ಕಂಬಳ

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.

ಹಿನ್ನಲೆ ಕಂಬಳದ ಓಟ

ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರಿಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದಿಶ್ಯ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆವವೂ ಹೌದು. ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಛಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯುತ್ತದೆ. ಇದನ್ನು ನೋಡಿದರೆ ಕೃಷಿಕರಿಗೆ ಮನರಂಜನೆ ಒದಗಿಸುವ ಸಾಧನವಾಗಿಯೂ ಕಂಬಳ ಕಾಣುತ್ತದೆ. ಕರಾವಳಿಯಲ್ಲಿ ಯಕ್ಷಗಾನ ಬಯಲಾಟಗಳು ಹೆಚ್ಚಾಗಿ ನಡೆಯುವುದೂ ಇದೇ ಸಮಯದಲ್ಲಿ. ಕಂಬಳದ ಕೋಣಗಳನ್ನು ಸಾಕುವುದೂ, ಸ್ಪರ್ಧಿಸುವುದೂ, ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೂ ಹೌದು.

ಕಂಬಳದ ಕೋಣ ಕಂಬಳದಲ್ಲಿ ಗೆದ್ದ ಕೋಣಗಳ ಜೋಡಿ

ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ. ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಅದರ ಚೆನ್ನಾದ ಆರೈಕೆ ಮಾಡಿ, ಕಂಬಳಕ್ಕೆ ತಯಾರಿ ಮಾಡುವುದರೊಂದಿಗೆ, ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ ಹೌದು, ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು. ಪ್ರತಿ ದಿನವೂ ಅವುಗಳಿಗೆ ಚೆನ್ನಾದ ಹುಲ್ಲು, ಬೇಯಿಸಿದ ಹುರುಳಿ ತಿನ್ನಿಸಲಾಗುತ್ತದೆ. ಅಂತೆಯೇ ಎಣ್ಣೆ ಹಚ್ಚಿ ಆರೈಕೆ ಮಾಡಲಾಗುತ್ತದೆ. ಕಂಬಳದ ಓಟಕ್ಕೆ ತಯಾರಿಯೂ ಮುಖ್ಯ. ಜೊತೆಯ ಕೋಣದೊಂದಿಗೆ ಸಮನಾಗಿ ಕೆಸರು ಗದ್ದೆಯಲ್ಲಿ ಗಲಾಟೆ ಗೌಜುಗಳ ಮಧ್ಯೆ ಓಡುವ ತರಬೇತಿಯನ್ನು ಈ ಕೋಣಗಳಿಗೆ ನೀಡಲಾಗುತ್ತದೆ. ಕಂಬಳದ ಓಟಕ್ಕೆ ಯೋಗ್ಯವೆಂದು ತೋರಿದ ಕೋಣಗಳ ಖರೀದಿ-ಮಾರಾಟ ಲಕ್ಷಗಟ್ಟಲೆ ರೂಪಾಯಿಗಳಲ್ಲಿ ನಡೆಯುತ್ತದೆ. ಅದೇ ರೀತಿ ಕೋಣಗಳ ಆರೈಕೆಯೂ ಬಹಳ ಮುತುವರ್ಜಿಯಿಂದ, ಕಾಳಜಿಯಿಂದ ನಡೆಯುತ್ತ.