ಟೆಂಪ್ಲೇಟು:Wpcu

1843 ರಿಂದ 1845 ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ ನಲ್ಲಿ ಕಳೆದ ಜೀವನವು ಅವರ ಬೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಆಡಂ ಸ್ಮಿತ್ ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.

ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ ಫ್ರೆಡರಿಕ್ ಏಂಜಲ್ಸ್ ಎಂಬ ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ ರವರಾಗಿ ಕೆಲಸ ಮಾಡಿ ಸ್ವತ: ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.

ಪ್ಯಾರಿಸ್ ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”, “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.

ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ 1845 ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಉಚ್ಛಾಟಿಸಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರಸೆಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತಾರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ ಕ್ರಾಂತಿಕಾರಿ ಯಾಗಿದ್ದರು ಮತ್ತು ಯುರೋಪ್ ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ 1847 ರಲ್ಲಿ ಸ್ಥಾಪನೆಯಾಯಿತು. ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರುಗಳ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.

ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ಇದು 1848 ರಲ್ಲಿ ಪ್ರಕಟವಾಯಿತು. “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ ಸಮಾಜದ ತತ್ವವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.

ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು ಸಾಮಾಜಿಕ ಕ್ರಾಂತಿಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.

1) ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು: ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು. 2) ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು. 3) ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು. 4) ಸಾಗಣಿಕೆ ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು. 5) ರಾಷ್ಟ್ರದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು. 6) ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು. 7) ಉಚಿತ ಶಿಕ್ಷಣವನ್ನು ಜಾರಿಗೆ ತರುವುದು: ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು. 8) ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.

ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು.

ವಿಜ್ಞಾನಿಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.

ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ ಭೌತಿಕವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ ವ್ಯಾಲ್ಯು ಎಂದು ಕರೆದರು.

ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ 1848ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು ಜರ್ಮನಿಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ ನಲ್ಲಿಯೂ ಅವರು ವಾಸವಾಗಿದ್ದರು. 1848ರಲ್ಲಿ ಲಂಡನ್ ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.

ಕಾರ್ಲ್ ಮಾರ್ಕ್ಸ್ ರವರು ಲಂಡನ್ ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್”ನ ಪ್ರಥಮ ಸಂಪುಟ 1867ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು 1885 ಮತ್ತು 1895ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.

ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ಇವರುಗಳ ಬರವಣಿಗೆಗಳು ರಷ್ಯಾ, ಚೀನಾ ದೇಶಗಳೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆದ ರಾಜಕೀಯ ಹಾಗೂ ಆರ್ಥಿಕ ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು 1883 ನೇ ಇಸವಿ ಮಾರ್ಚ್ ಮಾಹೆ ನಾಲ್ಕರಂದು ಕಾಲವಶವಾದರು.