ಸದಸ್ಯ:Manjushree hegde/ನನ್ನ ಪ್ರಯೋಗಪುಟ

ಜೈನ ಧರ್ಮೀಯರಿಂದ ಆಚರಿಸ್ಪಡುವ ಹಬ್ಬಗಳು

ಬದಲಾಯಿಸಿ

ಮುನ್ನುಡಿ

ಬದಲಾಯಿಸಿ

ಭಾರತ ದೇಶದಲ್ಲಿ ಜೈನ ಧರ್ಮವು ಪುರಾತನ ಧರ್ಮವಾಗಿದೆ. ಜೈನ ಧರ್ಮಕ್ಕೆ ತನ್ನದೇ ಆದ ಐತಿಹ್ಯವಿದ್ದು ಜೈನ ಪರಂಪರೆಯಲ್ಲಿ ಶಾಸ್ತ್ರದಾನಕ್ಕೆ ಮಹತ್ತರವಾದ ಸ್ಥಾನವಿದೆ. ಜೈನಧರ್ಮವನ್ನು ಪಾಲಿಸುವವರನ್ನು ಶ್ರಾವಕರು ಎಂದು ಕರೆಯಲಾಗುತ್ತದೆ. ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯವನ್ನು ಪಾಲಿಸಬೇಕಾದರೆ ಮೊದಲಾಗಿ ಶಾಸ್ತ್ರದ ಅರಿವು ಶ್ರಾವಕರಿಗಿರಬೇಕಾಗುತ್ತದೆ.

ಜೈನ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ. ಹಬ್ಬಗಳ ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸ ಇರಬಹುದು. ಆದರೆ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆ ಇಲ್ಲ. ಜೈನರ ಶ್ರಾವಕ-ಶ್ರಾವಕಿಯರು ಆಚರಿಸುವ ಹಬ್ಬಗಳ ಮಾಹಿತಿ ಮತ್ತು ಆಚರಿಸುವ ಹಬ್ಬದ ಹಿಂದಿನ ಕಥೆಗಳು ಇಂತಿವೆ

ಚೈತ್ರ ಶುದ್ಧ ಪಾಡ್ಯ

ಬದಲಾಯಿಸಿ

ಜೈನರ ಪ್ರಥಮ ತೀರ್ಥಂಕರ ವೃಷಭನಾಥರು ನಾಗರಿಕತೆಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಜನಿಸಿ ಜನತೆಗೆ ಕುಟುಂಬ ವ್ಯವಸ್ಥೆಯನ್ನೂ ವೃತ್ತಿ ಮಾರ್ಗವನ್ನೂ ಕಲ್ಪಿಸಿ ಯುಗದ ಆದಿ ಪುರುಷರೆನಿಸಿದರು. ಈ ಪುಣ್ಯ ಪುರುಷನ ಸ್ಮರಣೆಗಾಗಿ ಯುಗಾದಿ ಆಚರಣೆ ರೂಢಿಗೆ  ಬಂತು. ಚಾಂದ್ರಮಾನ ಯುಗಾದಿ ವರ್ಷಾಂರಭದ ದಿನ. ಬೆಳಗ್ಗೆ ಬೇಗನೆ ಎದ್ದು ಸ್ನಾನಾದಿಗಳನ್ನು  ತೀರಿಸಿ,ಜಿನಮಂದಿರಕ್ಕೆ ಹೋಗಿ ಶ್ರೀ ಜಿನೇಶ್ವರನನ್ನು ಪೂಜಿಸುವುದು ಯುಗಾದಿಯ ವಿಶೇಷ. ಆ ದಿನ ಕಣ್ಣು ಮುಚ್ಚಿಕೊಂಡೇ  ದೇವರ ಕೋಣೆಗೆ ಹೋಗಿ ಜಿನೇಶ್ವರನನ್ನೇ ಮೊದಲಾಗಿ ನೋಡಬೇಕು ಎಂದು ಯುಗಾದಿಯ ಕ್ರಮ.

ಮಹಾವೀರ ಜಯಂತಿ :

ಭಗವಾನ್ ಮಹಾವೀರರ ಜನ್ಮದಿನದಂದು ಮಹಾವೀರ ಜಯಂತಿಯನ್ನು ಆಚರಿಸುತ್ತಾರೆ. ಮಹಾವೀರರು ವೈಶಾಲಿಯ ಕುಂಡಲಪುರದಲ್ಲಿ ಜನಿಸಿದರು. ಇವರು ವರ್ತಮಾನ ಕಾಲದ 24ನೇ ತೀರ್ಥಂಕರರು. ಜಯಂತಿಯ ದಿನ ಜಿನ ಬಾಲಕನ ಪ್ರತಿಮೆಯನ್ನು ಊರು-ನಗರದಲ್ಲಿ ಮೆರವಣಿಗೆ ಮಾಡಿ ಪಾಂಡುಕಶಿಲೆಯಲ್ಲಿ ಕುಳ್ಳಿರಿಸಿ, ಜನ್ಮಾಭಿಷೇಕ ಮಾಡುತ್ತಾರೆ. ಬಳಿಕ ಜಿನ ಬಾಲಕನನ್ನು ತೊಟ್ಟಿಲಲ್ಲಿ ಮಲಗಿಸಿ,ಹಾಡಿ,ಹೊಗಳಿ,ಉಡುಗೊರೆಯನ್ನಿತ್ತು ಸನ್ಮಾನಿಸುತ್ತಾರೆ. ಇದೊಂದು ಧರ್ಮ ಪ್ರಭಾವನಾ ಪರ್ವವೂ ಆಗಿರುವುದರಿಂದ ಜೈನೇತರರನ್ನು ಸೇರಿಸಿಕೊಂಡು ಸಾರ್ವಜನಿಕವಾಗಿ ಆಚರಿಸಿ, ಅಹಿಂಸಾ ತತ್ವವನ್ನು ಪ್ರಚುರಪಡಿಸಲಾಗುತ್ತದೆ.

ಅಕ್ಷಯ ತದಿಗೆ

ಬದಲಾಯಿಸಿ

ಭಗವಾನ್ ಆದಿನಾಥ ಸ್ವಾಮಿಯು ಮುನಿ ದೀಕ್ಷೆಯನ್ನು ಕೈಗೊಂಡು ಪ್ರಥಮವಾಗಿ ಆಹಾರ ಸ್ವೀಕರಿಸಿದ ಪವಿತ್ರ ದಿನ. ಪ್ರಥಮ ತೀರ್ಥಂಕರರಾದ ಆದಿನಾಥರು ಮುನಿದೀಕ್ಷೆಯನ್ನು ಸ್ವೀಕರಿಸಿ, ಒಂದು ವರ್ಷದ ಕಾಲ ಅವರಿಗೆ ಆಹಾರ ಸಿಗಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಆಹಾರ ಕೊಡುವ ಕ್ರಮವನ್ನೂ ಯಾರು ತಿಳಿದಿರಲಿಲ್ಲ. ಅದಲ್ಲದೇ ಆದಿನಾಥರು ಪೂರ್ವಭವದಲ್ಲಿ ಹಸುವೊಂದಕ್ಕೆ ಆಹಾರ ಸಿಗದಿರುವುದಕ್ಕೆ ಕಾರಣೀಭೂತರಾಗಿ ಅವರ ಕರ್ಮವೂ ಕಾಡುತ್ತಿತ್ತು. ಹೀಗೆ ಒಂದು ವರ್ಷ ಕಳೆಯುತ್ತಿರಲು ಪರ್ಯಟನ ಮಾಡುತ್ತಾ ಅವರು ಹಸ್ತಿನಾಪುರಕ್ಕೆ ಆಗಮಿಸಿದರು. ಹಸ್ತಿನಾಪುರದ ಶ್ರೇಯಾಂಸ ಕುಮಾರನಿಗೆ ಮಾತ್ರ ಮುನಿಗಳಿಗೆ ಆಹಾರ ಕೊಡುವುದಕ್ಕೆ ತಿಳಿದಿತ್ತು. ಹೇಗೆಂದರೆ ಹಿಂದಿನ ಭವದಲ್ಲಿ ಆದಿನಾಥರು ವಜ್ರಜಂಘನಾಗಿಯೂ ಆತನ ಮಡದಿ ಶ್ರೀಮತಿಯಾಗಿ ಶ್ರೇಯಾಂಸ ಕುಮಾರನೂ ಇಬ್ಬರು ಚಾರಣ ಮುನಿಗಳಿಗೆ ಆಹಾರ ದಾನ ಮಾಡಿದ್ದರು. ಪೂರ್ವದ ಘಟನೆಯ ಸ್ಮರಣೆಯಿಂದ ಶ್ರೇಯಾಂಸ ಕುಮಾರನು ಇಕ್ಷುರಸವನ್ನು  (ಕಬ್ಬಿನ ರಸ) ಆದಿನಾಥರಿಗೆ ನೀಡುವುದರೊಂದಿಗೆ  ಆ ದಿನವು ‘ಅಕ್ಷಯ ತದಿಗೆ’ ಯೆಂದು ಖ್ಯಾತಿಯಾಯಿತು. ಯಾರು ಅಕ್ಷಯ ತದಿಗೆಯಂದು  ಕಬ್ಬಿನ ಹಾಲು ಇತ್ಯಾದಿ ದ್ರವ್ಯಗಳಿಂದ ಆದಿನಾಥ ಭಗವಂತರನ್ನು ಅಭೀಷೇಕಾಧಿಗಳಿಂದ ಪೂಜಿಸುತ್ತಾರೋ ಅವರಿಗೆ ಅಕ್ಷಯ ಸಂಪತ್ತು, ಪದ, ಸುಖ ಪ್ರಾಪ್ತಿಯಾಗುತ್ತದೆ ಎಂಬ ವಾಡಿಕೆಯಿದೆ.

ಶ್ರುತ ಪಂಚಮಿ

ಬದಲಾಯಿಸಿ

ಶ್ರುತ ಪಂಚಮಿಯು ಜೈನರಿಗೆ  ಅತ್ಯಂತ ಮಹತ್ವದ ಹಬ್ಬವಾಗಿದ್ದು ಇದನ್ನು ಜ್ಯೇಷ್ಠಶುದ್ಧ ಪಂಚಮಿಯಂದು ಆಚರಿಸುತ್ತಾರೆ. ಈ ದಿನ ಜಿನ ಮಂದಿರಗಳಲ್ಲಿರುವ ಸರಸ್ವತಿಯ ಪೂಜೆಯನ್ನೂ, ಶ್ರುತಸ್ಕಂದ, ಶಾಸ್ತ್ರಗ್ರಂಥಗಳ ಪೂಜೆಯನ್ನು ನಡಸುತ್ತಾರೆ. ತೀರ್ಥಂಕರ ವಾಣಿಯೇ ‘ಸರಸ್ವತಿ’ಯೆಂಬುದು ಜೈನರ ಸಿದ್ಧಾಂತ. ಇಂದ್ರನಂದಿಯ ಶ್ರುತವಾರ ಗ್ರಂಥದಲ್ಲಿ ಜಿನವಾಣಿ ಸರಸ್ವತಿ, ಸಮ್ಯಗ್‍ಜ್ಞಾನದ ಸಂಗ್ರಹವೇ ಶಾಸ್ತ್ರವೆಂದು ಹೇಳುತ್ತಾನೆ. ಈ ದೃಷ್ಟಿಯಿಂದ ಶ್ರುತಪಂಚಮಿಯ ಆರಾಧನೆಯೆಂದರೆ ಜೈನರಿಗೆ ಜ್ಞಾನದ ಆರಾಧನೆಯೇ ಆಗಿದೆಯೆನ್ನಬುದು.

ಶ್ರುತಪಂಚಮಿಯ ಹಿನ್ನಲೆಯನ್ನು ಜೈನ ಪುರಾಣಗಳು ಹೀಗೆ ವಿವರಿಸುತ್ತವೆ : ವೃಷಭದೇವನಿಂದ ಮೊದಲ್ಗೊಂಡು ವರ್ಧಮಾನರವರೆಗಿನ ತೀರ್ಥಂಕರರು ಜನತೆಗೆ ಉಪದೇಶಿಸಿದ ಆಗಮವು ಹನ್ನೆರಡು ಅಂಗಗಳಲ್ಲಿ ಸಂಗ್ರಹವಾಗಿದ್ದವು. ಮಹಾವೀರನ ತರುವಾಯ ಈ ಜ್ಞಾನವನ್ನು ಮೂವರು ಕೇವಲಿಗಳು, ಐವರು ಶ್ರುತ ಕೇವಲಿಗಳು, ಹನ್ನೊಂದು ಜನ ದಶಪೂರ್ವಧಾರಿಗಳು, ಐವರು ಏಕಾದಶಾಂಗಧಾರಿಗಳು, ನಾಲ್ವರು ಆಚರಾಂಗಧಾರಿಗಳು ತಮ್ಮ ಶಿಷ್ಯರಿಗೆ ಬೋಧಿಸುತ್ತಾ ಬಂದರು. ಕಾಲಕ್ರಮೇಣ ನೆನಪಿನ ಶಕ್ತಿಯು ಕ್ಷೀಣವಾಗುತ್ತಾ ಬಂದು, ದ್ವಾದಶಾಂಗಳಲ್ಲಿ ಹೆಚ್ಚಿನ ಅಂಗಗಳು ನಷ್ಟವಾದವು. ಈ ಪವಿತ್ರವಾದ ಜ್ಞಾನಭಂಡಾರವು ಅಳಿಯುತ್ತ ಬಂದಿರುವುದನ್ನು ಗಮನಿಸಿದ ಪುಷ್ಪದಂತ ಮತ್ತು ಭೂತಬಲಿ ಆಚಾರ್ಯರು ತಮ್ಮ ಗುರುಗಳಾದ ಧರಸೇನಾಚರ್ಯರ ಆದೇಶದಂತೆ ಲಿಪಿಬದ್ಧಗೊಳಿಸಲು ನಿರ್ಧರಿಸಿದರು. ಈ ಕಾರ್ಯವು ಜ್ಯೇಷ್ಠಶುದ್ಧಪಂಚಮಿಯಂದು ಮುಗಿದಾಗ ಮುನಿ, ಆರ್ಯಿಕಾ, ಶ್ರಾವಕ, ಶಾವಿಕೆಯರೆಂಬ ಚತುಃಸಂಘಗಳು ಒಟ್ಟು ಸೇರಿ ಭಕ್ತಿ ಭಾವದಿಂದ ಪೂಜಿಸಿದರು. ಅಂದಿನಿಂದ ಮೊದಲ್ಗೊಂಡು ಆ ಪುಣ್ಯ ದಿನದ ಸ್ಮರಣೆಗಾಗಿ ಜೈನರು ಶ್ರುತಪಂಚಮಿಯನ್ನು ಪರ್ವರೂಪದಿಂದ ಆಚರಿಸುತ್ತ ಬಂದಿದ್ದಾರೆ.

ಚಾತುರ್ಮಾಸ

ಬದಲಾಯಿಸಿ

ಆಷಾಢ ಶುದ್ಧ ಅಷ್ಟಮಿಯಿಂದ-ಕಾರ್ತಿಕ ಮಾಸ ಹುಣ್ಣಿಮೆಯ ತನಕ ಚಾತುರ್ಮಾಸ ಪರ್ವ ನಡೆಯುತ್ತದೆ. ಚಾತುರ್ಮಾಸ ಪರ್ವವು ಜೈನರ ಅತ್ಯಂತ ಶ್ರೇಷ್ಠ ಹಾಗೂ ನಾಲ್ಕು ತಿಂಗಳು ನಡೆಯುವ ಅತೀ ದೀರ್ಘ ಹಾಗೂ ಅಷ್ಟಾಹ್ನಿಕ, ಶೋಡಷಭಾವನೆ, ದಶಲಕ್ಷಣ, ಅನಂತನ ವೃತ, ಅನೇಕ ನೋಪಿವೃತಗಳು, ನವರಾತ್ರಿ, ಜೀವದಯಾಷ್ಟಮಿ ಮೊದಲಾದ ಅನೇಕ ಪರ್ವಗಳು ಚಾತುರ್ಮಾಸದಲ್ಲಿ ಅಂತರ್ಗತವಾಗಿದೆ. ಇದನ್ನು ‘ವರ್ಷಾಯೋಗವೆಂದೂ’ ಕರೆಯುತ್ತಾರೆ.

ಈ ಅವಧಿಯು ವರ್ಷಾಕಾಲವಾಗಿದ್ದು, ಭೂಮಿಯಲ್ಲಿ ಅಸಂಖ್ಯ ಜೀವ ಜಂತುಗಳು ಉತ್ಪತ್ತಿಯಾಗಿ, ಅಹಿಂಸಾವಾದಿಗಳಿಗೆ ನಡೆದಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಮುನಿಗಳು ಮತ್ತಿತರ ತ್ಯಾಗಿಗಳು ಈ ಸಮಯದಲ್ಲಿ ಒಂದೇ ಕಡೆ ತಂಗಿದ್ದು ತಮ್ಮ ತಪೋ ಕಲ್ಯಾಣದಲ್ಲಿ ನಿರತರಾಗಿರುವುದಲ್ಲದೆ ಆಶೀರ್ವಚನಗಳ ಮೂಲಕ ಶ್ರಾವಕರನ್ನೂ ಜಾಗೃತಗೊಳೀಸುತ್ತಾರೆ.

ಮುನಿವೃಂದದವರನ್ನು ತಮ್ಮ ಊರಿಗೆ ಆಹ್ವಾನಿಸಿ,ಚಾತುರ್ಮಾಸ ಸ್ಥಾಪನೆ ಮಾಡುವುದು, ನಿತ್ಯ ಪೂಜಾದಿಗಳು, ಗುರುಗಳ ದರ್ಶನ, ಆಹಾರದಾನ ಉಪನ್ಯಾಸಗಳನ್ನೂ ಕೇಳುವ ಪುಣ್ಯ ಲಾಭ ಆಯಾಯ ಊರಿನವರಿಗಾಗುತ್ತದೆ. ಮುನಿ ಸಂಘದ ಮಾರ್ಗದರ್ಶನದಂತೆ ಇತರ ಪರ್ವಗಳನ್ನೂ ಜನರು ವಿಜೃಂಭಣೆಯಿಂದ ನಡೆಸುತ್ತಾರೆ. ನಾಲ್ಕು ತಿಂಗಳುಗಳಲ್ಲಿ ಶ್ರಾವಕರು ಧರ್ಮದ ಕಾರ್ಯಗಳಲ್ಲಿ ತತ್ಪರರಾಗಿ ಪುಣ್ಯ ಲಾಭ ಪಡೆಯುತ್ತಾರೆ. ಚಾತುರ್ಮಾಸದಲ್ಲಿ ಶ್ರಾವಕರು ತಮ್ಮ ಶಕ್ತ್ಯಾನುಸಾರ ವೃತವನ್ನು ಕೈಗೊಳ್ಳುವುದು ಅವಶ್ಯವಾಗಿದೆ.

ಅಷ್ಟಾಹ್ನಿಕ ಪರ್ವ

ಬದಲಾಯಿಸಿ

ಪ್ರತಿವರ್ಷದ ಆಷಾಢ, ಕಾರ್ತಿಕ, ಫಾಲ್ಗುಣ ಂಆಸಗಳ ಶುಕ್ಲ ಪಕ್ಷದ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಅಷ್ಟಾಹ್ನಿಕ ಪರ್ವವನ್ನು ಅಚರಿಸಲಾಗುತ್ತದೆ. ಈ ಎಂಟೂ ದಿನಗಳಲ್ಲಿ ಇಂದ್ರಾದಿ ದೇವತೆಗಳು ಅಷ್ಟಮ ನಂದೀಶ್ವರ ದ್ವೀಪಗಳಿಗೆ ತೆರಳಿ ಅಲ್ಲಿಯ ಜಿನೇಶ್ವರರ ಪ್ರತಿಮೆಗಳನ್ನು  ಮಹಾವೈಭವದಿಂದ ಪೂಜಿಸುತ್ತಾರೆ. ಈ ನಂಬಿಕೆಯಂತೆ ಜೈನರು ಜಿನಮಂದಿರಗಳಲ್ಲಿರುವ ನಂದೀಶ್ವರ ಪರ್ವತದ ಪ್ರತಿಮೆಗಳನ್ನು ಮಹಾವೈಭವದಿಂದ ಪೂಜಿಸುತ್ತಾರೆ. ಈ ನಂಬಿಕೆಯಂತೆ ಜೈನರು ಜಿನಮಂದಿರಗಳಲ್ಲಿರುವ ನಂದೀಶ್ವರ ಪರ್ವತದ ಪ್ರತಿಮೆಯನ್ನು ಪೂಜಿಸಿ ಪುನೀತರಾಗುತ್ತಾರೆ.

ನಂದೀಶ್ವರ ದ್ವೀಪದ ರಚನೆಯು ಹೀಗಿದೆ: ದ್ವೀಪದ ನಾಲ್ಕೂ ದಿಕ್ಕಿನಲ್ಲಿ ಒಂದು ಅಂಜನಗಿರಿ,ನಾಲ್ಕೂ ದಧಿಮುಖ, ಎಂಟು ತಿರಕ ಹೀಗೆ ಹದಿಮೂರಂತೆ ಒಟ್ಟೂ ಐವತ್ತೆರಡು ಪರ್ವತಗಳಿರುತ್ತವೆ. ಅದರಲ್ಲಿ ಒಂದೊಂದರಂತೆ ಆಕೃತ್ತಿಮ ಚೈತ್ಯಾಲಯಗಳಿದ್ದು ಅವುಗಳಲ್ಲಿ ನವರತ್ನ ಖಚಿತವಾದ ನೂರ ಎಂಟು ಜಿನಬಿಂಬಗಳಿರುತ್ತವೆ.

ನಂದೀಶ್ವರ ದ್ವೀಪ ಎಲ್ಲಿದೆ?

ಬದಲಾಯಿಸಿ

ನಾವು ವಾಸಿಸುವ ದ್ವೀಪ ಮೊದಲನೆಯ ಜಂಬೂ ದ್ವೀಪ. ಅಲ್ಲಿಂದ ಮುಂದೆ ಅದನ್ನು ಬಳಸಿ, ಏಳು ದ್ವೀಪಗಳೂ, ಏಳು ಸಮುದ್ರಗಳೂ ಇವೆ. ಎಂಟನೇ ದ್ವೀಪವೇ ನಂದೀಶ್ವರ ದ್ವೀಪ. ಅದನ್ನು ಬಳಸಿಕೊಂಡು ನಂದೀಸ್ವರ ಸಮುದ್ರವಿದೆ. ಈ ದ್ವೀಪ ವಿಸ್ತಾರ 167 ಕೋಟಿ 84 ಲಕ್ಷ ಯೋಜನಗಳು.

ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟಗಳಿವೆ. ಅದರದೇ ರೀತಿಯದೇ ಆದ ಆಚರಣೆಗಳಿವೆ ಮತ್ತು ಹಿನ್ನಲೆಗಳಿರುತ್ತವೆ.