ಸದಸ್ಯ:Manjunatha7353/ನನ್ನ ಪ್ರಯೋಗಪುಟ2
ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಭೈರವ ಪದ್ಮಾವತಿ ಅಮ್ಮನವರ ಬಸದಿ, ಮಂಕಿ, ಹೊನ್ನಾವರ
ಸ್ಥಳ
ಬದಲಾಯಿಸಿಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಹಿಂದೆ ಮಾಣಿಕ್ಯ ಪುರವೆಂದು ಕರೆಯಲ್ಪಡುತ್ತಿದ್ದ ಈ ಮಂಕಿ ಗ್ರಾಮದ ಕೇಂದ್ರದಲ್ಲಿದೆ. ಇದು ಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮುಖ್ಯರಸ್ತೆಯಿಂದ ಒಂದು ಕಿ.ಮೀ. ದೂರದಲ್ಲಿದೆ. ಅಲ್ಲಿಯವರೆಗೆ ಮಣ್ಣಿನ ರಸ್ತೆಯಿದೆ. ಇಲ್ಲಿಗೆ ಹೊನ್ನಾವರದಿಂದ 11 ಕಿಲೋ ಮೀಟರ್ ದೂರ. ಇಲ್ಲಿಯ ನಾಮಫಲಕದಲ್ಲಿ ಬರೆದಿರುವಂತೆ ಇದು ಭಗವಾನ್ ಶಾಂತಿನಾಥ ಸ್ವಾಮಿ ಮತ್ತು ಭೈರವ ಪದ್ಮಾವತಿ ಅಮ್ಮನವರ ಬಸದಿ. ಇದನ್ನು ಇಲ್ಲಿಯ ಮೂರು ಅರ್ಚಕ ಕುಟುಂಬದವರು ಸೇರಿ ನಡೆಸುತ್ತಿದ್ದಾರೆ. ಸಮೀಪದಲ್ಲಿ ಒಂದು ಶಿವ ದೇವಸ್ಥಾನವಿದೆ.
ಇತಿಹಾಸ
ಬದಲಾಯಿಸಿಕ್ರಿ. ಶ. 1514ರ ಒಂದು ಶಿಲಾಶಾಸನವು ಒಂದು ಮುಖ್ಯ ವಿಷಯವನ್ನು ಹೇಳುತ್ತದೆ. ಅದೇನೆಂದರೆ, ಗುರು ಪದ್ಮಪ್ರಭ ದೇವರ ಶಿಷ್ಯ ಮಲ್ಲಪ್ಪ ಹೆಗಡೆ ಎಂಬವರು ಇಲ್ಲಿ ಅನಂತನಾಥ ಸ್ವಾಮಿಯ ಬೋಳೆ ಬಸದಿಯೆಂಬ ಹೆಸರಿನ ಚೈತ್ಯಾಲಯವನ್ನು ನಿರ್ಮಿಸಿ, ಮೂರ್ತಿ ಪ್ರತಿಷ್ಠಪನೆ ಮಾಡಿದರು. ಅದೇ ರೀತಿಯಲ್ಲಿ ಆ ಮಲ್ಲಪ್ಪ ಹೆಗೆಡೆಯವರು ಚತುವಿರ್ಂಶತಿ ತೀಥರ್ಂಕರರ ಇನ್ನೊಂದು ಬಸದಿಯನ್ನು ಕಟ್ಟಿಸಿದರು. ಬನವಾಸೀ ಕದಂಬರಾಜವಂಶದ ಒಂದು ಶಾಖೆ ಯವರು ಈ ಬಸದಿಯನ್ನು ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಅವರ ಆಳಿಕೆಯ ಬಳಿಕ ಇದನ್ನು ಮೂಡಬಿದಿರೆಯ ಅರಸರು ಜೀರ್ಣೋದ್ಧಾರ ಮಾಡಿದ್ದರು. ತದನಂತರ ಈ ಪ್ರದೇಶವು ಸ್ವಾದಿ ಮರಕ್ಕೆ ಸೇರಿದುದರಿಂದ ಸ್ವಲ್ಪ ಸಮಯ ಮಠದ ಆಡಳಿತಕ್ಕೆ ಒಳಪಟ್ಟಿತ್ತು. ಕಾಲಾಂತರದಲ್ಲಿ ಇದು ಮೂಡುಬಿದಿರೆಯ ಸ್ವಾಮೀಜಿಯವರಿಗೆ ಸೇರಿದೆ. ಹಿಂದೆ ಈ ಪರಿಸರದಲ್ಲಿ ಐದು ಬಸದಿಗಳಿದ್ದವು. ಅವು ಯಾವುದೆಂದರೆ ತ್ರಿಕೂಟ ಜಿನ ಚೈತ್ಯಾಲಯ, ಪಾಶ್ರ್ವನಾಥ ಸ್ವಾಮಿ ಬಸದಿ, ಶಾಂತಿನಾಥ ಸ್ವಾಮಿ ಬಸದಿ ಮತ್ತು ಬೋಲೇ ಬಸದಿ, ಇನ್ನುಳಿದ ಒಂದು ಬಸದಿಯ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಇಲ್ಲಿ ಯಾವುದೇ ಆಡಳಿತ ಅಥವಾ ವ್ಯವಸ್ಥಾಪಕ ಮಂಡಳಿ ಇರುವುದಿಲ್ಲ, 1991 - 92ರಲ್ಲಿ ಬಸದಿಯ ಮೇಲ್ಯಾವಣಿಯನ್ನು ಬದಲಿಸಿ ಈಗಿನ ಹಂಚಿನ ಮಾಡನ್ನು ಮಾಡಿದ್ದಾರೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶದ ಹೆಂಗಸೊಬ್ಬಳು ಎಲ್ಲರನ್ನು ಸೇರಿಸಿ ಜೈನ ರಾಮಾಯಣದ ಕಥೆಯನ್ನು ಹೇಳುತ್ತಿದ್ದಳಂತೆ. ಅವಳಿಗೆ ಮದುವೆಯಾಗಿ ಬಾಣಂತಿ ಆದಾಗ ಸ್ವರ್ಗಸ್ಥಳಾದಳಂತೆ. ಅವಳ ನೆನಪಿಗಾಗಿ ಈ ಸ್ತಂಭವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳುತ್ತಾರೆ. ಆದುದರಿಂದ ಇದನ್ನು ಬಾಣಂತಿ ಕಲ್ಲು ಎಂದು ಕರೆಯುತ್ತಾರೆ. ಇದರಲ್ಲಿ ಜೈನ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಘಟನೆಗಳನ್ನು ಶಿಲ್ಪ ಕಲಾಕೃತಿಗಳ ಮೂಲಕ ವಿವರಿಸಲಾಗಿದೆ. ಕಥೆ ಹಾಗೂ ಕಲೆಯ ದೃಷ್ಟಿಯಿಂದ ಇದು ಅಧ್ಯಯನೀಯವಾದುದು.[೧]
ವಿದಿವಿಧಾನ
ಬದಲಾಯಿಸಿಇಲ್ಲಿಯ ಕಾರ್ಯಕ್ರಮಗಳಲ್ಲಿ ಊರಿನ ಸಮಸ್ತರು ಸೇರಿಕೊಳ್ಳುತ್ತಾರೆ. ಹತ್ತು ಸಮಸ್ತರು ಸೇರಿ ಇಲ್ಲಿ ನವರಾತ್ರಿ, ಸಂಕ್ರಾಂತಿ, ಚಂಪಾಷಷ್ಠಿ, ಕಾರ್ತಿಕ ದೀಪೋತ್ಸವ, ನೂಲ ಶ್ರಾವಣ, ಯುಗಾದಿ ಇತ್ಯಾದಿಯನ್ನು ಆಚರಿಸುತ್ತಾರೆ. ಇಲ್ಲಿಯ ಕ್ಷೇತ್ರಪಾಲನನ್ನು ಮಣಿಭದ್ರ ಕ್ಷೇತ್ರಪಾಲ ಎಂದು ಕರೆಯುತ್ತಾರೆ. ಆತನಿಗೆ ತೆಂಗಿನಕಾಯಿಯನ್ನು ಅರ್ಪಿಸಿ ಹೂವಿನ ಪೂಜೆಯನ್ನು ಮಾಡುವುದು ಇಲ್ಲಿನ ವಿಶೇಷ ಪದ್ದತಿ, ಕುಂಬಾರರು, ಮಡಿವಾಳರು, ಕ್ಷೌರಿಕರು ಮುಂತಾದ ಸಮಾಜದವರು ಮನೆಯಲ್ಲಿ ಮದುವೆ ಆದ ತಕ್ಷಣ ಇಲ್ಲಿಯ ಸನ್ನಿಧಾನಕ್ಕೆ ಬಂದು ಪೂಜೆ ಮಾಡಿಸಿ ತಮ್ಮ ಮನೆಗೆ ಹೋಗುವ ಸಂಪ್ರದಾಯ ಇಲ್ಲಿ ರೂಡಿಯಲ್ಲಿದೆ. ಜೈನ ಸಮಾಜದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸುತ್ತಾರೆ. ಇಲ್ಲಿನ ಪುರೋಹಿತರು ಯಂತ್ರ ಮಂತ್ರ ಇತ್ಯಾದಿ ವಿದ್ಯೆಗಳನ್ನು ಬಲ್ಲವರಾಗಿರುವುದರಿಂದ ಬಸದಿಯಲ್ಲಿ ಇದಕ್ಕೆ ಸಂಬಂಧಿಸಿದ ಶಾಂತಿ ಮತ್ತಿತರ ಪರಿಹಾರ ಕ್ರಿಯೆಗಳು ನಡೆಯುತ್ತವೆ.
ವಿನ್ಯಾಸ
ಬದಲಾಯಿಸಿಬಸದಿಗೆ ಮೇಗಿನ ನೆಲೆ ಇಲ್ಲ. ಬಸದಿಯ ಗರ್ಭಗೃಹದಲ್ಲಿ ಶಾಂತಿನಾಥ ಸ್ವಾಮಿ ಅಲ್ಲದೆ ಶ್ರೀ ಪದ್ಮಾವತಿ ದೇವಿ, ಬ್ರಹ್ಮದೇವರು, ಚತುವಿರ್ಂಶತಿ ತೀಥರ್ಂಕರರು ಇತ್ಯಾದಿ ಜಿನಬಿಂಬಗಳಿವೆ. ಪರಿಸರದಲ್ಲಿ ಪ್ರಾಕಾರಗೋಡೆಗೆ ತಾಗಿಕೊಂಡು ಪಾರಿಜಾತ ಮತ್ತು ಇತರ ಹೂವಿನ ಗಿಡಗಳು ಇವೆ. ಚಂದ್ರ ಶಾಲೆಯನ್ನು ಯಾತ್ರಿಕರು, ಬಂದು ಹೋಗುವ ಶ್ರಾವಕರು ಹಾಗೂ ಇಲ್ಲಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಉಪಯೋಗಿಸುತ್ತಾರೆ. ಇದರ ಹೊರಗಡೆ ಇದೇ ರೀತಿಯ ಚಾವಡಿಗಳು ಇವೆ. ಇವು ಕೂಡ ಇಲ್ಲಿ ಕಾರ್ಯಕ್ರಮ ನಡೆಸಲು ಅನುಕೂಲಕರವಾಗಿವೆ, ಅಂಗಳವನ್ನು ದಾಟಿ ಬಸದಿಯನ್ನು ಪ್ರವೇಶಿಸುವಾಗ ದ್ವಾರದ ಬದಿಗಳಲ್ಲಿ ದ್ವಾರಪಾಲಕರ ಬಿಂಬಗಳಾಗಲೀ ಅವರ ವರ್ಣಚಿತ್ರಗಳಾಗಲೀ ಇಲ್ಲ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ಘಂಟೆ, ಜಾಗಟೆ ಮತ್ತು ಶಂಖವನ್ನು ತೂಗು ಹಾಕಲಾಗಿದೆ. ಇನ್ನು ಮುಂದಕ್ಕೆ ತೀರ್ಥ ಮಂಟಪವಿದೆ. ಆದರೆ ಗಂಧಕುಟಿ ಇಲ್ಲ. ಒಳಗಿರುವ ಶ್ರೀ ಪದ್ಮಾವತಿಯ ಬಿಂಬವು ಪೂರ್ವಕ್ಕೆ ಮುಖಮಾಡಿಕೊಂಡಿದೆ. ಕಾಲಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿ ಅಮ್ಮನವರ ಪ್ರಸಾದ ನೋಡುವ ಕ್ರಮ ಇದ್ದರೂ ತುಂಬಾ ಬೇಡಿಕೆ ಮತ್ತು ಒತ್ತಾಯವಿದ್ದಾಗ ಮಾತ್ರ ಅದನ್ನು ನಡೆಸಲಾಗುತ್ತದೆ.
ಒಳವಿನ್ಯಾಸ
ಬದಲಾಯಿಸಿಗರ್ಭಗೃಹದಲ್ಲಿ ವಿರಾಜಮಾನವಾಗಿರುವ ಶ್ರೀ ಶಾಂತಿನಾಥ ಸ್ವಾಮಿಯ ಬಿಂಬವು ಸುಮಾರು 3 ಅಡಿ ಎತ್ತರವಿದ್ದು, ಕಪ್ಪುಶಿಲೆಯಿಂದ ಮಾಡಲ್ಪಟ್ಟಿದೆ ಬಿಂಬವು ಬಹಳ ಕಾಂತಿಯಿಂದ ಕಂಡುಬಂದರೂ ವಜ್ರಲೇಪನ ಆಗಿಲ್ಲವಂತೆ. ಖಡ್ಡಾಸನ ಭಂಗಿಯಲ್ಲಿದ್ದು ಸುತ್ತಲೂ ಮಕರ ತೋರಣದ ಪ್ರಭಾವಳಿಯನ್ನು ಹೊಂದಿದೆ ಇದನ್ನು ಮತ್ತು ಜಿನಬಿಂಬವನ್ನು ಪರೀಕ್ಷಿಸಿ ನೋಡಿದರೆ ಇವೆರಡೂ ಪೂರ್ವ ಹೊಯ್ಸಳ ಕಾಲದ ರಚನೆಗಳೆಂದು ಧಾರಾಳವಾಗಿ ಹೇಳಬಹುದು.
ಹೊರವಿನ್ಯಾಸ
ಬದಲಾಯಿಸಿಈ ಬಸದಿಯ ಎದುರಿನ ಪ್ರಾಂಗಣದಲ್ಲಿ ಸುಮಾರು 5 ಅಡಿ ಎತ್ತರದ ಶಿಲ್ಪಕಲಾಕೃತಿಗಳನ್ನು ಮತ್ತು ಬರವಣಿಗೆಯನ್ನು ಹೊಂದಿರುವ ನಾಲ್ಕು ಮೈಗಳ (ಚೌಕಾಕಾರದ) ಒಂದು ಶಿಲಾ ಸ್ತಂಭವನ್ನು ಕಾಣಬಹುದು.ಬಸದಿಗೆ ಮುರಕಲ್ಲಿನ ಪ್ರಾಕಾರಗೋಡೆ ಇದ್ದು, ಹೊರಗಡೆಯಲ್ಲಿ ಸುಮಾರು ಆರು ವೀರಕಲ್ಲುಗಳು ಹಾಗೂ ಹತ್ತು ಶಿಲಾಶಾಸನಗಳು ಇವೆ.
ಪೂಜಾ ವಿಧಾನ
ಬದಲಾಯಿಸಿಪ್ರತಿ ದಿನ ತ್ರಿಕಾಲಗಳಲ್ಲಿಯೂ ಪೂಜೆ ನಡೆಯುತ್ತದೆ. ಕಾರ್ತಿಕ ದೀಪೋತ್ಸವದ ದಿವಸ ವಾರ್ಷಿಕೋತ್ಸವವು ನಡೆಯುತ್ತದೆ. ರಥೋತ್ಸವವೂ ನಡೆಯುತ್ತದೆ. ಇಲ್ಲಿಯ ಇನ್ನೊಂದು ಪ್ರಧಾನ ಶಕ್ತಿ ಎಂದರೆ ಶ್ರೀ ಭೈರವ ಪದ್ಮಾವತಿ ಅಮ್ಮನವರು. ಜೈನ ಹಾಗೂ ಜೈನೇತರ ಸಮಾಜದವರು ಅಮ್ಮನವರಿಗೆ ಬಹಳ ಭಯ, ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ವಿಶೇಷ ಹರಕೆಗಳನ್ನು ಹೇಳಿ ತಮ್ಮ ಅಭೀಷ್ಟಗಳನ್ನು ಈಡೇರಿಸಿಕೊಂಡು ಬಂದ ಸಾಕಷ್ಟು ಉದಾಹರಣೆಗಳಿವೆ. ಸಾಮಾನ್ಯವಾಗಿ ದೇವಿಗೆ ದಿನವೂ ಹರಕೆಯನ್ನು ಸಮರ್ಪಿಸುವ ಕಾರ್ಯಕ್ರಮ ಇರುತ್ತದೆ. ಈ ಬಸದಿಯನ್ನು ಶ್ರಾವಕರ, ಭಕ್ತಾಭಿಮಾನಿಗಳ ಮತ್ತು ಸರಕಾರದ ಸಹಾಯದಿಂದ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂದು ಇಲ್ಲಿಯವರು ಅಪೇಕ್ಷಿಸುತ್ತಾರೆ. ಇದು ಅತ್ಯಂತ ಕಾರಣಿಕದ ಕ್ಷೇತ್ರ ವಾಗಿರುವುದರಿಂದ ಎಲ್ಲ ವರ್ಗಗಳ ಮತ್ತು ಧರ್ಮಗಳ ಜನರು ಇದರ ಜೀರ್ಣೋದ್ದಾರ ಹಾಗೂ ಮುನ್ನಡೆಯಲ್ಲಿ ಸಹಕಾರ ನೀಡಬಹುದೆಂದೂ ನಿರೀಕ್ಷಿಸುತ್ತಾರೆ.
ಉಲ್ಲೇಖ
ಬದಲಾಯಿಸಿ- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೪.