ಕಣ್ಣು

ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯ. ಪಂಚೇಂದ್ರಿಯಗಳಲ್ಲಿ ಒಂದು. ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ ಸಾಂದ್ರತೆಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು ಬೆಳಕು ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ. ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು ಒಳಗೆ ಬರುವಂತೆ ಮಾಡುತ್ತದೆ. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ. ರೆಟಿನಾ ರಚನೆ ಇದರಲ್ಲಿ ಸಾವಿರದ ಮುನ್ನೂರು ಕೋಟಿ `ಪೋಟೋ ರಿಸೆಪ್ಟರ್ಸ್’ ಎಂಬ ಕಣಗಳಿರುತ್ತವೆ. ಇವಿಷ್ಟೂ ತಮ್ಮ ಮೇಲೆ ಬೀಳುವ ಬೆಳಕು ಹಾಗೂ ಕತ್ತಲಷ್ಟನ್ನೇ ಗ್ರಹಿಸುತ್ತವೆ. ಇದರ ಆಧಾರದಲ್ಲೇ ಮೆದುಳು ವಸ್ತುವಿನ ಆಕಾರ, ಗಾತ್ರ, ದೂರವನ್ನು ಅಂದಾಜು ಮಾಡುವುದು. ಅದಲ್ಲದೆ, ಅದೇ ರೆಟಿನಾದಲ್ಲಿ ಏಳುನೂರು ಕೋಟಿ `ಕೋನ್’ ಕಣಗಳಿರುತ್ತವೆ.