ಜೋಗ ಜಲಪಾತ
ಇಂಡಿಯನ್ ನಯಾಗರ ಎಂದೇ ಜಗತ್ಪ್ರಸಿದ್ಧವಾಗಿರುವ ಜಗದ್ವಿಖ್ಯಾತ ಜೋಗ ಜಲಪಾತದ ನಯನ ಮನೋಹರ ದೃಶ್ಯಗಳನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. 829 ಅಡಿ ಎತ್ತರದಿಂದ ಕೆಳಕ್ಕೆ ಧುಮುಕುವ ಶರಾವತಿ ನದಿಯ ನಾಲ್ಕು ಜಲಧಾರೆಗಳನ್ನು ನೋಡುವುದೇ ಒಂದು ರೋಮಾಂಚನ ದೃಶ್ಯ. 1550 ಅಡಿ ಅಗಲದ ಈ ಜೋಗ ಜಲಪಾತವು ಸೆಕೆಂಡ್ ಒಂದಕ್ಕೆ ಅಂದಾಜು 5387 ಕ್ಯುಬಿಕ್ ಅಡಿಯಷ್ಟು ವೇಗವಾಗಿ ಧುಮುಕುತ್ತದೆ. ಈ ಜಲಪಾತದ ಈವರೆಗಿನ ದಾಖಲಾದ ಅತಿ ಹೆಚ್ಚು ಧುಮುಕುವ ವೇಗವೆಂದರೆ ಸೆಕೆಂಡ್ ಒಂದಕ್ಕೆ 1.20 ಲಕ್ಷ ಕ್ಯುಬಿಕ್ ಅಡಿ. ಗೇರುಸೊಪ್ಪದಿಂದ ಕೇವಲ 18 ಕಿ.ಮೀ. ದೂರದಲ್ಲಿರುವ ಈ ಜೋಗ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದೇ ಒಂದು ಖುಷಿ. ಏಷಿಯಾ ಖಂಡದಲ್ಲಿಯೇ ಅತಿ ಆಳದ ಜಲಪಾತವೆಂದು ಇದನ್ನು ಗುರುತಿಸಲಾಗಿದೆ.
ಮೂಲದಲ್ಲಿ ಗೇರುಸೊಪ್ಪ ಜಲಪಾತವೆಂದೇ ಕರೆಯಲ್ಪಡುತ್ತಿದ್ದ ಜೋಗ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಸುಮಾರು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮುಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮುಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳ ಮುಖಾಂತರ ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗ ಗಳಾಗಿವೆ.ಮಳೆಗಾಲದಲ್ಲಿ ಅತ್ಯಂತ ರಮಣೀಯ ರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ತಣಿಸುತ್ತಲೇ ಇರುತ್ತದೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ.