"ಸಮುದ್ರ ಜೀವಿಗಳು"

ಎಲೆಯಾಕೃತಿಯ ಸಮುದ್ರ ಡ್ರಾಗನ್ ಸಮುದ್ರ ಕುದುರೆಗಳಂತೆಯೇ ಸಿನದಿಡೀ/ಸಿನದಿಡೈ (Syngnathidae) ಕುಟುಂಬಕ್ಕೆ ಸೇರುವ ಸಮುದ್ರ ಡ್ರಾಗನ್ ಗಳು ಬಹಳ ಅಚ್ಚರಿಯ ಜೀವಿಗಳು. ಚೈನಾದ ಪುರಾಣಗಳಲ್ಲಿ ಕೇಳಿಬರುವ ಡ್ರಾಗನ್ ಗಳನ್ನು ಆಕೃತಿಯಲ್ಲಿ ಹೋಲುವುದರಿಂದ ಇವುಗಳನ್ನು ಡ್ರಾಗನ್ ಎಂದು ಕರೆಯಲಾಗಿದೆಯೇ ಹೊರತು ಇವು ಮಹಾನ್ ಸಾಧು ಜೀವಿಗಳು. ಶತ್ರುವಿನಿಂದ ರಕ್ಷಣೆಗೆ ಸಮುದ್ರದಾಳದ ಪಾಚಿ, ಗಿಡ, ಕಲ್ಲುಗಳ ಸಂದಿಯಲ್ಲಿ ಮೈಮರೆಸಿ ಅಡಗಿಕೊಳ್ಳಲು ಅನುಕೂಲವಾಗುವಂತೆ ಅವುಗಳನ್ನೇ ಹೋಲುವಂತೆ ನಿಸರ್ಗದಿಂದ ಅನೇಕ ಬಗೆಯ ಅಪೂರ್ವ ಆಕಾರ-ಬಣ್ಣಗಳನ್ನು ಪಡೆದಿರುವ ಈ ಸಮುದ್ರ ಡ್ರಾಗನ್ ಗಳಲ್ಲಿ, ಎಲೆಯನ್ನು-ಎಳೇ ಬಳ್ಳಿಯನ್ನು ಹೋಲುವ ಈ ಬಗೆ ಅತ್ಯಂತ ಸುಂದರ. ತನ್ನ ಕತ್ತಿನ ಪಕ್ಕವಿರುವ ಮತ್ತು ಬಾಲದ ತುಟ್ಟ ತುದಿಯಲ್ಲಿರುವ ಪಾರದರ್ಶಕ ಕಿವಿರುಗಳ ಸಹಾಯದಿಂದ ಹರಿದಾಡುವ/ಈಜಾಡುವ ಈ ಸಮುದ್ರ ಡ್ರಾಗನ್ ಗಳು ಆಸ್ಟ್ರೇಲಿಯಾ ಖಂಡದ ದಕ್ಷಿಣ ಮತ್ತು ಪಶ್ಚಿಮ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಣ್ಣ ಲಾರ್ವಾ ಮೀನು, ’ಸಮುದ್ರ ಹೇನು’, ಸಣ್ಣಾತಿಸಣ್ಣ ಸೀಗಡಿಗಳಂತಹ ಸಮುದ್ರ ಜೀವಿಗಳನ್ನು ತಿಂದು ಬದುಕುವ ಈ ಬಗೆಯ ಸಮುದ್ರ ಡ್ರಾಗನ್ಗಳಲ್ಲಿ, ಹೆಣ್ಣು ಡ್ರಾಗನ್ ಗಂಡು ಡ್ರಾಗನ್ ನ ಬಾಲದ ಒಳ ಪರದೆಯೊಳಗೆ ಸರಾಸರಿ ೨೫೦ ಮೊಟ್ಟೆಗಳನ್ನು ಇಡುತ್ತದೆ

ಸಮುದ್ರ ಲೋಕದ ಅಚ್ಚರಿಯ ಆದಿವಾಸಿ ಜೆಲ್ಲಿ ಫಿಶ್. ಸಮುದ್ರಗಳ ತುಂಬೆಲ್ಲಾ ಬಣ್ಣ ಬಣ್ಣದ ಹೂ ಹಿಂಡುಗಳಂತೆ ತುಂಬಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಬಗೆಯ ಜೆಲ್ಲಿ ಫಿಶ್ ಗಳು ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಪುರಾತನ ಜೀವಿಗಳಲ್ಲಿ ಒಂದು. ಡೈನೋಸಾರ್ಗಳಿಗಿಂತಲೂ ಮೊದಲೇ ಭೂಮಿಯನ್ನು ವಾಸಸ್ಥಾನ ಮಾಡಿಕೊಂಡ ಜೆಲ್ಲಿ ಫಿಶ್ ಗಳು ಭೂಮಿಯ ಮೇಲೆ ೬೫೦ ಮಿಲಿಯನ್ ವರ್ಷಗಳಿಂದಲೂ ಇವೆ! ನಿರ್ಜೀವವಾದಾಗ ಇವು ಆಕಾರವೇ ಇಲ್ಲದ ಜೆಲ್ಲಿ ಮುದ್ದೆಗಳಂತೆ ಕಾಣುತ್ತವಾದರೂ ನೀರಿನಲ್ಲಿ ಇವುಗಳ ಓಲಾಟ-ತೇಲಾಟ ಅತ್ಯಂತ ಲಾಲಿತ್ಯದಿಂದ ಕೂಡಿರುತ್ತದೆ. ಜೆಲ್ಲಿ ಫಿಶ್ ನ ದೇಹದ ಭಾಗ ಎಲ್ಲಕಡೆಯಿಂದಲೂ ಸಿಮೆಟ್ರಿಕಲ್ ಆಗಿದೆ. ಹೀಗಾಗಿಯೇ ಅದು ಯಾವ ದಿಕ್ಕಿಗೂ ಸರಾಗವಾಗಿ ತಿರುಗಬಲ್ಲದು. ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳಬಲ್ಲದು. ಜೆಲ್ಲಿ ಫಿಶ್ ಗಳ ದೇಹದಲ್ಲಿ ನರವ್ಯೂಹವೊಂದು ಮಾತ್ರ ಇರುತ್ತದೆ, ಈ ಅಚ್ಚರಿಯ ಜೀವಿಗೆ ಹೃದಯ, ಮೆದುಳು ಅಥವಾ ಎಲುಬುಗಳಿರುವುದಿಲ್ಲ.