ಸರ್ವಜ್ಞ: ಸರ್ವಜ್ಞ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ. ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲ ಮತ್ತು ಜೀವನಗಳ ಬಗ್ಗೆ ನಿಖರವಾಗಿ ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.

ಜನನ ಮತ್ತು ಬಾಲ್ಯ : ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.

ತ್ರಿಪದಿಗಳು ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿ ವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.