ಬೈಂದೂರು ಕನ್ನಡನಾಡಿನ ಪಡುಗಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿ ಹೊದೆದು ಮಲಗಿದ ನಯನ ಮನೋಹರ ಭೂ ಪ್ರದೇಶವೇ ಬೈಂದೂರು. ಬೈಂದೂರು ಕುಂದಾಪುರದಿಂದ 32ಕಿ.ಮೀ ಹಾಗೂ ಜಿಲ್ಲಾ ಕೇಂದ್ರ ಉಡುಪಿಯಿಂದ 70 ಕಿ.ಮೀ ದೂರದಲ್ಲಿದೆ.ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರವು ಒಂದು ಅಲ್ಲದೆ ಕರ್ನಾಟಕದ ವಿವಿಧ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲಿ ಬೈಂದೂರು ಒಂದು. ಇಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ "ಶ್ರೀ ಸೇನೆಶ್ವರ ದೇವಸ್ಥಾನ"ವು ಬಹಳ ಪ್ರಸಿದ್ದಿಯನ್ನು ಪಡೆದಿದೆ. ಬೈಂದೂರು ಹಲವಾರು ಪ್ರವಾಸಿ ಸ್ಥಳಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಸೋಮೇಶ್ವರ ಕಡಲ ತೀರ, ಕೋಸಳ್ಳಿ ಜಲಪಾತ, ಸಾಯಿ ವಿಶ್ರಾಮ್ ಬೀಚ್ ರೆಸಾರ್ಟ್, ಕ್ಷಿತಿಜ ನೇಸರ ದಾಮ ಮುಂತಾದವುಗಳು ಹೆಸರುವಾಸಿಗಳಾಗಿದೆ.ಅಲ್ಲದೆ ಬೈಂದೂರು ಇತರ ಪ್ರವಾಸಿ ತಾಣಗಳಿಗೆ ಸನಿಹವಾಗಿದೆ, ಇಲ್ಲಿಂದ ಕೆಲವೇ ಕಿ.ಮೀ ದೂರದಲ್ಲಿ ಕೊಲ್ಲೂರು, ಮುರ್ಡೇಶ್ವರ, ಕೊಡಚಾದ್ರಿ, ಉಡುಪಿ, ಮರವಂತೆ, ಜೋಗ ಮುಂತಾದ ಪ್ರವಾಸಿ ತಾಣಗಳಿವೆ.

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ

ರಾಮಾಯಣ ಕಾಲದಲ್ಲಿ ಭಗವಾನ ರಾಮ ತನ್ನ ಕಪಿಸೇನೆ ಸಮೇತನಾಗಿ ಸೀತಾನ್ವೇಷಣೆಗೆ ರಾಮೇಶ್ವರಕ್ಕೆ ಹೋಗುವ ದಾರಿಯಾಗಿ ಇಲ್ಲಿಗೆ ಬಂದು ಬಿಂದುಋಷಿಗಳ ಕೋರಿಕೆಯಂತೆ ಒಂದು ರಾತ್ರಿ ಬೆಳಗಾಗುವುದರೊಳಗೆ ತನ್ನ ಕಪಿಸೇನೆಯಿಂದ ನಿರ್ಮಿಸಿದ ಈ ದೇವಾಲಯಕ್ಕೆ ಶ್ರೀ ಸೇನೇಶ್ವರ ಎಂಬ ಹೆಸರು ಬಂದಿತು ಎಂಬುವುದು ಒಂದು ಹೇಳಿಕೆ. ಆದರೆ ಇದಕ್ಕೆ ನಿರ್ದಿಷ್ಟವಾದ ಆಧಾರವಿಲ್ಲದ ಕಾರಣ ಪುರಾಣ ಕಥೆಯಾಗಿಯೇ ಉಳಿದಿದೆ.

ಇತಿಹಾಸ ಸಂಶೋಧಕರ ಅಭಿಪಾಯದಂತೆ ೧೧ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳ ಸಾಮಂತನಾಗಿದ್ದ ಸೇನಾ ಅರಸರು ಈ ದೇವಾಲಯವನ್ನು ರಚಿಸಿದ್ದು ಅದರಿಂದಾಗಿ ಇದು ಶ್ರೀ ಸೇನೇಶ್ವರ ಎಂದು ಪ್ರಸಿದ್ದವಾಯಿತು. ಇದು ಹೆಚ್ಚು ತರ್ಕಬದ್ಧವಾಗಿ ಕಂಡುಬರುತ್ತದೆ.