ಸದಸ್ಯ:Jovin dsouza/sandbox
ಬುಡಕಟ್ಟು ಜನಾಂಗದ ಬವಣೆಗಳು
ಸ್ವಾತಂತ್ರ್ಯ ಲಭಿಸಿ ಆರೂವರೆ ದಶಕಗಳ ನಂತರವೂ ಯಾವ ಪಕ್ಷಗಳಾಗಲಿ, ಸರಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಅಥವಾ ಯೋಜನೆಗಳನ್ನು ರೂಪಿಸಿದ್ದನ್ನು ನಾವು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದೆ ಹೋಗಿದ್ದರೆ, ಈ ನತದೃಷ್ಟರು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದರು ಎಂಬುದು ನಾವು ಅರಗಿಸಿಕೊಳ್ಳಲೇ ಬೇಕಾಗಿರುವ ಸತ್ಯ. ಸಮಾಧಾನದ ಸಂಗತಿಯೆಂದರೆ, ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವೃವಾಗುತ್ತಿದ್ದಂತೆ ಕೇಂದ್ರ ಸರಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.
೨೦೦೩ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರಕಾರ, ನಕ್ಸಲರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ದಿಯಲ್ಲಿನ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರಕಾರ ಗ್ರಹಿಸಿದೆ. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ೨೦೦೭ರಲ್ಲಿ ಹತ್ತು ರಾಜ್ಯಗಳ ೧೮೦ ಜೆಲ್ಲೆಗಳನ್ನು ನಕ್ಸಲ್ ಪೀಡಿತ ಜೆಲ್ಲೆಗಳೆಂದು ಗುರುತಿಸಲಾಗಿತ್ತು. ೨೦೧೨ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ೨೦೧೨ರ ವೇಳೆಗೆ ದೇಶಾದ್ಯಂತ ೬೦ ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಮ್ದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್ ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.
ಉದ್ಛವಿಸುವ ಸಮಸ್ಯೆಗಳಿಗೆ ಬಂದೂಕು ಮಾತ್ರ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವ ಸಂಭವ ತೀರಾ ಕಡಿಮೆ. ನಕ್ಸಲ್ ಚಳವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳದಂತೆ ತಡೆಯಬೇಕು, ಇದಕ್ಕಿರುವ ಏಕೈಕ ಪರಿಹಾರವೆಂದರೆ, ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ "ಜಲ್, ಜಂಗಲ, ಜಮೀನ್" ಎಂಬ ಬೇಡಿಕೆಗಳನ್ನು ಈಡೇರಿಸುವುದು.