ಸದಸ್ಯ:Chaithra05/ನನ್ನ ಪ್ರಯೋಗಪುಟ3

ಭಗವಾನ್ ಶ್ರೀ ೧೦೦೮ ಆದಿನಾಥ ತೀರ್ಥಂಕರ ಬಸದಿ, ಬಂಟ್ವಾಳ

ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಈ ಬಸದಿಯು ಬಂಟ್ವಾಳ ತಾಲೂಕು, ಬಂಟ್ವಾಳ ಕಸಬಾದದಲ್ಲಿರುವ ಬಸ್ತಿ ಪಡ್ಪು ಎಂಬಲ್ಲಿದೆ. ಇದರ ಬಳಿಯಲ್ಲಿಯೇ ನೇತ್ರಾವತಿ ನದಿ ಹರಿಯುತ್ತಿದೆ. ಇದಕ್ಕೆ ಹತ್ತಿರವಾದ ಇನ್ನೊಂದು ಬಸದಿಯೆಂದರೆ ಸುಮಾರು ೩ ಕಿ.ಮೀ. ದೂರವಿರುವ ಪಾಣೆಮಂಗಳೂರಿನ ಶ್ರೀ ೧೦೦೮ ಅನಂತಸ್ವಾಮಿ ಬಸದಿ. ಇಲ್ಲಿಗೆ ಬಂಟ್ವಾಳ ಕಸಬಾ ಹಾಗೂ ಮೂಡ ಗ್ರಾಮದಲ್ಲಿರುವ ಕುಟುಂಬಗಳ ಶ್ರಾವಕರು ಬರುತ್ತಾರೆ ಹಾಗೂ ಉಪಾಕರ್ಮ ಪೂಜಾದಿಗಳಲ್ಲಿ ಭಾಗವಹಿಸಲು ತಾಲೂಕಿನ ೫-೬ ಕುಟುಂಬದವರೂ ಭೇಟಿ ನೀಡುತ್ತಾರೆ. ಮೂಡಬಿದಿರೆ ಬಿ.ಸಿ. ರೋಡ್ ಜೋಡುಮಾರ್ಗದಿಂದ ಬಂಟ್ವಾಳಕ್ಕೆ ಬರುವ ರಸ್ತೆಯಲ್ಲಿ ಬಸ್ತಿಪಡ್ಪು ಎಂಬ ಸ್ಥಳದಲ್ಲಿ ಈ ಬಸದಿ ಇದೆ.

ಇತಿಹಾಸ

ಬದಲಾಯಿಸಿ

ಈ ಬಸದಿಯನ್ನು ಶ್ರೀ ಭಟ್ಟಾ ಹೆಗ್ಗಡೆ ಎಂಬವರು ಹಾಗೂ ಪಾಣೆಮಂಗಳೂರು ಬಸದಿಯನ್ನು ಅವರ ತಮ್ಮ ಜತ್ತಿ ಹೆಗ್ಗಡೆ ಎಂಬವರು ಕಟ್ಟಿಸಿದರೆಂಬ ಮಾಹಿತಿ ಇದೆ. ಇವರಿಬ್ಬರು ಅಣ್ಣ-ತಮ್ಮಂದಿರಾಗಿದ್ದಂತೆ. ೧೯೬೭ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಪೂಜ್ಯ ರತ್ನವರ್ಮ ಹೆಗ್ಗಡೆಯವರು ತಮ್ಮ ತಾಯಿ ಕಮಲಾವತಿ ಅಮ್ಮವನರ ಪ್ರೇರಣೆಯಂತೆ ಇದನ್ನು ಜೀರ್ಣೋದ್ಧಾರಗೊಳಿಸಿ ೧೯೬೯ರಲ್ಲಿ ವಿಜೃಂಭಣೆಯಿAದ ಪಂಚ ಕಲ್ಯಾಣವನ್ನು ಕೈಗೊಂಡಿದ್ದರು. ಆ ಬಳಿಕ ಪೂಜ್ಯ ಡಾ||ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಆದಿನಾಥ ಸ್ವಾಮಿಯ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಂಚಕಲ್ಯಾಣವನ್ನು ನಡೆಸಿದ್ದಾರೆ.

ಈ ಬಸದಿಗೆ ಮೇಗಿನ ನೆಲೆ ಇದ್ದು ಅಲ್ಲಿಯೇ ಶ್ರೀ ಆದಿನಾಥ ಸ್ವಾಮಿಯು ಪೂಜಿಸಲ್ಪಡುತ್ತಿದ್ದಾರೆ. ಬಸದಿಯಲ್ಲಿ ಅನಂತನೋಂಪಿಯ ಸಲುವಾಗಿ ಉದ್ಯಾಪನೆ ಮಾಡಿದ ಅನಂತನಾಥ ಸ್ವಾಮಿಯ ಶಿಲೆಯ ಮೂರ್ತಿ ಹಾಗೂ ವೃಷಭಾದಿ ೧೩ ತೀರ್ಥಂಕರರ ಪ್ರಭಾವಳಿಯಿಂದ ಕೂಡಿದ ಮೂರ್ತಿಗಳು, ಪಂಚಪರಮೇಷ್ಠಿಗಳು ಮತ್ತು ಅವರ ದ್ವಾದಶಾಂಗ ಶ್ರುತ ಮತ್ತು ಗಣಧರಪಾದಗಳಿದ್ದು, ಇವು ನಿತ್ಯವೂ ಪೂಜಿಸಲ್ಪಡುತ್ತಿವೆ. ಗಂಧಕುಟಿಯ ಅಂಕಣದಲ್ಲಿ ಪಂಚಲೋಹಗಳ ೨೪ ತೀರ್ಥಂಕರರ ಮೂರ್ತಿಗಳಿವೆ. ಬ್ರಹ್ಮ ದೇವರ ಮೂರ್ತಿಯು ಇಲ್ಲ. []

ಬಸದಿಯ ಒಳಭಾಗವು ಶಿಲಾಮಯವಾಗಿದ್ದು, ಮೇಗಿನ ನೆಲೆಗೆ ಹಂಚಿನ ಮಾಡು ಇದೆ. ಬಸದಿಗೆ ಮಾನಸ್ತಂಭ ಇಲ್ಲ. ವಿಮಾನಶುದ್ಧಿಗೆ ಸಂಬಂಧಿಸಿದ ಪೀಠ ಬಸದಿಯ ಮುಂಭಾಗದಲ್ಲಿದೆ. ಬಸದಿಯ ಬಳಿಯಲ್ಲಿ ಎರಡು ಪಾರಿಜಾತ ಹೂವಿನ ಗಿಡಗಳು ಹಾಗೂ ಉಳಿದ ಗಿಡಗಳನ್ನೂ ಬೆಳೆಸಲಾಗಿದೆ. ಬಸದಿಗೆ ಪ್ರವೇಶಿಸುವಾಗ ಸಿಗುವ ಗೋಪುರದ ಎಡ-ಬಲ ಬದಿಗಳಲ್ಲಿ ಎರಡು ಕೊಠಡಿಗಳಿದ್ದು, ಬಸದಿಗೆ ಸಂಬಂಧಿಸಿದ ವಸ್ತುಗಳಿವೆ. ಬಸದಿಯ ಹೊರಾಂಗಣವನ್ನು ಪ್ರವೇಶಿಸುವಲ್ಲಿ ಪುರೋಹಿತರ ನಿವಾಸವಿದೆ. ಬಸದಿಯ ಪ್ರಾಂಗಣದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದ್ದು, ನಾಗಬ್ರಹ್ಮ, ನಾಗರಕಲ್ಲು, ತ್ರಿಶೂಲ ಇತ್ಯಾದಿಗಳನ್ನು ಒಂದೇ ಪೀಠದ ಮೇಲೆ ಪುನರ್‌ಪ್ರತಿಷ್ಠಾಪಿಸಲಾಗಿದೆ. ಅಷ್ಟದಿಕ್ಪಾಲಕರ ಕಲ್ಲುಗಳಿವೆ ಹಾಗೂ ಇವುಗಳಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಒಳಾಂಗಣ ದ್ವಾರದಲ್ಲಿ ಬೃಹದಾಕಾರದ ಆನೆಕಲ್ಲು ಇದೆ. ಬಸದಿಯ ಸುತ್ತಲೂ ಕರ್ಗಲ್ಲು ಮತ್ತು ಮುರಕಲ್ಲಿನಿಂದ ರಚಿಸಿದ ಭದ್ರವಾದ ಪ್ರಾಕಾರ ಗೋಡೆಯಿದೆ.

ವಿನ್ಯಾಸ

ಬದಲಾಯಿಸಿ

ಪ್ರಾರ್ಥನಾ ಮಂಟಪದಲ್ಲಿ ದ್ವಾರಪಾಲಕರ ಚಿತ್ರಗಳು ರಚಿಸಲ್ಪಟ್ಟಿದೆ, ಗೋಡೆಯಲ್ಲಿ ಸಮ್ಮೇದಶಿಖರ್ಜಿ ಹಾಗೂ ಇತರ ತೀರ್ಥಕ್ಷೇತ್ರಗಳ ವರ್ಣಚಿತ್ರಗಳಿವೆ. ಘಂಟಾ ಮಂಟಪದಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಮುಂದೆ ತೀರ್ಥಮಂಟಪವಿದೆ. ಈ ಬಸದಿಯಲ್ಲಿ ಮಾತೆ ಪದ್ಮಾವತೀ ದೇವಿಯ (ಯಕ್ಷಿ) ಮೂರ್ತಿಗೆ ಪೂಜೆ ನಡೆಯುತ್ತಿದೆ. ಮಾತೆಗೆ ವಿಶೇಷ ಸಂದರ್ಭಗಳಲ್ಲಿ ಆಭರಣಗಳನ್ನು ತೊಡಿಸಿ ಹೂವಿನ ಅಲಂಕಾರದೊAದಿಗೆ ಪೂಜೆ ನಡೆಸಲಾಗುತ್ತದೆ. ಅಮ್ಮನವರ ಮೂರ್ತಿ ಪಶ್ಚಿಮಕ್ಕೆ ಮುಖ ಮಾಡಿಕೊಂಡಿದೆ. ಮೂರ್ತಿಯ ಪಾದದ ಬಳಿ ಬೆಳ್ಳಿಯ ಕುಕ್ಕುಟ ಸರ್ಪವಿದೆ. ಖಡ್ಡಾಸನ ಭಂಗಿಯಲ್ಲಿರುವ ಮೂಲಸ್ವಾಮಿಯ ಮೂರ್ತಿಯು ಪಂಚಲೋಹದ್ದಾಗಿದ್ದು, ಸುಮಾರು ಮೂರು ಅಡಿ ಎತ್ತರವಿದೆ. ಅಷ್ಟ ಮಹಾ ಪ್ರಾತಿಹರ‍್ಯದ ಪ್ರಭಾವಳಿಯಲ್ಲಿ ಮೂಲಸ್ವಾಮಿಯ ಯಕ್ಷ-ಯಕ್ಷಿಯರಾದ ಗೋಮುಖ, ಚಕ್ರೇಶ್ವರಿಯರನ್ನು ತೋರಿಸಲಾಗಿದೆ.

ವಿಧಿ-ವಿಧಾನ

ಬದಲಾಯಿಸಿ

ಲಕ್ಷ ಹೂವಿನ ಪೂಜೆ ಎಂಬ ವಿಶೇಷ ಹರಕೆ ಪೂಜೆಯ ಸಂದರ್ಭಗಳಲ್ಲಿ ಮಂಟಪವನ್ನು ಹೂವಿನಿಂದ ಶೃಂಗರಿಸಿ ಪೂಜೆ ಮತ್ತು ಹರಕೆಯ ಸೀರೆಗಳನ್ನು ಒಪ್ಪಿಸಲಾಗುತ್ತದೆ. ಮಾತೆ ಪದ್ಮಾವತೀ ಅಮ್ಮನವರಿಂದ ಅಪ್ಪಣೆ ಪಡೆಯುವ ಪದ್ಧತಿ, ಹೂ ಹಾಕಿ ನೋಡುವ ಕ್ರಮವಿದೆ. ಕಾರ್ಯಗಳು ನೆರವೇರುವ ಮುನ್ನ ಅಥವಾ ನೆರವೇರಿದ ನಂತರ ಪೂಜೆ ಮಾಡಿಸುವ ಕ್ರಮವಿದೆ. ದಿನವೂ ಮೂಲಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತದೆ.

ಬೇರೆ ಬೇರೆ ತೀರ್ಥಂಕರರ ನೋಂಪಿ ಪೂಜೆಗಳು ಆಚರಿಸಲ್ಪಡುತ್ತವೆ, ನವರಾತ್ರಿ ಪೂಜೆಯು ಶ್ರಾವಕರಿಂದ ಆಚರಿಸಲಾಗುವುದು. ಅಲ್ಲದೆ ವರ್ಧಮಾನ ಸ್ವಾಮಿಯು ನಿರ್ವಾಣ ಹೊಂದಿದ ದಿನ ದೀಪಾವಳಿಯಂದು ಆಶ್ವಿಜ ಚತುದರ್ಶಿಯ ಕೊನೆಯ ಜಾವದಲ್ಲಿ ಆರ್ಘ್ಯವನ್ನೆತ್ತುವ ಹಾಗೂ ದೀಪಾವಳಿ ನೋಂಪಿಯನ್ನು ಆಚರಿಸುವ ರೂಢಿಯಿದೆ. ಸಾಮಾನ್ಯವಾಗಿ ಬಸದಿಯಲ್ಲಿ ದಿನದಲ್ಲಿ ಎರಡು ಬಾರಿ ಪೂಜೆ ನಡೆಯುತ್ತದೆ. ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೆ ಯುಗಾದಿ, ನೂಲಹುಣ್ಣಿಮೆ, ಹುಣ್ಣಿಮೆ ನೋಂಪಿ, ನಾಗರಪಂಚಮಿ, ನವರಾತ್ರಿ ಪೂಜೆ, ವಿಜಯದಶಮಿಯಂದು ಮನೆತುಂಬಿಸುವ ಪೂಜೆ ಇಂತಹ ಆಚರಣೆಗಳು ನಡೆಯುತ್ತಿವೆ.

ಕಾರ್ಯಕ್ರಮಗಳು

ಬದಲಾಯಿಸಿ

ಈ ಬಸದಿಯಲ್ಲಿ ಶ್ರೀ ೧೦೮ ಜಂಬೂಸಾಗರ ಮುನಿ ಮಹಾರಾಜರು ತಂಗಿದ್ದು, ಮುನಿಗಳ ಭಿಕ್ಷಾ ಕಾರ್ಯಕ್ರಮ ನಡೆದಿತ್ತು. ಬಹುಸಂಭ್ರಮದಲ್ಲಿ ಬಂಟ್ವಾಳದ ಎಸ್.ವಿ.ಎಸ್. ಪ್ರೌಢ ಶಾಲೆಯ ವಠಾರದಲ್ಲಿ “ ಕೇಶಲೋಚನ " ಕಾರ್ಯಕ್ರಮವು ಜರುಗಿತ್ತು. ಇವರಲ್ಲದೆ ೧೦೮ ಶ್ರೀ ಏಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು ಆಗಮಿಸಿದ್ದರು. ಶ್ರೀ ೧೦೮ ವಿಶ್ವನಂದಿ ಮುನಿಮಹಾರಾಜರು ಒಂದು ವಾರ ತಂಗಿದ್ದು, ಭಿಕ್ಷಾ ಕಾರ್ಯ ಶ್ರಾವಕ-ಶ್ರಾವಕಿಯರಿಂದ ನಡೆದಿತ್ತು. ತದನಂತರ ಶ್ರೀ ೧೦೮ ತರುಣಸಾಗರ ಮುನಿಗಳು ತಂಗಿದ್ದು, ಪ್ರವಚನ ಕಾರ್ಯಕ್ರಮವು ನಡೆದಿತ್ತು. ಇತ್ತೀಚಿಗೆ ಪ್ರಸಕ್ತ ಮುನಿಮಹಾರಾಜರಾಗಿರುವ ಪ್ರಮುಖ ಸಾಗರರು ಬಂದಿದ್ದರು. ಗೋಪುರದ ಕೊಠಡಿ ಗಳನ್ನು ಮುನಿಸಂಘವು ಬಳಿಸಿಕೊಳ್ಳುತ್ತಿತ್ತು, ಮೂಡಬಿದ್ರೆ ಚಾರುಕೀರ್ತಿ ಭಟ್ಟಾರಕರೂ ಆಗಮಿಸುತ್ತಿರುವರು.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೦೮-೩೦೯.