ಮಳೆರಾಯನ ಆಗಮನ

ಬದಲಾಯಿಸಿ
ಸೆಖೆಗಾಲ ಎಲ್ಲವನ್ನೂ  ಒಣಗಿಸಿ,ಭೂಮಿಯನ್ನೇ  
ಬಂಜರಾಗಿಸಿ ಬರಡಾಗಿತ್ತು
ನೆಲ-ಜಲ,ಮರ-ಗಿಡ,ಸಕಲ ಜೀವ ರಾಶಿ 
ಬಡವಾಗಿತ್ತು! 
ತಂಪೆರವ,ನೀರುಣಿಸುವ ಮಳೆರಾಯನ ಆಗಮನಕೆ
ಹಾತೊರೆಯುತಿತ್ತು,
ಜಾತಕ ಹಕ್ಕಿಯಂತೆ ಕಾತರದಿ,ಮಳೆರಾಯನ
ಆಗಮನ ಎದುರು ನೋಡುತಿತ್ತು!
    
      ಅಗೋ,ಬಂತಪ್ಪಾ ಬಂತು!ಮಳೆರಾಯನ
      ಮಧುರ ಆಗಮನ
      ಆಲಿಸು-ನೋಡು,ಮರಗಿಡಗಳು ಸಂತಸದಿ
      ಓಲಾಡಿ-ನರ್ತಿಸಿ ಸ್ವಾಗತಿಸುತಿದೆ ಕಾನನ!
      ಸುಯ್ಯನೆ ಬೀಸುವ ತಂಗಾಳಿಗೆ ಎಲೆಗಳು
      ತಲೆದೂಗಿ ಮಾಡುತಿವೆ ನರ್ತನ
      ಆಗಸದಿಂದ ಹನಿ ಹನಿಯಾಗಿ ಭೂಮಿಗೆ
      ಜಲಧಾರೆ ಜಿಗಿದು ನೀಡುತ್ತಿದೆ ಸಿಂಚನ!
ನದಿಗಳಿಗಾಯ್ತದು ಟಾನಿಕ್,ಅವನ್ನು ಆಳವಾಗಿಸಿ-
ಅಗಲವಾಗಿಸಿ,ಉಕ್ಕಿ ಹರಿಯಲು 
ಅಣೆಕಟ್ಟು-ಸರೋವರ,ಕೆರೆ ಬಾವಿಗಳಿಗೆ ಶುದ್ಧ ನೀರು
ತುಂಬಲು,
ಬಂತಲ್ಲಾ ಸಿಹಿ ನೀರು ಮೋಡಗಳದನ್ನು
ಪ್ರೀತಿಯಿಂದ ಧರೆಗೆ ಚಿಮುಕಿಸಲು,
ಇಂಗಿಸಿತು ಮಳೆ ನೀರು ಎಲ್ಲದರ ತೃಷೆ,ಆಗಿ
ಹಸನಾದ ಬಾಳ ಹೊನಲು!
    
       ಆಗಸದಿ ನೀ ನೋಡುವೆ ನನ್ನಾಟಿಕೆಯ
       ಕಾಮನಬಿಲ್ಲು,
       ಗುಡುಗುವೆ! ನಿನ್ನ ಹೆದರಿಸುವೆ! ಮಿಂಚಾಗಿ ಮಿಂಚುವೆ 
       ಹೀಗೆ ನಾನಾಡುವಾಗ ನೋಡುತ ನಿಲ್ಲು !
       ಗುಡುಗು-ಸಿಡಿಲು ನಿನಗೆ ಬೇಡವಾದರೆ ನನ್ನ 
       ಆರ್ಭಟ ತೋರಲವಕಾಶ ಎಲ್ಲಿದೆ ಹೇಳು ?
       ನಾ ಬರಬೇಕಾದರೆ ಅದೂ ಬೇಕಲ್ಲವೆ ನನ್ನ
       ಅಸ್ತಿತ್ವ ತೋರಲು !'
ಹೀಗೆನ್ನುತ್ತಿದೆ ಮಳೆ,ಅದು ನೀಡುತ್ತಿದೆ ಎಲ್ಲಾ
ಮಾನವರಿಗೊಂದು ಕಿವಿಮಾತು,
'ಕಾಡು ಬೆಳೆಸಿ,ನಾಡು ಉಳಿಸಿ'
ಎಂಬ ಜಾಣ್ಮೆಯ ಬುದ್ದಿಮಾತು!
'ಪರಿಸರ ಪ್ರೀತಿಸು,ಅದನ್ನು ಪೋಷಿಸು' ಎನ್ನುತ್ತಿದೆ
ಅದರ ಸಂದೇಶ ಹೊತ್ತು,
'ಆಗು ನೀ ಪರಿಸರ ಪ್ರೇಮಿ,ಆಗ ನಾನಾಗುವೆ
ನಿನ್ನ ಪ್ರೇಮಿ'ಎನ್ನುತ್ತಿದೆ ಆ ನೀರ ಮುತ್ತು!