'

                                                                          "'ಭೂಕಂಪದ ಅಂತರಂಗ' 
      ಭೂಮಿಯ ಅಂತರಾಳದಲ್ಲಿನ ಒತ್ತಡ ಒಂದು ಬಿಂದುವಿನಿಂದ ಸ್ಫೋಟಗೊಂಡು ಅದು ಅಲೆಗಳ ರೂಪದಲ್ಲಿ ಬಿಡುಗಡೆ ಪಡೆಯಲು ನೋಡುತ್ತದೆ. ಈ ಅಲೆಗಳೇ ಭೂಕಂಪಕ್ಕೆ ಕಾರಣ. ಈ ಅಲೆಗಳು ಹೊರಡುವ ಕೇಂದ್ರಬಿಂದುವಿಗೆ ಭೂಕಂಪದ ಉಗಮ ಕೇಂದ್ರ ಎಂದು ಕರೆಯುತ್ತಾರೆ. ಈ ಉಗಮ ಕೇಂದ್ರ ಮೂರು ರೀತಿಯಲ್ಲಿ ಇರುತ್ತದೆ. ಭೂಮಿಯ ಮೇಲ್ಪದರದಿಂದ ೭೦ ಕಿ.ಮೀ.ಆಳದಲ್ಲಿ ಎಲ್ಲಿಯಾದರೂ ಈ ಬಿಂದುವಿದ್ದರೆ ಅದನ್ನು ಸಾಧಾರಣ ಮೇಲ್ಮೈ ಕೇಂದ್ರವೆಂದು ಕರೆಯುತ್ತಾರೆ. ಈ ಬಿಂದು ೭೦ ರಿಂದ ೩೦೦ ಕಿ.ಮೀ.ದೂರದ ಯಾವುದಾದರೂ ಸ್ಟಳದಲ್ಲಿದ್ದರೆ ಅದನ್ನು ಮಧ್ಯಮ ಕಂಪನ ಕೇಂದ್ರವೆಂದೂ ಮತ್ತು ೩೦೦ ಕಿ.ಮೀ. ದೂರದ ಆಚೆಗಿನ ಸ್ಟಳದಲ್ಲಿದ್ದ ಈ ಬಿಂದುವಿದ್ದರೆ ಅದನ್ನು ಪಾತಾಳ ಕಂಪನ ಕೇಂದ್ರವೆಂದೂ ಕರೆಯುತ್ತಾರೆ. ಈ ಕೇಂದ್ರದ ನೆತ್ತಿಯ ಮೇಲೆ ಭೂಮಿಯ ಹೊರಮೈಯಲ್ಲಿ ಇರುವ ಕೇಂದ್ರವನ್ನು ಉಪಕೇಂದ್ರ (ಎಪಿಸೆಂಟರ್) ಎಂದು ಕರೆಯುತ್ತಾರೆ.ಲಾತೂರು ಮತ್ತು ಉಸ್ಮಾನಾಬಾದ್ ಜಿಲ್ಲೆಗಳಲ್ಲಾದ ಭೂಕಂಪನದ ಉಪಕೇಂದ್ರ ಕಿಲ್ಲಾರಿಯ ಬಳಿ ಇತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
    ಆದರೆ ಮನುಷ್ಯನ ಸ್ವಭಾವ ಬಹಳ ವಿಚಿತ್ರವಾದದ್ದು. ಅಪಾಯ ತನ್ನ ಬೆನ್ನಿಗೇ ಇದ್ದು ಸದಾ ಪಹರೆ ಕಾಯುತ್ತಾ ಗಬಕಾಯಿಸಲು ಹೊಂಚುಹಾಕಿ ನಿಂತಿದ್ದರೂ ಈ ಮನುಷ್ಯನ ಬದುಕುವ ಹಠ, ಜೀವನೋತ್ಸಾಹ ಮತ್ತು ಜೀವನ ಪ್ರೀತಿಗಳು ಕಡಿಮೆಯಾಗುವುದೇ ಇಲ್ಲ. ಮೇಲು ನೋಟಕ್ಕೆ ಮಣ್ಣಿನ ಮುದ್ದೆಯಾಗಿ ಕಾಣುವ ಈ ಭೂಮಿಯ ಇಡೀ ಗೋಲ ಮಣ್ಣೇ ಆಗಿರುವುದಿಲ್ಲ. ಒಂದಿಷ್ಟು ಆಳಕ್ಕೆ ಹೋದರೆ ಸಾಕು ಈ ಮಣ್ಣು ಮಾಯವಾಗಿ ಮಣ್ಣಿನ ಬದಲು ಗಟ್ಟಿಶಿಲೆ ಗೋಚರಿಸುತ್ತದೆ. ಶಿಲೆ ಎಂದರೆ ಶಿಲೆಯೇ ಆಗಿರಬೇಕೆಂದೇನೂ ಇಲ್ಲ, ಪದರ ಪದರ ಶಿಲೆಗಳು ಒಂದರ ಮೇಲೊಂದು ಪದರ, ಪದರದ ಪಕ್ಕ ಪದರ, ಆಳಕ್ಕೆ ಹೋದಂತೆಲ್ಲ ಭೂಮಿಯ ಶಾಖ ಕೂಡ ಹೆಚ್ಚಾಗುತ್ತದೆ. ಈ ಶಾಖ ಹೆಚ್ಚಾದ ಕಡೆಗಳಲ್ಲಿ ಭೂಮಿಯೊಳಗಿನ ಶಿಲೆ ಗಟ್ಟಿಯಾಗಿ ಘನರೂಪದಲ್ಲಿರುವ ಬದಲು ದ್ರವರೂಪದಲ್ಲೂ ಇರಬಹುದು. ಈ ದ್ರವ ಒತ್ತಡ ಮತ್ತು ಶಾಖಗಳ ಫಲವಾಗಿ ಶಿಲೆಗಳ ನಡುವಿನ ಬಿರುಕುಗಳಿಂದ ಹೊರಚಿಮ್ಮಬಹುದು. ಹೀಗೆ ಚಿಮ್ಮಿದನ್ನು ನಾವು ಜ್ವಾಲಾಮುಖಿ ಎಂದು ಕರೆಯುತ್ತೇವೆ. ಶಿಲಾಪದರಗಳು ಗಟ್ಟಿಯಾಗಿ ಘನರೂಪದಲ್ಲಿದ್ದ ಸಂದರ್ಭದಲ್ಲೂ ಭೂಮಿ "ಸ್ಠಿರ’ ಸ್ಟಿತಿಯಲ್ಲೇ ಇರುವುದಿಲ್ಲ."ಭೂಮಿ ತನ್ನ ಮತ್ತು ಸೂರ್ಯನ ಸುತ್ತ ತಿರುಗುತ್ತದೆ ಎಂಬುದನ್ನು ನಾವೆಲ್ಲ ಬಲ್ಲೆವು. ಈ ಶಿಲಾ ಪದರಗಳೂ ನಿಧಾನವಾಗಿ ಸರಿದಾಡುತ್ತವೆ. ಇದಕ್ಕೆ ಒಳಗಿನ ಒತ್ತಡ ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳಿವೆ. ಈ ಚಲನೆ ಕಾರಣವಾಗಿ ಶಿಲಾಪದರಗಳು ಒಂದನ್ನೊಂದು ತಳ್ಳುತ್ತವೆ. ಈ ಬಗೆಯ ತಳ್ಳಾಟದಿಂದ ಮಡಿಕೆಗಳು ಉಂಟಾಗಬಹುದು. ಎರಡೂ ಶಿಲಾಪದರಗಳು ಗಟ್ಟಿಯಾಗಿದ್ದು ಆಚೆ ಮತ್ತು ಈಚೆ ಬದಿಯ ತಿಕ್ಕಾಟ ಜೋರಾಗಿದ್ದರೆ ಮಧ್ಯದ, ಅಂದರೆ ಎರಡು ಶಿಲಾಪದರಗಳ ನಡುವಿನ ತಾಣದಲ್ಲಿ, ಉಬ್ಬು ಅಥವಾ ತಗ್ಗು ಕಾಣಿಸಿಕೊಳ್ಳಬಹುದು. ಉಬ್ಬು ಎಂದರೆ ನಾವು ಸಾಧಾರಣವಾಗಿ ತಿಳಿದಿರುವ ಉಬ್ಬಲ್ಲ, ಭಾರೀ ಪ್ರಮಾಣದ ಉಬ್ಬು, ಹಿಮಾಲಯವೇ ಇಂಥ ಒಂದು ’ಉಬ್ಬು’ ಎಂದಾಗ ನಮಗೆ ಈ ಉಬ್ಬು ಯಾವ ಪ್ರಮಾಣದಲ್ಲಿರುತ್ತದೆ ಎಂಬುದು ಸ್ವಲ್ಪವಾದರೂ ಅರ್ಥವಾಗಬಹುದು. ಇದೇ ರೀತಿ ತಗ್ಗು ಕೂಡಾ. ಪೆಸಿಫಿಕ್ ಸಾಗರದಲ್ಲಿ ಹೀಗೆ ಉಂಟಾದ ’ಮೇರಿಯಾನ’ ತಗ್ಗು ಎಷ್ಟು ದೊಡ್ಡದಾಗಿದೆ ಎಂದರೆ ಈ ತಗ್ಗಿನಲ್ಲಿ ನಮ್ಮ ಹಿಮಾಲಯ ಪರ್ವತವನ್ನು ಸುಲಭವಾಗಿ ಹುಗಿದು ಬಿಡಬಹುದು. ಹೀಗೆ ಹುಗಿದರೂ  ಸುಮಾರು ಒಂದೂವರೆ ಕಿಲೋಮೀಟರಿನಷ್ಟು ಎತ್ತರ ಖಾಲಿಯಾಗಿಯೇ ಉಳಿಯುತ್ತದೆ ಎಂದರೆ ಈ ತಗ್ಗಿನ ಆಳವನ್ನು ನಾವು ಊಹಿಸಿಕೊಳ್ಳಬಹುದು. ಇಷ್ಟೇ ಅಲ್ಲ, ಈ ಶಿಲಾಪದರಗಳ ತಿಕ್ಕಾಟದ ಫಲವಾಗಿಯೇ ನಮ್ಮ ಹಿಮಾಲಯ ಪ್ರತೀ ವರ್ಷ ಕೆಲವು ಸೆಂಟಿಮೀಟರಿನಷ್ಟು ಎತ್ತರಾ ಬೆಳೆಯುತ್ತಿದೆ. ಈ ಭೂ ಭಾಗವೇ ಸರಿದಾಡುತ್ತಿರುತ್ತದೆ. ಭೂಮಿಯ ಆಳದಲ್ಲಿ ಹೀಗೆ ಶಿಲಾಪದರಗಳು ಸರಿದಾಡಿದರೆ, ಅವುಗಳ ನಡುವೆ ಜಾಗ ಉಂಟಾದರೆ ಆ ಭಾಗ ದುರ್ಬಲ ತಾಣವಾಗುತ್ತಾ ಹೋಗುತ್ತದೆ. ಹಿಮಾಲಯ ಶ್ರೇಣಿಯ ಉದ್ದಕ್ಕೂ ಗೆರೆ ಎಳೆದಂತೆ ಇಂಥ ಜಾಗವಿದೆ. ಹೀಗಾಗಿ ಈ ಜಾಗದಲ್ಲೆಲ್ಲ ಸದಾ ಶಿಲಾಪದರಗಳು ತಿಕ್ಕಾಡುವ ಕಾರಣ ಅಲ್ಲಿ ಭೂಮಿ ಕಂಪಿಸುವ ಅಪಾಯ ಇದ್ದೇ ಇದೆ. ಈ ಕಾರಣದಿಂದ ಹಿಮಾಲಯ ಶ್ರೇಣಿ ಮನುಷ್ಯನ ಬದುಕಿಗೆ ಸುರಕ್ಷಿತ ತಾಣವಲ್ಲ. ಅತ್ಯಂತ ತೀವ್ರ ಸ್ವರೂಪದ ಭೂಕಂಪನಗಳು ಇಡೀ ಭೂಗೋಲದ ಮೇಲೆ ಎಲ್ಲಿಯಾದರೂ ನಡೆಯುವುದಿದ್ದರೆ ಅದು ಈ ಶ್ರೇಣಿಯ ಉದ್ದಕ್ಕೂ ಇರುವ ಜಾಗದಲ್ಲಿ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈವರೆಗಿನ ಭೂಕಂಪನಗಳೂ ಈ ಅಂಶವನ್ನೂ ಸಾಬೀತುಪಡಿಸಿವೆ. ಪರ್ವತರಾಜ ಭಾರೀ ಸ್ಠಿರ ಅವನು ಮನುಷ್ಯನಿಗೆ ಸುರಕ್ಷಿತ ತಾಣ ಒದಗಿಸುತ್ತಾನೆ ಎಂಬುದು ನಮ್ಮ ಪೌರಾಣಿಕ ನಂಬಿಕೆ. ವಿಜ್ಞಾನದ ಸಂಶೋಧನೆಗಳು ಈ ಪೌರಾಣಿಕ ನಂಬಿಕೆಯನ್ನು ತಲೆಕೆಳಗು ಮಾಡುತ್ತವೆ.