ಹಳೆಗನ್ನಡಸಂಪಾದಿಸಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. ೯೦೨-೯೭೫). ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.' ಮಾನವ ಕುಲ ತಾನೊಂದೇ ವಲಂ' ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ. ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (೯೪೯-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ. ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ) ನಡುಗನ್ನಡಸಂಪಾದಿಸಿ ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು. ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್‌ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ. ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದ ಮಣಿ ದರ್ಪಣ. ವಚನ ಸಾಹಿತ್ಯಸಂಪಾದಿಸಿ ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ವೀರಶೈವ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ. ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು. ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (೧೧೩೪-೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (೧೨ನೇ ಶತಮಾನ). ಇವರಲ್ಲದೆ ಜೇಡರ ದಾಸಿಮಯ್ಯ ಅಂಬಿಗರ ಚೌಡಯ್ಯ ಇನ್ನೂ ಮೊದಲಾವ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.