ಮೋಟರ್ ಸೈಕಲ್ ಡೈರಿ’ ಒಂದು ವಿಮರ್ಷೆ

ಬದಲಾಯಿಸಿ

ಈ ಕೃತಿಯ ಕುರಿತಂತೆ ಮಾತನಾಡುವ ಮೊದಲು ಒಂದನ್ನು ಸ್ಪಷ್ಟ ಪಡಿಸುವುದು ನನ್ನ ಕರ್ತವ್ಯವಾಗಿದೆ. ಉಗ್ರವಾದವೆನ್ನುವುದು ಬೇರೆ ಬೇರೆ ರೂಪಗಳಲ್ಲಿ ನಮ್ಮ ನಡುವೆ ಬೇರಿಳಿಸುತ್ತಿರುವ ಈ ದಿನಗಳಲ್ಲಿ ‘ಜೆಗುವಾರ’ ಎನ್ನುವ ಉಗ್ರವಾದೀ ಹೋರಾಟಗಾರನ ಅತಿ ವೈಭವೀಕರಣ ಓದುಗರನ್ನು ತಪ್ಪು ದಾರಿಗೆ ಸೆಳೆಯಬಾರದು. ಅತಿಶಯಗಳನ್ನು ಕಳಚಿಕೊಂಡು ವಾಸ್ತವಗಳ ಕಣ್ಣಲ್ಲಿ ಅರ್ಥಮಾಡಿಕೊಳ್ಳುತ್ತಾ ಹೋದಂತೆ ಚೆಗುವಾರ ಹೆಚ್ಚು ನಮ್ಮವನಾಗುತ್ತಾನೆಯೇ ಹೊರತು, ಅತಿ ರೋಚಕತೆಯನ್ನು, ಭಾವುಕತೆಯನ್ನು ಆವಾಹಿಸುತ್ತಾ ಹೋದಂತೆ ಅವನು ನೆಲದ ಹಸಿ ಮನುಷ್ಯನಾಗಿ ಉಳಿಯದೇ, ಅತಿಮಾನವನಾಗುತ್ತಾ ಹೋಗುತ್ತಾನೆ. ಚೆಗುವಾರ ನನಗೆ ಇಷ್ಟವಾಗುವುದು, ಸಹ ಮನುಷ್ಯನ ಕುರಿತಂತೆ ಅವನು ಹೊಂದಿದ ಅದಮ್ಯ ಪ್ರೀತಿಯ ಕಾರಣದಿಂದಲೇ ಹೊರತು, ಅವನು ಆರಿಸಿಕೊಂಡ ಉಗ್ರವಾದಿ ಮಾರ್ಗದ ಕಾರಣದಿಂದಲ್ಲ. ಆ ಪ್ರೀತಿಯೇ ಅವನನ್ನು ಅನಿವಾರ್ಯವಾಗಿ ಶಸ್ತ್ರಾಸ್ತ್ರ ಎತ್ತಿಕೊಳ್ಳುವಂತೆ ಮಾಡಿತು. ಆದರೆ, ಅದನ್ನು ಕೆಳಗಿಡುವ ಆಯ್ಕೆ ಅವನದಾಗಿ ಉಳಿಯಲಿಲ್ಲ. ಸಹ ಮನುಷ್ಯನ ಜೊತೆಗೆ ನಾವು ಹಂಚಿಕೊಳ್ಳಬೇಕಾದ ಬದುಕು ಮತ್ತು ಪ್ರೀತಿಯ ಭಾಗವಾಗಿ ಚೆಗೆವಾರ ನಮ್ಮೊಳಗಿರಬೇಕೆ ಹೊರತು, ಅವನು ಮೈತುಂಬಾ ಅಂಟಿಸಿಕೊಂಡ ಗಂಧಕದ ಪುಡಿಯ ವಾಸನೆಯ ಜೊತೆಗಲ್ಲ.

ಮೋಟರ್ ಸೈಕಲ್ ಡೈರಿ’ ಈ ಪುಸ್ತಕದ ಹೆಸರು ನಾನು ಅದೆಷ್ಟೋ ಸಮಯದಿಂದ ಕೇಳುತ್ತಾ ಬಂದಿದ್ದೇನೆ. ಮತ್ತು ಕನ್ನಡದಲ್ಲಿ ತೀರಾ ಇತ್ತೀಚೆಗೆ ಓದಿದೆ. ಮೋಟರ್ ಸೈಕಲ್ ಎನ್ನುವುದೇ ಹುಡುಗರ ಬದುಕಿಗೆ ವೇಗ ಕೊಡುವ ಪದ. ಚೆ ಎನ್ನುವ ಪದ ಕೂಡ ಅಷ್ಟೇ. ಚೆಗೆವಾರನನ್ನ ಎದೆಯ ಮೇಲೆ ಒತ್ತಿಕೊಳ್ಳೋದಕ್ಕೆ ನೀವು ಕಮ್ಯುನಿಸ್ಟ್ ಕಾರ್ಯಕರ್ತನೇ ಆಗಬೇಕಾಗಿಲ್ಲ. ತಮ್ಮ ಟೀಶರ್ಟ್‌ಗಳಲ್ಲಿ ಚೆ ಚಿತ್ರಗಳನ್ನು ಹಾಕಿಕೊಂಡು ತಿರುಗಾಡುವ ಅದೆಷ್ಟೋ ಹುಡುಗರಿಗೆ ಕಮ್ಯುಸಂನ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದೇ ಇರುವುದೂ ಇದೆ. 20-30ರೊಳಗಿನ ವಯಸ್ಸಿನಲ್ಲಿ ನಮ್ಮಿಳಗೊಂದು ಬಂಡುತನವಿರುತ್ತದೆ. ಪ್ರತಿಭಟಿಸುವ, ಬಂಡಾಯವೇಳುವ ಯಾರೇ ಆಗಿರಲಿ, ಅವರು ನಮ್ಮನ್ನು ಅತಿ ಬೇಗ ಆಕರ್ಷಿಸುತ್ತಾರೆ. ಅವರ ಕುರಿತಂತೆ ನಾವು ಒಂದು ರಮ್ಯ, ರೋಚಕತೆಯನ್ನು ಆವಾಹಿಸಿಕೊಳ್ಳುತ್ತಾ ಆ ಮೂಲಕ ನಮ್ಮ ಇಷ್ಟಾನಿಷ್ಟಗಳನ್ನು ಸಾಧಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಇವತ್ತಿನ ಹುಡುಗರ ಪಾಲಿಗೆ ಚೆ ಒಂದು ಜೀವನ ಶೈಲಿಯೇ ಆಗಿದ್ದಾನೆ. ಅವನ ಹೋರಾಟ, ಸೈದ್ಧಾಂತಿಕ ಚಿಂತನೆ, ಸಾಮಾಜಿಕ ಸಮಾನತೆಯ ಕಲ್ಪನೆ ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೇ ಬರೇ ಚೆಯನ್ನು ಚೆ ಎನ್ನುವ ಕಾರಣಕ್ಕಾಗಿಯೇ ಇಷ್ಟಪಡುವ ಅದೆಷ್ಟೋ ಹುಡುಗರನ್ನು ನೋಡಿದ್ದೇನೆ.

ಹಾಗೆ ನೋಡಿದರೆ ಹದಿಹರೆಯದಲ್ಲಿ ಸ್ವತಃ ಚೆ ಕೂಡ ಅದೇ ಥರ ಇದ್ದ. ಅವನು ಮಹಾ ಚೆಲುವನಾಗಿದ್ದ, ತುಂಟನಾಗಿದ್ದ, ತನ್ನ ಪ್ರವಾಸದ ಸಂದರ್ಭದಲ್ಲಿ ಹಲವು ಕಡೆ ಸುಂದರ ಸುಳ್ಳುಗಳನ್ನು ಹೇಳುತ್ತಾನೆ. ಕೆಲವು ಕಡೆ ಬರೇ ವೈನ್‌ಗಾಗಿ ಸಣ್ಣ ಪುಟ್ಟ ಮೋಸಗಳನ್ನು ಮಾಡುತ್ತಾನೆ. ಹುಲಿಯೆಂದು ಭಯ ಬಿದ್ದು, ನಾಯಿಯನ್ನು ಗುಂಡಿಟ್ಟುಕೊಲ್ಲುತ್ತಾನೆ. ಒಟ್ಟಿನಲ್ಲಿ ಚೆ ಹೇಗಿದ್ದ ಎಂದರೆ, ಎಲ್ಲ ಹುಡುಗರ ಹಾಗೆಯೇ ಇದ್ದ. ಅಸ್ತಮಾ ಕಾಯಿಲೆ ಇದ್ದರೂ ಇಡೀ ಭೂಮಿಯನ್ನೇ ತನ್ನ ಮುಷ್ಟಿಗೆ ತೆಗೆದುಕೊಂಡು ಚೆಂಡಾಟ ಆಡಬೇಕು ಎನ್ನುವ ಅವನ ಉತ್ಸಾಹವೇ ಅವನನ್ನು ನಿಜವಾದ ಬದುಕಿನ ಕಡೆಗೆ ಹೊರಳುವಂತೆ ಮಾಡಿತು. ಮೋಟಾರ್ ಸೈಕಲ್ ಡೈರಿ ಕೃತಿಯನ್ನು ಆತ್ಮಕತೆ ಎಂದು ಗ್ರಹಿಸಬಹುದೋ ಎಂದು ಆಲೋಚಿಸಿದ್ದೆ. ಆದರೆ ಆತ್ಮಕತೆಗೆ ನಿಲುಕದ, ಡೈರಿಯ ಕೆಲವು ಚೂರುಗಳಂತಿರುವ ಕಥನ ಇದು. ಆದರೆ ಅವನ ಮುಂದಿನ ಬದುಕಿನ ಒಂದು ಬಹು ದೊಡ್ಡ ಪಯಣಕ್ಕೆ ದಾರಿಯನ್ನು ತೆರೆದುಕೊಟ್ಟ ಸಣ್ಣ ಪಯಣ. ಚೆ ವೃತ್ತಿಯಲ್ಲಿ ಒಬ್ಬ ವೈದ್ಯ ಆಗಿದ್ದ. ಸಮಾಜವನ್ನೂ ವೈದ್ಯನ ಕಣ್ಣಲ್ಲೇ ನೋಡಿದ. ಕಾಯಿಲೆಯ ಬೇರೆ ಬೇರೆ ರಾಜಕೀಯ, ಸಾಮಾಜಿಕ ಆಯಾಮಗಳನ್ನು ಗ್ರಹಿಸುತ್ತಾ ಹೋದ. ಅವನಿಗೆ ಅಂತಹ ಗ್ರಹಿಕೆಯನ್ನು ನೀಡಿದ್ದು ಒಂದು ಮೋಟಾರ್ ಸೈಕಲ್. ಆ ಗುಜರಿ ಮೋಟಾರ್ ಸೈಕಲ್‌ನ ಹೆಸರು ಲಾ ಪಡರೋಸಾ. ಅವನು ಅದರ ಮೇಲೆ ಕುಳಿತು ಬಿಡುಗಡೆಯನ್ನು ಅರಸಿಕೊಂಡು ಹೊರಟ ಪಯಣವೇ ‘ಮೋಟಾರ್ ಸೈಕಲ್ ಡೈರಿ’.

ಚೆಯ ಬದುಕೇ ಒಂದು ಸುದೀರ್ಘ ಪ್ರವಾಸ. ಅದು ಅರ್ಜೇಂಟೈನಾದಿಂದ ಆರಂಭವಾಗಿ ಬೊಲಿವಿಯಾದಲ್ಲಿ ಬಂದು ನಿಲ್ಲುತ್ತದೆ. ಹಾಗೆ ನೋಡಿದರೆ ಈ ಜಗತ್ತಿನ್ಲ ಎಲ್ಲ ಮಹಾ ಹೋರಾಟಗಾರರ ಬದುಕನ್ನು ಬದಲಾಯಿಸಿದ್ದೂ ಪ್ರವಾಸವೇ ಆಗಿದೆ. ಮತ್ತು ಬಹುತೇಕ ಹೋರಾಟಗಾರರು ತಮ್ಮ ಬದುಕನ್ನು, ಗುರಿಯನ್ನು ಪ್ರವಾಸದಲ್ಲೇ ಕಂಡುಕೊಂಡಿದ್ದಾರೆ. ಬುದ್ಧ ಹುಟ್ಟಿದ್ದು ಮನೆಯಿಂದ ಹೊರಗೆ ಇಳಿದ ಬಳಿಕ. ಸುದೀರ್ಘ ಪ್ರಯಾಣದಲ್ಲಿ ಅವನು ಬದುಕಿನ ಅರ್ಥವನ್ನು ಕಂಡುಕೊಂಡ. ಇಸ್ಲಾಮ್ ತತ್ವ ಶಾಸ್ತ್ರದಲ್ಲಿ ಈ ಪ್ರವಾಸವನ್ನು ಎರಡು ಬಗೆಯಾಗಿ ವಿಂಗಡಿಸುತ್ತಾರೆ. ಒಂದು ರಿಹ್ಲಾ. ಇನ್ನೊಂದು ಸಫರ್. ಪ್ರವಾಸಗಳಲ್ಲಿ ನಾವು ಕಂಡ ಬದುಕನ್ನು ದಾಖಲಿಸುತ್ತಾ ಹೋಗುತ್ತೇವೆ. ಇಬ್ನ್ ಬತೂತಾ, ಹೂಯೆನ್‌ತ್ಸಾಂಗ್‌ನಂತಹ ಪ್ರವಾಸಿಗರು ಈ ಥರ ನೋಡಿ ದಾಖಲಿಸುವ ಪ್ರವಾಸವನ್ನು ಮಾಡಿದವರು. ಇದನ್ನು ಇಸ್ಲಾಮ್‌ನಲ್ಲಿ ರಿಹ್ಲಾ ಎಂದು ಕರೆಯುತ್ತಾರೆ. ಈ ದೇಶದ ಇತಿಹಾಸ ಇಂದಿಗೂ ಒಂದಿಷ್ಟು ನಮ್ಮ ಕೈಯಲ್ಲಿದ್ದರೆ ಅದಕ್ಕೆ ಮುಖ್ಯ ಕಾರಣ ಇಂತಹ ಪ್ರವಾಸಿಗರೇ ಆಗಿದ್ದಾರೆ. ಕನ್ನಡದಲ್ಲೇ ‘ಪ್ರವಾಸಿ ಕಂಡ ಇಂಡಿಯಾ’ ಹಲವು ಸಂಪುಟಗಳು ಬಂದಿವೆ. ಅಲ್ಲೆಲ್ಲ ಹಲವು ಪ್ರವಾಸಿಗರು ತಾವು ಕಂಡ ಇಂಡಿಯಾದ ಜನರ ಜನಜೀವನವನ್ನು ಬಗೆದಿಡುತ್ತಾರೆ.

ಎರಡನೆಯ ಬಗೆಯ ಪ್ರವಾಸವಿದೆ. ಇದು ಒಳಗೊಳ್ಳುವಿಕೆಗೆ ಸಂಬಂಧಿಸಿದ್ದು. ಅಲ್ಲಿನ ಜನರ ಬದುಕಿನ ಜೊತೆಗೆ ಭಾಗಿಯಾಗುತ್ತಾ, ಸ್ಪಂದಿಸುತ್ತಾ, ಅವರೊಂದಿಗೆ ಒಳಗೊಳ್ಳುತ್ತಾ ಸಾಗುವುದು. ಬುದ್ಧ ಇಂತಹ ಒಂದು ಪ್ರವಾಸದ ಮೂಲಕ ತನ್ನ ಗುರಿಯನ್ನು ಕಂಡ. ಮಹಮ್ಮದ್ ಪ್ರವಾದಿಯಾಗಿದ್ದು ಕೂಡ ಇಂತಹದೇ ಪ್ರವಾಸಗಳ ಮೂಲಕ. ತಳಸ್ತರದ ಜನರ ಬದುಕಿನ ಜೊತೆಗೆ ಸಂಬಂಧವನ್ನು ಬೆಸೆಯುವ ಮೂಲಕ. ಚೆಯನ್ನು ಬದಲಿಸಿದ್ದು ಕೂಡ ಅಂತಹದೇ ಒಂದು ಸಫರ್. ಅವನ ಜೀವನದ ಆರಂಭದ ಘಟ್ಟದ ಎರಡು ಪ್ರಯಾಣವನ್ನು ಬಹುಮುಖ್ಯವಾಗಿ ಗುರುತಿಸಬಹುದು. ಒಂದು 1950ರಲ್ಲಿ. ಮಗದೊಂದು 1951ರಲ್ಲಿ. ಮೊದಲನೆಯ ಪ್ರವಾಸದಲ್ಲಿ ಉತ್ತರ ಅರ್ಜೆಂಟೀನಾದ 4, 500 ಕಿ.ಮೀ.ಗೆ ಕಳೆದ. ಆದರೆ 1951ರಲ್ಲಿ ಆಲ್ಪರ್ಟೋ ಗ್ರೆನಾಡೋ ಜೊತೆಗೂಡಿ 8000 ಕಿ. ಮೀ. ದೂರವನ್ನು ಒಂಬತ್ತು ತಿಂಗಳಲ್ಲಿ ಕ್ರಮಿಸಿದ. ಈ ಎರಡನೆಯ ಪ್ರವಾಸದ ಬಹುತೇಕ ಭಾಗಗಳನ್ನು ಅವನು ಲ್ಯಾಟಿನ್ ಅಮೆರಿಕದಲ್ಲಿ ಕಳೆದಿದ್ದ. ಅರ್ಜೆಂಟಿನಾದಿಂದ ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ, ಆ ದಾರಿಯಲ್ಲಿ ಅವನು ಕಂಡ ಬಡತನ, ಹಸಿವು, ಶೋಷಣೆ, ನೋವುಗಳ ಜೊತೆಗೆ ಅವನು ಅವನಿಗೆ ತಿಳಿಯದಂತೆಯೇ ಭಾಗಿಯಾಗುತ್ತಾ ಹೋದ. ಆ ಒಳಗೊಳ್ಳುವಿಕೆಯೇ ಅವನನ್ನು ಮತ್ತೊಂದು ಮಹಾ ಯಾನದ ಕಡೆಗೆ ಅವನನ್ನು ಸಿದ್ಧಗೊಳಿಸಿತು. ಅವರು ದಾರಿಯುದ್ದಕ್ಕೂ ಗಾಳಿ ಬೆಳಕನ್ನು ಸ್ವತಂತ್ರವಾಗಿ ಅನುಭವಿಸಿದರು.. ಕಷ್ಟ ಪಟ್ಟರು. ಸುಳ್ಳು ಹೇಳಿದರು. ಸಂಕಟಪಟ್ಟರು. ಕಣ್ಣೀರಿಟ್ಟರು ಕಾಯಿಲೆ ಬಿದ್ದರು. ತಾಯಿಯನ್ನು ನೆನೆದುಕೊಂಡು ಪತ್ರ ಬರೆದರು. ಗೆಳತಿಯನ್ನು ನೆನೆದುಕೊಂಡು ಕವಿತೆಯ ಸಾಲುಗಳನ್ನು ಅನುರಣಿಸಿದರು. ಹೀಗೆ ಬದುಕನ್ನು ಇದ್ದಂತೆಯೇ ಸ್ವೀಕರಿಸುತ್ತಾ, ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಾ ಹೋದವರು ನಿಧಾನಕ್ಕೆ ಆ ಪಯಣದೊಂದಿಗೆ ತಾವೂ ಬದಲಾಗುತ್ತಾ ನಡೆದರು. ಒಂದು ಯಾನ ಅವರನ್ನು ಬದಲಿಸಿತು. ಆ ಬದಲಾವಣೆ ತನ್ನ ಸಮಾಜವನ್ನ್ನು ಬದಲಿಸುವುದಕ್ಕೆ ಕಾರಣವಾಯಿತು.

ಅತ್ಯಂತ ಕುತೂಹಲಕರವಾದ ಅಂಶವೆಂದರೆ, ಎಲ್ಲೂ ತನ್ನ ಪ್ರವಾಸವನ್ನು ಯಾಕೆ ಕೈಗೊಳ್ಳುತ್ತಿದ್ದೇನೆ ಎನ್ನುವುದನ್ನು ಚೆ ಹೇಳಿಕೊಳ್ಳುತ್ತಿಲ್ಲ. ಅಥವಾ ಯಾಕೆ ಎನ್ನುವುದು ಅವನಿಗೇ ಗೊತ್ತಿಲ್ಲ. ಅವನು ಭೇಟಿ ನೀಡಿದ ಯಾವ ಪ್ರದೇಶಗಳೂ ಮೋಜಿನ ಪ್ರದೇಶಗಳಲ್ಲ. ಅಥವಾ ಪೂರ್ವ ಸಿದ್ಧತೆಯೊಂದಿಗೆ, ಹಣದ ಬಲದೊಂದಿಗೆ ಈ ಯಾನವನ್ನು ಹಮ್ಮಿಕೊಳ್ಳಲಿಲ್ಲ. ಬದಲಿಗೆ ತನ್ನ ಲಟಾರಿ ಮೋಟಾರ್‌ಸೈಕಲ್, ಗೆಳೆಯ ಅಲ್ಬರ್ಟೋ, ತಾಯಿ ಮತ್ತು ಗೆಳತಿಯ ನೆನಪುಗಳು, ಕೆಲವು ಪುಸ್ತಕಗಳಷ್ಟೇ ಅವನ ಜೊತೆಗಿದ್ದವು. ತಮ್ಮ ಪ್ರತಿ ದಿನದ ರೊಟ್ಟಿಯನ್ನು ದುಡಿದು, ಬೇಡಿ ಅಥವಾ ಸುಳ್ಳು ಹೇಳಿ ಸಂಪಾದಿಸಬೇಕಾಗಿತ್ತು. ಹೊರಡುವಾಗ ಅವನು ಇರುವುದರಿಂದ ಬಿಡುಗಡೆಯನ್ನಷ್ಟೇ ಬಯಸಿದ್ದ. ಯಾವುದೇ ಗೆರಿಲ್ಲಾ ಹೋರಾಟದ ಕಲ್ಪನೆಯೂ ಇರಲಿಲ್ಲ. ತಾನಿರುವ ಸ್ಥಿತಿಯ ಕುರಿತಂತೆ ಆಳವಾದ ಅಸಹನೆಯೊಂದು ಅವನನ್ನು ಕಾಡುತ್ತಿತ್ತು. ಅದಕ್ಕೆ ಕಾರಣ ಅವನು ಓದಿರುವ ಅಗಾಧವಾದ ಪುಸ್ತಕಗಳೋ, ಅಥವಾ ಆ ಕಾರಣ ಅವನ ಹುಟ್ಟಿನಲ್ಲೇ ಇತ್ತೋ! ಅವನೇ ಹೇಳುವಂತೆ, ಪ್ರಯಾಣವೆನ್ನುವುದು ಅವನ ಪಾಲಿಗೆ ಬಿಡುಗಡೆಯ ಹುಡುಕಾಟ. ಅವನೊಂದು ಅನ್ವೇಷಣೆಯಲ್ಲಿದ್ದ. ಆದರೆ ಅದು ಯಾವುದು ಎನ್ನುವುದು ಅವನಿಗೆ ಗೊತ್ತಿರಲಿಲ್ಲ. ಅವನೊಳಗಿನ ಎದೆ, ಎಲ್ಲ ಯುವಕರ ಎದೆಗಳಂತೆಯೇ ಒಂದು ತಹತಹಕಿಯಲ್ಲಿತ್ತು. ‘‘ಪ್ರಯಾಣವೆನ್ನುವುದು ಒಂದು ಅಮೂರ್ತವಾದ ಅವಕಾಶ. ಪ್ರಯಾಣ ಕೊನೆಗೊಳ್ಳುವುದು ಅವಕಾಶ ಕೊನೆಗೊಂಡಾಗಲೇ ಮತ್ತು ಕೊನೆ ಮುಟ್ಟಲು ಒಂದಕ್ಕಿಂತ ಹೆಚ್ಚು ವಿಧಾನಗಳಿವೆ. ಅಸಂಖ್ಯ ದಾರಿಗಳಿವೆ’’ ಅಂತೆಯೇ ಅವನ ಬದುಕಿನಲ್ಲಿ ಒಂದು ಪಯಣ ಮುಗಿಯುತ್ತಿದ್ದ ಹಾಗೆಯೇ ಇನ್ನೊಂದು ಪಯಣ ತೆರೆದುಕೊಳ್ಳುತ್ತಿತ್ತು. ಕ್ಯೂಬಾ ಸ್ವತಂತ್ರಗೊಂಡರೂ ಅವನ ಬಿಡುಗಡೆಯ ಕಡೆಗಿನ ಅವನ ಪಯಣ ಮಾತ್ರ ನಿಲ್ಲಲೇ ಇಲ್ಲ. ಅದು ಮತ್ತೆ ಅವನನ್ನು ಬೊಲಿವಿಯಾದ ಕಡೆಗೆ ಎಳೆದೊಯ್ಯಿತು. ಒಂದು ರೀತಿಯಲ್ಲಿ ಅವನು ಬಿಡುಗಡೆಯ ಹುಡುಕುತ್ತಾ ಕ್ರಾಂತಿಯ ಬಂಧನದಲ್ಲಿ ಸಿಲುಕಿ ಬಿಟ್ಟ.

ಹಾಗೆ ನೋಡಿದರೆ ಚೆಯ ಮೊತ್ತ ಮೊದಲ ಸಾಹಸ ಮಯ ಪಯಣ ಅವನ 11 ವರ್ಷದಲ್ಲೇ ನಡೆದಿತ್ತು. ತನ್ನ 8 ವರ್ಷದ ತಮ್ಮ ರಾಬರ್ಟೋ ಜೊತೆಗೆ ಅವನು ಮನೆಯಿಂದ ಇದ್ದಕ್ಕಿದ್ದಂತೆಯೇ ಮಾಯವಾಗಿ ಬಿಟ್ಟಿದ್ದ. ಟ್ರಕ್ಕಿನ ಹಿಂಭಾಗದಲ್ಲಿ ಕೂತು ತನ್ನ ಊರಾದ ಕಾರ್ಡೊಬಾಕ್ಕೆ 800 ಕಿ. ಮೀ. ದೂರ ಅವರು ಪುಕ್ಕಟೆ ಪ್ರಯಾಣ ಮಾಡಿದ್ದರು. ಅಮೆಜಾನ್ ನದಿ ತೀರದಲ್ಲೊಮ್ಮೆ ತರುಣನಾಗಿದ್ದಾಗ ಅಲ್ಬರ್ಟೋ ಜೊತೆ ಇಂತಹದೇ ಪ್ರಯಾಣಗೈದು, ಕಾಡು ಮೇಡು ಅಲೆದು ಹಲವು ದಿನಗಳ ಬಳಿಕ ಮನೆಯನ್ನು ತಲುಪಿದ್ದ. ಆದರೆ 1951ರಲ್ಲಿ ಅವನು ಕ್ರಮಿಸಿದ ಪ್ರಯಾಣ ಎಂದಿನಂತಹದಾಗಿರಲಿಲ್ಲ. ಒಂದು ರೀತಿಯಲ್ಲಿ ತಾನು ಆವಾಹಿಸಿಕೊಳ್ಳಲಿರುವ ದೇಹದ ಮೈಲ್ಮೆೃಯನ್ನು ಮೆಲ್ಲಗೆ ಸವರುವ ಕೈಗಳಂತೆ ‘ಈ ಮೋಟಾರ್ ಸೈಕಲ್ ಡೈರಿ’ ಚಲಿಸುತ್ತದೆ. ಬಹುಶಃ ಅವರೆಗಿನ ಪಯಣದಲ್ಲಿ ತನ್ನ ನರನರಗಳನ್ನು ಹದ ಮಾಡಿಕೊಂಡ ಚೆಗೆವಾರ ಜಾಗತಿಕ ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ತೊಡಗಿದ್ದು ಚಿಲಿಯ ಚುಕಿಕಮಾಟಾದ ತಾಮ್ರ ಪರ್ವತದಲ್ಲಿರಬೇಕು. ಈ ತಾಮ್ರ ಪರ್ವತವನ್ನು ಸುತ್ತಿಕೊಂಡ ಆರ್ಥಿಕ, ರಾಜಕೀಯ ಯುದ್ಧಗಳು, ಇವುಗಳ ನಡುವೆ ಸವೆಯುತ್ತಿರುವ ಮೂರು ಸಾವಿರಕ್ಕೂ ಅಧಿಕ ಕಾರ್ಮಿಕರು ಇವೆಲ್ಲವನ್ನು ಅವನು ಒಳಗೊಂಡಿದ್ದು ಚಿಲಿಯಲ್ಲಿ. ಆದುದರಿಂದ, ತಾನು ಪ್ರಯಾಣಿಸಿದ ಊರಿನ ವಿವರಗಳು, ರಾಜಕೀಯ ಇತಿಹಾಸಗಳು ಬಹುತೇಕ ನಮಗೆ ದಕ್ಕುವುದು ಚಿಲಿಯ ನಂತರದ ಪಯಣದಲ್ಲಿ. ಅಲ್ಲಿ ಆತ ಮುಖಾಮುಖಿಯಾಗುವ ವ್ಯವಸ್ಥೆಯ ಮೂಲಕ. ಚಿಲಿ, ಟರಾಟಾ, ಕೊಸ್ಕೋ...ಅಲ್ಲಿಂದ ಇಂಕಾ ಸಾಮ್ರಾಜ್ಯ ಪೆರು...ಈ ದಾರಿಯಲ್ಲಿ ಇವರು ಎದುರಿಸುವ ಸಂಕಟಗಳು, ಅದರ ನಡುವೆಯೇ ಕಾರ್ಮಿಕರ ಸಂಕಟಗಳಿಗೆ ಸ್ಪಂದಿಸುವ ರೀತಿ, ಕೊಸ್ಕೋದಾ ಬರಡಾಗಿರುವ ಪುರಾತತ್ವ ಮ್ಯೂಸಿಯಂ, ಲೀಮಾ ಎನ್ನುವ ಚಂದದ ನಗರದ ಒಳಗಿರುವ ವಾಸ್ತವ, ಈ ಹಾದಿಯ ನಡುವೆ ನೆನಪಾಗುವ ಅಪ್ಪ ಮತ್ತು ಅಮ್ಮ. ಅವರಿಗಾಗಿ ಬರೆಯುವ ಟಿಪ್ಪಣಿಗಳು...ಎಲ್ಲವೂ ನಿಮ್ಮನ್ನೂ ಪ್ರಯಾಣದ ಜೊತೆಗೆ ಕೊಂಡೊಯ್ಯುತ್ತದೆ.

ಈ ಕೃತಿ ನಿಮ್ಮನ್ನು ಖಂಡಿತ ಕ್ರಾಂತಿಕಾರರನ್ನಾಗಿ ಮಾಡಲಾರದು. ಆದರೆ ಪ್ರಯಾಣ, ಯಾತ್ರೆಯ ಕುರಿತಂತೆ ನಿಮಗೊಂದು ಹೊಸ ಒಳನೋಟವನ್ನು ನೀಡಬಹುದು. ಈ ಕೃತಿಯನ್ನು ಓದಿದ ಬಳಿಕ, ಮನೆಯೊಳಗೆ ಬೇರಿಳಿಸಿ ಕೂತವರಿಗೆ ಮೋಟಾರ್ ಸೈಕಲನ್ನು ನೋಡಿದಾಕ್ಷಣ ಇದ್ದಕ್ಕಿದ್ದಂತೆಯೇ ಏರಿ ಬಿಟ್ಟರೆ ಹೇಗೆ ಎಂದು ಅನ್ನಿಸದಿರದು. ನೀವು ಪ್ರವಾಸ ಮಾಡುವವರೇ ಆಗಿದ್ದರೆ, ಈವರೆಗಿನ ನಮ್ಮ ಕೃತಕ ಪ್ರವಾಸಗಳ ಕುರಿತಂತೆ ಸಣ್ಣದೊಂದು ಕಸಿವಿಸಿಯಾಗುವುದು ಖಚಿತ. ಬದುಕಿನ ಹೊಸ ಪ್ರವಾಸಕ್ಕೆ ನೀವು ಸಜ್ಜಾಗುವುದು ಖಂಡಿತ. ಅಷ್ಟಾದರೆ ಈ ಪುಸ್ತಕ ತನ್ನ ಉದ್ದೇಶವನ್ನು ಸಾಧಿಸಿದಂತೆಯೇ ಸರಿ.