ಸದಸ್ಯ:Kiranfrens03/sandbox
ಕಂಪ್ಯೂಟರ್ ಮಾಯಾಲೋಕ
‘ನನಗೆ ಕಂಪ್ಯೂಟರ್ ಕಲಿಸಲು ನನ್ನ ಮೊಮ್ಮಗಳು ತುಂಬಾ ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನ ಯಶಸ್ವಿಯಾಗಲಿಲ್ಲ’. ಪದಗಳ ವ್ಯುತ್ಪತ್ತಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಅಳಲಿದು. ಹಾಗೆಂದು ವೆಂಕಟಸುಬ್ಬಯ್ಯನವರಿಗೆ ಕಂಪ್ಯೂಟರ್ ಕುರಿತು ಅಥವಾ ಅಂತರ್ಜಾಲವೆಂಬ ವಿಸ್ಮಯದ ಕುರಿತು ಅಲರ್ಜಿಯಿದೆ ಎಂದರ್ಥವಲ್ಲ. ಅವರು ಸಂಪಾದಿಸಿದ ನಿಘಂಟೊಂದು ಅಂತರ್ಜಾಲದಲ್ಲಿದೆ. ಬಹುಶಃ, ಮುದ್ರಣ ರೂಪದ ನಿಘಂಟಿನ ಬಳಕೆಗಿಂತಲೂ ಇಂಟರ್ನೆಟ್‌ನಲ್ಲಿನ ನಿಘಂಟುವಿನ ಬಳಕೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕುರಿತು ವೆಂಕಟಸುಬ್ಬಯ್ಯನವರಿಗೆ ಖುಷಿಯಿದೆ. ಆದರೆ ಆ ಖುಷಿ ಕಂಪ್ಯೂಟರ್ ಕಲಿಕೆಯಾಗಿ ಮಾರ್ಪಡುತ್ತಿಲ್ಲ.
ವೆಂಕಟಸುಬ್ಬಯ್ಯನವರ ಆಸಕ್ತಿ ಹಾಗೂ ಅಳಲುಗಳ ಗೊಂದಲ ನಮ್ಮ ಬಹುತೇಕ ಸಾಹಿತಿಗಳದು ಕೂಡ. ಚಂದ್ರಶೇಖರ ಕಂಬಾರರನ್ನೇ ನೋಡಿ. ಒಮ್ಮೆ ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳ ಕುರಿತು ಮಾತನಾಡುತ್ತಾರೆ. ಮತ್ತೊಮ್ಮೆ ಆ ಬಗ್ಗೆ ನನಗೆ ಅನುಮಾನಗಳಿವೆ ಎನ್ನುತ್ತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಡುಗಳ ಕುರಿತು ಆತಂಕ ವ್ಯಕ್ತಪಡಿಸುತ್ತ ದೇಸಿನೆಲೆಗಳತ್ತ ವಿಚಾರ ಹರಿಸುತ್ತಾರೆ. (ಇಂದಿನ ಬಹುತೇಕ ಸಾಹಿತಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ನಂಟು ಹೊಂದಿದ್ದ, ಕಾಡಿನ ದನಿಗಳಿಗೆ ಓಗೊಟ್ಟಿದ್ದ ತೇಜಸ್ವಿ ಕಂಪ್ಯೂಟರ್ ಕರಗತ ಮಾಡಿಕೊಂಡಿದ್ದರು!). ಬಹುಶಃ, ಕಂಪ್ಯೂಟರ್ ಕುರಿತು ನಮ್ಮ ಹಿರಿಯ ಸಾಹಿತಿಗಳ ಅಂತರಾಳದಲ್ಲಿ ಹಿಂಜರಿಕೆಯಿರಬಹುದು; ಅದು, ಜಾಗತೀಕರಣ ಸಂಬಂಧವಾಗಿ ಹುಟ್ಟಿಕೊಂಡ ಗೊಂದಲವಿರಬಹುದು; ಕಂಪ್ಯೂಟರ್‌ಗೆ ಒಲಿಯುವುದೆಂದರೆ ಜಾಗತೀಕರಣವನ್ನು ಬೆಂಬಲಿಸಿದಂತೆ ಎನ್ನುವ ಆತಂಕವಿರಬಹುದು!
ಹಾಗೆ ನೋಡಿದರೆ ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳ ಕುರಿತು ಮೊದಲು ಸೃಜನಶೀಲವಾಗಿ ಯೋಚಿಸಿದ್ದು ತಂತ್ರಜ್ಞರಲ್ಲ; ಸಾಹಿತಿಯೇ. ಡಾ.ಶ್ರೀನಿವಾಸ ಹಾವನೂರರು ಮೂವತ್ತು ವರ್ಷಗಳ ಹಿಂದೆಯೇ ಭಾಷಾ ಸಂಸ್ಕರಣೆ ನಿಟ್ಟಿನಲ್ಲಿ ಕಂಪ್ಯೂಟರ್ ಬಳಸಿಕೊಂಡಿದ್ದರು. ಮುದ್ದಣ ಕವಿಯ ಕೃತಿಗಳನ್ನು ರೋಮನ್ ಲಿಪಿಯಲ್ಲಿ ಕಂಪ್ಯೂಟರ್‌ಗೆ ಫೀಡ್ ಮಾಡಿದ್ದ ಅವರು, ಮುದ್ದಣನ ಪುಸ್ತಕಗಳಿಗೆ ಸಂಬಂಧಿಸಿದಂತೆ ‘ಪದ ಪ್ರಯೋಗ ಕೋಶ’ವೊಂದನ್ನು ಸಿದ್ಧಪಡಿಸಿದ್ದರು. ದೇಸಿ ಭಾಷೆಗಳಿಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳು ಇಲ್ಲದಿದ್ದ ಸಂದರ್ಭದಲ್ಲಿ, ಕನ್ನಡ ಫಾಂಟ್ ರೂಪುಗೊಳ್ಳದ ದಿನಗಳಲ್ಲಿ ಹಾವನೂರರು ಮಾಡಿದ್ದ ಸಂಶೋಧನೆ ಮಹತ್ತರವಾದುದು. ವಿಪರ್ಯಾಸ ನೋಡಿ: ಕಂಪ್ಯೂಟರ್‌ನಲ್ಲಿ ಕನ್ನಡದ ಬಿತ್ತನೆ ಸಾಕಷ್ಟು ನಡೆದಿರುವ ಈ ದಿನಗಳಲ್ಲಿ ಕಂಪ್ಯೂಟರ್ ಸ್ನೇಹಿ ಸಂಶೋಧನೆಗಳು ಸ್ಥಗಿತವಾಗಿವೆ!
ಬರೆಯುವುದನ್ನು ಬಿಟ್ಟು ಸಾಹಿತಿಗಳು ಕಂಪ್ಯೂಟರ್ ಸಾಧ್ಯತೆಗಳ ಕುರಿತು ಏಕೆ ಚಿಂತಿಸಬೇಕು? ಅವರಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಏನು ಸಂಬಂಧ? ಎನ್ನುವಂಥ ಪ್ರಶ್ನೆಗಳನ್ನು ಕೇಳುವವರ ಸಂಖ್ಯೆ ದೊಡ್ಡದಿದೆ. ಇದೊಂದು ರೀತಿಯ ಪಲಾಯನವಾದ ಹಾಗೂ ವಿಷಯಜ್ಞಾನದ ಕೊರತೆಯ ಮಾತು. ಕಂಪ್ಯೂಟರ್ ಬಳಕೆಯಿಂದ ಸಾಹಿತ್ಯ ರಚನೆ ರುಚಿಗಟ್ಟುತ್ತದೆ. ಬರವಣಿಗೆ, ಪರಿಷ್ಕರಣೆ ಕಂಪ್ಯೂಟರ್‌ನಲ್ಲಿ ಸುಲಭ. ವಿಷಯ ಸಂಗ್ರಹ, ಜಾಗತಿಕ ಸಾಹಿತ್ಯದ ಅವಲೋಕನ, ಇತರ ಭಾಷೆಯ ಸಾಹಿತಿಗಳೊಂದಿಗೆ ಸಂವಹನ- ಈ ಎಲ್ಲವೂ ಅಂತರ್ಜಾಲದ ಮೂಲಕ ಸಾಧ್ಯ. ಎಲ್ಲಕ್ಕೂ ಮುಖ್ಯವಾಗಿ ಪುಸ್ತಕಗಳ ಮುದ್ರಣ ವಿನ್ಯಾಸ ನಡೆಯುವುದೇ ಕಂಪ್ಯೂಟರ್ ಪರದೆ ಮೇಲೆ. ಹಾಗಾಗಿ ಸಾಹಿತಿಗಳು ಕಂಪ್ಯೂಟರ್‌ನಿಂದ ದೂರವುಳಿಯುವುದು ಆತ್ಮವಂಚನೆಯಲ್ಲದೆ ಮತ್ತೇನೂ ಅಲ್ಲ.
‘ಕಂಪ್ಯೂಟರ್ ಜ್ಞಾನ ಎಂದರೆ ಕೇವಲ ಕಂಪ್ಯೂಟರ್‌ನಲ್ಲಿ ಟೈಪ್ ಮಾಡುವುದಲ್ಲ’ ಎನ್ನುವುದು ‘ವಿಶ್ವಕನ್ನಡ.ಕಾಂ’ನ ಡಾ.ಯು.ಬಿ. ಪವನಜ ಅವರ ಸ್ಪಷ್ಟ ಮಾತು. ಸಾಹಿತಿಗಳ, ಸಾಹಿತ್ಯ ಕೃತಿಗಳ, ಕನ್ನಡ ನುಡಿಸಂಪತ್ತಿನ, ವ್ಯಾಕರಣದ ಮಾಹಿತಿ ಸಂಚಯ ರೂಪಿಸುವ ನಿಟ್ಟಿನಲ್ಲಿ ಬರಹಗಾರರು ಕೆಲಸ ಮಾಡಬೇಕು. ಕಂಪ್ಯೂಟರ್ ಸಾಧ್ಯತೆಗಳನ್ನು ಕುರಿತು ಸಾಹಿತಿಗಳು ಪ್ರಚಾರ ಮಾಡಬೇಕು. ಮುಖ್ಯವಾಗಿ, ಅವರುಗಳು ಕಂಪ್ಯೂಟರ್ ಬಳಸಲೇಬೇಕು ಎನ್ನುವುದು ಪವನಜ ಆಗ್ರಹ. ಇಷ್ಟೆಲ್ಲ ಹೇಳಲಿಕ್ಕೆ ಪವನಜ ಅವರಿಗೆ ಇರುವ ಅಧಿಕಾರವೇನು? ಅರ್ಹತೆ ಇದೆ. ಮೇಲಿನ ಎಲ್ಲ ಕೆಲಸಗಳನ್ನು ಸೀಮಿತ ಚೌಕಟ್ಟಿನಲ್ಲಿ ಅವರು ಮಾಡುತ್ತಲೇ ಬಂದಿದ್ದಾರೆ. ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಸಾಧ್ಯತೆಗಳ ಕುರಿತು ನಿರಂತರ ಅಧ್ಯಯನಶೀಲರಾದ ಅವರು ತಮ್ಮ ತಿಳಿವಳಿಕೆಯನ್ನು ಇತರರಿಗೆ ಮುಟ್ಟಿಸುವ ಕೆಲಸದಲ್ಲಿದ್ದಾರೆ. ನಾಮಪದ, ಕ್ರಿಯಾಪದಗಳ ವಿಂಗಡಣೆಯುಳ್ಳ ಪುಟ್ಟದೊಂದು ಪದಪಟ್ಟಿಯನ್ನು ತಯಾರಿಸಿದ್ದಾರೆ. ‘ಕನ್ನಡ ಕಲಿ’ ಮತ್ತು ‘ಕನ್ನಡ ಲೊಗೊ’ ಎನ್ನುವ ಶೈಕ್ಷಣಿಕ ತಂತ್ರಾಂಶಗಳನ್ನು ರೂಪಿಸಿದ್ದಾರೆ.
ಮಾಹಿತಿ ಸಂಚಯ ಎಂದರೆ ಸಿ.ಡಿ. ರೂಪದಲ್ಲಿ ಪುಸ್ತಕಗಳನ್ನು ಪ್ರಕಟಿಸುವುದಲ್ಲ ಎನ್ನುತ್ತಾರೆ ಪವನಜ. ಏಕೆಂದರೆ ಪ್ರಸ್ತುತ ಪ್ರಕಟವಾಗಿರುವ ಸಿ.ಡಿ. ಪುಸ್ತಕಗಳಿಂದ ವಿಷಯ ನಕಲು ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗೂ ಅವು ಯೂನಿಕೋಡ್ ಮಾಂತ್ರಿಕ ಸ್ಪರ್ಶ ಹೊಂದಿಲ್ಲ.
ಸದ್ಯಕ್ಕೆ ಕಂಪ್ಯೂಟರ್‌ನಲ್ಲಿ ಆಗಬೇಕಾದ ಕನ್ನಡದ ಕೆಲಸಗಳು ಯಾವುವು? ಕೆಲಸ ನೂರಾರಿವೆ; ಆದರೆ ನಾಲ್ಕು ಕೆಲಸಗಳು ಜರೂರಾಗಿ ಆಗಬೇಕು ಎಂದು ಶ್ರೀನಿವಾಸ ಹಾವನೂರು ಪಟ್ಟಿ ಮಾಡುತ್ತಾರೆ. ಅವು ಹೀಗಿವೆ: ಇಂಗ್ಲಿಷ್‌ನಲ್ಲಿರುವಂತೆ ಕನ್ನಡ ಪದಗಳಿಗೂ ಸ್ಪೆಲ್ ಚೆಕ್ (ಕಾಗುಣಿತ ಪರೀಕ್ಷಕ) ಹಾಗೂ ಗ್ರಾಮರ್ ಚೆಕ್ (ವ್ಯಾಕರಣ ಪರೀಕ್ಷಕ) ರೂಪಿಸುವುದು. ಕರ್ನಾಟಕ ಇತಿಹಾಸದ ಮಾಹಿತಿಗಳನ್ನು (ಘಟನಾ ಕೋಶ) ಅಂತರ್ಜಾಲದಲ್ಲಿ ದೊರಕುವಂತೆ ಮಾಡುವುದು ಹಾಗೂ ಕನ್ನಡಕ್ಕೆ ಸಂಬಂಧಿಸಿದ, ಕನ್ನಡದಲ್ಲಿ ನಡೆದ ಎಲ್ಲ ಸಂಶೋಧನಾ ಸಾಮಗ್ರಿಗಳನ್ನು ಅಂತರ್ಜಾಲಕ್ಕೆ ಅಳವಡಿಸುವುದು.
ಕನ್ನಡ ಸಾಹಿತಿಗಳು ಕಂಪ್ಯೂಟರ್ ಬಗೆಗಿರುವ ಮನಗಳ್ಳತನದಿಂದ ಹೊರಬರಬೇಕು ಎನ್ನುವುದು ಹಾವನೂರರ ಆಗ್ರಹ. ಆ ಮನಗಳ್ಳತನ ದೂರವಾದರೆ ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳು ಇನ್ನಷ್ಟು ಸ್ಪಷ್ಟವಾಗುತ್ತವೆ.
ಅಂದಹಾಗೆ, ‘ಪ್ರಜಾವಾಣಿ’ ಪತ್ರಿಕೆ ಬರಹ/ನುಡಿ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿದ ಬರಹಗಳನ್ನು ಇ-ಮೇಲ್ ಮೂಲಕ ಅಥವಾ ಸಿ.ಡಿ. ಮೂಲಕ ಕಳುಹಿಸುವಂತೆ ಓದುಗರಿಗೆ ಸೂಚಿಸಿರುವುದು ಸರಿಯಷ್ಟೇ. ಈ ಸೂಚನೆಯಂತೆ ಬಹಳಷ್ಟು ಲೇಖಕರು ಇ-ಮೇಲ್/ಸಿ.ಡಿ. ಮೂಲಕ ಬರಹಗಳನ್ನು ರವಾನಿಸುತ್ತಿದ್ದಾರೆ. ಇದು ಕೂಡ ಮಾಹಿತಿ ತಂತ್ರಜ್ಞಾನಕ್ಕೆ ಜನರನ್ನು ಹತ್ತಿರ ತರುವ ಪ್ರಯತ್ನವೇ ಆಗಿದೆ. ಇಂಥ ಪ್ರಯತ್ನಗಳು ಸಾಹಿತಿಗಳಿಂದಲೂ ಆಗಬೇಕಿದೆ