ಸದಸ್ಯ:Pranamraghav52/ನನ್ನ ಪ್ರಯೋಗಪುಟ
ನನ್ನ ಊರು ಮ೦ಗಳೂರು..ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳಂ: ಮಂಗಲಾಪುರಂ) ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ.
ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ.[೧]
ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು ಜೇಡಿಮಣ್ಣಿನಿಂದ ತಯಾರಿತ ಮಂಗಳೂರು ಹಂಚುಗಳ ಮನೆಗಳು ಇಲ್ಲಿ ಸಾಮಾನ್ಯ.[೨] ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ. ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.[೩] ಥಳೀಯ ಸ್ಥಳೀಯ ಹಿಂದೂ ದೇವತೆಯಾದ ಮಂಗಳಾದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ನಾಥ್ ಪಂಥದ ಮುಖ್ಯಪುರುಷ, ಪ್ರೇಮಲಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು.
ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾರೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ್ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ.[೪] ಕ್ರಿ.ಶ. ೧೫೨೬ರಲ್ಲಿ ಪೋರ್ಚುಗೀಸರು ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಮ್ಯಾಂಗಲೋರ್ (ಇದು ಮಂಗಳೂರು ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು ಬ್ರಿಟಿಷರ ಕೈವಶವಾದಾಗ ಈ ಪೋರ್ಚುಗೀಸ್ ಹೆಸರು ಆಂಗ್ಲ ಭಾಷೆಯಲ್ಲಿ ಮಿಳಿತಗೊಂಡಿತು.
ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ. ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆಯಲ್ಲಿ ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಮೈಕಾಲ ಎಂದರೆ ಇದ್ದಿಲು ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು ಮಂಗಲಾಪುರಂ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ.