ಸದಸ್ಯ:Kavitha G. Kana/ನನ್ನ ಪ್ರಯೋಗಪುಟ1

ಜನಪದ ಆಟಗಳು ಹುಲಿ-ದನ ಆಟ ತುಳುನಾಡಿನ ಜನಪದ ಆಟ. ತುಳುನಾಡಿನ ಮಕ್ಕಳ ಬದುಕಿನೊಂದಿಗೆ ಸಂಬಂಧವನ್ನು ಪಡೆದುಕೊಂಡ ಆಟ. ಇದು ಸಮ್ಮಿಶ್ರ ಆಟ, ವಯಸ್ಸು ಮತ್ತು ಲಿಂಗದ ಬೇದವಿಲ್ಲದೆ ಎಲ್ಲರೂ ಆಡಬಹುದಾದ ಆಟ. ಹೆಚ್ಚಾಗಿ ಆರರಿಂದ ಹದಿಮೂರು ವರ್ಷದ ಮಕ್ಕಳು ಭಾಗವಹಿಸುತ್ತಾರೆ. ಸಣ್ಣ ಗುಂಪೆಂದರೆ ಆರು ಜನ ಸುತ್ತಲೂ ನಿಂತು ಗುಂಪು ಅಥವಾ ಕೋಟೆ ಕಟ್ಟಿರಬೇಕು. ಮೊದಲ ಸುತ್ತಿನಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿದ್ದರೂ ಕೊನೆಯ ಹಂತ ಅಂದರೆ ಐದನೆಯ ಸುತ್ತಿನಲ್ಲಿ ಗಂಡು ಮಕ್ಕಳ ಸಂಖ್ಯೆ ಜಾಸ್ತಿಯಾಗಿರುತ್ತದೆ. ಲಿಂಗ ಬೇಧಗಳ ಮಹತ್ವವಿಲ್ಲದಿದ್ದರೂ ಹುಲಿ-ದನದ ಆಯ್ಕೆಯ ಸಂದರ್ಭ ಇದನ್ನು ಗಮನಿಸಲಾಗುತ್ತದೆ. ಈ ಆಟದಲ್ಲಿ ಕಡ್ಡಾಯವಾದ ನಿಯಮಗಳೇನೂ ಇರುವುದಿಲ್ಲ.

ವಿವಿಧ ರೂಪ

ಬದಲಾಯಿಸಿ

ತಮಿಳುನಾಡಿನಲ್ಲಿ ಹುಲಿ-ದನ ಆಟ ಪ್ರಚಲಿತವಿದ್ದರೂ ನರಿ-ಕೋಳಿ (ಕೋಳಿ-ಕುಕ್ಕನ್) ಮತ್ತು ಇಲಿ-ಬೆಕ್ಕು ಆಟ ಪ್ರಚಲಿತವಿದೆ. ಆಟದ ರಚನೆ ಒಂದೇ ಸ್ವರೂಪ ಇದ್ದರೂ ಪ್ರಾಣಿ ಪ್ರತಿಮೆಗಳು ವಿಭಿನ್ನವಾಗಿ ಬಳಕೆಯಾಗಿದೆ. ಸಂವಹನ ಮಾಡುವ ಅರ್ಥ ಹುಲಿ-ದನ ಆಟಕ್ಕಿಂತ ಭಿನ್ನವಾಗಿವೆ. ಹುಲಿ-ದನ ಆಟ ತುಳುನಾಡಿನ ಎಲ್ಲಾ ಪ್ರದೇಶಗಳಲ್ಲೂ ಕಂಡು ಬಂದರೂ ಸಂವಹನ ಮಾಡುವ ಅರ್ಥ ಭಿನ್ನವಾಗಿರಲು ಸಾಧ್ಯತೆ ಇದೆ. ಶಾಬ್ದಿಕ ಮತ್ತು ಅಶಾಬ್ದಿಕ ಅಭಿವ್ಯಕ್ತಿಗಳು ಬೇರೆಯದಾಗಿವೆ.

ಸಂಶೋಧನಾ ಪಠ್ಯಗಳು

ಬದಲಾಯಿಸಿ

ಬೇರೆ ಬೇರೆ ತಾಲೂಕಿನಲ್ಲಿ ಹುಲಿ-ದನ ಆಟದ ಬಿನ್ನಾಂಶಗಳು ಕಂಡು ಬಂದಿದೆ, ೮ ತಾಲೂಕಿನಿಂದ ಆಟದ ವಿವರ ಪಢೆದು ೮ ಭಾಗಗಳಾಗಿ ವಿಂಗಡಿಸಲಾಗಿದೆ,

  1. ಮಂಗಳೂರು ತಾಲೂಕಿನ ಮರವೂರು - ಮಂ.ತಾ. ಹುದ ೧
  2. ಕಾರ್ಕಳ ತಾಲೂಕಿನ ಬೆಳ್ಮಣ್ - ಕಾ.ತಾ. ಹುದ ೨
  3. ಬಂಟ್ವಾಳ ತಾಲೂಕಿನ ಮೊಡಂಕಾಪು - ಬಂ.ತಾ.ಹುದ ೩
  4. ಉಡುಪಿ ತಾಲೂಕಿನ ಪಾಂಗಳ - ಉ.ತಾ. ಹುದ ೪
  5. ಪುತ್ತೂರು ತಾಲೂಕಿನ ಪುತ್ತೂರು - ಪು.ತಾ.ಹುದ ೫
  6. ಸುಳ್ಯ ತಾಲೂಕಿನ ಸುಬ್ರಹ್ಮಣ್ಯ - ಸು.ತಾ.ಹುದ ೬
  7. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ - ಬೆ.ತಾ.ಹುದ ೭
  8. ಕಾಸರಗೋಡು ಜಿಲ್ಲೆಯ ಅರಿಬೈಲು - ಕಾ.ಜಿ.ಹುದ ೮ ಎಂದು ವಿಂಗಡಿಸಲಾಗಿದೆ.

ಹುಲಿ-ದನದ ಆಯ್ಕೆ

ಬದಲಾಯಿಸಿ

ಹುಲಿ ಮತ್ತು ದನಗಳಾಗುವ ಆಟಗಾರರ ಆಯ್ಕೆಯೇ ಒಂದು ಮಹತ್ವದ ಅಂಶ. ಕೆಲವು ಪ್ರದರ್ಶನಗಳಲ್ಲಿ ಈ ಆಯ್ಕೆಯು ಕೋಟೆ ಕಟ್ಟುವ ಮೊದಲೇ ಆಯ್ಕೆ, ಇನ್ನೂ ಕೆಲವು ಕಡೆಗಳಲ್ಲಿ ಕೋಟೆಯಲ್ಲೇ ಆಯ್ಕೆ ನಡೆಯುತ್ತದೆ. ಕಾರ್ಕಳ ತಾಲೂಕಿನ (ಕಾ.ತಾ. ಹುದ-೨) ಆಟದ ಪ್ರದರ್ಶನದಲ್ಲಿ ಹುಲಿ ಪಾತ್ರಕ್ಕಾಗಿ ಇಬ್ಬರು ಸ್ಪರ್ದಿಗಳು ಇದ್ದಾಗ ಟಾಸ್ ಹಾಕಿ ಹುಲಿ ಆಯ್ಕೆಯಾಗುತ್ತದೆ. ಉಳಿದ ಪ್ರದೇಶಗಳಲ್ಲಿ ಚರ್ಚೆಯಿಂದ ಒಮ್ಮತದಲ್ಲಿ ಹುಲಿಯ ಆಯ್ಕೆಯಾಗುತ್ತದೆ. ಆಟದ ಒಂದು ಹಂತದಲ್ಲಿ ಒಮ್ಮೆ ಹುಲಿ ದನವನ್ನು ಮುಟ್ಟುವುದು ಅಥವಾ ಹುಲಿ ಸೋಲನ್ನು ಒಪ್ಪಿಕೊಳ್ಳುವುದು ಎಂದರ್ಥ. ಕೆಲವೊಮ್ಮೆ ಆಟದ ಪ್ರತೀ ಹಂತದಲ್ಲೂ ಹುಲಿ-ದನದ ಆಯ್ಕೆ ನಡೆಯುತ್ತದೆ. ಇನ್ನೂ ಕೆಲವೆಡೆ ಮುಂದಿನ ಹಂತದ ಆಯ್ಕೆಯು ಮೊದಲೇ ನಡೆಯುತ್ತದೆ. ಪರೋಕ್ಷವಾಗಿ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತದೆ.

  • ಹುಲಿಯ ಪಾತ್ರದ ಆಟಗಾರನ ಆಯ್ಕೆಯ ಬಳಿಕ ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ದನದ ಪಾತ್ರದ ಆಟಗಾರನ ಆಯ್ಕೆ ನಡೆಯುತ್ತದೆ.
  • ಹುಡುಗ ಹುಲಿಯ ಪಾತ್ರ ವಹಿಸಿದರೆ ಹುಡಗಿ ದನದ ಪಾತ್ರವಹಿಸುತ್ತಾರೆ. ಆದರೆ ಹುಡುಗಿ ಹುಲಿಯ ಪಾತ್ರವಹಿಸಿದಾಗ ಹುಡುಗ ದನದ ಪಾತ್ರ ವಹಿಸುವುದು ಕಡಿಮೆ. ಒಂದು ವೇಳೆ ವಹಿಸಿಕೊಂಡರೆ ಹುಡುಗಿಯ ಪ್ರಾಯ ಹೆಚ್ಚಾಗಿರುತ್ತದೆ.
  • ದುರ್ಬಲ ಆಟಗಾರನು ದನದ ಪಾತ್ರವಹಿಸಿದಾಗ ಪ್ರಬಲ ಆಟಗಾರ ಹುಲಿಯ ಪಾತ್ರ ವಹಿಸುವುದನ್ನು ತಡೆಯುತ್ತಾರೆ. ವಯಸ್ಸು, ಲಿಂಗ, ವ್ಯಕ್ತಿತ್ವ, ಶಕ್ತಿ, ಶಾರೀರಿಕ ಬಲ ಇವುಗಳನ್ನು ಗಮನಿಸಿಯೇ ಹುಲಿ-ದನದ ಆಯ್ಕೆಯೂ ಆಗಿರುತ್ತದೆ.
  • ಹುಲಿಯ ಪಾತ್ರದ ಆಯ್ಕೆ ಸ್ವ-ಇಚ್ಚೆಯಿಂದ ನಡೆಯುತ್ತದೆ, ದನದ ಪಾತ್ರದ ಆಯ್ಕೆ ಆಟಗಾರರಿಂದಲೇ ನಡೆಯುತ್ತದೆ. ಕೆಲವೊಮ್ಮೆ ಇದು ಸ್ವ-ಇಚ್ಚೆಯಿಂದ ನಡೆಯಲೂಬಹುದು.
  • ಹುಡಗರು ಹುಲಿಯ ಪಾತ್ರವಹಿಸಲು ಇಷ್ಟಪಟ್ಟರೆ ಹುಡುಗಿಯರು ದನದ ಪಾತ್ರವಹಿಸಲು ಇಷ್ಟಪಡುವುದು ಅಭಿಪ್ರಾಯ ಸಂಗ್ರಹದಿಂದ ತಿಳಿದಿದೆ. ಪ್ರತಿಭಟನೆವುಳ್ಳ ವ್ಯಕ್ತಿಯಾದರೆ ದನದ ಪಾತ್ರವಹಿಸಲು ಇಷ್ಟಪಡುವುದೇ ಇಲ್ಲ.

ಕೋಟೆ ನಿರ್ಮಾಣ

ಬದಲಾಯಿಸಿ

ಆಡಲು ನಿರ್ಧರಿಸಿದ ಮೇಲೆ ಕೋಟೆ ಕಟ್ಟುವುದು ಅಥವಾ ಹುಲಿ-ದನದ ಆಯ್ಕೆಯ ನಂತರ ಕೋಟೆ ಕಟ್ಟಿ ಆಟ ಪ್ರಾರಂಭವಾಗುತ್ತದೆ. ಕೋಟೆಯ ನಿರ್ಮಾಣ ಯಾರೂ ನಿಂತು ಮಾಡಿಸುವುದಿಲ್ಲ. ಆಟಗಾರರೇ ಸಾಕಷ್ಟ ಚರ್ಚಿಸಿ ಅಥವಾ ಒಬ್ಬುರು ಇನ್ನೋಬ್ಬರಿಗೆ ಸಲಹೆ ಕೊಟ್ಟು ಕೋಟೆ ನಿರ್ಮಾಣ ಮಾಡುತ್ತಾರೆ. ಹುಲಿ ಮತ್ತು ದನ ಈ ಇಬ್ಬರು ಆಟಗಾರರನ್ನು ಬಿಟ್ಟು ಉಳಿದವರು ವರ್ತುಲಾಕಾರದಲ್ಲಿ ನಿಂತು ಪರಸ್ಪರ ಕೈ ಹಿಡಿದು ಕೋಟೆ ನಿರ್ಮಿಸುತ್ತಾರೆ. ಕೈಗಳನ್ನು ಹಿಡಿದ ಸ್ಥಳಗಳನ್ನು 'ಬಾಗಿಲು' ಎಂದು ಕರೆಯುತ್ತಾರೆ. ದುರ್ಬಲವಾಗಿರುವ ಬಾಗಿಲುಗಳಿದ್ದ ಕಡೆ ಪ್ರಬಲರನ್ನು ನಿಲ್ಲಿಸಿ ಬಾಗಿಲು ಪ್ರಬಲವಾಗುವಂತೆ ಮಾಡುತ್ತಾರೆ.

ಆಟದ ಪ್ರದರ್ಶನ

ಬದಲಾಯಿಸಿ

ಕೋಟೆ ಕಟ್ಟಿದ ಬಳಿಕ ಹುಲಿ-ದನದ ಆಯ್ಕೆ ನಡೆಯುತ್ತದೆ. ಕೆಲವು ಕಡೆ ಆಟಗಾರರು ತಮ್ಮ ತಮ್ಮಲ್ಲೇ ಮಾತಾಡಿಕೊಂಡು ಆಟ ಆಡಲು ತಂತ್ರ ರೂಪಿಸುತ್ತಾರೆ. ಆಟದ ಆರಂಭ ಕೆಲವು ಕಡೆ ಭಿನ್ನವಾಗಿರುತ್ತದೆ.

  • ಕಾರ್ಕಳದಲ್ಲಿ ಆಟ ಪ್ರಾರಂಭವಾಗುವುದು ದನ ಹುಲಿಯ ಕಾಲನ್ನು ಮೆಟ್ಟಿ ಓಡಬೇಕು. ಅಲ್ಲಿಯವರೆಗೆ ಹುಲಿ ಸುಮ್ಮನಿರುತ್ತದೆ. ದನ ಓಡಿ ಬಂದು ಕೋಟೆ ಒಳಗೆ ಸೇರಲು ಕೋಟೆಯ ಒಂದು ಬಾಗಿಲು ತೆರೆದಿರುತ್ತದೆ. ದನ ಒಳಗೆ ಬಂದ ಕೂಡಲೇ ಕೋಟೆ ಬಾಗಿಲು ಮುಚ್ಚಿರುತ್ತದೆ. ಈ ಕೋಟೆಯನ್ನು ನುಗ್ಗಲು ಹುಲಿ ಯತ್ನಿಸುತ್ತದೆ.
  • ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಪ್ರಶ್ನೋತ್ತರಗಳು ನಡೆಯುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೆ ಮಾತ್ರ ಹುಲಿ ಕೋಟೆಯ ಒಳಗೆ ನುಗ್ಗುತ್ತದೆ.
  1. ಹುಲಿಯ ಪ್ರಶ್ನೆ: ಎಂತಹ ಕೋಟೆ?
  2. ಕೋಟೆಯ ಉತ್ತರ: ಕಲ್ಲಿನ ಕೋಟೆ.
  3. ಹುಲಿಯ ಪ್ರಶ್ನೆ: ಎಂತಹ ಕೋಟೆ?
  4. ಕೋಟೆಯ ಉತ್ತರ: ಬೆಲ್ಲದ ಕೋಟೆ.
  5. ಹುಲಿಯ ಪ್ರಶ್ನೆ: ಎಂತಹ ಕೋಟೆ?
  6. ಕೋಟೆಯ ಉತ್ತರ: ಉಕ್ಕಿನ ಕೋಟೆ.
  7. ಹುಲಿಯ ಪ್ರಶ್ನೆ: ದನ ಬಂತೇ?
  8. ಕೋಟೆಯ ಪ್ರಶ್ನೆ: ಎಂತಹ ದನ?
  9. ಹುಲಿಯ ಉತ್ತರ: ಕಪ್ಪು ದನ.
  10. ಕೋಟೆಯ ಪ್ರಶ್ನೆ: ಎಂತಹ ದನ?
  11. ಹುಲಿಯ ಉತ್ತರ: ಕೆಂಪು ದನ.

ಹೀಗೆ ಪ್ರಶ್ನಾವಳಿಗಳು ನಡೆದು ಕೋಟೆ ದನ ಕೋಟೆಯೊಳಗಡೆ 'ಇದೆ' ಎಂದಾಗ ಹುಲಿ ಕೋಟೆಯೊಳಗೆ ನುಗ್ಗಲು ಪ್ರಯತ್ನಿಸುತ್ತದೆ.

  • ಉಡುಪಿ ಮತ್ತು ಕಾಸರಗೋಡಿನ ಪ್ರದರ್ಶನದಲ್ಲಿ ಹುಲಿ ಕೋಟೆಯನ್ನು ಪ್ರಶ್ನಿಸುತ್ತದೆ. 'ದನ ಬಂತೋ?' ಕೋಟೆ 'ಇಲ್ಲ' ಎಂದು ಉತ್ತರಿಸುತ್ತದೆ. ಇದೇ ರೀತಿ ಹಲವು ಬಾರಿ ಪ್ರಶ್ನೆಗಳು ನಡೆದು ಕೋಟೆ 'ಎಂತಹ ದನ?' ಎಂದಾಗ, ಹುಲಿ 'ಕಪ್ಪು ದನ' ಎಂದು ಉತ್ತರಿಸುತ್ತದೆ. ಈಗ ಕೋಟೆ 'ದನ ಬಂದಿದೆ' ಎಂದರೆ ಹುಲಿ ಕೋಟೆಯನ್ನು ನುಗ್ಗಲು ಪ್ರಯತ್ನಿಸಿದಾಗ ಆಟ ಪ್ರಾರಂಭವಾಗುತ್ತದೆ.
  • ಕೆಲವು ಕಡೆಗಳಲ್ಲಿ ಸಾಮಾನ್ಯ ರೀತಿಯಲ್ಲಿ ಆಟ 'ರೆಡಿಯೋ' ಎಂಬುದಾಗಿ ಪ್ರಶ್ನಿಸಿ ಆಟ ಪ್ರಾರಂಭವಾಗುತ್ತದೆ.

ಹುಲಿ, ದನ ಮತ್ತು ಕೋಟೆಯ ವರ್ತನೆ

ಬದಲಾಯಿಸಿ
  • ಸಾಮಾನ್ಯ ವರ್ತನೆ - ಹುಲಿಯನ್ನು ಕೋಟೆಯ ಒಳಗಡೆ ಯಾರಾದರೂ ಸುಮ್ಮನೆ ಬಿಟ್ಟರೆ ಎಲ್ಲರೂ ವಿರೋಧಿಸುತ್ತಾರೆ. ಹುಲಿ ಸುಲಭವಾಗಿ ಕೋಟೆ ಪ್ರವೇಶಿಸುವ ಜಾಗ ಸಡಿಲವಾಗಿದ್ದರೆ ಎಲ್ಲರೂ ಎಚ್ಚರಿಸಬೇಕು. ದನ ಓಡಲು ಎಲ್ಲರೂ ಪ್ರೋತ್ಸಾಹ ನೀಡಬೇಕು. ಹುಲಿ-ದನ ಕೋಟೆಯ ವೃತ್ತಕ್ಕೆ ಸಮಾನಾಂತರವಾಗಿ ಓಡಬೇಕು. ಇವೆಲ್ಲವೂ ಸಾಮಾನ್ಯ ವರ್ತನೆಗಳು.
  • ಭಿನ್ನ ವರ್ತನೆಗಳು - ಉಡುಪಿ ತಾಲೂಕಿನಲ್ಲಿ ಹುಲಿ ಹುಲಿಯ ರೀತಿಯಲ್ಲಿ ಸನ್ನೆ ಮಾಡಿಕೊಂಡು ಗರ್ಜಿಸುತ್ತಾ ಕಣ್ಣಾಡಿಸುತ್ತಾ ಓಡಿ ಬರುತ್ತಾರೆ. ಮಂಗಳೂರು ತಾಲೂಕಿನಲ್ಲಿ ಹೆಚ್ಚಾಗಿ ಹುಡುಗಿಯರು ಹುಲಿಯಾಗುವುದಿಲ್ಲ.

ಆಟದ ಮುಕ್ತಾಯ

ಬದಲಾಯಿಸಿ

ಈ ಆಟದಲ್ಲಿ ಕಾಲದ ಮಿತಿಯಿಲ್ಲ.

  • ಹುಲಿ ದನವನ್ನು ಹಿಡಿಯಬೇಕು.
  • ಹುಲಿ ತನ್ನ ಸೋಲನ್ನು ಒಪ್ಪಬೇಕು.
  • ಹುಲಿಯಾದ ಆಟಗಾರನು ಸೋತದ್ದನ್ನು ಇತರರು ಗುರುತಿಸಬೇಕು.
  • ಆಟ ತುಂಬಾ ಹೊತ್ತು ಸಾಗಿದಾಗ ಎಲ್ಲರೂ ಆಕ್ಷೇಪಿಸಿದಾಗ ಹುಲಿಯಾದ ಆಟಗಾರನು ಸೋಲುತ್ತಾನೆ.
  • ದನ ಬಸವಳಿದೂ ಹುಲಿಗೆ ಸಿಕ್ಕಿದಾಗ ಆಟ ಮುಂದುವರಿಯಲೂ ಬಹುದು.

ಈ ಆಟದಲ್ಲಿ ಗೆದ್ದವರಿಗೆ ಪುರಸ್ಕಾರವಾಗಲಿ, ಸೋತವರಿಗೆ ಶಿಕ್ಷೆಯಾಗಲಿ ಇರುವುದಿಲ್ಲ. ಹುಲಿ-ದನದ ಆಟ ಸ್ಪರ್ಧಾತ್ಮಕವಾದ ಮನೋರಂಜನೆಯ ಆಟ. ಆದರೆ ಪರೋಕ್ಷವಾಗಿ, ವೈಯಕ್ತಿಕವಾಗಿ ಹಿಯಾಳಿಸುತ್ತಾರೆ. ಹುಲಿಯಾದವ ದೊಡ್ಡ ಜೀವದವನಾದರೆ 'ಉಂದು ಮಲ್ಲ ಪಿಲಿ' (ಇದು ದೊಡ್ಡ ಹುಲಿ), 'ಪಿಲಿಕ್ ಮರ್ಲ್' (ಹುಲಿಗೆ ಹುಚ್ಚು), 'ಕಾಡ್ ಡು ಉಪ್ಪುನಾಯಗ್ ಊರು ದಾಯೆ?' (ಕಾಡಲ್ಲಿ ಇರುವವನಿಗೆ ಊರು ಯಾಕೆ?), 'ಪೆತ್ತನ್ ಪಿಲಿ ಪತ್ತ್ಂಡ್' (ದನವನ್ನು ಹುಲಿ ಹಿಡಿಯಿತು), ದನ ಸುಲಭದಲ್ಲಿ ಸಿಕ್ಕಿದಾಗ ' ಈ ಪೆತ್ತ ಪ್ರಯೋಜನ ಇಜ್ಜಿ' ( ಈ ದನ ಪ್ರಯೋಜನವಿಲ್ಲ), ಹುಲಿ ವೇಗವಾಗಿ ಓಡದಿದ್ದಾಗ 'ಉಂದು ದಬ್ಬೆಪಿಲಿ' (ಇದು ಮುದುಕ ಹುಲಿ), 'ಮರ್ಲ್ ಪಿಲಿ' (ಹುಚ್ಚು ಹುಲಿ) ಎಂದೆಲ್ಲಾ ಉದ್ಗರಿಸುತ್ತಾರೆ.

ಉಲ್ಲೇಖ

ಬದಲಾಯಿಸಿ

ತುಳುನಾಡಿನ ಜನಪದ ಆಟಗಳು, ಡಾ. ಗಣನಾಥ ಎಕ್ಕಾರು, ಜ್ಞಾನೋದಯ ಪ್ರಕಾಶನ, ಬೆಂಗಳೂರು, ೨೦೦೦, ಪುಟ(೮೨-೯೫)