ಹುಲಿವೇಷ

ಬದಲಾಯಿಸಿ

ಮುನ್ನುಡಿ

ಬದಲಾಯಿಸಿ

ಹುಲಿವೇಷ ಹಾಕುವುದು ಸಾಮಾನ್ಯವಾಗಿ ಕರ್ನಾಟಕ ತುಂಬೆಲ್ಲ ಕಂಡುಬರುವ ಒಂದು ಜನಪದ ಕಲೆ. ಮೊಹರಂ ಮತ್ತು ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಈ ವೇಷ ಹೆಚ್ಚಾಗಿ ಹಾಕುತ್ತಾರೆ. ಉರುಸು ಜಾತ್ರೆ ಹಬ್ಬಗಳಲ್ಲಿಯೂ ಹುಲಿವೇಷ ಧರಿಸುತ್ತಾರೆ. ಮನರಂಜನೆಗಾಗಿ ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ಕಲಾವಿದರೂ ಇದ್ದಾರೆ. ಬಿಸಿಲು ಮಳೆ ಚಳಿಯಲ್ಲಿ ಬರಿಮೈಯಲ್ಲಿ ನಿಂತು ಸಹಿಸಿಕೊಂಡು ಕುಣಿದು ಕುಪ್ಪಳಿಸುವ ಶಕ್ತಿಯುಳ್ಳ ಯಾವ ಜನಾಂಗದ ವ್ಯಕ್ತಿಯಾದರೂ ಹುಲಿವೇಷ ಹಾಕಬಹುದು. ಹುಲಿವೇಷ ಹಾಕುವವರು ಸಾಮಾನ್ಯವಾಗಿ ೧೮ ರಿಂದ ೨೮ ವಯಸ್ಸಿನವರಿರುತ್ತಾರೆ. ಕೆಲವರು ಹರಕೆ ಹೊತ್ತವರೂ ವೇಷ ಧರಿಸುತ್ತಾರೆ. ಧಾರವಾಡ ಜಿಲ್ಲೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಲಭಾಗಗಳಲ್ಲಿ ಹುಲಿ ಮರಿ ವೇಷಗಳನ್ನು ಹಾಕಿರುತ್ತಾರೆ. ಇವರೆಡರ ಕುಣೆತ ವೈವಿದ್ಯಪೂರ್ಣವಾಗಿರುತ್ತದೆ.

ವೇಷ ಭೂಷಣ

ಬದಲಾಯಿಸಿ

ಹುಲಿ ವೇಷಗಾರರಿಗೆ ಕೆಂಪು ಮಿಶ್ರಿತ ಹಳದಿ ಆಯಿಲ್ ಪೇಯಿಂಟನ್ನು ಇಡೀ ದೇಹಕ್ಕೆ ಹಚ್ಚಿರುತ್ತಾರೆ. ವೇಷಗಾರ ಚಡ್ಡಿಯನ್ನು, ತಲೆಗೆ ಬಿಗಿಯಾಗಿ ಕುಳಿತುಕೊಳ್ಳುವ ಇಲ್ಯಾಸ್ಟಿಕ್ ಹಾಕಿದ ಟೋಪ್ಪಿಗೆಯನ್ನು ಧರಿಸಿರುತ್ತಾನೆ. ಟೊಪ್ಪಿಗೆಗೂ ಹಳದಿ ಬಣ್ಣ ಹಚ್ಚಿರುತ್ತಾರೆ. ಟೊಪ್ಪಿಗೆ ರಟ್ಟಿನಿಂದ ಕಿವಿಗಳನ್ನು ಮಾಡಿ ಜೋಡಿಸಿರುತ್ತಾರೆ. ಕೆಲವರು ತಲೆಗೆ ಹುಲಿಯ ಕಿವಿಯಾಕಾರವನ್ನು ಕಟ್ಟಿಕೊಳ್ಳುತ್ತಾರೆ. ಹಳದಿ ಬಣ್ಣದ ಮೇಲೆ ಹಳದಿ ಕಪ್ಪು ಮಿಶ್ರಿತ ಹುಲಿ ಚರ್ಮದ ಮೇಲಿನ ಪಟ್ಟಿಗೆಗಳನ್ನು ಮಾಡಿರುತ್ತಾರೆ. ಅರಿವೆಯಿಂದ ಬಾಲವನ್ನು ಮಾಡಿರುತ್ತಾರೆ. ಕೆಲವರು ರಟ್ಟಿನಿಂದ ಹುಲಿಯ ಮುಖವಾಡ ಮಾಡಿಸಿ ಮುಖಕ್ಕೆ ಕಟ್ಟಿಕೊಂಡಿರುತ್ತಾರೆ. ಉದ್ದವಾದ ಚೂಪಾದ ಉಗುರುಗಳನ್ನು ಕೈಯ ಬೆರಳುಗುರುಗಳಿಗೆ ಹಾಕಿಕೊಂಡಿರುತ್ತಾರೆ. ಚಿಕ್ಕಮಕ್ಕಳಿಗೆ ಆಯಿಲ್ಪೆಯಿಂಟ್ ಬದಲು ವಾಟರ್ ಪೇಯಿಂಟ್ ಬಳಸುತ್ತಾರೆ. ಹುಲಿವೇಷಗಾರರು ಒಳ್ಳೆಯ ಕಲಾವಿದನ ಹತ್ತಿರ ಹೋಗಿ ಬಣ್ಣ ಬರೆಯಿಸಿಕೊಂಡು ಬರುತ್ತಾರೆ. ಬಣ್ಣ ಪೂರ್ತೀಯಾದ ನಂತರ ವೇಷಗಾರನಿಗೆ ಏನೂ ಆಗಬಾರದೆಂದು ರಟ್ಟಿಗೆ ನಿಂಬೆಹಣ್ಣು, ಕರಿದಾರ ಕಟ್ಟಿರುತ್ತಾರೆ.

ಕುಣಿತದ ಸಮಯ

ಬದಲಾಯಿಸಿ

ಹುಲಿವೇಷ ಧರಿಸಿದವರು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಪ್ರದರ್ಶನ ನೀಡುತ್ತಾರೆ. ಹುಲಿವೇಷಧಾರರಿಗೆ ಹೆಜ್ಜೆಗಾರಿಕೆಯ ಪರಿಚಯ ಇರಬೇಕಾಗಿರುತ್ತದೆ. ಇಲ್ಲದೆ ಹೋದರೆ ಹುಲಿ ಕುಣಿತಕ್ಕೆ ಕಳೆ ಬರುವುದಿಲ್ಲ. ಹಲಗೆ ತಮಟೆಯ ವಾದ್ಯಗಳ ಗತ್ತಿಗೆ ತಕ್ಕಂತೆ ಹುಲಿ ವೇಷದಾರಿ ಕುಣಿಯುತ್ತಾನೆ. ಮರಿ ಹುಲಿ ಜೊತೆಗಿದ್ದರೆ ಕುಣಿತಕ್ಕೆ ಹೆಚ್ಚಿನ ಕಳೆ ಬರುತ್ತದೆ. ಮೇಲಿಂದ ಮೇಲೆ ಗಿರಿಕಿ ಹೊಡೆಯುತ್ತಾ, ಹುಲಿಯಂತೆ ನಟನೆ ಮಾಡುತ್ತಾ, ಕೆಲವರ ಮೇಲೆರಿ ಹೋಗುವಂತೆ ಮಾಡಿ ಅಂಜಿಸುತ್ತ ಜನರನ್ನು ರಂಜಿಸುತ್ತಾನೆ. ವಾದ್ಯಗಳ ಬಡಿತ ತೀವ್ರವಾದಂತೆ ಕುಣಿತ ತೀವ್ರವಾಗುತ್ತದೆ. ಇವರು ಊರುಗಳಲ್ಲೆಲ್ಲಾ ಸುತ್ತುತ್ತಾ ಮನೆಮನೆಗೆ ಹೋಗಿ ತಮ್ಮ ಕುಣಿತದಿಂದ ಜನರನ್ನು ರಂಜಿಸಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಕಿರಾಣಿ, ಶರಾಯಿ ಅಂಗಡಿಗಳಲ್ಲಿ ಇವರ ಕುಣಿತ ಹೆಚ್ಚು. ಕೆಲವು ಕಡೆ ಹುಲಿ ವೇಷಧಾರಿಯ ಸೊಂಟಕ್ಕೆ ಪಟ್ಟಿಯೊಂದನ್ನು ಕಟ್ಟಿ ಅದಕ್ಕೆ ಹಗ್ಗವನ್ನು ಸೇರಿಸಿ, ಇಬ್ಬರು ಅಥವಾ ಮೂರು ಜನ ಹಿಡಿದಿರುತ್ತಾರೆ. ಮುಂದೆ ಹುಲಿ ಆಡಿಸುವ ವ್ಯಕ್ತಿ ಇರುತ್ತಾನೆ. ಅವನು ಸರ್ಕಸ್ಸಿನ ರಿಂಗ್ ಮಾಸ್ಟರನಂತೆ ಹುಲಿಯನ್ನು ಆಡಿಸುತ್ತಾನೆ.

ಕಲೆಯ ವೈಶಿಷ್ಟ್ಯ

ಬದಲಾಯಿಸಿ

ಹುಲಿವೇಷದಲ್ಲಿ ಪ್ರಮುಖವಾದದ್ದು ಬಣ್ಣಗಾರಿಕೆ. ಕಲಾವಿದನು ಚಡ್ಡಿವೊಂದನ್ನು ಬಿಟ್ಟು ಬರಿ ಮೈಯಲ್ಲೆ ಇರುತ್ತಾನೆ. ಮುಖಕ್ಕೆ ಹುಲಿಯ ಮುಖವಾಡವನ್ನು ಧರಿಸುತ್ತಾನೆ. ಮೈಗೆ ಹುಲಿಯ ಚರ್ಮವನ್ನು ಹೋಲುವಂತಹ ಹಳದಿ ಕಪ್ಪು ಪಟ್ಟೆಗಳನ್ನು ಬಳಿದುಕೊಂಡಿರುತ್ತಾನೆ. ಕೆಲವರು ಮುಖವಾಡಕ್ಕೆ ಬದಲು ತಲೆಯ ಭಾಗಕ್ಕೆ ಹುಲಿಯ "ಕಿವಿಯಾರ"ವನ್ನು ಕಟ್ಟಿಕೊಂಡು ಉಳಿದೆಲ್ಲ ಭಾಗಕ್ಕೆ ಬಣ್ಣವನ್ನೇ ಬಳಸುತ್ತಾರೆ. ಕೈಗಳಿಗೆ ಹುಲಿ ಉಗುರನ್ನು ಹೋಲುವಂತ ಮೊನಚಾದ ದೊಡ್ಡ ಉಗುರುಗಳನ್ನು ಧರಿಸುತ್ತಾರೆ. ಈ ಉಗುರಿಗೆ ಬಹುತೇಕ ಹಿಪ್ಪೆಕಾಯಿನ ತೊಗಟೆಯನ್ನು ಬಳಸುವುದೆ ಹೆಚ್ಚು. ನಾರಿನಿಂದ ಮಾಡಿದ ಬಾಲವನ್ನು ಹಿಂದಕ್ಕೆ ಕಟ್ಟಿಕೊಂಡಿರಿತ್ತಾರೆ. ಒಬ್ಬ ವ್ಯಕ್ತಿಗೆ ಸರಿಯಾಗಿ ಹುಲಿವೇಷ ಹಾಕಬೇಕಾದರೆ ಕನಿಷ್ಟ ಮೂರು ಗಂಟೆಗಳಾದರು ಬೇಕು ಎನ್ನುತ್ತಾರೆ ಕಲಾವಿದರು. ಹುಲಿವೇಷ ಧರಿಸಿದ ಕಲಾವಿದ ತಮಟೆಯ ಗತ್ತಿಗೆ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾನೆ. ಅವನ ಸೊಂಟಕ್ಕೆ ಪಟ್ಟಿಯೊಂದನ್ನು, ಕಟ್ಟಿ ಅದಕ್ಕೆ ಹಗ್ಗವನ್ನು ಸೇರಿಸಿ ಮೂವರು ಹಿಡಿದಿರುತ್ತಾರೆ. ಮುಂದೆ ಹಿಡಿದ ಗೆಜ್ಜೆಕಟ್ಟಿದ ಉದ್ದವಾದ ಕೋಲನ್ನು ಹಿಡಿದುಕೊಳ್ಳಲು ವೇಷಧಾರಿ ಮುಂದೆ ಜಿಗಿಯುವಾಗ ಹಗ್ಗವನ್ನು ಹಿಡಿದಿರುವವರು ಅವನನ್ನು ಹಿಂದಕ್ಕೆ ಎಳೆಯುತ್ತಾರೆ. ಬಲವಾದ ಇಬ್ಬರು ಹೆಗಲಮೇಲೆ ಹೊತ್ತ ಉದ್ದವಾದ ಎರಡು ಬಿದಿರಿನ ಗಳಗಳ ಮೇಲೆ ಹುಲಿ ವೇಷಧಾರಿ ಕುಪ್ಪಳಿಸುತ್ತಾ ಕುಣಿಯುವುದು, ಲಾಗ ಹಾಕುವುದು ಮೊದಲಾದ ಆಟಗಳನ್ನು ತೋರಿಸುತ್ತಾನೆ.

ಕರಿಬೇವಿನ ಸೊಪ್ಪಿನ ವೇಷ

ಬದಲಾಯಿಸಿ

ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಹುಲಿವೇಷದ ಜೊತೆಗೆ ಬರುವ ಮತ್ತೊಂದು ಮನರಂಜನಾ ಕಲೆ ಕರಿಬೇವಿನ ಸೊಪ್ಪಿನ ವೇಷ. ಚಿತ್ರದುರ್ಗ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಕಲಾವಿದ ಬರಿಮೈಯಲ್ಲಿದ್ದು ಲಂಗೊಟಿಯನ್ನು ಕಟ್ಟಿರುತ್ತಾನೆ ಮುಖಕ್ಕೆ ಮಸಿ ಬಳಿದುಕೊಂಡು ಸುಣ್ಣದಿಂದ ಅಲ್ಲಲ್ಲಿ ಚುಕ್ಕೆಗಳನ್ನು.ಇಟ್ಟಕೊಂಡಿರುತ್ತಾನೆ. ತಲೆಗೆ ರುಮಾಲಿನಂತೆ ಸುತ್ತಿಕೊಂಡಿರುವ ಸೀರೆಯ ಕೊನೆಯ ಭಾಗವನ್ನು ಬೆನ್ನ ಹಿಂದಕ್ಕೆ ನರಿಗೆ ಮಾಡಿ ತೂಗು ಬಿಟ್ಟಿರುತ್ತಾನೆ. ಕತ್ತೆ ಮೇಲೆ ಕೂತು ಕರಿಬೇವಿನ ಸೊಪ್ಪನ್ನು ಇಟ್ಟುಕೊಂಡು ಸೊಪ್ಪಮ್ಮ ಸೊಪ್ಪಮ್ಮ ಎಂದು ಕೂಗುತ್ತಾ ಬೀದಿಯ ಜನರನ್ನೆಲ್ಲಾ ನಲಿಸಿ ನಗಿಸುತ್ತಾನೆ. ಕತ್ತೆಗು ಕರಬೇವಿನ ಸೊಪ್ಪಿಗು ಏನು ಸಂಭಂದವೆಂದು ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಸಂಜೆಯ ವೇಳೆ ಪ್ರದರ್ಶಿತವಾಗುವ ಈ ಕಲೆ ಕೇವಲ ಮನರಂಜನೆಗಾಗಿಯೇ ಹುಟ್ಟಿಕೊಂಡಿರುವುದು ಚಟುವಟಿಕೆಗಳನ್ನು ಸನ್ನೆಯಿಂದ ತೋರಿಸುವುದು ಈ ಕಲೆಯ ವೈಶಿಷ್ಯ.ಕಲಶ ಹೊತ್ತವರು ಘಂಟೆ ಅಲ್ಲಾಡಿಸುತ್ತಾ ನಿಂತಿರುತ್ತರೆ.

ಉಲ್ಲೇಖ

ಬದಲಾಯಿಸಿ
  1. ಸಂಪಾದಕ: ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.