ಕೊರವಂಜಿ

ಬದಲಾಯಿಸಿ

ಕಣಿ ಹೇಳುವ ಕಾಯಕದಲ್ಲಿ ನಿರತರಾಗಿ, ದವಸಧಾನ್ಯ ಕಾಸು ಸಂಪಾದಿಸುವ ಅಲೆಮಾರಿ ಸ್ತ್ರೀಯರನ್ನು ಕೊರವಂಜಿ ಎಂದು ಕರೆಯುವರು. ಕೊರವಂಜಿ ಶಬ್ದ ದ್ರಾವಿಡ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಬಳಕೆಯಲ್ಲಿದೆ. ಕನಾ‍ಟಕದ ಎಲ್ಲಾ ಭಾಗಗಳಲ್ಲಿ ಇವರನ್ನು ಕಾಣಬಹುದು. ಉತ್ತರ ಕರ್ನಾಟಕ, ಬೆಳಗಾವಿ, ಬಿಜಾಪುರ, ಧಾರವಾಡಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ತಮಿಳುನಾಡಿನ ದಕ್ಷಿಣ ಅಕಾ‌‌‌‌‍ಟ್ , ತಂಜಾವೂರು, ತಿರುಚಿರಾಪಳ್ಳಿ, ಸೇಲಂ, ಕೊಯ್ಬತ್ತೂರು ಕಡೆಗಳಲ್ಲೂ ದಟ್ಡವಾಗಿ ಕಾಣಸಿಗುತ್ತಾರೆ. ಇವರು ಕನ್ನಡದ ಜೊತೆಗೆ ತಮಿಳು, ತೆಲಗು, ಮರಾಠಿ ಭಾಷೆಗಳನ್ನು ಕಲಿತು ಮಾತನಾಡುವರು. ಆದ್ದರಿಂದ, ಆಯಾ ಪ್ರದೇಶದ ಜನರಿಗೆ ತುಂಬ ಹತ್ತಿರದವರಾಗಿ ಕಾಣಬರುತ್ತಾರೆ. ಮುಖ ನೋಡಿ, ಕೈಗೆರೆ ನೋಡಿ ಭವಿಷ್ಯ (ಕಣಿ) ನುಡಿಯುವಾಗಿನ ಇವರ ಮಾತಿನ ಮೋಡಿಗೆ ಮರುಳಾಗದವರಿಲ್ಲ. ಈ ಸಂಬಂಧಿಸಿದಂತೆ ಐತಿಹ್ಯ, ಪೌರಾಣಿಕ ಹಿನ್ನಲೆಯನ್ನು ಆರೋಪಿಸಿಕೊಂಡು ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳುವುದನ್ನು ಕಾಣಬಹುದು.

ಕೊರವಂಜಿ ಬಗೆಗಿನ ಪುರಾಣಗಳು

ಬದಲಾಯಿಸಿ

ಪುರಾಣ ೧

ಬದಲಾಯಿಸಿ

ಪಾರ್ವತಿ ತನ್ನ ಮಗುವಿಗೆ ಸರ್ಪವನ್ನು ಸೀಳಿ, ಅದರ ಹೊಟ್ಟೆಯಲ್ಲಿರುವ ವಜ್ರ ವೈಢೂರ್ಯಗಳ್ಳನ್ನು ತುಂಬಿ ಒಂದು ತೊಟ್ಟಿಲನ್ನು ಮಾಡಿಕೊಡುವಂತೆ 'ಮೇದವರ'ನಿಗೆ ಹೇಳಲಾಗಿ, ಆತ ಒಪ್ಪಲ್ಲಿಲ್ಲವಂತೆ. 'ಕೊರಚ'ರವನು ಹೆದರದೆ ಮಾಡಿಕೊಟ್ಟನಂತೆ. ಆಗ ಪಾರ್ವತಿ ಮೆಚ್ಚಿ ತನ್ನಲಿದ್ದ ಮಂತ್ರದಂಡವನ್ನು ಕೇರುವ ಮೊರವನ್ನು ಬಹುಮಾನವಾಗಿ ನೀಡಿ, ಭವಿಷ್ಯ ಹೇಳುವ ಅಧಿಕಾರವನ್ನು ಇವರಿಗೆ ಕರುಣಿಸಿದಳಂತೆ. ಧರ್ಮರಾಯ ವನವಾಸದಲ್ಲಿದ್ದಾಗ ಆತನನ್ನು ಮೋಹಿಸಿದ ಹೆಣ್ಣೊಬ್ಬಳು ತನ್ನ ವೇಷ ಮರಿಸಿಕೊಂಡು ವರಿಸಿದಳಂತೆ. ಆಕೆಯ ಮಕ್ಕಳೇ ಈ ಕೊರವರಂತೆ. ಕೊರವರಿಗೆ ಅದರಲ್ಲೂ ಅವರ ಹೆಂಗಸರಿಗೆ 'ಕಣಿ' ಹೇಳುವ ಹಕ್ಕು ದೈವದತ್ತವಾಗಿ ಬಂದಿದೆ ಎಂದು ಹೇಳಿಕೊಳ್ಳುತ್ತಾರೆ. ಪದ್ಮಾವತಿ ಕಲ್ಯಾಣ ಸಂದರ್ಭದಲ್ಲಿ ಶ್ರೀನಿವಾಸ ಕೊರವಂಜಿ ವೇಷ ಧರಿಸಿ ಬಂದಿದ್ದು ಕೂಡ ಪುರಾಣ ಪ್ರಸ್ಸಿದ್ದ ಕತೆ. ಪ್ರಣಯಿಗಳಲ್ಲಿ ಉಂಟಾಗುವ ಆತಂಕವನ್ನು ಪರಿಹರಿಸಿಕೊಳ್ಳಲು ಕೊರವಂಜಿ ವೇಷ ಪ್ರಮುಖ ಪಾತ್ರವಹಿಸುತ್ತದೆ.

ಪುರಾಣ ೨

ಬದಲಾಯಿಸಿ

ಧರ್ಮರಾಯನು ವನವಾಸದಲ್ಲಿದ್ದಾಗ ಅವನನ್ನು ಮೋಹಿಸಿದ್ದ ಹೆಣ್ಣೊಬ್ಬಳು ಭವಿಷ್ಯಗಾರ್ತಿಯಂತೆ ವೇಷ ಹಾಕಿಕೊಂಡು ಅವನಲ್ಲಿಗೆ ಹೋಗಿ ಅವನನ್ನು ವರಿಸಿದಳು. ಆಕೆಯ ಮಕ್ಕಳೇ ಕೊರವರೆಂದೂ ಮತ್ತೊಂದು ಕಥೆ ಇದೆ. ಶಿವ ಕೊರವಂಜಿ, ವಿಷ್ಣು ಕೊರವಂಜಿ, ಮನ್ಮಥ ಕೊರವಂಜಿಗಳು ಎಂಬ ಪ್ರಭೇದಗಳು ಕಂಡುಬರುವುದರ ಜೊತೆಗೆ ಕೊರವಂಜಿ ಹಾಡು, ಕಾವ್ಯ, ಪಾರಿಜಾತದಂಥ ಬಯಲಾಟಗಳಲ್ಲಿ ಕೊರವಂಜಿಯ ಪಾತ್ರವು ಕಂಡುಬರುತ್ತದೆ. ಕೊರವಂಜಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ತಮ್ಮ ಕುಲದೇವತೆಯ ಹೆಸರನ್ನು ಹೇಳುತ್ತಿರುತ್ತಾರೆ.

ಪುರಾಣ ೩

ಬದಲಾಯಿಸಿ

ರಾಮಾಯಣ ಸಂದರ್ಭದಲ್ಲೂ ಆಂಜನೇಯ ಕೊರವಂಜಿ ವೇಷ ಧರಿಸಿ ರಾವಣನ ಪಟ್ಟಣದ ಅಶೋಕವನದಲ್ಲಿ ಸೀತೆಯನ್ನು ಕಂಡು ರಾಮ ಬಂದು ಲಂಕೆಯನ್ನು ಜಯಿಸಿ, ವಿಭಿಷಣನಿಗೆ ಪಟ್ಟ ಕಟ್ಟಿ ನಿನನ್ನು ಕರೆದುಕೊಂಡು ಹೋಗುವುದು ಕಂಡಿತಾ ಎಂದು ಭವಿಷ್ಯ ನುಡಿಯುವ ಪ್ರಸಂಗ ಜನಪದ ರಾಮಾಯಣಗಳಲ್ಲಿ ಬರುತ್ತದೆ. ಹನುಮಂತ ತನ್ನ ತಲೆ ಕೂದಲನ್ನು ಎತ್ತಿ ಕಟ್ಟಿ ಸಿಂಗರಿಸಿಕೊಳ್ಳುವ ಬಗೆಯನ್ನು ಜನಪದ ಕವಿಗಳು ಚಿತ್ರಿಕರಿಸಿರುವುದು ಸೊಗಸಾಗಿದೆ. ರುಕ್ಮೀಣಿಯ ಮನಸ್ಸಿಗೆ ಸಮಾಧಾನವನ್ನು ನೀಡಲು ಕೃಷ್ಣ ಕೊರವಂಜಿ ವೇಷ ಧರಿಸಿ, ಕಣಿ ಹೇಳಿ, ದೇವಮಾನವಾದ್ದರಿಂದ ತನ್ನ ನಿಜ ರೂಪವನ್ನು ತೋರು ರುಕ್ಮಣಿ ನಾಚಿ ನೀರಾಗುವಂತೆ ಮಾಡಿದ್ದು ಉಂಟು. ಕೋಲಾಟದಲ್ಲಿ 'ಕೊರವಂಜಿ ಕೋಲಾಟ' ಒಂದು ಬಗೆ ಹತ್ತು ಹನ್ನೆರಡು ಮಂದಿ ಕೂಡಿ ಕೋಲು ಹುಯ್ಯುವ ಸಂದರ್ಭದಲ್ಲಿ ಅವರ ಮಧ್ಯೆ ಬಾಗುತ್ತಾ ಬಳಕುತ್ತಾ ಬಂದು ಎಡದ ಕಂಕುಳಲ್ಲಿ ಪುಟ್ಟಿ ಒಂದು ಕೈಯಲ್ಲಿ ಕೊರವಂಜಿ ಕೋಲು ಹಿಡಿದು ಬೆನ್ನಟ್ಟಿದ ಗಂಟಿನ ಕೈಗೆ ಸಿಗದಂತೆ ನುಸುಳಿಕೊಂಡು ಆಡುವ ಪರಿಪಾಟವಿತ್ತಂತೆ.

ಪುರಾಣ ೪

ಬದಲಾಯಿಸಿ

ಒಮ್ಮೆ ಪಾರ್ವತಿ ಕೊವರಂಗಜಿಯ ವೇಷ ಧರಿಸಿ ಭವಿಷ್ಯ ಹೇಳಿದಳು ಎಂಬ ಪ್ರತೀತಿ ಇದೆ. ಹಾಗೆಯೇ ತಾವು ಪಾರ್ವತಿಯ ಮಕ್ಕಳೆಂದೇ ಹೇಳಿಕೊಳ್ಳುತ್ತಾರೆ. ಇವರಿಗೆ 'ಕೊರವರು' ಎಂಬ ಹೆಸರು ನಿಂತಿತಂತೆ.

ವೇಷಭೂಷಣ

ಬದಲಾಯಿಸಿ

ಕೊರವಿ ಪದಗಳು ಅಥವಾ ಕುರುತ್ತಿ ಪಾಟ್ಟುಗಳು ಕರ್ನಾಟಕ ತಮಿಳುನಾಡುಗಳಲ್ಲಿ ಹೇರಳವಾಗಿ ಸಿಗುತ್ತದೆ. ಬಹುತೇಕ ಎರಡೂ ಕಡೆ ಅವರ ವೇಷಭೂಷಣಗಳು ಒಂದೆ ಆಗಿವೆ. ತುಂಬ ಢಾಳಾಗಿ ವೈಭವೋಪೇರಿತವಾಗಿಲ್ಲದ ಆದರೆ ಅತ್ಯಾಕರ್ಷಕ ಉಡುಗೆ ತೊಡುಗೆ ಕೊರವಿಯರದು. ಮೈತುಂಬಾ ಹಚ್ಚೆಯಿಂದ ಅಲಂಕಾರ, ಬಣ್ಣ ಬಣ್ಣದ ಸೀರೆ ಕುಬುಸ, ವಾಲಿಸಿ ಕಟ್ಟಿದ ತುರುಬು, ಕಾಲಕಡಗ, ಮೂಗಿಗೆ ಮುಕುರ, ತಲೆಗೆ ದುಪ್ಪಟಿ ಹಾಗೂ ಬುಟ್ಟಿ, ಆ ಬುಟ್ಟಿಯಲ್ಲಿ ಯಲ್ಲಮ್ಮ ದೇವಿಯದೆಂದು ಹೇಳುವ ಚೌಕಾಕಾರದ ಚಿಕ್ಕ ಪೆಟ್ಟಿಗೆ, ಕೈಯಲ್ಲಿ ಉದ್ದವಾದ ಕೋಲು, ಹಣೆಗೆ ಕುಂಕುಮ, ರಟ್ಟೆಗಳಿಗೆ ಬೆಳ್ಳಿ ವಂಕಿಗಳು ಇವು ಕಲಾವಿದರ ವೇಷಭೂಷಣಗಳು. ಹೀಗೆ ಅಲಂಕಾರಗೊಂಡ ಕೊರವಂಜಿಯು 'ಹೇಳುವೆ ಕಣಿ ಹೇಳುವೆ ಕಣಿ' ಎಂದು ಹಾಡುತ್ತಾ ಬರುತ್ತಾಳೆ. ಒಂದು ಕಾಲಕ್ಕೆ 'ಕಣಿ' ಹೇಳುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು ಇದೀಗ ಬುಟ್ಟಿ, ತಟ್ಟೆ ಹೆಣೆಯುವ ಉಪವೃತ್ತಿಯಲ್ಲಿ ತೊಡಗಿರುವುದು ಕಂಡುಬರುತ್ತದೆ.

ಕೌಶಲ್ಯ

ಬದಲಾಯಿಸಿ

ಕೊರವಂಜಿಗಳು ಹಚ್ಚೆ ಹಾಕುವುದಕ್ಕೂ ಪ್ರಸಿದ್ದರು. ಹಚ್ಚೆ ಹಾಕುತ್ತಾ ನೋವು ಕಾಣಿಸದಂತೆ ಕಣಿ ಹಾಡನ್ನು ಹಾಡುತ್ತಾ, ಮೋಹಕವಾಗಿ ರಾಗದ ಸೊಲ್ಲೆತ್ತುತ್ತ ತಾಸುಗಟ್ಟಲೆ ಹಚ್ಚೆ ಹೊಯ್ದರು. ಬೇಸರ ನೋವುಗಳು ಗಮನಕ್ಕೆ ಬಾರದಂತೆ ನಿಭಾಯಿಸುವುದರಲ್ಲಿ ಇವರು ನಿಪುಣರು. ಸೂಜಿಯಂತಹ ಸಾಧನದಿಂದ ಸೊಪ್ಪಿನ ರಸವನ್ನು ಹಚ್ಚೆ ಹೊಯ್ಯುವ ಜಾಗಕ್ಕೆ ಹಾಕಿ ಕಲಾತ್ಮಕವಾಗಿ ಹಚ್ಚೆ ಹಾಕುತ್ತಾರೆ. ಉತ್ತರ ಕರ್ನಾಟಕದ ಕಡೆಯೆಲ್ಲಾ ಯಕ್ಷಗಾನ ಪ್ರಸಂಗಗಳಲ್ಲಿ ಕೊರವಂಜಿ ಪಾತ್ರಗಳನ್ನೇ ಮುಖ್ಯವಾಗಿಟ್ಟುಕೊಂಡು 'ಬ್ರಹ್ಮ ಕೊರವಂಜಿ', 'ಮನ್ಮಥ ಕೊರವಂಜಿ, 'ಪದ್ಮಾವತಿ ಕೊರವಂಜಿ' ಇತ್ಯಾದಿ ಪ್ರದರ್ಶನಗಳನ್ನು ಮಾಡುವುದಿದೆ.

ಉಲ್ಲೇಖಗಳು

ಬದಲಾಯಿಸಿ

೧.ಕರ್ನಾಟಕ ಜನಪದ ಕಲೆಗಳ ಕೋಶ: ಸಂಪಾದಕ-ಹಿ.ಚಿ.ಬೋರಲಿಂಗಯ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬

೨. ದಕ್ಷಿಣ ಭಾರತೀಯ ಜಾನಪದ ಕೋಶ