ಸದಸ್ಯ:Maithri Bhat/ನನ್ನ ಪ್ರಯೋಗಪುಟ6

ಹೊಂದಾಣಿಕೆಯ ಪ್ರಯತ್ನಗಳು: ಮಾನಸಿಕ ರಕ್ಷಣಾತಂತ್ರಗಳು (Defence Mechanism): ಬದಲಾಯಿಸಿ

ಹೊರ ಜಗತ್ತಿನಲ್ಲಿ ಜೀವಿಗೆ ತೊಂದರೆ ಉಂಟುಮಾಡುವ ಅನೇಕ ವಿಷಯಗಳಿರುತ್ತವೆ. ಅಹಂನ ಸಾಮರ್ಥ್ಯವನ್ನು ಮೀರಿಸುವ ಅನೇಕ ವಿಷಯಗಳಿರುತ್ತವೆ; ಅನೇಕ ಸಂವೇದನೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಆತಂಕ ಕಾಣಿಸಿಕೊಳ್ಳುತ್ತದೆ. ಆತಂಕ ಸಹಜವಾಗಿಯೇ ಜೀವಿಯ ನೆಮ್ಮದಿ ಕೆಡಿಸುತ್ತದೆ. ಹೀಗಾಗಿ ಆತಂಕದಿಂದ ರಕ್ಷಿಸಿಕೊಳ್ಳಲು ವ್ಯಕ್ತಿತ್ವದಲ್ಲಿ ಅಹಂ ರಕ್ಷಣಾ ತಂತ್ರಗಳು ಹುಟ್ಟಿಕೊಳ್ಳುತ್ತವೆ. ಇವು ಮಾನಸಿಕ ಸುಸ್ಥಿತಿಯನ್ನು ಕಾಯ್ದುಕೊಳ್ಳಲು ಸಹಕರಿಸುತ್ತವೆ.

ವ್ಯಕ್ತಿಯ ದ್ವೇಷ, ಸಿಟ್ಟು, ಬೇಸರ, ಕೋಪ ಪ್ರತಿಯೊಂದಕ್ಕೂ ಒಂದೊಂದು ಕಾರಣವಿದ್ದೇ ಇರುತ್ತದೆ. ಅತ್ಯಂತ ಇಕ್ಕಟ್ಟಿನ ಸಂದರ್ಭದಲ್ಲಿ ಮಾನವನಿಗೆ ಯಾವುದನ್ನು ಅನುಸರಿಸಬೇಕೆಂದು ತಿಳಿಯದಿದ್ದಾಗ ಅವನ ಮನಸ್ಸು ಸ್ವಾಭಾವಿಕವಾಗಿಯೇ ಯಾವುದಾದರೊಂದು ನಿರ್ಧಾರಕ್ಕೆ ಬರುವುದು. ಅದರಲ್ಲೂ ತನಗೆ ಸದ್ಯಕ್ಕೆ ಯಾವುದು ಅಗತ್ಯವೋ ಹಿತವೋ ಅದರೆಡೆಗೆ ಹೆಚ್ಚಿಗೆ ಹರಿಯುವುದು. ಆಗ ಅದಕ್ಕೆ ಸಾಧಕ-ಬಾಧಕ ವಿಚಾರವಿರುವುದಿಲ್ಲ. ತಾನೆಣಿಸಿದಂತೆಯೇ ಮುಂದಿನದೆಲ್ಲ ಆಗುವುದೆಂದು ಭಾವಿಸುವುದು. ಅಂದರೆ ವ್ಯಕ್ತಿಯ ಪ್ರತಿಯೊಂದು ವರ್ತನೆಗಳ ಹಿಂದೆ ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿರುತ್ತವೆ. ಇವೆಲ್ಲವನ್ನೂ ಗ್ರಹಿಸಿ ಅದಕ್ಕೊಂದು ಸಮಗ್ರತೆ ನೀಡಿ ಮುನ್ನಡೆವಲ್ಲಿ ಮಾನಸಿಕ ಅಂಶಗಳ ಪ್ರಭಾವ ಪ್ರಮುಖವಾದುದು.

ಮಾನವನ ಅನೇಕ ವರ್ತನೆಗಳು ಉದ್ವಿಗ್ನತೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳಾಗಿರುತ್ತವೆ. ಆದ್ದರಿಂದ ವ್ಯಕ್ತಿಯ ಅಹಂ ಉದ್ವಿಗ್ನತೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದು ವ್ಯಕ್ತಿಯ ವರ್ತನೆಯನ್ನು ನಿರ್ಧರಿಸುತ್ತದೆ. ವ್ಯಕ್ತಿಯು ಮಾನಸಿಕ ಘರ್ಷಣೆ, ಆಶಾಭಂಗದ ಋಣಾತ್ಮಕತೆಯಿಂದ ರಕ್ಷಿಸಲು/ತಪ್ಪಿಸಿಕೊಳ್ಳಲು ಬಳಸುವ ಸಾಮಾನ್ಯ ವಿಧಾನಗಳೇ ರಕ್ಷಣಾತಂತ್ರಗಳು. ಇವು ಉದ್ವೇಗ/ಉದ್ವಿಗ್ನತೆಯನ್ನು ಕಡಿಮೆ ಮಾಡಿ ಅಹಂ ಅನ್ನು ರಕ್ಷಿಸಿಕೊಳ್ಳಲು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕರಿಸುತ್ತವೆ.

ಹೆಚ್. ಡಬ್ಲ್ಯೂ ಬರ್ನಾರ್ಡ್ ಅವರು `ವ್ಯಕ್ತಿಯು ತನ್ನ ಅಭಿಪ್ರೇರಣೆಗಳನ್ನು ತೃಪ್ತಿಪಡಿಸಿಕೊಳ್ಳಲು ತನ್ನ ಆಂತರಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡಲು ಬೆಳೆಸಿಕೊಂಡಿರುವ ಅಭ್ಯಾಸಗಳೇ ರಕ್ಷಣಾ ತಂತ್ರಗಳು' ಎನ್ನುತ್ತಾರೆ. ಇವು ವ್ಯಕ್ತಿಗಳು ಅಹಿತಕರ ಯೋಚನೆ, ಭಾವನೆ ಮತ್ತು ನಡತೆಗಳಿಂದ ದೂರವನ್ನು ಕಾಯ್ದುಕೊಳ್ಳಲು ಬಳಸುವ ವಿಧಾನಗಳಾಗಿವೆ. ಆದರೆ ಸಾಂಪ್ರದಾಯಿಕ ರಕ್ಷಣಾ ವಿಧಾನಗಳು ದೀರ್ಘಕಾಲಿಕವಾಗಿ ಪರಿಣಾಮಕಾರಿಯಲ್ಲ. ಒತ್ತಡ ಮತ್ತು ಆಘಾತಕಾರಿ ಘಟನೆಗಳಿಂದ ಪಾರಾಗಲು ವ್ಯಕ್ತಿಯು ರಕ್ಷಣಾ ತಂತ್ರಗಳನ್ನು ಬಳಸುತ್ತಾನೆ. ಹೆಚ್ಚಿನವು ಅಪ್ರಜ್ಞಾಪೂರ್ವಕವಾದುವುಗಳು. ಇವು ದ್ವಂದ್ವ, ಹತಾಶೆ, ಒತ್ತಡಗಳ ಸನ್ನಿವೇಶದಲ್ಲಿ ವ್ಯಕ್ತಿಯು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಾಗೂ ಆ ಸನ್ನಿವೇಶದಿಂದ ಪಾರಾಗಲು ಕಂಡುಕೊಳ್ಳುವ ಮಾರ್ಗಗಳಾಗಿವೆ. ಇವು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪರೋಕ್ಷ ವಿಧಾನಗಳಾಗಿವೆ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅಹಂ ರಕ್ಷಣಾ ತಂತ್ರಗಳನ್ನು ಅನುಸರಿಸುತ್ತಾರೆ. ಇದರಿಂದ ತಾತ್ಕಾಲಿಕವಾಗಿ ನೆಮ್ಮದಿ ದೊರೆಯಬಹುದು. ಆದರೆ ಅದನ್ನು ಅತಿಯಾಗಿ ಪದೇ ಪದೇ ಅನುಸರಿಸಿದಾಗ ವ್ಯಕ್ತಿ ವಾಸ್ತವಿಕತೆಯಿಂದ ದೂರ ಸರಿದು ಮನೋರೋಗಿಯಾಗುವ ಸಾಧ್ಯತೆ ಇರುತ್ತದೆ.

ಮಾನವ ಸ್ವಭಾವತಃ ಸಂಘಜೀವಿ. ದೈಹಿಕ ಪ್ರೇರಣೆಗಳಾದ ಹಸಿವು, ನೀರು, ನಿದ್ರೆಯಂತೆ ಸಾಮಾಜಿಕ ಪ್ರೇರಣೆಗಳಾದ ಗೌರವ, ಮನ್ನಣೆಯೂ ವ್ಯಕ್ತಿತ್ವ ವಿಕಾಸಕ್ಕೆ ಅವಶ್ಯಕ. ಮಾನಸಿಕ ಸಂಘರ್ಷ, ಆಶಾಭಂಗ, ಕೀಳರಿಮೆಯ ಸನ್ನಿವೇಶದಲ್ಲಿ ವ್ಯಕ್ತಿಯು ಎರಡು ರೀತಿಯಲ್ಲಿ ವರ್ತಿಸಬಹುದು: ೧. ನಿರಂತರ ಉದ್ವಿಗ್ನತೆಯಿಂದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಮಾನಸಿಕವಾಗಿ ತೊಳಲಾಡಬಹುದು. ೨. ರಕ್ಷಣಾ ತಂತ್ರಕ್ಕೆ ಮೊರೆ ಹೋಗಬಹುದು.

ಪ್ರತಿಬಲನವನ್ನು ತಾನು ಎದುರಿಸಬಲ್ಲೆ ಎಂಬ ಭಾವನೆ ಮನಸ್ಸಿಗೆ ಬಂದರೆ ವ್ಯಕ್ತಿಯು ಆ ಸನ್ನಿವೇಶವನ್ನು ಎದುರಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಪರ್ಯಾವಲೋಚಿಸಿ ವಾಸ್ತವಿಕ ರೀತಿಯಲ್ಲಿ ಕಾರ್ಯೋನ್ಮುಖನಾಗುತ್ತಾನೆ. ಇದನ್ನು ಕಾರ್ಯ ವಿನ್ಯಸ್ತ ಕ್ರಮ ಎನ್ನುತ್ತಾರೆ. ಇದಕ್ಕೆ ವಿರುದ್ಧವಾಗಿ ಪ್ರತಿಬಲನವನ್ನು ತಾನು ಸಮರ್ಥವಾಗಿ ಎದುರಿಸಲಾರೆ ಎಂಬ ಅಧೈರ್ಯ ಉಂಟಾದಾಗ ರಕ್ಷಣಾ ವಿನ್ಯಸ್ತ ಕ್ರಮಗಳನ್ನು ಕೈಗೊಳ್ಳುತ್ತಾನೆ. ಇದರ ಮೂಲ ಉದ್ದೇಶ ತನ್ನನ್ನು ಕಾಡುವ ಉದ್ವಿಗ್ನತೆ ಮತ್ತು ಸೆಟೆತಗಳಿಂದ ಮುಕ್ತಿಯನ್ನು ಪಡೆದು, ತನ್ನ ಅಹಂ ಅನ್ನು ಅವಮಾನದಿಂದ ರಕ್ಷಿಸಿಕೊಳ್ಳುವುದಾಗಿದೆ. ಆದುದರಿಂದ ಇದನ್ನು ಅಹಂ ರಕ್ಷಣಾ ಕ್ರಮವೆಂದೂ ಕರೆಯಲಾಗಿದೆ.

(೧) ಕಾರ್ಯ ವಿನ್ಯಸ್ತ ಪ್ರತಿಕ್ರಿಯೆಗಳು: ಇವುಗಳ ಮುಖ್ಯ ಉದ್ದೇಶ ಪ್ರತಿಬಲನ ಸನ್ನಿವೇಶವನ್ನು ವಸ್ತುನಿಷ್ಠ ರೀತಿಯಲ್ಲಿ ಪರಿಶೀಲಿಸಿ ವಿವೇಕಯುತ ಹಾಗೂ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ತನ್ನಲ್ಲಿಯೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು ಅಥವಾ ಸನ್ನಿವೇಶಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು ಅಥವಾ ಎರಡರಲ್ಲೂ ಬದಲಾವಣೆಗಳಾಗಬಹುದು. ಸಾಮಾನ್ಯವಾಗಿ ಈ ಮಾರ್ಪಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಆಗುತ್ತವೆ. ಇವುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು:

(೧) ಆಕ್ರಮಣ ಅಥವಾ ಎದುರಿಸುವುದು: ಇಲ್ಲಿ ವ್ಯಕ್ತಿಯು ತನ್ನ ಗುರಿ ಸಾಧನೆಗೆ ಅಡ್ಡಿಬರುವ ಅಡಚಣೆಗಳನ್ನು ತೊಡೆದುಹಾಕಿ ಗುರಿಯನ್ನು ಸಾಧಿಸಲು ಯತ್ನಿಸುತ್ತಾನೆ ಅಥವಾ ಅಡಚಣೆಗಳನ್ನು ದಾಟಿ ಹೋಗುತ್ತಾನೆ. ಅಂದರೆ ವ್ಯಕ್ತಿಯು ತಾನು ಎದುರಿಸುತ್ತಿರುವ ಅಡಚಣೆ ಪ್ರಬಲವಾಗಿದ್ದರೆ ತನ್ನ ಪ್ರಯತ್ನ ಮತ್ತು ಕಾರ್ಯಚಟುವಟಿಕೆಗಳನ್ನು ಅಧಿಕಗೊಳಿಸುತ್ತಾನೆ ಅಥವಾ ತಾನು ಅನುಸರಿಸುತ್ತಿರುವ ಮಾರ್ಗ ಅಸಮರ್ಪಕವೆನಿಸಿದರೆ ಅದನ್ನು ಬದಲಿಸುತ್ತಾನೆ. ಅಗತ್ಯವಾದರೆ ಹೊಸ ಕೌಶಲಗಳನ್ನು ಕಲಿತು ಎದುರಿಸುತ್ತಾನೆ ಅಥವಾ ಉದ್ವೇಗಗೊಂಡು ನೇರವಾಗಿ ಆಕ್ರಮಣ ಮಾಡುತ್ತಾನೆ. ಇದು ರಚನಾತ್ಮಕವಾಗಿರಬಹುದು ಅಥವಾ ವಿನಾಶಾತ್ಮಕವಾಗಿರಬಹುದು. ವ್ಯಕ್ತಿಯು ತನಗೆ ಸೋಲುಂಟಾದಾಗ ಸಾಮಾನ್ಯವಾಗಿ ಕೋಪ ದ್ವೇಷಗಳಿಂದ ಸಮಾಜವಿರೋಧಿ ವರ್ತನೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂವೇಗವೆಂದರೆ ಕೋಪ ಅಥವಾ ರೋಷ.

(೨) ಹಿಂಜರಿತ ಅಥವಾ ಹಿಂದೆಗೆಯುವುದು ಅಥವಾ ಪಲಾಯನ: ಇಲ್ಲಿ ವ್ಯಕ್ತಿಯು ತಾನು ಎದುರಿಸುತ್ತಿರುವ ಸನ್ನಿವೇಶ ಬಹಳ ಕಷ್ಟಕರವಾದುದು ಅಥವಾ ತನ್ನ ಗುರಿ ಸಾಧುವಲ್ಲ ಎಂದು ಒಪ್ಪಿಕೊಂಡು ಕೈಬಿಡುತ್ತಾನೆ. ಇದು ಕೇವಲ ದೈಹಿಕವಾದುದಲ್ಲ; ಮಾನಸಿಕವಾದುದೂ ಹೌದು. ಕೆಲವೊಮ್ಮೆ ತನ್ನ ಪ್ರಯತ್ನವನ್ನು ಪೂರ್ಣವಾಗಿ ಕೈಬಿಡುವ ಬದಲು ಹೊಸತೊಂದು ಗುರಿಯನ್ನು ಸಾಧಿಸಲು ಯತ್ನಿಸುವ ಸಂಭವವೂ ಇದೆ. ಇಲ್ಲಿ ಕಂಡುಬರುವ ಸಂವೇಗವೆಂದರೆ ಭಯ.

(೩) ರಾಜಿ ಮಾಡಿಕೊಳ್ಳುವುದು ಅಥವಾ ಸಮನ್ವಯತೆ: ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗೆ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸುವುದೂ ಸಾಧ್ಯವಾಗುವುದಿಲ್ಲ ಅಥವಾ ಹಿಂಜರಿತವೂ ಸಾಧ್ಯವಾಗುವುದಿಲ್ಲ. ಆಗ ಉಳಿದಿರುವ ಮಾರ್ಗವೆಂದರೆ ರಾಜಿ ಮಾಡಿಕೊಳ್ಳುವುದು. ಅಂದರೆ ಗುರಿಯನ್ನು ಸಾಧಿಸಲು ತಾನು ಅನುಸರಿಸುತ್ತಿರುವ ಮಾರ್ಗವನ್ನು ಬದಲಿಸುವುದು ಅಥವಾ ಒಂದು ಗುರಿಯನ್ನು ಬಿಟ್ಟು ಇನ್ನೊಂದನ್ನು ಆಯ್ದುಕೊಳ್ಳುವುದು. ಇದರಿಂದ ಸೋತೆನೆಂಬ ಅಪಮಾನವೂ ಇಲ್ಲ; ಗೆದ್ದೆನೆಂಬ ಹೆಮ್ಮೆಯೂ ಇಲ್ಲ.

ವ್ಯಕ್ತಿಯು ತೀವ್ರವಾದ ಒತ್ತಡವನ್ನು ಎದುರಿಸುವ ಸಂದರ್ಭದಲ್ಲಿ ಸಮಸ್ಯೆಯನ್ನು ಎದುರಿಸುವ ಮತ್ತು ಮಾನಸಿಕ ಒತ್ತಡದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾನೆ. ರಕ್ಷಣಾ ತಂತ್ರಗಳ ಮುಖ್ಯ ಗುರಿ ವ್ಯಕ್ತಿಯನ್ನು ಇಂತಹ ಮಾನಸಿಕ ಒತ್ತಡದಿಂದ ಬಿಡುಗಡೆಗೊಳಿಸುವುದೇ ಆಗಿದೆ. ಅಂದರೆ ಈ ಉದ್ವಿಗ್ನತೆ ಅಥವಾ ಮಾನಸಿಕ ಯಾತನೆಯನ್ನು ತಪ್ಪಿಸುವುದಾಗಿದೆ. ಈ ಅಹಂ ರಕ್ಷಣಾ ತಂತ್ರಗಳಲ್ಲಿ ಸಾಮಾನ್ಯವಾಗಿ ಮೂರು ವಿಧದ ರಕ್ಷಣಾ ವಿನ್ಯಸ್ತ ಪ್ರತಿಕ್ರಿಯೆಗಳನ್ನು ಕಾಣಬಹುದು. ಮೊದಲನೆಯ ವರ್ಗದ ವರ್ತನೆಗಳಲ್ಲಿ ಅಳುವುದು ಮತ್ತು ಹೇಳಿದ್ದನ್ನೇ ಹೇಳುತ್ತಿರುವುದು ಇತ್ಯಾದಿ ವರ್ತನೆಗಳು ಕಂಡುಬರುತ್ತವೆ. ಇವು ಮನಸ್ಸಿಗೆ ಆಗುವ ಹಾನಿಯನ್ನು ಸರಿಪಡಿಸಲು ಯತ್ನಿಸುತ್ತವೆ. ಎರಡನೆಯ ವರ್ಗದ ರಕ್ಷಣಾ ತಂತ್ರಗಳಲ್ಲಿ ಅಹಂ ರಕ್ಷಣಾ ಅಥವಾ ಆತ್ಮ ರಕ್ಷಣಾ ಪ್ರತಿಕ್ರಿಯೆಗಳಾದ ಹುಸಿ ಸಮರ್ಥನೆ, ದಮನೀಕರಣ, ಬಾಹ್ಯಾರೋಪಣೆ ಇತ್ಯಾದಿಗಳನ್ನು ಕಾಣುತ್ತೇವೆ. ಈ ವರ್ತನೆಗಳು ಮನಸ್ಸಿಗಾಗುವ ನೋವನ್ನು ತೊಡೆದು ಹಾಕಿ ತಾನು ಅಪ್ರಯೋಜಕನೆಂಬ ಭಾವನೆಯನ್ನು ಹೋಗಲಾಡಿಸುತ್ತವೆ. ಮೂರನೆಯ ವಿಧವಾದ ರಕ್ಷಣಾತಂತ್ರಗಳೆಂದರೆ ಸೆಟೆತ ಮತ್ತು ಉದ್ವಿಗ್ನತೆಗಳನ್ನು ಹೋಗಲಾಡಿಸಲು ಶಾಮಕ ಔಷಧಗಳ ಮೊರೆಹೋಗುವುದು. ಈ ಮೂರು ವಿಧದ ರಕ್ಷಣಾ ತಂತ್ರಗಳ ಮುಖ್ಯ ಉದ್ದೇಶ ಮಾನಸಿಕ ಸಮಗ್ರತೆ, ಭಾವೈಕ್ಯತೆ ಮತ್ತು ಸಮತೆಯನ್ನು ಕಾಪಾಡಿಕೊಳ್ಳುವುದಾಗಿದೆ.

ಈ ರಕ್ಷಣಾ ತಂತ್ರಗಳು ಬಾಹ್ಯ ಮತ್ತು ಆಂತರಿಕ ಬೆದರಿಕೆಗಳಿಂದ ವ್ಯಕ್ತಿಯನ್ನು ರಕ್ಷಿಸಲು ಯತ್ನಿಸುವುದರೊಂದಿಗೆ ಅಹಂ ಅನ್ನು ರಕ್ಷಿಸುತ್ತದೆ. ಇವು – (೧) ಸಹಜ ಅನುಭವಗಳನ್ನು ನಿರಾಕರಿಸುವುದು, ವಿರೂಪಗೊಳಿಸುವುದು ಅಥವಾ ನಿರ್ಭಂಧಗೊಳಿಸುವುದರ ಮೂಲಕ ಅಹಂ ಅನ್ನು ರಕ್ಷಿಸಲು ಯತ್ನಿಸುತ್ತವೆ. (೨) ಸಂವೇಗಕ್ಕೊಳಗಾಗುವುದರ ಸಾಧ್ಯತೆಯನ್ನು ತಗ್ಗಿಸುವುದು. (೩) ಬೆದರಿಕೆ ಅಥವಾ ಹಾನಿಯನ್ನು ನಿಷ್ಪಲಗೊಳಿಸುವುದು.

ಪ್ರತಿಯೊಂದು ರಕ್ಷಣಾತಂತ್ರದ ಮೂಲ ಉದ್ದೇಶವೂ ಮನಸ್ಸಿಗಾಗುವ ನೋವನ್ನು ಅಥವಾ ಉದ್ವಿಗ್ನತೆಯನ್ನು ತೊಡೆದು ಹಾಕುವುದೇ ಆಗಿದೆ. ಇವುಗಳ ಬಳಕೆ ಹೆಚ್ಚಾದಂತೆ ಇವು ಅಭ್ಯಾಸಗಳಾಗಿ ಹೋಗುತ್ತವೆ. ಉದ್ವಿಗ್ನತೆಯಿಂದ ಹೊರಬರಲು ಅಹಂ ರಕ್ಷಣಾ ತಂತ್ರಗಳ ಮೊರೆ ಹೋಗಿಯೂ ಸಾಧ್ಯವಾಗದೇ ಹೋದಲ್ಲಿ ವ್ಯಕ್ತಿಯು ಧೂಮಪಾನ, ಮದ್ಯಪಾನ, ಔಷಧಗಳ ಸೇವನೆಯಂಥ ಅಹಿತಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಾನೆ.

(೧) ಧೂಮಪಾನ: ಕೆಲವು ದುರ್ಬಲ ಮನಸ್ಸಿನ ವ್ಯಕ್ತಿಗಳು ಉದ್ವಿಗ್ನತೆಯಿಂದ ಹೊರಬರಲು ಧೂಮಪಾನದ ಮೊರೆ ಹೋಗುತ್ತಾರೆ. ಇದರಿಂದ ಕೆಲಕಾಲ ಉಪಶಮನ ದೊರೆಯುವುದಾದರೂ ಕಾಲ ಕಳೆದಂತೆ ಧೂಮಪಾನ ಅಭ್ಯಾಸವಾಗಿ ಬೇರೂರುತ್ತದೆ. ಅನಂತರ ಕೋಪ ಬಂದಾಗ, ಚಿಂತೆ ಕಾಡುವಾಗ, ಕಸಿವಿಸಿಯಾದಾಗ ಧೂಮಪಾನಕ್ಕೆ ಶರಣಾಗುತ್ತಾರೆ. ಧೂಮಪಾನವು ಆನಂದವನ್ನುಂಟು ಮಾಡುತ್ತದೆ; ವಿಶ್ರಾಂತಿಗೆ ಪೋಷಕವಾಗುತ್ತದೆ. ವಿಷಣ್ಣನಾದಾಗ ಪ್ರಚೋದಿಸಿ ಚೇತೋಹಾರಿಯನ್ನಾಗಿಸುತ್ತದೆ. ಪರಿಣಾಮ ಆಗಾಗ ಧೂಮಪಾನ ಮಾಡಲು ತೊಡಗಿ ಅದೊಂದು ಅಭ್ಯಾಸವಾಗಿ ಬೇರೂರುತ್ತದೆ.

(೨) ಮಾದಕ ಪಾನೀಯ ಸೇವನೆ: ಉದ್ವಿಗ್ನತೆಯಿಂದ ಹೊರಬರುವ ಇನ್ನೊಂದು ಮಾರ್ಗ ಮಾದಕ ಪಾನೀಯಗಳ ಸೇವನೆ. ಇದು ವಿಷಣ್ಣತೆಯಿಂದ ಹೊರಬರಲು ಸಹಕರಿಸಿ, ಆತಂಕದ ತಾಪವನ್ನು ತಗ್ಗಿಸುತ್ತದೆ.

(೩) ಔಷಧಗಳ ಸೇವನೆ: ಉದ್ವಿಗ್ನತೆಯಿಂದ ಹೊರಬರಲು ವ್ಯಕ್ತಿಯು ಔಷಧಗಳ ಮೊರೆ ಹೋಗುವುದನ್ನೂ ಕಾಣಬಹುದಾಗಿದೆ.