ಸದಸ್ಯ:Dr Mallikarjun B Manpade/ನನ್ನ ಪ್ರಯೋಗಪುಟ
ಪ್ರವೇಶ
ಬದಲಾಯಿಸಿಕರ್ನಾಟಕದಲ್ಲಿ ಹಂಡಿ ಜೋಗಿಸ್ ಮತ್ತು ಹಂದಿಜೋಗಿಸ್‌ಗಳೆಂದು ಗುರುತಿಸಿಕೊಂಡಿರುವ ಎರಡು ಪ್ರತ್ಯೇಕವಾದ (ಗುಂಪುಗಳಿವೆ)ಸಮುದಾಯಗಳಿವೆ. ಇಂಗ್ಲೀಷನ Handi Jogis ಪದವೇ ಕೆಲವರು ಹಂದಿಜೋಗಿಸ್ ಅಂತ ವಾದ ಮಾಡಿದರೆ ಇನ್ನೊಂದು ಗುಂಪು ಹಂಡಿಜೋಗಿಸ್ ಅಂತ ವಾದ ಮುಂದಿಡುತ್ತದೆ.
ಹಂದಿಜೋಗಿಸ್
ಬದಲಾಯಿಸಿ#ಹಂದಿಜೋಗಿಸ್ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಮುದಾಯದ ಮನೆ ಮಾತು ತೆಲುಗು ಆಗಿದ್ದು, ಇವರು ಆಂದ್ರಪ್ರದೇಶದಿಂದ ವಲಸೆ ಬಂದವರೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ೧೯೦೧ರ ಮದ್ರಾಸ ರಿಪೋರ್ಟನಲ್ಲಿ ಹಂದಿ ಜೋಗಿಗಳು ತೆಲುಗು ಭಿಕ್ಷುಕರೆಂದು ನಮೂದಿಸಲಾಗಿದೆ. ಹಂದಿಜೋಗಿಸ್ ಸಮುದಾಯವು ಪಾರಂಪರಿಕವಾಗಿ ಹಂದಿಸಾಕಣಿಕೆಯಲ್ಲಿ ತೊಡಗಿಸಿಕೊಂಡಿದೆ.
ಪರ್ಯಾಯ ಪದಗಳು
ಬದಲಾಯಿಸಿಸ್ಥಳೀಯವಾಗಿ ಇವರಿಗೆ ಹಂದಿ ಗೊಲ್ಲರು, ಹಾವಿನ ಗೊಲ್ಲರು, ಎಮ್ಮೆ ಗೊಲ್ಲರು, ಹಟ್ಟಿ ಗೊಲ್ಲರು, ಮತ್ತು ದನದ ಗೊಲ್ಲರು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ಹಂದಿ ಜೋಗಿ ಸಮುದಾಯದ ಮುಖಂಡರಾದ ಎಂ.ವಿ ಗೋವಿಂದರಾಜ್ ಅವರು ಹಂದಿ ಚಿಕ್ಕ ಮತ್ತು ಹಂದಿ ಗೊಲ್ಲರು ಮಾತ್ರ ತಮ್ಮ ಸಮುದಾಯದ ಪರ್ಯಾಯ ಪದಗಳಾಗಿವೆ ಎನ್ನುತ್ತಾರೆ. ನೆರೆಯ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಇವರನ್ನು ಪಂದಿ ಜೋಗುಲು, ಹಂದಿ ಚಿಕ್ಕರು ಮತ್ತು ಹಂದಿ ಗೊಲ್ಲರು ಎಂದು ಕರೆಯಲಾಗುತ್ತದೆ. ಎಡ್ಗರ್ ಥರ್ಸ್ಟನ್ ಮತ್ತು ರಂಗಚಾರಿ ಅವರ ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು ಸಂಪುಟ-೨ರಲ್ಲಿ ಹಂದಿಚಿಕ್ಕ ಸಮುದಾಯವನ್ನೇ ಹಂದಿಜೋಗಿಗಳೆಂದೂ ಕೂಡ ಕರೆಯಲಾಗುತ್ತದೆ ಎಂದಿದ್ದಾರೆ. ಈ ಜಾತಿಯು ಜೋಗಿಗಳ ಪಕನಾಟಿ ಉಪವಿಭಾಗವನ್ನು ಹೋಲುತ್ತದೆ. ಈ ಹೆಸರಿಗೆ ಐದು ತಲೆಮಾರುಗಳ ಹಿಂದೆ ಇವರನ್ನು ಎಮ್ಮೆ ತಳಿಗಾರರು ಎನ್ನುವ ಸಾಂಪ್ರದಾಯಿಕ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಇವರುಗಳು ಹಂದಿ ಸಾಕಾಣಿಕೆಗೆ ಹೆಚ್ಚಿನ ಒಲವು ತೋರುವುದಕ್ಕೆ ಆರಂಭಿಸಿದಾಗ, ಇವರನ್ನು ಹಂದಿ ಜೋಗಿಗಳು ಅಥವಾ ಹಂದಿ ಚಿಕ್ಕಗಳು ಎಂದು ಕರೆಯಲಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ ಕೆ ಎ ಐಯ್ಯರ್‌ರವರು ದ ಮೈಸೂರ್ ಟ್ರೈಬ್ಸ್ ಅಂಡ್ ಕಾಸ್ಟ್ (೧೯೦೫) ಕೃತಿಯಲ್ಲಿ ಜೋಗಿಗಳು ತೆಲುಗು ಭಿಕ್ಷುಕ ವರ್ಗಕ್ಕೆ ಸೇರಿದವರು. ಇದರಲ್ಲಿ ಮೊಂಡರು, ಜೋಗಿ, ಗೊರವ ಮುಂತಾದವರು ಸೇರಿದ್ದಾರೆ. ಹಂಡಿ ಅಥವಾ ಪಾಕಂಡಿ ಜೋಗಿಗಳು ಮೇಲೆ ತಿಳಿಸಿದ ಸಮುದಾಯಕ್ಕಿಂತ ಭಿನ್ನವಾದುದು ಎಂದು ತಿಳಿಸುತ್ತಾರೆ. ಹಂದಿ ಜೋಗಿಗಳನ್ನು ತೆಲುಗಿನಲ್ಲಿ ಪಂದಿಜೋಗಲು ಮುಂತಾಗಿ ಕರೆಯುವುದಾಗಿ ತಿಳಿಸಿದ್ದಾರೆ.
ಕೆ ಎಸ್ ಸಿಂಗ್ ಅವರು ಪೀಪಲ್ಸ್ ಆಫ್ ಇಂಡಿಯಾದಲ್ಲಿ ಹಂದಿಜೋಗಿಗಳ ಕುರಿತು ವಿವರಿಸುತ್ತ ಇವರು ಕರ್ನಾಟಕದಲ್ಲಿ ಹಂದಿಚಿಕ್ಕ, ಹಂದಿಗೊಲ್ಲ ಎಂದು ಕರೆಯುತ್ತಾರೆ, ಆಂಧ್ರದಿಂದ ವಲಸೆಬಂದ ಸಮುದಾಯ ಇದಾಗಿದೆ ಎಂದು ತಿಳಿಸುತ್ತಾರೆ.
ಹಂಡಿಜೋಗಿಸ್
ಬದಲಾಯಿಸಿಹಂಡಿಜೋಗಿಸ್ ಸಮುದಾಯದವರ ಮನೆಮಾತು ಮರಾಠಿಯಾಗಿದ್ದು ಮಹಾರಾಷ್ಟ್ರದಿಂದ ವಲಸೆ ಬಂದಿರುವ ಕುರಿತು ಮಾಹಿತಿಗಳು ದೊರೆಯುತ್ತವೆ. ಮೂಲತಃ ಧರ್ಮ ಪ್ರಚಾರಕ್ಕಾಗಿ ಉತ್ತರ ಭಾರತದ ಕಡೆಯಿಂದ ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೆ ವಲಸೆ ಬಂದಿರುವ ಸಾಧ್ಯತೆಯೂ ಇದೆ. ಇವರನ್ನು ಕೆಲವು ಕಡೆ ಡಬ್ಬ ಜೋಗಿ, ನರಸಣ್ಣ ಜೋಗಿ, ಬಳೆಗಾರ ಜೋಗಿ, ರಾವಳಜೋಗಿ, ಶಿವಜೋಗಿ, ಜೋಗಿಪುರುಷ ಎಂದು ಕರೆಯಲಾಗುತ್ತದೆ.
ಎಡ್ಗರ್ ಥರ್ಸ್ಟನ್‌ರವರ ಮ್ಯಾನ್ಯುಯಲ್ ಆಫ್ ಸೌತ್ ಕೆನರ(೧೯೦೫)ದಲ್ಲಿ ಜೋಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಮಾತನಾಡುವ ಜೋಗಿ ಪುರುಷ ಮತ್ತು ಮರಾಠಿ ಭಾಷೆ ಮಾತನಾಡುವ ಜೋಗಿ ಪುರುಷರು ವಾಸವಾಗಿರುವ ಬಗ್ಗೆ ಉಲ್ಲೇಖ ಇದೆ. ಮಾರಾಠಿ ಭಾಷೆ ಮಾತನಾಡುವ ಜೋಗಿ ಪುರುಷರೇ ನರಸಣ್ಣ ಜೋಗಿಗಳು. ಇದರಲ್ಲಿ ಕಿನ್ನರಿ ಹಿಡಿದುಕೊಂಡಿರುವ ಸಾಂಪ್ರದಾಯಿಕ ವೇಷಭೂಷಣದ ಭಾವಚಿತ್ರವನ್ನು ಕೂಡಾ ಕಾಣಬಹುದಾಗಿದೆ. ಈಗಲೂ ಹಂಡಿ ಜೋಗಿ, ನರಸಣ್ಣ ಜೋಗಿಗಳಲ್ಲಿ ಇದೇ ರೀತಿಯ ವೇಷಭೂಷಣಗಳನ್ನು ಕಾಣಬಹುದಾಗಿದೆ.
ಹಿನ್ನೆಲೆ
ಬದಲಾಯಿಸಿಹಂಡಿ ಹಾಗೂ ಜೋಗಿ ಎಂಬ ಎರಡು ಪದಗಳಿಂದ ಹಂಡಿ ಜೋಗಿ ಪದ ಬಳಕೆಗೆ ಬಂದಿದೆ. ಭಿಕ್ಷಾಟನೆಗಾಗಿ ಕೈಯಲ್ಲಿ ಹಿಡಿದುಕೊಳ್ಳುವ ಕುಂಬಳಕಾಯಿ ಅಥವಾ ಸೋರೆಕಾಯಿಯಿಂದ ಮಾಡಿದ ಒಂದು ರೀತಿಯ ಪಾತ್ರೆಗೆ ಹಂಡಿ ಎಂಬುದಾಗಿ ಕರೆಯುತ್ತಾರೆ. ಜೋಗಿ ಎಂಬ ಪದವು ಯೋಗಿ ಪದದಿಂದ ಬಂದಿದೆ. ಅಂದರೆ ಇಲ್ಲಿ ಸೋರೆಕಾಯಿ ಹಿಡಿದುಕೊಂಡಿರುವ ಯೋಗಿ ಎಂಬರ್ಥವನ್ನು ಹಂಡಿಜೋಗಿ ಪದ ಸೂಚಿಸುತ್ತದೆ. ಪ್ರಾರಂಭದಲ್ಲಿ ಜೋಗಿಗಳು ಒಂದು ಪ್ರತ್ಯೇಕ ಜಾತಿಯಾಗಿರಲಿಲ್ಲ. ನಾಥ ಸಿದ್ದ ಪರಂಪರೆಗೆ ಸೇರಿದುದಾಗಿತ್ತು. ತರುವಾಯ ಅದು ಜಾತಿ ಸ್ವರೂಪವನ್ನು ಪಡೆದುಕೊಂಡಿತು. ನಾಥ ಪರಂಪರೆಯಿಂದಾಗಿಯೇ ಹಂಡಿಜೋಗಿ ಎಂಬುದಾಗಿ ಹೆಸರು ಬಂದಿದೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಹಂದಿ ಎನ್ನುವ ಪದದಿಂದ ಹಂಡಿ ಬಂದಿರಬಹುದು ಎಂದೂ ಸಹ ಕೆಲವು ವಿದ್ವಾಂಸರು ಅಭಿಪ್ರಾಯವನ್ನು ಪಡುತ್ತಾರೆ. ಆದರೆ ಹಂದಿಯಿಂದ ಹಂಡಿಜೋಗಿ ಪದ ಬಂದಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತೇನೋ ಎನ್ನಿಸುತ್ತದೆ.
ನಾಥಪಂಥದ ಆರಾಧಕರು
ಬದಲಾಯಿಸಿಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆ ರಾಮನಗರದಲ್ಲಿರುವ ಹಂಡಿ ಬಡಿಗನಾಥ ಮಠ ತಮ್ಮ ಮೂಲ ಮಠವೆಂದು ಹೇಳುತ್ತಾರೆ. ಆನಂತರ ಚಿತ್ರದುರ್ಗದ ಮೊಳಕಾಲ್ಮುರು ಹತ್ತಿರದ ನುಂಕೆಮಲೆ ಮಠ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಜೋಗಿ ಮಠವೂ ಕೂಡ ಮಾರಾಠಿ ಜೋಗಿಗಳಿಗೆ ಮೂಲಸ್ಥಾನ ಎಂದು ತಿಳಿಸುತ್ತಾರೆ.
ಆರ್ಥಿಕ ಜೀವನ
ಬದಲಾಯಿಸಿಮೂಲತಃ ಅಲೆಮಾರಿಗಳಾದ ಹಂಡಿ ಜೋಗಿಗಳು ತಮ್ಮ ಅಲೆಮಾರಿತನವನ್ನು ತ್ಯಜಿಸಿ ಒಂದೇ ಕಡೆ ನೆಲೆ ನಿಲ್ಲುತ್ತಿದ್ದಾರೆ. ಜೀವನೋಪಾಯಕ್ಕಾಗಿ ತಾವು ನೆಲೆಸಿದ ಊರಿನ ಸುತ್ತಮುತ್ತ ಬೀಗಗಳ ರಿಪೇರಿ, ಮೊಡಕು ಸಮಾನುಗಳ ವ್ಯಾಪಾರ ಮಾಡುವುದಕ್ಕಾಗಿ ತಾತ್ಕಾಲಿಕವಾಗಿ ವಲಸೆ ಹೋಗುತ್ತಾರೆ. ಕೆಲವರು ಕಿನ್ನೂರಿ ನುಡಿಸುತ್ತ ಧಾರ್ಮಿಕ ಭಿಕ್ಷಾಟನೆ ಮಾಡುವರು. ಧಾರ್ಮಿಕ ಭಿಕ್ಷಾಟನೆ ಮಾಡುವವರು ನಾಡಿನ ಉದ್ದಗಲಕ್ಕೂ ಅಲೆಮಾರಿಗಳಾಗಿ ಸಂಚರಿಸುವುದನ್ನು ಈಗಲೂ ಈ ಸಮುದಾಯದಲ್ಲಿ ಕಾಣಬಹುದು. ಸಾಮಾನ್ಯವಾಗಿ ಊರಿನ ಹೊರಭಾಗಗಳಲ್ಲಿರುವ ದೇವಾಲಯಗಳು, ಶಾಲೆಯ ಬಯಲು ಮುಂತಾದ ಕಡೆ ವಲಸೆ ಹೋದಾಗ ನೆಲೆಸುವರು.
ಜನಸಂಖ್ಯೆ
ಬದಲಾಯಿಸಿಜನಸಂಖ್ಯೆ : ೨೦೧೧ರ ಜನಗಣತಿಯ ಪ್ರಕಾರ ಇವರ ಹಂದಿ/ಹಂಡಿಜೋಗಿಸ್‌ರ ಒಟ್ಟು ಜನಸಂಖ್ಯೆ ೨೨೬೭೫, ಪುರುಷರು ೧೧೪೨೯ಜನ ಮತ್ತು ಮಹಿಳೆಯರು ೧೧೨೪೬ ಜನಸಂಖ್ಯೆಯನ್ನು ದಾಖಲಿಸಲಾಗಿದೆ. ೨೦೧೧ರಲ್ಲಿ ೬೪೯೩ ಪುರುಷರು ಮತ್ತು ೪೯೩೧ ಮಹಿಳೆಯರು ಸಾಕ್ಷರಾಗಿರುವ ಕುರಿತು ದಾಖಲಾಗಿದೆ.
ಸಮಸ್ಯೆ ಮತ್ತು ಸವಾಲುಗಳು
ಬದಲಾಯಿಸಿHandi Jogis ಪರಿಶಿಷ್ಟ ಜಾತಿಯಲ್ಲಿದ್ದರೂ ಹಂದಿಜೋಗಿಸ್/ಹಂಡಿಜೋಗಿಸ್ ಸಮುದಾಯಗಳು ಆರ್ಥಿಕವಾಗಿ ಅತ್ಯಂತ ಸಂಕಷ್ಟದಲ್ಲಿವೆ. ಕೆಲವರು ಪಾರಂಪರಿಕ ವೃತ್ತಿಯಾದ ಹಂದಿ ಸಾಕಾಣಿಕೆಯನ್ನು ಮುಂದುವರೆಸಿದ್ದರೆ, ಇನ್ನೂ ಕೆಲವರು ಹಂಡಿಜೋಗಿಗಳು, ಜೋಗಿ ಪದಗಳನಾಡುತ್ತಾ, ಡಬ್ಬ, ಬೀಗಗಳನ್ನು ರಿಪೇರಿ ಮಾಡುವ ಕೆಲಸ ಮುಂದುವರೆಸಿದ್ದಾರೆ. ಸರ್ಕಾರದಿಂದ ಇವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ದಕ್ಕಿಲ್ಲ. ಕೆಲವರು ಹಂದಿ ಜೋಗಿಗಳೆಂದು ಹೇಳಿಕೊಳ್ಳಲು ಮುಜುಗರಪಟ್ಟು ಗೊಲ್ಲರು ಎಂದು ಹೇಳಿಕೊಂಡಿದ್ದರೆ ಇನ್ನೂ ಕೆಲವರು ಹಂಡಿ ಜೋಗಿಗಳೆಂದು ಹೇಳಿಕೊಳ್ಳಲು ಮುಜುಗರಪಟ್ಟು ಜೋಗಿಗಳೆಂದು ಹೇಳಿಕೊಂಡಿದ್ದಾರೆ. ಇದರ ಪರಿಣಾಮ ಇಂದಿಗೂ ಕೆಲವು ಪ್ರದೇಶಗಳಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಪರದಾಡಬೇಕಾದ ಸ್ಥಿತಿ ಇದೆ.
ಇದೆಲ್ಲದರ ಪರಿಣಾಮ ಎಂಬಂತೆ ಈ ಹಂದಿ ಜೋಗಿಸ್/ ಹಂಡಿ ಜೋಗಿಸ್ ಸಮುದಾಯ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಇತರೆ ಸಮುದಾಯಗಳಂತೆಯೇ ಮುಖ್ಯವಾಹಿನಿಗೆ ಬರಲಾಗದೇ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ. ಈ ಸಮುದಾಯದಲ್ಲೂ ಒಂದಷ್ಟು ಪ್ರಜ್ಞಾವಂತರು ಇತ್ತೀಚಿನ ದಿನಮಾನಗಳಲ್ಲಿ ಸಂಘಟನೆಗೆ ಒತ್ತು ಕೊಡುತ್ತಿರುವರಾದರೂ ಸರ್ಕಾರ ಮತ್ತು ಸಮಾಜದ ನಿರೀಕ್ಷಿತ ಬೆಂಬಲವಿಲ್ಲದೇ ಅಸಹಾಯಕತೆ ಎದುರಿಸುವಂತಾಗಿದೆ.ಆಳುವ ಸರ್ಕಾರಗಳು ಮತ್ತು ಅಧಿಕಾರಶಾಹಿ ವ್ಯವಸ್ಥೆಯ ನಿರ್ಲಕ್ಷ್ಯ ಈ ಸಮುದಾಯಕ್ಕೆ ಅಭಿವೃದ್ಧಿ ಅಕ್ಷರಶಃ ಮರೀಚಿಕೆಯಂತಾಗಿದೆ.
- ↑ ಹಂಡಿಜೋಗಿಸ್