ಸದಸ್ಯ:Rahan d'souza151/sandbox
ಬೆಂದ್ರೆ
ಬದಲಾಯಿಸಿಜನೆವರಿ 31, ವರಕವಿ ಬೇಂದ್ರೆಯವರ ಜನ್ಮದಿನ. ಅಂಬಿಕಾತನಯದತ್ತ ಜಯಂತಿ. ಈ ವರ್ಷ ಅವರ 115ನೆಯ ಹುಟ್ಟು ಹಬ್ಬ ನಾಡಿನಾದ್ಯಂತ ಆಚರಿಸಲಾಗುತ್ತದೆ. ಭಾರತ ಹುಣ್ಣಿಮೆಯ ಮರುದಿನ ಗುರುಪ್ರತಿಪದೆಯ ದಿನ ಅಂಬಿಕಾತನಯದತ್ತರ ಜನ್ಮ ಧಾರವಾಡದಲ್ಲಾಯಿತು. (31-01-1896). ಕುಮಾರವ್ಯಾಸನ ತರುವಾಯ ಕಾವ್ಯಕೆ ಗುರುವೆನಿಸುವಂತೆ ಕವನ ರಚಿಸಿದ ಕವಿ ಬೇಂದ್ರೆ ಅಂದರೆ ಅತಿಶಯೋಕ್ತಿಯಲ್ಲ. ಹಿಂದೂ ಪಂಚಾಂಗದ ಪ್ರಕಾರ ಹಾಗೂ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಬೇಂದ್ರೆಯವರ ಜನ್ಮದಿನ ಒಂದೇ ದಿನ ಬರುವುದು ಅಪರೂಪ. ಈ ವರ್ಷ ಗುರುಪ್ರತಿಪದೆ ಜನೆವರಿ 31ರಂದು ಬಂದದ್ದು ಒಂದು ಯೋಗಾಯೋಗವೆಂದೇ ಹೇಳಬೇಕು. ಬೇಂದ್ರೆ ಎಂದೊಡನೆ ಸಹಸ್ರತಂತ್ರಿಯ ವೀಣೆಯನ್ನು ನುಡಿಸಿದಂತಾಗುತ್ತದೆ. (ಜುಂ ಎನ್ನತಾವ ತಂತಿ!) ಮೈಯಲ್ಲಿ ಮಿಂಚಿನ ಹೊಳೆ ಸಂಚರಿಸುತ್ತದೆ. ಹೃದಯಸಮುದ್ರ ಉಕ್ಕೇರುತ್ತದೆ. ಸಾವಿರದ ನೆನಪುಗಳು ಬರತೊಡಗುತ್ತವೆ. ಬೇಂದ್ರೆ ಕಾವ್ಯ ಪ್ರತಿಮೆಗಳ ಒಂದು ಮೆರವಣಿಗೆಯೇ ಮನಃಪಟಲದ ಮೇಲೆ ಮೂಡುತ್ತದೆ. ಶ್ರಾವಣ ಕವಿ ಬೇಂದ್ರೆ, ರೂಪಕ ಚಕ್ರವರ್ತಿ ಬೇಂದ್ರೆ, ಶಬ್ದ ಗಾರುಡಿಗ ಬೇಂದ್ರೆ, ನಾದಲೋಲ ಬೇಂದ್ರೆ, ಭುವನದ ಭಾಗ್ಯವೆಂಬಂತೆ ಕನ್ನಡ ನಾಡಿನಲ್ಲಿ ಉದಿಸಿ ಬಂದ ಮಹಾಕವಿ ಬೇಂದ್ರೆ.