ಜಿಎಸ್ ಟಿ

ಜಿಎಸ್ ಟಿ ಎಂದರೇನು?: ಉತ್ಪಾದನೆ,ಮಾರಾಟ,ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ ಜಾರಿಯಲ್ಲಿದೆ. ಇದು ಇಡೀ ದೇಶವನ್ನು ಸಮಾನ ಮಾರುಕಟ್ಟೆಯಡಿ ತರಲಿದ್ದು, ಎಲ್ಲಾ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿ ಒಂದೇ ತೆರಿಗೆ ವ್ಯವಸ್ಥೆಯಡಿ ತರಲಿದೆ. ಜಿಎಸ್ಟಿ ಪರಿಚಯಿಸುವ ಅಗತ್ಯ ಏನು? ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿಯನ್ನು ಜಾರಿಗೆ ತರಲಾಗುತ್ತದೆ. ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ದತಿ ಪ್ರಸ್ತುತವಾಗಿದೆ.ಇದು ಭ್ರಷ್ಟತೆಯನ್ನು ಕಡಿಮೆ ಮಾಡಿ ಹೆಚ್ಚು ಪಾರದರ್ಶಕವಾಗಿ ಆಡಳಿತ ನಡೆಸಲು ಅನುಕೂಲವಾಗುತ್ತದೆ.

ಇದರಿಂದ ಏನು ಲಾಭ: ಪ್ರಸ್ತುತ ಭಾರತದಲ್ಲಿರುವ ತೆರಿಗೆ ಪದ್ದತಿ ತುಂಬಾ ಸಂಕೀರ್ಣವಾಗಿದೆ. ಯಾವುದೇ ವ್ಯಾಪಾರ-ವಹಿವಾಟು ನಡೆಸಲು ಕಾನೂನು ಕಟ್ಟಳೆಗಳನ್ನು ಈಡೇರಿಸಬೇಕಾಗುತ್ತದೆ. ಜಿಎಸ್ ಟಿ ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಭಾರತದ ಜಿಡಿಪಿ ( ಸಮಗ್ರ ದೇಶೀಯ ಉತ್ಪನ್ನ ) ಮತ್ತು ಆದಾಯ ಹೆಚ್ಚಾಗಲಿದ್ದು, ಗ್ರಾಹಕರಿಗೆ ಈ ತೆರಿಗೆಯಿಂದ ಪರೋಕ್ಷ ಲಾಭ ಹೆಚ್ಚಿದೆ. ಭಾರತದ ಆದಾಯ ಹೆಚ್ಚಲು ಹೇಗೆ ಅನುಕೂಲ: ಜಿಎಸ್ಟಿಯಿಂದ ಭಾರತದ ಒಟ್ಟಾರೆ ಜಿಡಿಪಿ ಮತ್ತು ಒಟ್ಟು ಆದಾಯ ಸಂಗ್ರಹಣೆ ಹೆಚ್ಚಾಗುತ್ತದೆ.ವಿದೇಶಗಳಿಗೆ ಹೆಚ್ಚು ರಫ್ತು ಆಗಲಿದ್ದು, ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಉದ್ಯೋಗ ಉತ್ತೇಜಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ವಹಿವಾಟು ಮೇಲೆ ಜಿಎಸ್ಟಿ ಪರಿಣಾಮ: ಸರಕು ಮತ್ತು ಸೇವಾ ತೆರಿಗೆಯನ್ನು ಅತ್ಯಂತ ಸರಳವಾಗಿ ಹೇಳುವುದಾದರೆ, ನೀವೊಂದು ಉತ್ಪಾದನ ಘಟಕವನ್ನು ತೆರೆದಿದ್ದೀರಿ ಎಂದಿಟ್ಟುಕೊಳ್ಳಿ. ಇದಕ್ಕೆ ನೀವು ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಜೊತೆಗೆ ಪ್ರತ್ಯೇಕ ರಿಟರ್ನ್ ಫೈಲ್ ಮಾಡಬೇಕು. ಆದರೆ ನೀವು ಬೇರೆ ಚಿಲ್ಲರೆ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳನ್ನು ಪೂರೈಸುವಾಗ ತೆರಿಗೆ ಕಟ್ಟಬೇಕಾಗಿಲ್ಲ ಹಾಗೂ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ. ಜಿಎಸ್ಟಿ ಇಡೀ ದೇಶಕ್ಕೆ ಏಕರೂಪ ತೆರಿಗೆ ವಿಧಾನವಾಗಿರುವುದರಿಂದ ಬೇರೆ ರಾಜ್ಯಗಳಲ್ಲಿ ಕಂಪೆನಿ ಆರಂಭಿಸಬೇಕೆಂದಿದ್ದರೆ ಅಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ. ಹಾಗಾಗಿ ಇದು ಸರಳವೆನಿಸುತ್ತದೆ. ಆದುದರಿಂದ ಈ ಹೊಸ ತೆರಿಗೆ ನಮ್ಮ ಜೀವನವನ್ನು ಸಂಕೀರ್ಣದಿಂದ ಸರಳತೆಗೆ ತರಬಹುದು.