ಹೈದರಾಬಾದ್

ಬದಲಾಯಿಸಿ

ದಕ್ಷಿಣಭಾರತದ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವೆಂದು ಖ್ಯಾತಿ ಪಡೆದಿರುವ ನಗರವೆಂದರೆ ಅದು ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್.ಈ ನಗರವನ್ನು ೧೫೯೧ ರಲ್ಲಿ ಆಳ್ವಿಕೆ ಮಾಡಿದ ಖುತುಬ್ ಷಾಹಿ ಸಾಮ್ರಾಜ್ಯದ ಪ್ರಸಿದ್ಧ ದೊರೆ ಮಹಮ್ಮದ್ ಖುಲಿ ಖುತುಬು ಷಾ ನಿರ್ಮಿಸಿದನು.ಈ ನಗರವು ಮೂಸಿ ನದಿಯ ದಂಡೆಯಲ್ಲಿ ಸೌಂದರ್ಯದ ಖನಿಯಂತೆ ಕಂಗೊಳಿಸುತ್ತ ನಿಂತಿದೆ.ಸ್ಥಳೀಯ ದಂತಕತೆಯ ಪ್ರಕಾರ ಈ ನಗರದ ಹೆಸರು ಭಾಗ್‍ಮತಿ ಮತ್ತು ಮಹಮ್ಮದ್ ಖುಲಿ ಖುತುಬು ಷಾರವರ ನಡುವೆ ನಡೆದ ಕುತೂಹಲಕಾರಿ ಪ್ರೇಮಕಥೆಯಿಂದ ಬಂದಿತೆಂದು ಹೇಳುತ್ತಾರೆ.ಭಾಗ್‍ಮತಿ ಒಬ್ಬಳು ನರ್ತಕಿ.ಈಕೆಗೆ ಸುಲ್ತಾನನು ಮನಸೋತು ಪ್ರೇಮಿಸುತ್ತಿದ್ದನು.ಆಕೆಯೊಂದಿಗಿನ ಪ್ರೀತಿಯ ಧ್ಯೋತಕವಾಗಿ ಈ ನಗರಕ್ಕೆ ಭಾಗನಗರ್ ಎಂದು ಹೆಸರಿಟ್ಟನು.ಖುಲಿ ಖುತುಬು ಷಾ ಈಕೆಯನ್ನು ಇಸ್ಲಾಂಗೆ ಮತಾಂತರ ಮಾಡಿ ಹೈದರ್ ಮಹಲ್ ಎಂದು ಹೆಸರಿಟ್ಟು,ಗುಟ್ಟಾಗಿ ಮದುವೆಯಾದನು.ಹಾಗಾಗಿ ಈ ನಗರದ ಹೆಸರು ಹೈದರಾಬಾದ್ ಎಂದು ಬದಲಾಯಿತು.ಹೈದರಾಬಾದನ್ನು ಖುತುಬ್ ಷಾ ಸಾಮ್ರಾಜ್ಯದವರು ಸರಿ ಸುಮಾರು ಒಂದು ಶತಮಾನಗಳ ಕಾಲ ಆಳಿದರು.ಆನಂತರ ಮೊಘಲ್ ಸಾಮ್ರಾಟ ಔರಂಗಜೇಬನು ದಕ್ಷಿಣದ ಮೇಲೆ ದಂಡೆತ್ತಿ ಬಂದಾಗ ಈ ನಗರವನ್ನು ತನ್ನ ವಶಕ್ಕೆ ಪಡೆದನು.೧೭೨೪ ರಲ್ಲಿ ಈ ನಗರದಲ್ಲಿ ಆಸಿಫ್ ಜಹಾನು ಇಲ್ಲಿ ಆಸಿಫ್ ಜಾಹಿ ಸಾಮ್ರಾಹವನ್ನು ಸ್ಥಾಪಿಸಿ ಹೈದರಾಬಾದ್ ಮತ್ತು ಸುತ್ತಮುತ್ತಲ ಪ್ರಾಂತ್ಯವನ್ನು ತನ್ನ ನಿಯಂತ್ರಣಕ್ಕೆ ಪಡೆದನು.ಆಸಿಫ್ ಜಾಹಿ ಸಾಮ್ರಾಜ್ಯವು ತಮ್ಮನ್ನು ತಾವು ಹೈದರಾಬಾದಿನ ನಿಜಾಮರೆಂದು ಸ್ವಯಂ ಘೋಷಿಸಿಕೊಂಡರು. ಈ ಒಂದು ಹೆಸರು ಇವರಿಗೆ ಶಾಶ್ವತವಾಗಿ ಅಂಟಿಕೊಂಡಿತು. ಈ ನಗರದ ಭವ್ಯ ಇತಿಹಾಸವು ನಮ್ಮನ್ನು ನಿಜಾಮರ ಮತ್ತು ವಸಾಹತು ಷಾಹಿ ಆಡಳಿತಕಾಲದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ.ಹೈದರಾಬಾದನ್ನು ಇನ್ನೂರು ವರ್ಷಗಳಿಗು ಅಧಿಕ ಕಾಲ ಆಳಿದ ನಿಜಾಮರು ಬ್ರಿಟೀಷರೊಂದಿಗೆ ಪರಸ್ಪರ ಕೊಡು ಕೊಳ್ಳುವಿಕೆಯ ಸಂಬಂಧವನ್ನು ಉಳಿಸಿಕೊಂಡು ಏಳಿಗೆ ಹೊಂದಿದರು.ಈ ನಗರವು ೧೭೬೯ರಿಂದ ೧೯೪೮ರವರೆಗೆ ನಿಜಾಮರ ರಾಜಧಾನಿಯಾಗಿತ್ತು.ಸ್ವಾತಂತ್ರ್ಯ ಬಂದ ನಂತರ ನಡೆದ ಆಪರೇಷನ್ ಪೋಲೊ ಕಾರ್ಯಾಚರಣೆಯಲ್ಲಿ ಹೈದರಾಬಾದಿನ ಕಡೆಯ ನಿಜಾಮನು ಭಾರತದ ಸಾರ್ವಭೌಮತೆಯನ್ನು ಒಪ್ಪಿ ಸಹಿ ಮಾಡುವ ಮೂಲಕ ಹೈದರಾಬಾದ್ ಭಾರತದ ಗಣರಾಜ್ಯದೊಂದಿಗೆ ವಿಲೀನವಾಯಿತು.ಆನಂತರ ಇದನ್ನು ಆಂಧ್ರ ಪ್ರದೇಶದ ರಾಜಧಾನಿಯನ್ನಾಗಿ ಮಾಡಲಾಯಿತು.ಹೈದರಾಬಾದ್ ತನ್ನದೇ ಆದ ಪ್ರತ್ಯೇಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ.ಭೌಗೋಳಿಕವಾಗಿ ಹೈದರಾಬಾದ್ ಅತ್ಯಂತ ಕೌತುಕದ ಸ್ಥಳದಲ್ಲಿ ನೆಲೆಗೊಂಡಿದೆ. ಈ ಊರು ಉತ್ತರಭಾರತ ಮತ್ತು ದಕ್ಷಿಣ ಭಾರತಗಳು ಕೂಡುವ ಸ್ಥಳದಲ್ಲಿ ತಲೆ ಎತ್ತಿದೆ.ಹಾಗಾಗಿ ಹೈದರಾಬಾದ್ ಎರಡು ಬಗೆಯ ಮಿಶ್ರ ಸಂಸ್ಕೃತಿಗಳನ್ನು ಕಾಣಬಹುದು.ಈ ಸಮ್ಮಿಲನವು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.ಹಿಂದಿನ ಕಾಲದಲ್ಲಿ ಹೈದರಾಬಾದ್ ಕಲೆ,ಸಾಹಿತ್ಯ ಮತ್ತು ಸಂಗೀತಕ್ಕೆ ರಾಜಧಾನಿಯೆನಿಸಿತ್ತು.ನಿಜಾಮರ ಆಳ್ವಿಕೆಯಡಿಯಲ್ಲಿ ಚಿತ್ರಕಲೆಯು ಅತ್ಯಂತ ಪ್ರಮುಖ ಕಲೆಯಾಗಿ ಗುರುತಿಸಲ್ಪಟ್ಟು, ಪೋಷಿಸಲ್ಪಡುತ್ತಿತ್ತು.ಮುಖ್ಯವಾಗಿ ನಿಜಾಮರು ಕಲಾರಾಧಕರಾಗಿದ್ದರು,ಅಲ್ಲದೆ ಅವರು ಕಲಾವಿದರನ್ನು ಪ್ರೋತ್ಸಾಹಿಸುವುದರಲ್ಲಿ ಎಂದು ಹಿಂದೇಟು ಹಾಕುತ್ತಿರಲ್ಲಿಲ್ಲ.ಈ ರಾಜ ಮನೆತನವು ಅಪರಿಮಿತ ಭೋಜನ ಪ್ರಿಯರಾಗಿದ್ದರು. ಹಾಗಾಗಿ ಇವರು ದೇಶದೆಲ್ಲೆಡೆಯಿಂದ ಪಾಕ ತಙ್ಞರನ್ನು ಕರೆಯಿಸಿ ವಿಭಿನ್ನ ತಿಂಡಿಗಳನ್ನು ತಯಾರಿಸಲು ಅವಕಾಶ ಮಾಡಿಕೊಡುತ್ತಿದ್ದರು. ಇಂದು ಹೈದರಬಾದ್ ಆಹಾರ ಶೈಲಿ ಎಂಬುದು ದೇಶದ ವಿವಿಧೆಡೆ ಇರುವ ಆಹಾರ ಶೈಲಿಯ ಸಮ್ಮಿಶ್ರ ಶೈಲಿಯೆಂದು ಗುರುತಿಸಲ್ಪಡುತ್ತಿದೆ.ಈ ಸ್ಥಳೀಯ ಆಹಾರದ ರುಚಿಯನ್ನು ಮೀರಿಸುವ ಇನ್ನೊಂದು ರುಚಿ ನಿಮಗೆ ದೊರೆಯಲಾರದು ಎಂದು ಹೇಳಬಹುದು.ಹೈದರಬಾದಿ ದಮ್ ಬಿರಿಯಾನಿ ಎಂದು ಕರೆಯಲ್ಪಡುವ ಆಹಾರವು ಇಲ್ಲಿನ ಸ್ಥಳೀಯ ಆಹಾರವಾಗಿದ್ದು, ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಪಡೆದಿದೆ.ಹೈದರಾಬಾದಿನ ಪ್ರತಿಯೊಂದು ಕುಟುಂಬವು ತಲೆ ತಲೆಮಾರಿನಿಂದ ಬಳುವಳಿಯಾಗಿ ಬಂದಿರುವ ಕೆಲವೊಂದು ಆಹಾರ ತಯಾರಿಸುವ ಕ್ರಮಗಳನ್ನು ಕರಗತಮಾಡಿಕೊಂಡು ಉಳಿಸಿಕೊಂಡು ಬಂದಿದ್ದಾರೆ.ಇವರು ಇದನ್ನು ತಮ್ಮ ವಂಶ ಪಾರಂಪರ್ಯವಾಗಿ ಬಂದ ಆಸ್ತಿಯೆಂಬಂತೆ ಅದನ್ನು ಕಾಪಾಡಿಕೊಂಡು ಬಂದಿದ್ದಾರೆ.