ಸುಗ್ಗಿ ಕುಣಿತ

ಬದಲಾಯಿಸಿ

ಮುನ್ನುಡಿ

ಬದಲಾಯಿಸಿ

ಸುಗ್ಗಿಹಬ್ಬ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ಪ್ರಕ್ರಿಯೆ. ಹಾಗೆ ನೋಡಿದರೆ ಬಯಲು ನಾಡಿನ ಅನೇಕ ಗ್ರಾಮ ದೇವತೆಗಳ ಜಾತ್ರೆಗಳು ಸುಗ್ಗಿ ಸಂಭ್ರಮದ ಜೋತೆಗ ತಳುಕು ಹಾಕಿಕೊಂಡಿವೆ. ಹೋಳಿ ಹಬ್ಬಕ್ಕೂ ಸುಗ್ಗಿಹಬ್ಬಕ್ಕೂ ಸುಗ್ಗಿಯ ಆಚರಣೆಗೂ ಅಂತಹ ವ್ಯತ್ಯಾಸಗಳೆನೂ ಇಲ್ಲ. ಈ ಎಲ್ಲ ಹಬ್ಬ ಜಾತ್ರೆಗಳ ಹಿನ್ನೆಲೆಯಲ್ಲಿಯೇ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತವನ್ನೂ ನಾವು ನೋಡಬೆಕಾಗುತ್ತದೆ.

ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ

ಬದಲಾಯಿಸಿ

ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲ ಹಾಗೂ ಕಾರವಾರ ಪ್ರದೇಶದ ಕಿರುಗುಡ್ಡ, ಕುರುಚಲು ಕಾಡು, ನದಿಯ ತಿರುವು ಮತ್ತು ಸಮುದ್ರ ಕಿನಾರೆಗಳಲ್ಲಿ ಗೊಪ್ಪೆ ಗೊಪ್ಪೆಯಾದ ಮನೆಗಳ ಸಮೂಹ ಕೊಪ್ಪಗಳಲ್ಲಿ ಈ ಜನ ವಾಸವಾಗಿದ್ದಾರೆ. ಹಾಲಕ್ಕಿ ಒಕ್ಕಲಿಗರ ಸುಗ್ಗಿ ರಾಗ ವರ್ಣರಂಜಿತ ಸಮಾವೇಶ ಇದೇ ಉತ್ತರ ಕನ್ನಡದ ವಿವಿಧ ಜನಾಂಗಳಾದ ನಾಯ್ಕರು [ನಾಮಧಾರಿಗಳು] ಕೊಮಾರ್ಪಂಥರು, ಗ್ರಾಮ ಒಕ್ಕಲಿಗರು, ಅಂಬಿಗರು, ಮುಕ್ರಿಯರು ಹಾಗೂ ಮರಾಠ ಜನಾಂಗಗಳಲ್ಲಿ ಕೂಡ ಸುಗ್ಗಿ ಹಬ್ಬ ಚಾಲ್ತಿಯಲ್ಲಿವೆಯಾದರು ಹಾಲಕ್ಕಿಯವರು ಈ ಕಲೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿಲ್ಲ. ಹಾಲಕ್ಕಿಯವರಿಗೆ ಯಾಕೇ ಒಲಿಯಿತು ಎಂಬುದಕ್ಕೆ ದಂತ ಕಥೆಗಳಿವೆ.

ಒಮ್ಮೆ ಕೈಲಾಸದಲ್ಲಿ ಗಂಗೆ - ಗೌರಿಯರ ಮಕ್ಕಳಿಗೆ ಯಾವುದಾದರು ಕಲೆಯನ್ನು ಕಲಿಯಬೇಕೆಂಬ ಮನಸ್ಸಾಗುತ್ತದೆ. ಶಿವ ಅವರಿಷ್ಟದಂತೆ ಗುರುವಿನ ಬಳಿಗೆ ಕಳುಹಿಸುತ್ತಾನೆ. ಗುರು ಅವರಿಷ್ಟದಂತೆ ಚೆನ್ನಿಮನ್ನೆ ಆಟ ಕಲಿಸಲೆ? ಹಾಣಿ ಆಟ ಕಲಿಸಲೆ? ಚೆಂಡಾಟಕಲಿಸಲೆ? ಎಂದು ಕೇಳಿದಾಗ ಅವರು ಅವೇಲ್ಲಾ ದನಕಾಯುವ ಹುಡುಗರು ಆಡುವ ಆಟ ಎಂದು ತಿರಸ್ಕರಿಸುತ್ತಾರೆ. ಕೋಲಾಟ ಹರಿಜನರಾಡುವ ಆಟ. ಸಂಗಾಬಾಳ್ಯ ಸಿದ್ದರ ಆಟ, ಯಕ್ಷಗಾನ ಹೈಗರು ಆಡುವ ಆಟವೆಂದು ತಿರಸ್ಕರಿಸುತ್ತಾರೆ. ಆಗ ಗುರು ಸುಗ್ಗಿಯ ಕುಣಿತದೊಂದಿಗೆ ಅದನ್ನು ನಿಮಗೆ ಕಲಿಸಿದರೆ ನಿಮ್ಮ ತಂದೆ ತಾಯಿಗಳು ಒಪ್ಪುವುದಿಲ್ಲ ಎಂದು ಹೇಳಿದಾಗ ಮಕ್ಕಳು ಸುಗ್ಗಿ ಕುಣಿತವನ್ನೆ ಕಲಿಸುವಂತೆ ಒತ್ತಾಯ ಮಾಡುತ್ತಾರೆ. ಅವರ ಒತ್ತಾಯಕ್ಕೆ ಮಣಿದು ಗುರು ಕಲೆಯನ್ನು ಕಲಿಸಿ ಕೊಡುತ್ತಾನೆ. ಅನಂತರ ಮಕ್ಕಳು ಊರಿನ ಮನೆಮನೆಯ ಮುಂದೆ ಸುಗ್ಗಿ ಕುಣಿತ ಪ್ರದರ್ಶನ ನೀಡಲು ಹೋರಡುತ್ತಾರೆ. ಇದನ್ನು ಗಮನಿಸಿದ ಶಂಕರ ನಮ್ಮಂತಹವರಿಗೆ ಇದು ಯೋಗ್ಯವಲ್ಲ ಎಂದು ಹೇಳಿ ಮಕ್ಕಳಿಗೆ ಶಾಪ ನೀಡುತ್ತಾನೆ. ಆಗ ಮಕ್ಕಳ ಕೈಯಲ್ಲಿನ ಕೋಲು ಕುಂಚ ನೆಲಕ್ಕೆ ಬಿದ್ದು ಹೋಗುತ್ತದೆ. ಅಷ್ಟರಲ್ಲಿ ಹಾಲಕ್ಕಿ ಹುಡುಗನೊಬ್ಬ ಅದನ್ನು ಎತ್ತಿ ಕೊಳ್ಳುತ್ತಾನೆ. ಮೊದಲನೆಯ ಆಟದಲ್ಲೆ ಅಪಶಕುನವಾಯಿತೆಂದು ಹುಡುಗರು ಎಲ್ಲವನ್ನು ಹಾಲಕ್ಕಿ ಹುಡುಗನಿಗೆ ಒಪ್ಪಿಸುತ್ತಾರೆ. ಗುರುಗಳು ಐದು ದಿನಗಳ ಕಾಲ ಮಾಂಸಹಾರ ತ್ಯಜಿಸಿ ಹಸಿರು ಗಿಡಗಳನ್ನು ಕಡಿಯದೆ ದೇವರನ್ನು ಪೂಜಿಸಿ, ಈ ಕಲೆಯನ್ನು ಪ್ರದರ್ಶಿಸಬೇಕೆಂದು ಕರಾರು ಹಾಕುತ್ತಾರೆ. ಇದರಿಂದ ಇಂದಿಗೂ ಈ ಸುಗ್ಗಿಯ ಕುಣಿತ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಕಲಾವಿದರು.

ಸುಗ್ಗಿಮೇಳದ ಆರಂಭಿಕ ಆಚರಣೆ

ಬದಲಾಯಿಸಿ

ಅರಸು ಗೌಡ ಸುಗ್ಗಿ ಮೇಳಕ್ಕೆ ಕೋಲು, ಕುಂಚ, ಗುಮಟೆ, ತಾಳ, ಜಾಗಟೆ ಇತ್ಯಾದಿ ಸಕಲ ವಸ್ತುಗಳನ್ನು ಕೊಡುವ ಮುನ್ನ ಕರಿ ಅಕ್ಕಿಯನ್ನು ಮಂತ್ರಿಸಿ ಕೊಡುತ್ತಾನೆ. ಕಲಾವಿದರಿಗೆ ಕರಿ ಅಕ್ಕಿ ಪ್ರಮುಖ ವಾದದು ಎಂಬ ಭಾವನೆ ಇರುತ್ತದೆ. ಅದನ್ನು ತೆಗೆದು ಕೊಂಡು ತಮ್ಮ ಸೊಂಟದಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತಾರೆ. ಕರಿ ಅಕ್ಕಿಯನ್ನು ಹಿಡಿದ ಕಲಾವಿದರು ಬಿಳಿ ಅಕ್ಕಿಯನ್ನು ಕೂಡಾ ಹಿಡಿದಿರುತ್ತಾರೆ. ಅನಂತರ ಕಲಾವಿದರು ಕರಿಕಣಕ್ಕೆ ಬರುತ್ತಾರೆ. ಕರಿಕಣ ಪ್ರತಿವರ್ಷ ಸುಗ್ಗಿಕಟ್ಟುವ ಸ್ಥಳ. ಅಲ್ಲಿಂದಲೆ ಸುಗ್ಗಿ ಹೋರಡಬೇಕು. ಕರಿಕಣ ಮುರುಕಡೆ ಮುಚ್ಚಿದ ಸುಮಾರು ಹತ್ತಡಿ ಎತ್ತರ ಇರುವ ಚಚ್ಚೌಕಟ್ಟಾದ ಚಪ್ಪರ. ಇದರ ಮಧ್ಯದಲ್ಲಿ ಒಂದು ಕಂಬ ಇರುತ್ತದೆ. ಇದಕ್ಕೆ ಸುರಗಿ ಕಂಬ ಎಂದು ಹೆಸರು. ಇದಕ್ಕೆ ಹಲವಾರು ಟಿಸಿಲುಗಳು ಇರುತ್ತವೆ. ಕಲಾವಿದರ ಕಲಾ ಪ್ರದರ್ಶನಕ್ಕೆ ಸಂಬಂಧಪಟ್ಟ ಕೋಲು, ಕುಂಚ, ಗೆಜ್ಜೆ, ಜಾಗಟೆ, ತಾಳಗಳನ್ನು ಈ ಟಿಸಿಲುಗಳಿಗೆ ತೂಗು ಹಾಕುತ್ತಾರೆ. ಕಲಾತಂಡ ಕರಿಕಣದಿಂದ ಹೊರಡುವುದಕ್ಕಿಂತ ಮುನ್ನ ತಮ್ಮ ತಂಡ ಹೊರಟಿದೆ ಎಂದು ಜನರಿಗೆ ತಿಳಿಸಲು ಸಂಕೇತವಾಗಿ ಹೆದ್ದುಂಬೆ ಕೋಲು ವಾದ್ಯವನ್ನು ಊದುತ್ತಾರೆ. ಹೆದ್ದುಂಬೆ ಎಂಬ ಮರದಿಂದ ಮಾಡಿದ ವಾದ್ಯದ ಧ್ವನಿ ಸುಮಾರು ಎರಡರಿಂದ ನಾಲ್ಕು ಕಿಲೊಮಿಟರ್ ದೂರದವರೆಗೆ ಸದ್ದು ಕೆಳಿಬರುತ್ತದೆ ಎಂದು ಹೇಳುತ್ತಾರೆ.

ಕಲಾವಿದರ ವೇಷ ಭೂಷಣ

ಬದಲಾಯಿಸಿ

ಹಿರಿ ಸುಗ್ಗಿಯ ಪ್ರಮುಖ ಶೀರೋಭೂಷಣವಾದ ಬಣ್ಣ ಬಣ್ಣದ ಕಾಗದ ಚೆಂಡು ಬೆಗಡೆಗಳಿಂದ ಅವುಗಳ ಮೇಲೆ ಹಕ್ಕಿ ಕುಳಿತಂತೆ ಕಾಣುವ ಹಾಗೆ ಗುಡಿಗಾರರು ತಯಾರಿಸುತ್ತಾರೆ. ಸೀರೆ ಮೊಣಕಾಲಿನವರೆಗೆ ಬರುವಂತೆ ನೆರಿಗೆಯಾಗಿ ಉಟ್ಟು ಇಲ್ಲವೆ ಪಾಯಿಜಾಮ ತೊಟ್ಟು ಕೆಂಪು ಹಳದಿ ಬಣ್ಣದ ನಿಲುವಂಗಿ ಹಾಕಿ ಮೇಲೆ ಜಾಕಿಟು ಧರಿಸಿ ಸೊಂಟಕ್ಕೆ ತುಂಡು ವಸ್ತ್ರಗಳನ್ನು ಕಟ್ಟಿಕೊಳ್ಳುತ್ತಾರೆ. ತಲೆಗೆ ರುಮಾಲು ಸುತ್ತಿ ತುರಾಯಿಯನ್ನು ಪೂಜಿಸಿ ಕಟ್ಟಿಕೊಳ್ಳುತ್ತಾರೆ. ತುರಾಯಿಯ ಕೆಳಗೆ ಹಣೆಯ ಮೇಲೆ ಬೆಗಡೆ ಕನ್ನಡಿಯ ಚೂರುಗಳನ್ನು ಒಪ್ಪವಾಗಿ ಕೂಡಿಸಿದ ಕಮಾನಿನಾಕಾರದ ಮುಂಗಟ್ಟು ಕಟ್ಟಿಕೊಂಡು ಮುತ್ತಿನ ಸರಗಳನ್ನು ಇಳಿಬಿಡುತ್ತಾರೆ.

ಸುಗ್ಗಿ ಮೆರವಣಿಗೆ

ಬದಲಾಯಿಸಿ

ಸುಗ್ಗಿ ತಂಡದ ಕಲಾತಂಡದಲ್ಲಿ ತುರಾಯಿ ಕಟ್ಟಿದ ಕಲಾವಿದರು ನಾಲ್ಕುಗೆರೆಯಿಂದ ಹನ್ನೆರಡು ಗೆರೆಯವರೆಗಿರುತ್ತಾರೆ. ಕಡವಾಡ ಸೀಮೆಯ ಸುಗ್ಗಿ ಮೇಳದಲ್ಲಿ ಸುಗ್ಗಿದೇವನನ್ನು ಒಯ್ಯುವ ಸಂಪ್ರದಾಯವಿದೆ. ತುರಾಯಿ ಕಟ್ಟಿದ ಕಲಾವಿದರ ಹೊರತಾಗಿ ಕೈಯಲ್ಲಿ ಖಡ್ಗ ಹಿಡಿದು ಕರಡಿ, ಹನುಮಂತ, ಕಳ್ಳ, ಪೋಲಿಸ, ಋಷಿ ಮುನಿ, ಬ್ರಿಟಿಷ, ಹಾಗೂ ಮುಸಲ್ಮಾನ ವೇಷಗಳು ಮತ್ತು ಯಕ್ಷಗಾನ ಕಟ್ಟಿದ ಹಲವು ವೇಷಗಳಿರುತ್ತವೆ.

ಸುಗ್ಗಿ ಕುಣಿತ

ಬದಲಾಯಿಸಿ

ಸುಗ್ಗಿಯ ವೇಷ ಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರ ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೆಳದ ವಾದ್ಯದ ಗತ್ತಿಗನುಗುಣವಾಗಿ ಪದಗಳನ್ನು ಪದಗಾರರು ಹಾಡುತ್ತಾರೆ. ಹಾಡಿದ ಪದಗಳನ್ನು ಪುನಾರಾವರ್ತನೆಗೊಳಿಸುತ್ತಾ ಕಲಾವಿದರು ಕುಣಿಯುತ್ತಾರೆ. ಹಿಮ್ಮೆಳದ ತಾಳ, ಲಯಕ್ಕನುಗುಣವಾಗಿ ಕುಣಿಯುವವರ ಕುಣಿತ ಹಾಗೂ ಅಂಗಾಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ್ದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈಲಿ ಹಿಡಿದಿರುವ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ದವಾಗಿ ಕುಟ್ಟುತ್ತಾರೆ. ವಾದ್ಯಮೇಳದ ಲಯ ಗತಿಗಳಿಗನುಗುಣವಾಗಿ ಚೋಹೋಚೋ, ಸೋಹೋಚೋ, ಓಹೋಸಾ, ದಯ್ಯೋ ದಯ್ಯೋ ಎಂದು ಮುಂತಾಗಿ ಹಯ್ಲೂ ಹಾಕುತ್ತಾ ವಿವಿಧ ಭಂಗಿಯಲ್ಲಿ ಕುಣಿಯುತ್ತಾರೆ.

ಉಲ್ಲೇಖ

ಬದಲಾಯಿಸಿ
  1. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.