ಸದಸ್ಯ:K.Somashekhar/ನನ್ನ ಪ್ರಯೋಗಪುಟ

ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿ : ತಾಲ್ಲೂಕಿನ ರಾಜವಾಳ, ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಈ ಭಾಗದ ರೈತರ ಜೀವನಾಡಿಯಾಗಿದೆ. 3.12 ಟಿ.ಎಂ.ಸಿ. ಸಂಗ್ರಹಣಾ ಸಾಮರ್ಥ್ಯದ ಈ ಕಿರು ಜಲಾಶಯದಿಂದ ಹೂವಿನಹಡಗಲಿ, ಮುಂಡರಗಿ, ಕೊಪ್ಪಳ, ಯಲಬುರ್ಗ ತಾಲ್ಲೂಕುಗಳು ನೀರಾವರಿ ಅಚ್ಚುಕಟ್ಟಿಗೆ ಒಳಪಟ್ಟಿವೆ. ಬಲದಂಡೆಯ ಹೂವಿನಹಡಗಲಿ ತಾಲ್ಲೂಕಿನ 35,791 ಎಕರೆ ಕಾಲುವೆ ನೀರಾವರಿಗೆ ಒಳಪಟ್ಟಿದೆ. ಎಡ ದಂಡೆಯ ಮುಂಡರಗಿ, ಗದಗ, ಕೊಪ್ಪಳ ಯಲಬುರ್ಗ ತಾಲ್ಲೂಕುಗಳ 2.65 ಲಕ್ಷ ಎಕರೆಗೆ ಸೂಕ್ಷ್ಮ ನೀರಾವರಿಗೆ ಒಳಪಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಯು ನೀರಾವರಿ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೂ ಸಹಕಾರಿಯಾಗಿದೆ. 1992ರಲ್ಲಿ ಮಂಜೂರಾಗಿದ್ದ ಈ ನೀರಾವರಿ ಯೋಜನೆ ಅಧಿಕೃತ ಚಾಲನೆಗೊಂಡಿದ್ದು 1997ರಲ್ಲಿ. ಮೊದಲು 7.64 ಟಿಎಂಸಿ ನೀರು ಬಳಸಿಕೊಂಡು ಎಡ ಬಲ ದಂಡೆಯ 40 ಸಾವಿರ ಎಕರೆಗೆ ಮಾತ್ರ ನೀರುಣಿಸುವ 63.62 ಕೋಟಿ ವೆಚ್ಚದ ಯೋಜನೆ ಸಿದ್ದವಾಗಿತ್ತು. ನಂತರ ಹಲವು ಬಾರಿ ಯೋಜನೆ ಪರಿಷ್ಕಾರಗೊಂಡು ಸದ್ಯ 18.55 ಟಿಎಂಸಿ ನೀರಿನ ಬಳಕೆಯೊಂದಿಗೆ 2.65 ಲಕ್ಷ ಎಕರೆಗೆ ನೀರುಣಿಸಲು 5,768 ಕೋಟಿ ರೂ. ವೆಚ್ಚದ ಯೋಜನೆ ಕಾರ್ಯಗತಗೊಂಡಿದೆ. ಈ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್, ಮಾಜಿ ಸಚಿವ ದಿ. ಈಟಿ ಶಂಭುನಾಥ, ಈಗಿನ ಸಚಿವ ಎಚ್.ಕೆ.ಪಾಟೀಲ್, ಮಾಜಿ ಸಚಿವ ಎಸ್.ಎಸ್.ಪಾಟೀಲ್, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಂದ್ರನಾಯ್ಕ ಶ್ರಮಿಸಿದ್ದಾರೆ.