ಲಾವಣಿ ಸಂಪ್ರದಾಯಗಳು

ಬದಲಾಯಿಸಿ

ಮುನ್ನುಡಿ

ಬದಲಾಯಿಸಿ

ಲಾವಣಿ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಭಾಗಗಳಾದ ಬೆಳಗಾವಿ, ಬಿಜಾಪುರ, ಕಲಬುರಗಿ (ಗುಲ್ಬರ್ಗಾ), ಬೀದರ್, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವೆತ್ಯಾಸಗಳೊಂದಿಗೆ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗದಲ್ಲೂ ಕೂಡ ಲಾವಣಿ ಎಂಬ ಒಂದು ಪ್ರಕಾರವಿದ್ದರೂ ಉತ್ತರದಷ್ಟೂ ವೈವಿದ್ಯ ಅದಕ್ಕಿಲ್ಲ. ಲಾವಣಿ ಸಂಪ್ರದಾಯದ ವಿವರಣೆಗೆ ಮುನ್ನ ಅದರ ಪದ ನಿಷ್ಪತ್ತಿಯ ಚರ್ಚೆ ಅವಶ್ಯವಾಗುತ್ತದೆ.

ಲಾವಣಿ ಸಂಪ್ರದಾಯದ ನೆಲೆಗಳು

ಬದಲಾಯಿಸಿ

ಈವರೆಗೆ ಲಾವಣಿ ಪದ ಉತ್ಪತ್ತಿಯನ್ನು ಎರಡು ನೆಲೆಗಳಿಂದ ಚರ್ಚಿಸಲಾಗಿದೆ. ಮೊದಲನೆಯದು ಸಂಸ್ಕ್ರತ ಮೂಲದಿಂದಾದರೆ, ಎರಡನೆಯದ್ದು ಮರಾಠಿ ಮೂಲದ್ದು. ಸಂಸ್ಕೃತದ ಲವಣ ಮತ್ತು ಲಾವಣಿಕಾ ಶಬ್ದಗಳಿಂದ ಹಾಗೂ ಮರಾಠಿಯ ಲಾವಣಿ ಪೋವಾಡಗಳಿಂದ ಕನ್ನಡದ ಲಾವಣಿ ಶಬ್ದ ಬಂದಿದೆ ಎಂದು ಹೇಳಲಾಗಿದೆ. ಆದರೆ ಕರ್ನಾಟಕದ ಬಹು ಭಾಗದಲ್ಲಿರುವ ಸಂಪ್ರದಾಯಕ್ಕೆ ಅನ್ಯ ಭಾಷೆಗಳಲ್ಲಿ ಆಶ್ರಯ ಪಡೆಯದೆ ಈ ಭಾಷೆಯ ಮೂಲಕವೇ ನಿಷ್ಪತ್ತಿಯನ್ನು ಅರಿಯಬೇಕಾದುದು ಸಮಂಜಸವೆನಿಸುತ್ತದೆ. ಹಾಗೆ ನೋಡಿದರೆ 'ಲ' ಕಾರದಿಂದ ಆರಂಭವಾಗುವ ಪದಗಳು ಕನ್ನಡದಲ್ಲಿ ಕಡಿಮೆ.

ಲಾವಣಿ ಪದ ನಿಯಮಾವಳಿಗಳು

ಬದಲಾಯಿಸಿ

ಲಾವಣಿ ಪದವನ್ನು ಯಥಾವತ್ತಾಗಿ ವಿವರಿಸುವುದಕ್ಕೆ ಪ್ರಾರಂಭಿಸಿದಷ್ಟು ಅದು ಮರಾಠಿ ಮೂಲ ಇಲ್ಲವೇ ಸಂಸ್ಕ್ರತ ಮೂಲವೆಂಬ ತೀರ್ಮಾನಗಳೇ ಬಲವಾಗುತ್ತದೆ. ಹಾಗಾದುದರಿಂದ 'ಲ' ಕಾರದಿಂದಾಗಿರುವ ಈ ಪದವು 'ಲ' ನ ರೂಪದ್ದೆಂದು ಮೊದಲು ಗ್ರಹಿಸಿಕೊಳ್ಳಬೇಕಾಗಿದೆ. 'ಲ' ನ ಕಾರಗಳು ಪರಸ್ಪರ ವ್ಯತ್ಯಾಸಗೊಳ್ಳುವುದು ದ್ರಾವಿಡ ಭಾಷೆಗಳ ನಿಯಮ ಲಿಂಬೆ - ನಿಂಬೆ, ನೇವಣಿ - ನೇವಳ, ಲಾವಳ, ನೆಕ್ಕಿ - ಲೆಕ್ಕಿ, ಹೀಗೆ ವರ್ಣಪಲ್ಲಟವಾಗುತ್ತದೆ. ಈ ಪಲ್ಲಟವು ಒಂದು ನಿರ್ದಿಷ್ಟ ಭಾಷೆಯೊಳಗೆ ಮತ್ತು ಇತರ ಭಾಷೆಗಳೊಂದಿಗೆ ನಡೆಯುತ್ತದೆ. ಹಾಗಾದುದರಿಂದ ಲಾವಣಿ ಪದ ಮೂಲ ರೂಪವನ್ನು ನೇವಳಿ ಎಂದು ಪರಿಭಾವಿಸುವುದು ದ್ರಾವಿಡ ಭಾಷಾಶಾಸ್ತ್ರಿಯ ನಿಯಮಗಳಿಗನುಗುಣವಾಗುತ್ತದೆ. ಇದಾದ ಮೇಲೆ ನೇವಳಿ ಅರ್ಥವನ್ನು ಗ್ರಹಿಸುವುದು ಮುಂದಿನ ಹಂತ ನೇವಳಿ ಪದವನ್ನು ಕನ್ನಡದಲ್ಲಿ ಎತಾವತ್ತಾಗಿ ಅರ್ಥೈಸಲಾಗುವುದಿಲ್ಲ.

ಲಾವಣಿ ಸಂಪ್ರದಾಯದ ಸಂಭವನೀಯ ಪದಗಳು

ಬದಲಾಯಿಸಿ

ಆದರೆ ತಮಿಳಿನಲ್ಲಿ ಇದಕ್ಕೆ ಸಂಭಾವಿಯಾದ ಪದಗಳಿವೆ. ನೇಳಿರ್, ನೇಳಿರ್ವ್, ಕನ್ನಡದಲ್ಲಿ ಇದಕ್ಕೆ ಸಂವಾರಿ ಪದ ನೆಳ್ಳು ಈ ಪದಗಳ ಉತ್ತರಾರ್ಧದಲ್ಲಿ ಉರುವು ಪದವಿದೆ. ಕನ್ನಡದಲ್ಲಿ ಅದರ ಸಂವಾದಿ ರೂಪ ಬರಲು ಅಂದರೆ ಗಟ್ಟಿಯಾಗಿ ಕೂಗು ದ್ರಾವಿಡ ಭಾಷೆಗಳಲ್ಲಿ ಈ ಪದಗಳು ಇದೇ ಅರ್ಥದಲ್ಲಿ ಬಳಕೆಯಲ್ಲಿರುವುದು ಕಂಡುಬರುತ್ತದೆ. ನೇಲಿರ್ವ್ ಪದಕ್ಕೆ ತಮಿಳಿನಲ್ಲಿ ನೀಳ ಧ್ವನಿ ಎನ್ನುವ ಅರ್ಥವಿದೆ. ಅಂದರೆ ಮೂಲತಃ ಅದು ನೇಳ್ + ಉರವು = ತಮಿಳಿನ ಉರೈ ಕನ್ನಡದಲ್ಲಿ ಬರೆ ಬರಲು ಆಗಿದೆ. ಅದು 'ಒ' ಕಾರ 'ಉ' ಕಾರಗಳು ಪರಸ್ಪರ ವೆತ್ಯಯವಾಗುವುದರಿಂದ ಅದು ಉರಲ್ ಆಗುವುದು ಅಸಂಭಾವ್ಯವಲ್ಲ, ಉರಲ್ ಸಾಹಿತ್ಯವಾಗಿರುವುದಕ್ಕೆ ತುಳುವಿನಲ್ಲಿ ಸ್ಪಷ್ಟ ಉದಾಹರಣೆಗಳಿವೆ. ತುಳುವಿನಲ್ಲಿ ಬೇಕಾದಷ್ಟು ಉರಲು ಹಾಡುಗಳಿವೆ. ಹಾಗಾದುದರಿಂದ ಬರಲು ಉರಲ್ ಗಳು ಸಾಹಿತ್ಯದ ಹೆಸರುಗಳೆಂದು ಸಿದ್ದವಾದಂತಾಯಿತು. ನೇವಳಿ ಅಂದರೆ ನೇಳಿವ್ ಕೂಡ ಅಂತಹ ಜನಪದ ಸಾಹಿತ್ಯ ಪ್ರಕಾರವೇ. ಪದಶಃ ಅವನ್ನು ಅರ್ಥೈಸುವುದಾದರೆ ತಾರಕಸ್ವರದಲ್ಲಿ ಹೇಳುವ ಹಾಡು ಲಾವಣಿ. ಹಾಡುಗಾರಿಕೆಯನ್ನು ಬಲ್ಲವರಿಗೆ ಈ ಉತ್ಪತ್ತಿಯನ್ನು ಒಪ್ಪುವುದು ಕಷ್ಟಕರವೆನಿಸುವುದು. ಇನ್ನು ಮರಾಠಿಯಲ್ಲಿರುವ ಲಾವಣಿ ಪದದ ಬಗೆಗೆ ಹೇಳುವುದಾದರೆ ಕನ್ನಡದ ಜಾನಪದದಲ್ಲಿರುವಂತಹ ರೂಪ. ಅವೆಲ್ಲ ಕನ್ನಡದಲ್ಲಿರುವಷ್ಟು ವಿಫುಲವಾಗಿಯೂ ಮರಾಠಿಯಲ್ಲಿ ಆಗಿಲ್ಲ. ಮೇಲಾಗಿ ಕನ್ನಡ ಭಾಷೆಯ ಚರಿತ್ರೆ ಮತ್ತು ಕರ್ನಾಟಕದ ಚರಿತ್ರೆಯನ್ನು ಗಮನಿಸಿದರೆ ಮರಾಠಿಗೆ ಮಹಾರಾಷ್ಟ್ರಕ್ಕೆ ಅಂತಹ ದೀರ್ಘ ಕಾಲಿನತೆಯೂ ಇಲ್ಲ. ಹಾಗಾದುದರಿಂದ ಲಾವಣಿ ಮರಾಠಿಗೆ ಹೋಗಿದೆ ಎಂಬುದನ್ನು ಹೆಚ್ಚು ಚರ್ಚಿಸಬೇಕಿಲ್ಲ.

ಲಾವಣಿ ಸಂಪ್ರದಾಯದ ವಿಧಗಳು

ಬದಲಾಯಿಸಿ

ಸಾಂಪ್ರದಾಯಿಕವಾಗಿ ಲಾವಣಿಗಳನ್ನು ಬಯಲು ಲಾವಣಿ ಮತ್ತು ಮೇಳ ಲಾವಣಿಯೆಂದೂ ಕರೆಯಲಾಗುತ್ತದೆ. ಬಯಲು ಲಾವಣಿಯಲ್ಲಿ ಹೆಸರೇ ಹೇಳುವಂತೆ ಒಬ್ಬನೇ ಲಾವಣಿಯನ್ನ ಹೇಳುತ್ತಾನೆ. ಅಂತಾ ಸಂದರ್ಭ ಈಗಲೂ ಇದೆ. ಆದರೆ ಮೇಳ ಲಾವಣಿಯಲ್ಲಿ ಡಪ್ಪು, ತುಂತುಣಿ ತಾಳಗಳೊಂದಿಗೆ ಹಾಡಲಾಗುತ್ತದೆ.

ಲಾವಣಿ ಸಂಪ್ರದಾಯದ ಇತರೆ ಹೆಸರುಗಳು

ಬದಲಾಯಿಸಿ

ಇದು ಉತ್ತರ ಭಾಗದ ಒಂದು ಜನಪ್ರಿಯ ಸಂಪ್ರದಾಯ ಲಾವಣಿಗಳನ್ನು ಗೀಗಿ ಡಿಪ್ಪಿನ ಹಾಡು, ಹಾಡಕ್ಕಿ, ಶಾಯರಿ, ಹರದೇಶಿ, ನಾಗೇಶ, ಕಲ್ಲಿ, ತುರಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಅವುಗಳಲ್ಲಿ ಹರದೇಶಿ ನಾಗೇಶಿ ಸಂಪ್ರದಾಯವನ್ನೆ ಕಲ್ಲಿ ತುರಾ ಸವಾಲ್ - ಜವಾಬು ಪದಗಳು ಎಂದು ಕರೆಯಲಾಗುತ್ತದೆ. ಕನ್ನಡದ ಲಾವಣಿಯ ಇತಿಹಾಸವನ್ನು ಮರಾಠಿಯ ಪೇಶ್ವೆಯ ಕಾಲಕ್ಕೆ ಕೊಂಡೊಯ್ಯೊಲಾಗುತ್ತದೆ. ಪೇಶ್ವೆಯರ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಪೊವಾಡಗಳೆಂಬ ವೀರರ ಕಥನ ಕವನಗಳೇ ಆಗಿದೆ. ನಮ್ಮಲ್ಲಿಯೂ ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ, ಸರ್ಜಪ್ಪ ನಾಯಕ ಮುಂತಾದ ಅನೇಕ ಲಾವಣಿಗಳು ಈ ಮಾದರಿಯವು ಎಂದು ಮೇಲ್ಮಟ್ಟಕ್ಕೆ ಒಪ್ಪಿಕೊಳ್ಳಬಹುದಾದರೂ, ಮರಾಠಿಯ ಪೋವಾಡಗಳು ಕನ್ನಡದಲ್ಲಿರುವಂತೆ ಜಾನಪದೀಯ ರಚನೆಗಳಲ್ಲ.

ಲಾವಣಿ ವೈಶಿಷ್ಟ್ಯತೆ

ಬದಲಾಯಿಸಿ

ಲಾವಣಿ ಹಾಡುಗಳು ಬಹಳ ವಿಸ್ತಾರವಾದವುಗಳಲ್ಲಿ ಮಹಾಕಾವ್ಯದ ವ್ಯಾಪ್ತಿ ಇದಕ್ಕೆ ಹೊರತಾದುದು. ಹೆಚ್ಚೆಂದರೆ ಒಂದು ಗಂಟೆಯ ಅವಧಿಯಲ್ಲಿ ಒಂದು ಸಖಿ ಮುಖ್ಯ. ಹಾಡು ಹಾಗೂ ಖ್ಯಾಲಿಯನ್ನು ಬಳಸಬೇಕಾಗುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗಗಳು ಲಾವಣಿಯಲ್ಲಿ ಎದ್ದು ಕಾಣುವ ಅಂಶಗಳು. ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ಅದು ಸವಾಲ್ ಜವಾಬ್ ವಿಚಾರದಲ್ಲಿ ಅದರ ಕಾಲವನ್ನು ಒಂದು ಗಂಟೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಸಂದರ್ಭಾನುಸಾರ ಬೆಳೆಯುತ್ತದೆ. ಲಾವಣಿ ಸಾಹಿತ್ಯ ಪರಂಪರೆಯಲ್ಲಿ ಬೀಬೀ ಇಂಗಳಗಿ ಭಾಗದ ಲಾವಣಿಕಾರರು, ತೇರದಾಳ ಭಾಗದ ಲಾವಣಿಕಾರರು, ಹಲಕುಂದ ಭಾಗದ ಲಾವಣಿಕಾರರು ಎಂಬ ಪ್ರದೇಶಿಕ ವಿವರಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ.

ಉಲ್ಲೇಖ

ಬದಲಾಯಿಸಿ
  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೧೯೭೭.