ವ್ಯವಹಾರದ ಹಣಕಾಸು

  "ವ್ಯವಹಾರಿ ಹಣಕಾಸು" ಎಂದರೆ ವ್ಯವಹಾರಿ ಚಟುವಟಿಕೆಗಳಿಗೆ ಬೇಕಾಗುವ ಹಣ. ಇಂಥಾ ಹಣವನ್ನು ಸಂಗ್ರಹಿಸುವ, ಒದಗಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯು ವ್ಯವಹಾರಿ ಹಣಕಾಸು ಆಗಿದೆ.

ವ್ಯವಹಾರ ಸಂಸ್ಥೆಗೆ ಬೇಕಾಗುವ ಹಣವನ್ನು ಮುಖ್ಯವಾಗಿ ಮೂರು ಪ್ರಕಾರವಾಗಿ ವಿಂಗಡಿಸಬಹುದು. ೧. ಧೀರ್ಘಾವಧಿ, ೨. ಮಧ್ಯಮಾವಧಿ ಮತ್ತು ೩. ಅಲ್ಪಾವಧಿ.

1. ಧೀರ್ಘಾವಧಿ:

  ಧೀರ್ಘಾವಧಿ ಬಂಡವಾಳವು ಸ್ಥಿರ ಸ್ವತ್ತುಗಳಲ್ಲಿ ಅಥವಾ ಪುನರಾವ್ರತ್ತವಾಗದ ಸ್ವತ್ತುಗಳಲ್ಲಿ ತೊಡಗಿಸಲು ಬೇಕಾಗುತ್ತವೆ. ಸ್ಥಿರ ಸ್ವತ್ತುಗಳೆಂದರೆ ಶಾಶ್ವತವಾಗಿ ಅಸ್ತಿತ್ವದಲ್ಲಿರುವ ಮತ್ತು ಅವುಗಳಿಲ್ಲದೆ ವ್ಯವಹಾರವನ್ನು ಕೈಗೊಳ್ಳಲು ಸಾಧ್ಯವಿಲ್ಲದಿರುವ ಆಸ್ತಿಗಳಾಗಿವೆ. ಅಂದರೆ ಅವುಗಳನ್ನು ಬಿಟ್ಟುಕೊಡುದರಿಂದ ಅಥವಾ ಅವುಗಳಿಲ್ಲದೆ ಸಂಸ್ಥೆಗೆ ತನ್ನ ವ್ಯವಹಾರವನ್ನು ಮಾಡಲು ಸಾಧ್ಯವಾಗುವುದಿಲ್ಲ, ಅವುಗಳನ್ನು ಬಿಟ್ಟುಕೊಟ್ಟರೆ ಸಂಸ್ಥೆಯ ವ್ಯವಹಾರವು ಸ್ಥಗಿತಗೊಳ್ಳುತ್ತದೆ ಆದ್ದರಿಂದ ಧೀರ್ಘಾವಧಿ ಬಂಡವಾಳಕ್ಕೆ ಸ್ಥಿರ ಬಂಡವಾಳವೆಂದೂ ಕರೆಯುತ್ತಾರೆ.

ಶುಬಿನ್ ಎಂಬುವವರ ಪ್ರಕಾರ "ಧೀರ್ಘಾವಧಿಯವರೆಗೆ ಸತತವಾಗಿ ಉಪಯೋಗಿಸುವ ಭೂಮಿ, ಕಟ್ಟಡ ಸ್ಥಾವರ ಮತ್ತು ಯಂತ್ರ ಮೊದಲಾದ ಸ್ವತ್ತುಗಳನ್ನು ಹೊಂದಲು ಬೇಕಾಗುವ ಹಣವನ್ನು ಸ್ಥಿರ ಬಂಡವಾಳವೆಂದು ಕರೆಯುತ್ತಾರೆ". ಹೀಗೆ ಸ್ಥಿರ ಬಂಡವಾಳವೆಂದರೆ ಶಾಶ್ವತವಾದ ಸ್ವತ್ತುಗಳಲ್ಲಿ ವಿನಿಯೋಗಿಸಿದ ಬಂಡವಾಳವಾಗಿದೆ.

 ಈ ಪ್ರಕಾರ ಸ್ಥಾವರ ಸ್ವತ್ತುಗಳು ಮುಖ್ಯವಾಗಿ ಎರಡು ಪ್ರಕಾರಗಳಿವೆ. 
     * ಕಂಪೆನಿಯ ವ್ಯವಹಾರದಲ್ಲಿ ಶಾಶ್ವತವಾಗಿ ಉಪಯೋಗಿಸಲ್ಪಡುವ ಮತ್ತು ಅದಕ್ಕೆ ಅತ್ಯಾವಶ್ಯಕವಾಗಿರುವ ಸ್ವತ್ತುಗಳು.
     * ಕಂಪೆನಿಯ ಬಂಡವಾಳ ಧೀರ್ಘ ಕಾಲದವರೆಗೆ ತಡೆಹಿಡಿಯಲ್ಪಟ್ಟ ಅನಾವರ್ತ ಸ್ವತ್ತುಗಳು. 

2. ಮಧ್ಯಮಾವಧಿ ಬಂಡವಾಳ:

  ವ್ಯವಹಾರ ಸಂಸ್ಥೆಗಳು ಕೆಲವೊಂದು ಸ್ಥಿರ ಸ್ವತ್ತುಗಳನ್ನು ಬದಲಾಯಿಸಲು ಮತ್ತು ಶಾಶ್ವತವಾಗಿ ದುಡಿಯುವ ಬಂಡವಾಳವನ್ನು ಒದಗಿಸಲು ಮಧ್ಯಮಾವಧಿಯ ಹಣಕಾಸು ಬೇಕಾಗುತ್ತದೆ. ಅದು ಒಂದರಿಂದ ಐದು ಅಥವಾ ಏಳು ವರ್ಷಗಳ ಅವಧಿಯವರೆಗೆ ಇರುತ್ತದೆ. ಇತ್ತೀಚಿನ ಧೀರ್ಘಾವಧಿ ಬಂಡವಾಳ ಮತ್ತು ಮಧ್ಯಮಾವಧಿ ಬಂಡವಾಳಗಳಲ್ಲಿ ವ್ಯತ್ಯಾಸವನ್ನು ವ್ಯವಹಾರಿ ಸಂಸ್ಥೆಗಳು ಮಾಡುವುದಿಲ್ಲ.

3. ಅಲ್ಪಾವಧಿಯ ಬಂಡವಾಳ:

  ಪ್ರತಿಯೊಂದು ವ್ಯವಹಾರಕ್ಕೆ ಧೀರ್ಘಾವಧಿ ಬಂಡವಾಳದಂತೆ ಅಲ್ಪಾವಧಿ ಬಂಡವಾಳವೂ ಬೆಕಾಗುತ್ತದೆ. ಉತ್ಪಾದನೆ ಮತ್ತು ಮಾರಾಟ, ಖರೀದಿ ಮತ್ತು ಮಾರಾಟ, ಖರೀದಿ ಮತ್ತು ಉತ್ಪಾದನೆ ಮಾರಾಟ ಹಾಗೂ ಹಣಸಂದಾಯ ಇವುಗಳ ನಡುವೆ ಸಮಯದ ಅಂತರ ಇರುತ್ತದೆ. ಈ ಸಮಯಾಂತರದಲ್ಲಿ ವ್ಯವಹಾರ ನಿರ್ವಹಣೆಯ ವೆಚ್ಚಗಳನ್ನು ನಿರ್ವಹಿಸಲು ಅಲ್ಪಾವಧಿ ಬಂಡವಾಳವು ಬೇಕಾಗುತ್ತದೆ. ಅಲ್ಪಾವಧಿ ಬಂಡವಾಳಕ್ಕೆ ದುಡಿಯುವ ಬಂಡವಾಳ ಎಂದೂ ಅಥವಾ ಚಾಲ್ತಿ ಬಂಡವಾಳವೆಂದೂ ಕರೆಯುತ್ತಾರೆ. ಅದು ವ್ಯವಹಾರದ ಕಾರ್ಯ ನಿರ್ವಹಣೆಗೆ ಬೇಕಾಗಿರುವುದರಿಂದ ಅದಕ್ಕೆ ದುಡಿಯುವ ಬಂಡವಾಳವೆಂದು ಕರೆಯುತ್ತಾರೆ. ಅದು ನಗದು ಹಣ, ಬ್ಯಾಂಕಿನ ಶಿಲ್ಕು, ಹೂಟೆಗಳ ಮೊತ್ತ, ಬರತಕ್ಕ ಹುಂಡಿಗಳು, ಸಾಲಗಾರರಿಂದ ಬರಬೇಕಾದ ಮೊತ್ತ, ದಾಸ್ತಾನು ಸರಕುಗಳ ಮೌಲ್ಯ ಇವೆ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ದುಡಿಯುವ ಬಂಡವಾಳಕ್ಕೆ ಪರಿಚಾಲಕ ಅಥವಾ ಪ್ರತ್ಯಾವರ್ತ ಬಂಡವಾಳ ಎಂದು ಕರೆಯುತ್ತಾರೆ. ಏಕೆಂದರೆ ಇಲ್ಲಿ ಬಂಡವಾಳವು ಒಂದು ಪ್ರಕಾರದ ಸ್ವತ್ತಿನಿಂದ ಇನ್ನೊಂದು ಪ್ರಕಾರದ ಸ್ವತ್ತಿಗೆ ಪರಿವರ್ತಿಸಲ್ಪಡುತ್ತದೆ. ಉದಾಹರಣೆಗೆ, ನಗದು ಹಣವು ಸರಕುಗಳಲ್ಲಿಯೂ, ಸರಕುಗಳನ್ನು ಬರತಕ್ಕ ಹುಂಡಿಗಳಲ್ಲಿ ಅಥವಾ ಬರತಕ್ಕ ಸಾಲಗಳಲ್ಲಿಯೂ, ಬರತಕ್ಕ ಹುಂಡಿ ಅಥವಾ ಸಾಲಗಳು ಮತ್ತೆ ನಗದು ಹಣದಲ್ಲಿಯೂ ಪರಿವರ್ತವಾಗುವುದುಂಟು. ದುಡಿಯುವ ಬಂಡವಾಳಕ್ಕೆ ಅಲ್ಪಾವಧಿಯ ಬಂಡವಾಳ ಎಂದು ಕರೆಯುತ್ತಾರೆ.