ರೋಗ ಓಡಿಸುವ ತುಳಸಿ   
    ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು . ತುಳಸಿಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ . ಅಂತಹ ತುಳಸಿ ಪವಿತ್ರವಾದದ್ದು ಮಾತ್ರವಲ್ಲ , ರೋಗ ನಿರೋಧಕ ಶಕ್ತಿ ಸೇರಿದಂತೆ ಆರೋಗ್ಯಕ್ಕೆ ಅನುಗುಣವಾದದ್ದು  ಎಂದು ಹಲವು ಸಂಶೋಧನೆಗಳು ಹೇಳಿವೆ .
    ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಅಂಗವಾಗಿರುವ ತುಳಸಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ . ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾ ಪೂಜೆ ಮಾಡುವುದು ಸಾಮಾನ್ಯ . ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಮಾತ್ರವಲ್ಲ , ಹಲವು ರೋಗಗಳು ಶಮನವಾಗುತ್ತದೆ ನಾಶವಾಗುತ್ತದೆ ಎಂಬ ನಂಬಿಕೆಯೂ ಬೆಳೆದು ಬಂದಿದೆ .
    ಮುಖ್ಯವಾಗಿ ತುಳಸಿಯಲ್ಲಿ ಎರಡು ವಿಧಗಳಿವೆ . ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿ. ಸಾಮಾನ್ಯವಾಗಿ ಪೂಜೆಗೆ ಬಳಸುವ ಕೃಷ್ಣ ತುಳಸಿಯು ಹಲವು ವೈದ್ಯಕೀಯ ಗುಣಗಳನ್ನು ಹೊಂದಿವೆ . 

ಈ ಗಿಡಮೂಲಿಕೆಯು ಶೀತ, ತಲೆನೋವು, ಅಜೀರ್ಣ,ಮಲೇರಿಯಾ ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ . ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ . ದೇವಸ್ಥಾನ,ಯಾತ್ರಸ್ಥಳ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಇವುಗಳು ಹೆಚ್ಚಾಗಿ ಕಾಣ ಸಿಗುತ್ತದೆ . ಇವುಗಳಿಗೆ ಒತ್ತಡ ನಿವಾರಿಸುವ ಶಕ್ತಿಯು ಇದೆ . ತುಳಸಿಯ ಎಲೆಗಳನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಕುಡಿಯಲಾಗುತ್ತಿದೆ .

    ಆಯುರ್ವೇದದ ಪ್ರಕಾರ ಹಂದಿಜ್ವರ ನಿವಾರಣೆಗೆ ತುಳಸಿ ರಾಮಬಾಣವಂತೆ  . ಇದರಲ್ಲಿರುವ ಔಷಧೀಯ ಗುಣಗಳು ಹಂದಿಜ್ವರದ ರೋಗಾಣುಗಳನ್ನು ಶರೀರಕ್ಕೆ  ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ . ದೇಹದಲ್ಲಿನ  ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಪಡಿಸುತ್ತದೆ . ಅಲ್ಲದೆ ಹಂದಿಜ್ವರ ರೋಗಾಣುಗಳನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಡುತ್ತಾರೆ . ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ ೭ ರಿಂದ ೮ ತುಳಸಿ ಎಲೆಗಳನ್ನು ತಿನ್ನುವುದು ಉತ್ತಮ . ಇದರಿಂದ  ರೋಗ ನಿರೋಧಕ  ಶಕ್ತಿ ವೃದ್ಧಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆಯಾಗುತ್ತದೆ . 
    ದಿನ ನಿತ್ಯ ತುಳಸಿ ಸೇವನೆಯಿಂದ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ , ವಿಧಾಮ ಶೀತ , ಶ್ವಾಸಕೋಶದ ಸೋಂಕು , ಕೆಮ್ಮು ಮತ್ತು ನೆಗಡಿ ಹೋಗಲಾಡಿಸಲು ಇದರಿಂದ ಸಾಧ್ಯ . ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಗಳನ್ನು ದೂರವಿರಿಸಬಹುದು . ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ  ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು , ಹೊಟ್ಟು ಬರುವಿಕೆ ಕೂಡ ನಿವಾರಣೆಯಾಗುತ್ತದೆ . ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣ್ರ ಮಾಡುತ್ತದೆ . ಇದರಿಂದ ಚರ್ಮ ಮೃದುವಾಗುವುದಲ್ಲದೆ ಅಂದವಾಗುತ್ತದೆ . ಮನೆ ಪರಿಸರದಲ್ಲಿ  ತುಳಸಿ ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ದೂರವಿರಿಸಬಹುದು . ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ತುಳಸಿ  ಸೇವನೆ ಉತ್ತಮ .