ್ನಾಟಕದಲ್ಲಿ ಲಾಂಬಾಣಿ ಒಂದು ವಿಶಿಷ್ಟ ಜನಾಂಗ. ರಾಜಸ್ಥಾನದ ಪರಂಪರೆಯವರೆಂದು ಹೇಳಲಾಗುವ ಈ ಜನ ಕರ್ನಾಟಕದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದಾರೆ. ಇವರಿಗೆ ಬಂಜಾರ, ಬಂಜಾಲಿಗ. ಸುಕಾಲಿಗ ಲಮಾಣಿ ಎಂಬ ಹೆಸರುಗಳು ಇವೆ. ಲಂಬಾಣಿಗಳು ಕಷ್ಟಜೀವಿಗಳು. ಇವರು ಸಾಮಾನ್ಯವಾಗಿ ತಮ್ಮದೇ ಆದ ವಸತಿ ತಾಣ ಮಾಡಿಕೊಂಡು ಇರುವುದೇ ಹೆಚ್ಚು. ಇಂತಹ ವಸತಿ ತಾಣಗಳನ್ನು ಲಂಬಾಣಿ ತಾಂಡಾಗಳೆಂದು ಕರೆಯುತ್ತಾರೆ.
ನಂಬಿಕೆ
ಬದಲಾಯಿಸಿಸೇವಾಬಾಯಿ ಇವರ ತಾಂಡಾಕ್ಕೆ ರಕ್ಷಾದೇವತೆ. ಲಂಬಾಣಿಗಳು ಸ್ವಾಭಿಮಾನಿಗಳು. ಭಿಕ್ಷೆ ಬೇಡುವುದು ಇವರ ಧರ್ಮಕ್ಕೆ ವಿರುದ್ದ! ತಮ್ಮ ಸಮಾಜದ ಕಟ್ಟು ಕಟ್ಟಳೆಗಳನ್ನು ಇವರು ಬಿಟ್ಟವರಲ್ಲ. ಪರಸ್ಪರ ವಿರಸ ತಲೆದೋರಿದಾಗ ತಮ್ಮಲ್ಲಿಯೇ ಪರಿಹರಿಸಿಕೊಳ್ಳುವ ವಿವೇಕ ಶಾಲಿಗಳು. ತಾಂಡಾದ ನಾಯಕನೇ ಇವರ ನ್ಯಾಯಾದೀಶ! ಲಂಬಾಣಿಗಳು ಎಷ್ಟು ಕಷ್ಟ ಜೀವಿಗಳೋ ಅಷ್ಟೇ ಸರಸಿಗಳು. ಇವರ ತಾಂಡಾಕ್ಕೆ ಹೋದರೆ ಆ ಸರಸದ ಸಂಭ್ರಮ ನೋಡಬಹುದು. ಲಂಬಾಣಿ ಕುಣಿತ ಈ ಜನಾಂಗದ ಸಾಂಸ್ಕ್ರತಿಕ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ತಾಯಿ ಸೇವಾಬಾಯಿಯನ್ನು ಕೊಂಡಾಡುತ್ತಾ ನೊರೆಂಟು ಹಾಡು ಹೇಳಿಕೊಂಡು ಇವರು ಕುಣಿಯುವ ಬೆಡಗು ಕಣ್ಣಿಗೆ ಹಬ್ಬ! ವೇಷ ಭೊಷಣಗಳಲ್ಲಿ ಮಹಿಳೆಯರು ಇತರರಿಗಿಂತ ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ .
ವೇಷ ಭೂಷಣ
ಬದಲಾಯಿಸಿಕೆಂಪು ಬಣ್ಣದ ಲಂಗ (ಪೇಟಯಾ) ಅದರ ಮೇಲೆ ಮತ್ತು ಅಂಚಿನಲ್ಲಿ ಸೊಗಸಾದ ಕಸೂತಿ ಕೆಲಸ, ಲಂಗದ ಒಡಲಿನಲ್ಲಿ ಸೇರಿಸಿ ಹೋಲಿದಿರುವ ಗಾಜಿನ ಬಿಲ್ಲೆಗಳು, ಬಟ್ಟೆಯ ತುಂಡುಗಳು ಕಲಾತ್ಮಕವಾಗಿ ಹೊಂದಿಸಿ ಕಸೂತಿ ಹಾಕಿದ ಕುಪ್ಪಸ (ಕಾಂಚೋಳಿ) ತಲೆಯ ಮೇಲಿಂದ ಮೇಲು ಸೆರಗಿನಂತೆ ಇಳಿಬಿಟ್ಟ (ರುಂಡ ಮತ್ತು ಮುಂಡದ ಹಿಂಭಾಗವನ್ನು ಆವರಿಸುವ) ರಂಗು ರಂಗಿನ ಮೇಲುವಸ್ತ್ರ (ಚಾಂಟ್ಯ). ಈ ಮೇಲು ವಸ್ತ್ರಕ್ಕೂ ಗಾಜಿನ ಬಿಲ್ಲೆಗಳು ಹಾಗೂ ಕುಸುರಿ ಕೆಲಸದ ಅಲಂಕಾರದ ಜೊತೆಗೆ ಅದರ ಅಂಚಿನಲ್ಲಿ ಚಿಕ್ಕ ಬೆಳ್ಳಿ ಗೆಜ್ಜೆಗಳ ಸರ ಜೋಡಿಸಲ್ಪಟ್ಟರುತ್ತದೆ. ಸಾಮಾನ್ಯವಾಗಿ ಕೆಂಪು ಅಥವಾ ನೀಲಿ ಇವರ ಬಟ್ಟೆಯ ಬಣ್ಣ. ಇನ್ನು ಇವರ ಭೂಷಣಗಳೆಂದರೆ ಕೈಗಳಿಗೆ ಅಗಲ ಪಟ್ಟೆಯಂತಹ ಬಳೆಗಳು. ಇವಕ್ಕೆ ಧಾರವಾಡದ ಕಡೆ "ಭಲ್ಯ"' ಎಂದು ಕರೆದರೆ, ಕಲಬುರ್ಗಿಯವರು ಚೊಡಿ ಎನ್ನುತ್ತಾರೆ. ಕೆಲವು ಕಡೆ ಮಾಡ್ಯ ಎನ್ನುವ ಕಂಚಿನ ಬಳೆ ಧರಿಸಿರುತ್ತಾರೆ. ಕೈಕಾಲು ಬೆರಳುಗಳಿಗೆ ಬೆಳ್ಳಿ ನಾಣ್ಯ ಬೆಸೆದು ಮಾಡಿದ ಉಂಗುರ, ಇವಕ್ಕೆ '"ವಿಂಟೇ"' ಚಾಲಾವಿಂಟೇ'" ಪೊಲಾ"' ಎಂಬ ಹೆಸರುಗಳಿವೆ. ಕೊರಳಲ್ಲಿ ಧರಿಸುವ ಲೋಹದ ಹಾರಗಳಲ್ಲಿ ರಪಿಯಾಹಾರ್ ಎಂಬ ಸರ ಬಹಳ ಮುಖ್ಯವಾದದ್ದು. ಇನ್ನೊಂದು ಎದೆಹಾರಕ್ಕೆ ಬಳಿಚಂದ್ರ, ಅಥವಾ ವಾಂಕ್ಯೆ ಎನ್ನುತ್ತಾರೆ. ಬೇಸರಿ ಅಥವಾ ಪುರಿ ಎಂದು ಕರೆಯಲಾಗುವ ಮೂಗುತಿ ಲಂಬಾಣಿ ಮಹಿಳೆಯರ ಮುಖದ ಸೊಗಸಿಗೆ ಮತ್ತಷ್ಟು ಬೆಡಗನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಈ ಮೂಗುತಿ ಹಿತ್ತಾಳೆ ಅಥವಾ ಬೆಳ್ಳಿಯದು. ಇದರ ಅಂಚಿಗೆ ಮುತ್ತು ಬಿಗಿದಿರಬಹುದು: ಇಲ್ಲವೆ ಅದೇ ಲೋಹವನ್ನು ಮುತ್ತಿನಾಕೃತಿಯಲ್ಲಿ ಬಿಡಿಸಿರಬಹುದು. ಎರಡು ಬದಿಯ ಕೆನ್ನೆಗಳ ಮೇಲೆ ಇಳಬಿಟ್ಟ ಕೊದಲಿನ ಕುಚ್ಚಿಗೆ ಹೆಣೆದು ಜೋಡಿಸಿರುವ ಕೆನ್ನೆಗೆಜ್ಜೆ (ಚೋಟ್ಲೇ) ಹಣೆಯ ಮೇಲೆ ಟೀಕಿ, ತಲೆಗೆ ಗುಗ್ಗರಿ, ಚಾಟಿಯ ಸಿಂಗಾರ. ಕಾಲಿಗೆ ದೊಡ್ಡ ಆಕಾರದ ಬೆಳ್ಳಿಯ ಕಾಲುಕಡಗ ಈ ಕಾಲುಗಡಗಕ್ಕೆ ಧಾರವಾಡದ ಕಡೆ ಕೊಲ್ಟ ಎಂದು, ಬಳ್ಳಾರಿ ಕಡೆ ಗ್ಯಾಂಜೆ, ಎಂದೂ ಕಲಬುರ್ಗಿ ಕಡೆ ಕಲ್ಡ ಎಂದೂ ಕರೆಯುತ್ತಾರೆ. ಕಾಲುಗಡಗದ ಜೊತೆಗೆ ದಂತದ ಬಳೆಗಳು ಇರುತ್ತವೆ. ಕಾಲುಬೆರಳಿಗೆ ಬೆಳ್ಳಿಯ ಉಂಗುರ, ಸೊಂಟಕ್ಕೆ ಕಸೂತಿಯ ಕಡ್ಡಿವಸ್ತ್ರ (ವಾಡಾರ), ರಟ್ಟೆಗೆ ಕಸೋಲೆ ಎನ್ನುವ ಒಂದು ರೀತಿಯ ಬಳೆ, ಕಾಲಿಗೆ ಸಣ್ಣ ಗೆಜ್ಜೆಸರ, ಸೊಂಟದಲ್ಲಿ ಎಲೆ ಅಡಿಕೆ ಇಟ್ಟುಕೊಳ್ಳುವ ಚೀಲ (ಪೊತಾಡಿಯಾ) ಇಟ್ಟುಕೊಂಡಿರುತ್ತಾರೆ.
ಕುಣಿತ
ಬದಲಾಯಿಸಿಲಂಬಾಣಿ ಮಹಿಳೆಯರು ಸಂಜೆಯಾದರೆ ಹಾಡಿ ಕುಣಿಯುತ್ತಾರೆ. ಕುಣಿತಕ್ಕೆ ಇಷ್ಟೆ ಜನ ಇರಬೇಕೆಂಬ ನಿಯಮವೆನಿಲ್ಲಾ. ಮೂರು ನಾಲ್ಕರಿಂದ ಮುವತ್ತು ನಲವತ್ತು ಜನದವರೆಗೂ ಇರಬಹುದು. ಸಾಮಾನ್ಯವಾಗಿ ಸರಿ ಸಂಖ್ಯೆಯಲ್ಲೆ ಕೂಡಿಕೊಳ್ಳುವುದು ರೂಢಿ. ಕುಣಿತಕ್ಕೆ ಇವರು ನಿಲ್ಲುವುದು ವೃತ್ತಾಕಾರದಲ್ಲಿ. ಹಾಡಿಲ್ಲದೆ ಲಂಬಾಣಿ ಕುಣಿತವೆ ಇಲ್ಲಾ. ತಂಡದ ಒಬ್ಬಿಬ್ಬರು ಮೊದಲು ಹಾಡುತ್ತಾರೆ, ಉಳಿದವರು ಪ್ರತಿ ಸೊಲ್ಲಿನ ನಂತರ ಪುನರುಚ್ಚರಿಸುತ್ತಾರೆ. ಇವರ ಸಮುದಾಯದ ದೇವತೆ ಸೇವಾಬಾಯಿ ಪ್ರಾರ್ಥನೆಯಿಂದ ಆರಂಭವಾಗುತ್ತದೆ. ಅವರ ಕುಣಿತ ಮುಂದೆ ವಿವಿಧ ಹಾಡುಗಳೊಂದಿಗೆ ಬದಲಾಗುತ್ತದೆ. ಕುಣಿತಕ್ಕೆ ಸುತ್ತುಕಟ್ಟಿ ನಿಂತರೆ ಭದ್ರಕೋಟೆಯಂತಿರುತ್ತದೆ. ಇವರ ಸುತ್ತುಕುಣಿತ ಈ ಜನರ ಒಗ್ಗಟ್ಟಿನ ಸಂಕೇತ! ಸುತ್ತಸಾಲು ಇವರ ಸಂಸ್ಕ್ರತಿ ಸಂಪ್ರದಾಯಗಳು ರಕ್ಷಣೆಗೆ ಹಾಕಿದ ಬೇಲಿ. ಆ ಬೇಲಿ ದಾಟುವುದು ಅಷ್ಟು ಸುಲಭದ ಮಾತಲ್ಲಾ.
ಕುಣಿತದ ಶೈಲಿ
ಬದಲಾಯಿಸಿಲಂಬಾಣಿ ಮಹಿಳೆಯರ ಕುಣಿತದ ರೀತಿ ಬಹು ಆಕರ್ಷಿಣೀಯ. ಕುಣಿತದಲ್ಲಿ ಕೈ ಕಾಲು ಮತ್ತು ಸೊಂಟಗಳಿಗೆ ಹೆಚ್ಚು ಕೆಲಸ. ಎರಡೂ ಕೈಗಳನ್ನೂ ಮೇಲಕ್ಕೆತ್ತಿ, ಹಾಗೆಯೇ ಎಡಕ್ಕೂ ಬಲಕ್ಕೂ ಮುಖ ತಿರುಗಿಸುತ್ತಾ ಒಂದೊಂದೇ ಕೈಯನ್ನು ನೇರವಾಗಿ ನೆಲದವರೆಗೆ ಇಳಿಸಿ ಮತ್ತೆ ಮೇಲಕ್ಕೆತ್ತುತ್ತಾರೆ. ಈ ಚಲನೆಗೆ ತಕ್ಕಂತೆ ಸೊಂಟವೂ ಬಳುಕುತ್ತಿರುತ್ತದೆ. ಕೈ ಚಲನೆಯೊಂದಿಗೆ ಹೆಜ್ಜೆಗಳನ್ನು ಹಿಂದಕ್ಕೆ ಮುಂದಕ್ಕೆ ಹಾಕುತ್ತಾ ಚಪ್ಪಾಳೆ ತಟ್ಟುತ್ತಾರೆ. ಈ ಚಲನವಲನಗಳು ಒಂದು ದಿಕ್ಕಿನಲ್ಲಿ ನಡೆಯುತ್ತಿದ್ದಂತೆ, ಕುಣಿತದ ತಂಡ ಅದೇ ವೃತ್ತಾಕಾರದಲ್ಲೇ ಇನ್ನೊಂದು ದಿಕ್ಕಿನಲ್ಲಿ ಸುತ್ತುತ್ತದೆ. ವಿವಿಧ ಭಂಗಿಗಳಲ್ಲಿ ಕೈಯಾಡಿಸಿ ನಡುವಾಡಿಸಿ, ಹಿಂದೆ-ಮುಂದೆ ಚಲಿಸಿ ಸುತ್ತಿನಲ್ಲಿ ಕುಣಿತಕ್ಕೆ ತಕ್ಕಂತೆ ಕಲಾವಿದರ ಕಂಠದಿಂದ ವೈವಿಧ್ಯಪೂರ್ಣ ಹಾಡುಗಳು ಹರಿದು ಬರುತ್ತವೆ. ಕೆಲವು ಕಡೆ ಕುಣಿತಕ್ಕೆ ಹಿಮ್ಮೆಳವಾಗಿ ಹಲಗೆ ತಮಟೆ ಬಾರಿಸುವುದೂ ಉಂಟು. ಕೈಯಲ್ಲಿ ತಪ್ಪಡಿ ಹಿಡಿದು ಬಡಿಯುತ್ತಾ ಕುಣಿಯುವುದು ಕೆಲವು ಕಡೆ ಬಳಕೆಯಲ್ಲಿದೆ. ಲಂಬಾಣಿ ಮಹಿಳೆಯರು ಮನ ತಂಬಿ ಕುಣಿಯುವಾಗ ಕೇಳಿಬರುವ ಕಾಲುಗೆಜ್ಜೆಯ ಸದ್ದು, ಕೈಯಾಡಿಸುವಾಗ ಬರುವ ದಂತದ ಬಳೆಗಳ ಸಪ್ಪಳ, ಗುಂಪು ಹಾಡಿನ ಇಂಪುದನಿ, ಬಾಗಿ ಕುಣಿಯುವಾಗ ಇಳಿ ಬೀಳುವ ಮುಂಗೂದಲಿನ ಕುಚ್ಚುಗಳ ಸೊಗಸು, ಕೈ ಬೀಸಿ ಆಡುವಾಗ ಉಂಟಾಗುವ ಮೇಲು ಹೊದಿಕೆ ಹಾಗೂ ಕವಡೆ ಸರಗಳ ಚೆಲ್ಲಾಟ, ಹಾಡಿನ ಸೊಲ್ಲು ತಪ್ಪಿದಾಗ ನಾಯಕಿಯ ಮುಖದಲ್ಲಿ ಕಾಣುವ ನಸುಗೋಪ, ಸೊಲ್ಲು ಸರಿಯಾದಾಗ ಎಲ್ಲರ ಮುಖದಲ್ಲೂ ಮಿಂಚುವ ನಗೆ, ಇವೆಲ್ಲವನ್ನು ಪ್ರತ್ಯಕ್ಷ ಕೇಳಿ, ನೋಡಿಯೇ ಆನಂದಿಸಬೇಕು.
ಕುಣಿತದ ಸೊಬಗು
ಬದಲಾಯಿಸಿಲಂಬಾಣಿ ಕುಣಿತದ ನೋಟದ ಸೊಬಗನ್ನು ಚಂದ್ರನ ಬೆಳಕಿನಲ್ಲಿ ಅನುಭವಿಸಬೇಕು. ಒಟ್ಟಿಗೆ ಜೋಡಿಸುವ ಗಾಜಿನ ಬಿಲ್ಲೆಗಳ ಹೊಳಪು, ಅವುಗಳಲ್ಲಿ ಕಾಣುವ ಚಂದ್ರನ ಪ್ರತಿಬಿಂಬ ಕುಣಿತದ ಸೊಬಗಿಗೆ ಮೆರಗು ತಂದು ಕೊಡುತ್ತದೆ. ಲಂಬಾಣಿ ಕುಣಿತದಲ್ಲಿ ಕೋಲಾಟವು ಉಂಟು. ಆದರೆ ಸಾಮಾನ್ಯವಾಗಿ ಲಂಬಾಣಿ ಪುರುಷರು ಕೋಲಾಟದಲ್ಲಿ ಪರಿಣಿತರು. ಮಹಿಳೆಯರು ಕೋಲು ಹಿಡಿಯದೇ ಕುಣಿಯುವುದೇ ಹೆಚ್ಚು. ಇವರು ಕೋಲಾಟದಲ್ಲಿ ಒಳಾಟ, ಹೊರಾಟ, ಚಿಕ್ಕಿ ಕೋಲಾಟ, ಬಾಗು ಕೋಲಾಟ ಮೊದಲಾದ ವಿಧಗಳಿರುತ್ತವೆ. ಲಂಬಾಣಿ ಮಹಿಳೆಯರು ತಮ್ಮ ಹಟ್ಟಿಗಳಲ್ಲಿ ತಮ್ಮ ಆನಂದಕ್ಕಾಗಿ ಪ್ರತಿ ಸಂಜೆ ಅಥವಾ ಆಗಾಗ ಕುಣಿದರೂ, ಹಬ್ಬ ಉತ್ಸವ, ತೇರು ಜಾತ್ರೆಗಳಲ್ಲಿ ಹೊಸ ವೇಷ-ಭೂಷಣ ದರಿಸಿ ಕುಣಿಯುವುದು ಚೆಂದ. ಕಾಮನ ಹಬ್ಬದಲ್ಲಂತೂ ಇವರ ಕುಣಿತ ಒಂದು ಮೋಜು. ಪ್ರತಿಷ್ಠಿತ ವ್ಯಕ್ತಿಗಳನ್ನು ಸುತ್ತುಕಟ್ಟಿ ತಮ್ಮ ಕಲಾಕುಶಲತೆ ತೋರಿ, ಅವರ ಹೆಸರು ಹಿಡಿದು ಹೊಗಳಿ ಅವರನ್ನು ಮೆಚ್ಚಿಸಿ ಬಹುಮಾನ ಗಿಟ್ಟಿಸುವ ಅವರ ಜಾಣ್ಮೆಯೇ ಜಾಣ್ಮೆ: ಸರಸವೇ ಸರಸ ಆಡಿ ಆಡಿ ಬಾಪುರೇ ಗ್ವಾಡಿ ಹತ್ತಿ ನೋಡಿರೆ ಎಂಬ ಪಲ್ಲವಿ ಬಹುಜನರಿಗೆ ಪರಿಚಿತವಾಗಿದೆ.
ಉಪಸಂಹಾರ
ಬದಲಾಯಿಸಿಲಂಬಾಣಿ ಜನರ ಭಾಷೆಗೆ ಲಿಪಿಯಿಲ್ಲ. ಈ ಭಾಷೆ ಮರಾಠಿ, ರಾಜಸ್ಥಾನಿ ಮೊದಲಾದ ನಾನಾ ಭಾಷೆಗಳ ಪ್ರಭಾವದಿಂದ ಸಂವೃದ್ದಿಗೊಂಡಂತೆ ಕಾಣುತ್ತದೆ. ಲಂಬಾಣಿ ಮಹಿಳೆಯರು ತಮ್ಮ ಭಾಷೆಯ ಗೀತೆಗಳೊಂದಿಗೆ ಕನ್ನಡದ ಹಾಡುಗಳನ್ನು ಹಾಡುತ್ತಾರೆ. ಇವರ ಗೀತೆಗಳೆಲ್ಲಾ ಸಾಮಾನ್ಯವಾಗಿ ಬಾಯಿಯೇ...ಎಂಬ ನುಡಿಯೊಂದಿಗೆ ಆರಂಭವಾಗುತ್ತದೆ. ರಾಮಾಯಣ ಮಹಾಭಾರತದಂತಹ ಪುರಾಣ ಪ್ರಸಂಗಗಳೂ ಇವರ ಹಾಡುಗಳಲ್ಲಿ ಬರುತ್ತವೆ. ಸಮಕಾಲೀನ ಸಂಗತಿಗಳು ಸೇರಿಸಿಕೊಂಡು ಹಾಡುವುದರಲ್ಲಿ ಇವರು ನಿಪುಣರು.
ಉಲ್ಲೇಖ
ಬದಲಾಯಿಸಿ- ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ೧೯೭೭