ಆರ್ಸೆನಿಕ್

ಬದಲಾಯಿಸಿ

ಆರ್ಸೆನಿಕ್ ಒಂದು ಮೂಲಧಾತು.ಇದನ್ನು ಅರೆಲೋಹವೆನ್ನಬಹುದು.ಇದು ಒಂದು ತೀಕ್ಷ್ಣವಾದ ವಿಷ.ಇದರ ಉಪಯೋಗ ಅನಾದಿ ಕಾಲದಿಂದ್ದರೂ ೧೨೫೦ರಲ್ಲಿ ಜರ್ಮನಿ ಯ ವಿದ್ವಾಂಸ ಅಲ್ಬರ್ಟ್ಸ್ ಮ್ಯಾಗ್ನಸ್ ಎಂಬವರು ಶುದ್ಧ ರೂಪದಲ್ಲಿ ಬೇರ್ಪಡಿಸಿದರು.ಇದು ಕೀಟನಾಶಕ,ಔಷದ,ಇಲಿಪಾಷಾಣ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ

ವೈಶಿಷ್ಟ್ಯಗಳು

ಬದಲಾಯಿಸಿ

ಒಂದು ಮೂಲವಸ್ತು. ತಾಳಕ ಪರ್ಯಾಯನಾಮ. ರಾಸಾಯನಿಕ ಚಿಹ್ನೆ As. ಪರಮಾಣು ಸಂಖ್ಯೆ 33. ಪರಮಾಣು ತೂಕ 74.9216. ಬಹುಹಿಂದಿನಿಂದಲೂ ವಿಷವಸ್ತುವೆಂದು ತಿಳಿದಿದೆ. ಅನೇಕ ಸಂದರ್ಭಗಳಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಪ್ರಾಣಾಪಾಯ ಮಾಡಲು ಘೋರ ವಿಷವಾಗಿ ಪ್ರಯೋಗವಾಗಿರುವ ಕರಾಳ ಸ್ವರೂಪದ ರಾಸಾಯನಿಕ. ಇದು ಪ್ರಕೃತಿಯಲ್ಲಿ ಅಲ್ಪಾಂಶದಲ್ಲಿ ಪ್ರಸರಿಸಿರುವುದಾದರೂ ವಿಶೇಷವಾಗಿ ಗಂಧಕದೊಡನೆ ಸಂಯೋಜಿತವಾಗಿ ಸಲ್ಫೈಡ್ ರೂಪದಲ್ಲಿ ದೊರೆಯುತ್ತದೆ. ಅವುಗಳಲ್ಲಿ ಕೆಂಪು ಬಣ್ಣವುಳ್ಳ ರಿಯಲ್ಗರ್ (As2S2) ಮತ್ತು ಹಳದಿ ಬಣ್ಣದ ಆರ್ಪಿಮೆಂಟ್ (As2S3) ಮುಖ್ಯವಾದವು. ಇತರ ಅದಿರುಗಳು ಮಿಸ್ಪಿಕೆಲ್ (FcAsS) ಮತ್ತು ಕೋಬಾಲ್ಟ್ ಗ್ಲಾನ್ಸ್ (CoAsS)

ಉತ್ಪಾದನೆ

ಬದಲಾಯಿಸಿ

ಮೇಲ್ಕಂಡ ಯಾವ ಅದಿರನ್ನಾದರೂ, ವಾಯುರಹಿತವಾದ ಆವರಣದಲ್ಲಿ, ಚೆನ್ನಾಗಿ ಕಾಯಿಸಿದ್ದೇ ಆದರೆ, ಆರ್ಸೆನಿಕ್ ಅನಿಲರೂಪದಲ್ಲಿ ಬಿಡುಗಡೆಯಾಗುವುದು. ಈ ಅನಿಲವನ್ನು ದ್ರವೀಕರಿಸುವುದರಿಂದ ಘನರೂಪದ ಆರ್ಸೆನಿಕ್ ಶೇಖರಣೆಯಾಗುತ್ತದೆ. ಗಾಳಿಯ ಸಂಪರ್ಕದೊಡನೆ ಮೇಲ್ಕಂಡ ಅದಿರುಗಳನ್ನು ಕಾಯಿಸಿದಲ್ಲಿ, ಬಿಳುಪಾದ, ಆರ್ಸೆನಿಕ್ ಆಕ್ಸೈಡ್ (As2O3) ದೊರೆಯುತ್ತದೆ. ಇದನ್ನು ಇದ್ದಿಲುಪುಡಿಯೊಡನೆ ಮಿಶ್ರಮಾಡಿ ಕಾಯಿಸುವುದರಿಂದ ಆರ್ಸೆನಿಕ್ ಅನಿಲರೂಪದಲ್ಲಿ ಬಿಡುಗಡೆಯಾಗುತ್ತದೆ. ಇದನ್ನು ಘನರೂಪಕ್ಕೂ ತಂದುಕೊಳ್ಳಬಹುದು.

ಆರ್ಸೆನಿಕ್ ಗಂಧಕದಂತೆ ಬಹುರೂಪತ್ವವನ್ನು ಹೊಂದಿರುವ ವಸ್ತು. ಸಾಮಾನ್ಯವಾಗಿ ದೊರಕುವ ಲೋಹದ ಆರ್ಸೆನಿಕ್ ಕಂದು ಬಣ್ಣದ ಪೆಡಸಾದ ಹರಳಿನ ರೂಪದ್ದು; ಮತ್ತು ಲೋಹಕ್ಕೆ ಸಹಜವಾದ ಮೆರುಗನ್ನು ಹೊಂದಿದೆ. ಒಳ್ಳೆಯ ವಿದ್ಯುತ್ವಾಹಕ. ಕಾಯಿಸಿದಾಗ ಸುಮಾರು 8000 ಸೆಂ.ಗ್ರೇ. ಮೇಲ್ಪಟ್ಟು ಶಾಖದಲ್ಲಿ ಇದು ನೇರವಾಗಿ ಆವಿಯಾಗುತ್ತದೆ. ನೀರು ಅಥವಾ ಇಂಗಾಲದ ಡೈಸಲ್ಫೈಡ್ನಲ್ಲಿ (Cs2) ಅದ್ರಾವ್ಯ. ಸಾಮಾನ್ಯ ಉಷ್ಣತೆಯಲ್ಲಿ ಸ್ಥಿರ. ಇದನ್ನು γ (ಗ್ಯಾಮ) ಬಹುರೂಪಿ ಎನ್ನಬಹುದು. ಪುಡಿಯ ರೂಪದಲ್ಲಿರುವ ಮತ್ತೊಂದು ಬಗೆಗೆ β (ಬೀಟ) ಆರ್ಸೆನಿಕ್ ಎಂದೂ ಹಳದಿ ಬಣ್ಣದಲ್ಲಿರುವ ಬೇರೊಂದು ಬಗೆಗೆ α (ಆಲ್ಫ) ಎಂದೂ ಕರೆದಿದೆ. ಈ ಎರಡು ಬಗೆಗಳೂ ಅಷ್ಟು ಸ್ಥಿರವಾಗಿರದೆ, γ ರೂಪಕ್ಕೆ ಕ್ರಮೇಣ ಪರಿವರ್ತನೆ ಹೊಂದುತ್ತವೆ. ಎಲ್ಲ ಬಗೆಗಳೂ ಪ್ರಬಲ ವಿಷವಸ್ತುಗಳು.

ಸಂಯುಕ್ತಗಳು

ಬದಲಾಯಿಸಿ

ರಬಲ ನೈಟ್ರಿಕ್ ಆಮ್ಲ. ಆರ್ಸೆನಿಕ್ನೊಡನೆ ವರ್ತಿಸಿ ಆರ್ಸೆನಿಕ್ ಆಮ್ಲ (H3AsO4) ಉತ್ಪತ್ತಿಯಾಗುತ್ತದೆ. ಕ್ಲೋರಿನ್ ಅನಿಲ ಸುಲಭವಾಗಿ ಆರ್ಸೆನಿಕ್ನೊಂದಿಗೆ ಸಂಯೋಗ ಹೊಂದಿ ಆರ್ಸೆನಿಕ್ ಕ್ಲೋರೈಡ್ (AsCl3) ದೊರೆಯುವುದಲ್ಲದೆ, ಸಂಯೋಗ ಸಂಬಂಧದಲ್ಲಿ ಉಂಟಾದ ಹೆಚ್ಚಿನ ಉಷ್ಣ ಕಿಡಿಗಳ ರೂಪದಲ್ಲಿ ಕಾಣುತ್ತದೆ.

ಆರ್ಸೆನಿಕ್ ವಿಷಬಾಧೆ

ಬದಲಾಯಿಸಿ

ಆರ್ಸೆನಿಕ್ ಅನೇಕ ರೂಪಗಳಲ್ಲಿ ಅಲ್ಲದೆ ಬಳಕೆಯಲ್ಲಿ ಸುಲಭವಾಗಿ ಉಪಯೋಗಿಸಲ್ಪಡುವ ಧಾತುವಾದ್ದರಿಂದ, ಹಲವಾರು ವಿಧಗಳಿಂದ ಇದರ ಬಾಧೆಯುಂಟಾಗುತ್ತದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಆರ್ಸೆನಿಕ್ ಲವಣಗಳು ಬಣ್ಣರಹಿತ ಮತ್ತು ರುಚಿರಹಿತ. ಆದ್ದರಿಂದ ಪುರ್ವಕಾಲದಿಂದಲೂ ಪಾತಕ ಕಾರ್ಯಕ್ಕೆ ಬಳಸಲ್ಪಡುತ್ತಿವೆ. ಈ ಪಾಷಾಣಬಾಧೆ ತೀವ್ರತರ ಇಲ್ಲವೆ ಜಡತರದ್ದಾಗಿ ಕಂಡುಬರಬಹುದು. ಆರ್ಸೆನಿಕ್ ಲವಣಗಳಾದ ಬಿಳಿ ಆರ್ಸೆನಿಕ್, ಸೀಸದ ಆರ್ಸೆನೈಟ್, ತಾಮ್ರದ ಆರ್ಸೆನೈಟ್ ಮುಂತಾದವುಗಳು ಕ್ರಿಮಿಕೀಟ, ಹೆಗ್ಗಣ, ಬೆಳೆಯಲ್ಲಿಯ ಕಳೆ, ಪರೋಪಜೀವಿ ಇವುಗಳ ನಾಶಕ್ಕೆ ಉಪಯೋಗಿಸಲ್ಪಡುತ್ತವೆ. ಆದರೆ ಇಂಥ ವಿಷವಸ್ತುಗಳು ಆಕಸ್ಮಿಕವಾಗಿಯಾಗಲಿ ಉದ್ದೇಶಪುರ್ವಕವಾಗಿಯಾಗಲಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಲ್ಪಟ್ಟರೆ ಆರ್ಸೆನಿಕ್ ವಿಷಬಾಧೆಯುಂಟಾಗುತ್ತದೆ. ಆಗ ಪೀಡಿತ ಜೀವಿಗಳಲ್ಲಿ ಯಾತನಾಪುರ್ವಕ ಹೊಟ್ಟೆನೋವು, ಉತ್ಕ್ಷೇಪನ, ವಾಂತಿ, ತೀವ್ರ ಅತಿಸಾರ, ಸ್ನಾಯುಗಳಲ್ಲಿ ಚಳಕು ಮುಂತಾದ ತೀವ್ರ ಲಕ್ಷಣಗಳು ಕಂಡುಬಂದು ಸಕಾಲದಲ್ಲಿ ಚಿಕಿತ್ಸೆಯಾಗದಿದ್ದರೆ ಕೆಲವು ಗಂಟೆಗಳಲ್ಲಿಯೇ ಅವು ಸಾಯುತ್ತವೆ. ಆರ್ಸೆನಿಕ್ ಶರೀರದಿಂದ ಅಷ್ಟು ಸುಲಭವಾಗಿ ವಿಸರ್ಜಿಸಲ್ಪಡದೆ ಶರೀರದ ನಾಡಿಕೂಟದಲ್ಲಿ ಶೇಖರಿಸಲ್ಪಡುವ ವಸ್ತುವಾದ್ದರಿಂದ ಆರ್ಸೆನಿಕ್ಯುಕ್ತ ಔಷಧಗಳನ್ನು ಚಿಕಿತ್ಸೆಗಾಗಿ ಆಗಾಗ ಉಪಯೋಗಿಸಿದರೆ ಇಲ್ಲವೆ ಆರ್ಸೆನಿಕ್ ಯಾವುದೇ ಕಾರಣದಿಂದಾಗಿ ಸಣ್ಣ ಪ್ರಮಾಣದಲ್ಲಿ ಬಹುಕಾಲದವರೆಗೆ ದೇಹದೊಳಕ್ಕೆ ಸೇರಿದರೆ ಆರ್ಸೆನಿಕ್ನ ತೀವ್ರ (ಕ್ರಾನಿಕ್) ವಿಷಬಾಧೆಯುಂಟಾಗುತ್ತದೆ. ಈ ಬಾಧೆಯನ್ನು ಗುರುತಿಸುವುದು ಕಷ್ಟಕರ. ಆದರೂ ಜಡತರದ ಭೇದಿ, ಕೂದಲು ಉದುರುವುದು, ಉಸಿರು, ಬೆವರಿನಲ್ಲಿ ಬೆಳ್ಳುಳ್ಳಿಯ ವಾಸನೆ ಮೊದಲಾದ ಚಿಹ್ನೆಗಳು ಈ ವಿಷಬಾಧೆಯ ಸೂಚಕಗಳಾಗಿವೆ. ತೀವ್ರ ವಿಷಬಾಧೆಯಿಂದ ನರಳುವ ಜೀವಿಗಳ ಮಲ, ಮೂತ್ರ, ರಕ್ತಾದಿಗಳನ್ನು ರಾಸಾಯನಿಕ ವಿಚ್ಛೇದನೆಗೊಳಪಡಿಸಿದರೆ ತಾಳಕದ (ಆರ್ಸೆನಿಕ್) ವಿಷಬಾಧೆಯ ಸಾಧ್ಯತೆಯನ್ನು ದೃಢೀಕರಿಸುವುದು ಸುಲಭ. ಬಿ.ಏ.ಎಲ್ನ್ನು (ಬ್ರಿಟಿಷ್ ಆ್ಯಂಟಿ ಲೆವಿಸೈಟ್) ಸೂಜಿಮದ್ದಾಗಿ ಕೊಡುವುದು ಈ ವಿಷಬಾಧೆಗೆ ಪ್ರಮುಖವಾದ ಚಿಕಿತ್ಸೆ.