ಬಾವಿಯಲ್ಲಿದ್ದ ಹೆಣ ನನಗೆ ಗ್ರಾಮ ಕರ್ತವ್ಯ ಅಪಾಯಗಳ ಬಗ್ಗೆ ಮೊದಲೇ ತಿಳಿದಿತ್ತು. ಆ ಕೆಲಸದಿಂದ ನನ್ನ ತಂದೆ ಬಳಲಿ ಬೆಂಡಾಗಿ ಹೋಗಿದ್ದರು. ಅದರ ಒಂದು ಘಟನೆ ನನ್ನನ್ನು ಈಗಲು ಮಾರಕವಾಗಿ ಕಾಡುತ್ತದೆ, ನೆನಸಿಕೊಂಡರೆ ಮೈ ಕಂಪಿಸುತ್ತದೆ. ನಮ್ಮ ಗ್ರಾಮದ ಹೆಸರು ಕಾಮತ್. ಅಂದು ಗ್ರಾಮದ ಸಂಪ್ರದಾಯಿಕ ಕರ್ತವ್ಯ ಮಾಡುವ ಸರದಿ ನಮ್ಮದಾಗಿತ್ತು. ಅದು ಬೇಸಿಗೆ, ನಮಗೆ ರಜೆಯ ದಿನಗಳು. ನಮ್ಮ ಗ್ರಾಮದ ಪಕ್ಕದ ಒಂದು ಪಾಳು ಬಾವಿಯಲ್ಲಿ ಶವ ತೇಲುತ್ತಿತ್ತು. ಊರಿನ ಪಟೇಲರಿಗೆ ಸಂಜೆ ಈ ವರದಿ ತಲುಪಿತು. ಮಹಾರ್ಸ್ ಮತ್ತು ರಾಮೋಷಿ[ಕೆಳ ವರ್ಗದವರು]ಗಳಿಗು ವಿಷಯ ತಲುಪಿತ್ತು. ಆ ದಿನ ನನ್ನ ತಂದೆ{ಅಣ್ಣ] ಮತ್ತು ಒರ್ವ ರಾಮೋಷಿ ಇಡಿ ರಾತ್ರಿ ಆ ಹೆಣವನ್ನು ಕಾದರು. ಮರು ದಿನ ಬೆಳಗ್ಗೆ ಪೋಲಿಸ್ ಇಲಾಖೆಯ ಮುಖ್ಯ ಪೇದೆ ಬಂದು ವಿಚಾರಣೆ ನಡೆಸುವವರೆಗು ಕಾಯುವುದು ಅವರ ಕೆಲಸವಾಗಿತ್ತು. ನನ್ನ ತಾಯಿಗೆ ಇದರ ಬಗ್ಗೆ ತಿಳಿದಿತ್ತು. ಆದರೆ ರಾತ್ರಿ ಕಳೆದು ಬೆಳಗಿನ ಸೂರ್ಯ ನೆತ್ತಿಯ ಮೇಲೆ ಬಂದರು;ನನ್ನ ತಂದೆ ಮನೆಗೆ ಮರಳಲ್ಲಿಲ. ಆದ್ದರಿಂದ ನನ್ನ ತಾಯಿ ಒಂದು ಬಟ್ಟೆಯಲ್ಲಿ ರೊಟ್ಟಿ ಸುತ್ತಿ ಅಣ್ಣನಿಗೆ ಕೊಡಲು ನನ್ನನ್ನು ಕಳುಹಿಸಿದಳು. ನಾನು ಅದನ್ನು ತೆಗೆದುಕೊಂಡು ಜಿಂಕೆಯಂತೆ ಬಾವಿಯ ಬಳಿ ಧಾವಿಸಿದೆ. ಅಲ್ಲೆ ಬದಿಯಲ್ಲಿ ಅಣ್ಣ ಇರುವುದನ್ನು ಕಂಡು 'ಅಣ್ಣ ಮನೆಗೆ ಯಾವಾಗ ಬರುತ್ತಿಯ ? ಅಮ್ಮ ಕಾಯುತ್ತಿದ್ದಾಳೆ' ಎಂದೆ. ಬಾವಿಯನ್ನು ಒಮ್ಮೆ ನೋಡಿ 'ಆದರೆ ಇನ್ನ ಮುಖ್ಯ ಪೇದೆ ಬಂದಿಲ್ಲ ಅವ್ರು ಬಂದ್ಮೆಲೆ ಬರ್ತಿನಿ ಅಂತ ಹೇಳು'. ಎಂದ ಹೇಳಿ ಆತ ತನ್ನ ಚಿಲುಮೆಯನ್ನು ತೆಗೆದು ಅದಕ್ಕೆ ಹೊಗೆ ಸಪ್ಪು ತುಂಬಿ ಬೆಂಕಿ ಕಡ್ಡಿ ಗೀರಿದ. ಇದನ್ನು ಕಂಡ ನನಗೆ ಆತನ ಹಸಿವಿನ ಅರಿವಾಯಿತು, ನಾನು ತಕ್ಷಣ 'ಅಣ್ಣ ನಾನು ರೊಟ್ಟಿ ತಂದಿರುವೆ ತಿನ್ನು.' ಎಂದೆ. 'ಇಲ್ಲ ಮಗ್ನೆ, ಇದೆಲ್ಲ ಆದ್ಮೆಲೆ ನಾನ್ ತಿನ್ನುತೀನಿ,' 'ಇನ್ನು ಎಷ್ಟು ಸಮಯ ಬೇಕು ಇದೆಲ್ಲ ಆಗೋಕೆ? ಹೀಗೆ ಇನ್ನು ಎಷ್ಟು ಸಮಯ ಕಾಲಿ ಹೊಟ್ಟೆಯಲ್ಲಿರುತ್ತೀಯ?' ನನ್ನ ಪ್ರೆಶ್ನೆಳಿಗೆ ಅಣ್ಣನ ಉತ್ತರಿಸುತ್ತ 'ಮುಖ್ಯ ಪೇದೆ ಊರಿಗ್ ಬಂದವ್ರೆ ಆದ್ರೆ ಅವ್ರು ಊಟ ಮಾಡ್ತವ್ರೆ ಆದ್ ತಕ್ಷಣ ಬತ್ತರಂತೆ, ಯಾವಗ್ ಇ ಎಣ ಹೊರಗಡೆ ತಗಿತರೊ, ಅಲ್ಲಿಗ್ ನನ್ನ್ ಕೆಲ್ಸ ಮುಗಿತ್.' 'ಅವರೆಲ್ಲ ಊಟ ಮಾಡಿ ಬರಬೇಕಾದರೆ ನೀನು ಯಾಕೆ ತಿನ್ನಬಾರದು?' 'ಅವರು ಆಪಿಸರ್ಸ್! ಊಟ ಇಲ್ದೆ ಅವ್ರ್ ಹೆಂಗ್ ಕೆಲ್ಸ ಮಾಡಕಾಯ್ತದೆ?' 'ಹಾಗಾದರೆ ನಾವು ಯಾಕೆ ಕಾಲಿ ಹೊಟ್ಟೆಯಲ್ಲಿ ಕೆಲಸ ಮಾಡಬೇಕು? ನಾವು ಮನುಷ್ಯರೇ ತಾನೆ.' 'ಅದೇ ಮಗ್ನೆ ಈ ಕೆಲ್ಸದ್ ನಿಯಮ! ನಾವ್ ಸತ್ರು ಅಷ್ಟೆ ಬದುಕಿದ್ರು ಅಷ್ಟೆ ಯಾರ್ ಕೇಳ್ತರೆ ನಮ್ನ?' 'ಸರಿ ಹಾಗಾದರೆ ನೀನು ಊಟ ಮಾಡು! ನಾನು ಇದನ್ನ ಕಾಯುತ್ತೇನೆ.' 'ಬೇಡ ಬೇಡ ನೀನು ಇದನ್ ಕಾಯೋದ, ನಮ್ಗೆ ಇದು ಸಾಕು, ಒಂದ್ ಸತಿ ನೀನ್ ಈ ಕೆಲ್ಸ ಮಾಡುದ್ರೆ ಮುಗಿತು, ನಿನ್ ಜೀವ್ನ ಪೂರ್ತಿ ಇದೆ ಕೆಲ್ಸ ಮಾಡ್ಬೇಕು! ಅದೇ ಸಂಪ್ರದಾಯ! ನೀನ್ ಮನೆಗ್ ಹೂಗು ನಾನ್ ಅಮೆಲ್ ತಿನ್ತೀನಿ!' ಅದೇ ಸಮಯಕ್ಕೆ ಮುಖ್ಯ ಪೇದೆ ತನ್ನ ಕುದುರೇ ಮೇಲೆ ಬಂದ. ನೆರೆದ್ದಿದ್ದ ಜನರೆಲ್ಲ ಪಕ್ಕಕ್ಕೆ ಸರಿದರು. ರಾಮೊಷಿ ದೂರದಿಂದಲೆ ಗೌರವ ಸಲ್ಲಿಸಿದ. ನನ್ನ ತಂದೆ ಅವರ ಮುಂದೆ ಬಗ್ಗಿ ಗೌರವ ಸಲ್ಲಿಸಿದರು. ರಾಮೊಷಿ ಕುದುರೇಯನ್ನು ಮರಕ್ಕೆ ಕಟ್ಟಿದ, ಅಣ್ಣ ಪಕ್ಕದಲ್ಲೆ ಇದ್ದ ತೊರೆಯಿಂದ ನೀರು ತಂದು ಕುದುರೇ ಮುಂದೆ ಇಟ್ಟ. ಮುಖ್ಯ ಪೇದೆ ಕುದುರೇ ಮೇಲೆ ಬರುವುದು ಮೊದಲೇ ತಿಳಿದಿದ್ದರಿಂದ ಅದಕ್ಕೆ ಎಲ್ಲ ವ್ಯವಸ್ತೆಯನ್ನು ಮೊದಲೇ ಮಾಡಿದ್ದರು. ಒಂದು ಹೊರೆ ಹಸಿ ಹುಲ್ಲನ್ನು ಅದರ ಮುಂದೆ ಹಾಕಿದರು, ಪಾಪ ಹಸಿದಿದ್ದ ಕುದುರೆ ಅದನ್ನು ಮೇಯಲು ಶುರು ಮಾಡಿತು. ಮುಖ್ಯ ಪೇದೆ ತನ್ನ ಟೋಪಿಯನ್ನು ತಿರುಗಿಸುತ್ತ ಬಾವಿಯ ಸುತ್ತ ಸುತ್ತಿದ. ಅವನ ತಲೆಯಲ್ಲಿ ಏನೋ ಯೋಚನೆ ಮಾಡುತ್ತಿದ್ದ ನಂತರ ಮುಂದೆ ಬಂದು, ಶವವನ್ನು ಮೇಲೆತ್ತು ಎಂದು ನನ್ನ ತಂದೆಗೆ ಗಟ್ಟಿಯಗಿ ಹೇಳಿದ. ಅಣ್ಣ, 'ನನ್ನ ಕೆಲಸ ಬರಿ ಇದನ್ನ ಕಾಯೊದು, ನನ್ನಂತವರು ಇದನ್ನ ಮುಟ್ಟಿದರೆ ಇದರ ಸಂಬಂದಿಕರು ಏನು ಹೇಳಿಯಾರು?' ಎಂದ. ಇದರಿಂದ ಕೋಪಗೊಂಡ ಪೇದೆ 'ದರಿದ್ರ ನೀನು ಬೀಳುತ್ತೀಯ ಇಲ್ಲ ನಾನೆ ತಳ್ಳಲ ನಿನ್ನ?' ಅಣ್ಣ ಸುಮ್ಮನೆ ತಲೆ ಬಗ್ಗಿಸಿ ನಿಂತ. ಅವರು ಬಾಯಿಗೆ ಬಂದ ಹಾಗೆ ಬಯ್ಯುತಿದ್ದರು. ಅಂದು ಪೇದೆಗಳಿಗೆ ಅಷ್ಟೆ ಅಧಿಕಾರದ ಮದ, ಗರ್ವ ಇತ್ತು. ನನಗೆ ಇದು ಅರ್ಥ ಆಗುವಷ್ಟು ನಾನು ಬೆಳೆದಿದ್ದೆ. ಇದನ್ನು ನೊಡುತ್ತಿದ್ದ ನನ್ನ ಎಳೆ ಮನಸ್ಸಿನ ಸಹನೆಯ ಕಟ್ಟೆ ಒಡೆದಿತ್ತು. 'ಯಾವ ಕಾರಣಕ್ಕೆ ನನ್ನ ತಂದೆಯನ್ನು ನಿಂದಿಸುತ್ತಿದ್ದಿರ? ಬೇಕಾದರೆ ಶವದ ಸಂಬಂಧಿಕರು ಬಂದು ತೆಗೆಯುತ್ತಾರೆ. ಇಲ್ಲ ಅಂದರೆ ಸರ್ಕಾರ ಬಂದು ತೆಗೆಯಲಿ. ಕೇವಲ ನನ್ನ ತಂದೆ ಮಹಾರ್ ಎಂಬ ಕಾರಣಕ್ಕೆ ಬೆದರಿಕೆ ಹಾಕುತ್ತಿದ್ದಿರ?' ಎಂದು ಒಂದೆ ಉಸಿರಿಗೆ ಹೇಳಿದೆ. ತಕ್ಷಣ ಅಧಿಕಾರಿ 'ಹಿಡಿಯಿರಿ ಆ ಹುಳವನ್ನು, ಆ ಸೂಳೆ ಮಗನಿಗೆ ಬುದ್ಧಿ ಕಲಿಸಿ' ಎಂದ. ಇದನ್ನು ಕೇಳಿ ನನ್ನ ತಂದೆ 'ಬಾಯ್ ಮುಚ್ಚಲ ಸಾಕು, ನಿಂಗೆ ಇವೆಲ್ಲ ಅರ್ಥ ಆಗಕಿಲ್ಲ, ಇನ್ನ್ ಒಂದ್ ಮಾತ್ ಆಡ್ ಬ್ಯಾಡ.' ಎಂದು ಹೇಳಿ ತನ್ನ ಬಟ್ಟೆ ಬಿಚ್ಚಿ ನೀರಿಗೆ ಹಾರಿ ಹೆಣದ ಕಾಲಿಗೆ, ಕುತ್ತಿಗೆಗೆ ಹಗ್ಗ ಕಟ್ಟಿ 'ಎಳೀರಿ ಮ್ಯಾಕೆ.' ಎಂದ. ಶವ ನೀರು ಕುಡಿದು ಉಬ್ಬಿತ್ತು, ಅದರಿಂದ ಕೆಟ್ಟ ವಾಸನೆ ಬರುತಿತ್ತು. ಎಲ್ಲ ತಮ್ಮ ಮೂಗು ಮುಚ್ಚಿಕೊಂಡರು. ಅಲ್ಲೆ ಪ್ರಾಥಮಿಕ ಹಂತದ ವಿಚಾರಣೆ ನಡೆಸಿದರು. ನಂತರ ಬಾಡಿ ಪೊಷ್ಟ್ ಮೊರ್ಟೆಮ್ ಮಾಡಲು ಅದನ್ನು ೮ ಮೈಲಿ ದೊರದ ಆಸ್ಪತ್ರೆಗೆ ಕೊಂಡುಹೊಗಲು ಅದನ್ನು ಎತ್ತಿನ ಬಂಡಿಯ ಮೇಲೆ ಹಾಕಿದರು, ಅದರ ಮೇಲೆ ಬೇವಿನ ಸೊಪ್ಪು ಹರಡಿದರು. ಮಹಾರ್ ಆದ ಅಣ್ಣ ಮತ್ತು ಇಬ್ಬರು ರಾಮೋಷಿಯರು ಪೋಲೀಸರೊಂದಿಗೆ ಹೊರಟರು. ಅಣ್ಣ ನಾನು ತಂದಿದ್ದ ರೊಟ್ಟಿಯನ್ನು ಕಿಸೆಗೆ ಹಾಕಿಕೊಂಡು ಹೇಳಿದ, 'ನೀ ಮನೇಗ್ ಹೊಗು! ನಾ ಬರದು ತಡ ಆಯ್ತದೆ.' ಬಂಡಿ ಹೊರಟಿತು;ಅಣ್ಣ ನಿಧಾನವಾಗಿ ಮರೆಯಾದನು. ನಾನು ಮನೆಗೆ ಹೊರಟೆ.