ಕುಮಾರವ್ಯಾಸ ಗದುಗಿನಲ್ಲಿರುವ ಕುಮಾರವ್ಯಾಸನ ಪ್ರತಿಮೆ ಕುಮಾರವ್ಯಾಸನ ಕಂಬ

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. "ಗದುಗಿನ ನಾರಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.


ಕೃತಿಗಳು

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. 'ಕುಮಾರವ್ಯಾಸ ಭಾರತ'ದ ಭಾಷೆ ನಡುಗನ್ನಡ.

ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:

   "ಬವರವಾದರೆ ಹರನ ವದನಕೆ ಬೆವರ ತಹೆನು" (ಅಭಿಮನ್ಯುವಿನ ವೀರೋಕ್ತಿ!)
   "ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ" (ಕಿರಾತಾರ್ಜುನೀಯ ಪ್ರಸಂಗದಲ್ಲಿ)
   "ಜವನ ಮೀಸೆಯ ಮುರಿದನೋ" (ಉತ್ತರನ ಪೌರುಷದಲ್ಲಿ)
   "ಅರಿವಿನ ಸೆರಗು ಹಾರಿತು"

ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ("ತಿಳಿಯ ಹೇಳುವೆ ಕೃ‍ಷ್ಣ ಕಥೆಯನು") ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;

ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:

"ಕುಮಾರ ವ್ಯಾಸನು ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು

ಭಾರತ ಕಣ್ಣಲಿ ಕುಣಿವುದು! ಮೈಯಲಿ

ಮಿಂಚಿನ ಹೊಳೆ ತುಳುಕಾಡುವುದು!"

   ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.