ಸದಸ್ಯ:Chaithanya kudinalli/sandbox2
ಎಂ. ಗೋಪಾಲಕೃಷ್ಣ ಅಡಿಗ
ಬದಲಾಯಿಸಿಗೋಪಾಲಕೃಷ್ಣ ಅಡಿಗರು ದಕ್ಷಿಣ ಕನ್ನಡ ಜಿಲ್ಲೆಯ ಉತ್ತರದ ಕೊನೆಯಲ್ಲಿರುವ ಮೊಗೇರಿ ಎಂಬ ಹಳ್ಳಿಯಲ್ಲಿ 18 ಫೆಬ್ರವರಿ 1918 ರಲ್ಲಿ ಜನಿಸುತ್ತಾರೆ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನು, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚಿಸುತ್ತಿದ್ದರಂತೆ. ಅವರ ಹತ್ತಿರದ ಬಂಧುಗಳೊಬ್ಬರು ಅವರ ಮನೆಯಲ್ಲಿಯೇ ಇದ್ದು ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿದ್ದರಂತೆ. ಮನೆಯಲ್ಲಿ ಪದ್ಯ ರಚನೆ, ವಾಚನಗಳ ವಾತಾವರಣವಿತ್ತು. ಪ್ರತಿರಾತ್ರಿಯೂ ಅವರ ಸೋದರತ್ತೆ ನಾರಾಣಪ್ಪನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತಗಳನ್ನು ರಾಗವಾಗಿ ಓದಿ ಹೇಳುತ್ತಿದ್ದರೆಂದು ಅಡಿಗರು ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ಕನ್ನಡ ಜಲ್ಲೆ ಯಕ್ಷಗಾನದ ತವರೂರು, ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೇ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣಗೊಳ್ಳುತ್ತಿತ್ತಂತೆ.
ವಿದ್ಯಾಭ್ಯಾಸ
ಬದಲಾಯಿಸಿಅಡಿಗರು ಹದಿಮೂರನೇ ವಯಸ್ಸಿನಲ್ಲಿ ಪದ್ಯರಚನೆಯಲ್ಲಿ ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದಪದ್ಯಗಳನ್ನು ರಚಿಸಲು ಆರಂಭಿಸುತ್ತಾರೆ ಅಂದರೆ ಸುಮಾರು 1931-32ರ ವೇಳೆಗೆ ಅಡಿಗರು ಕಾವ್ಯ ರಚನೆ ಆರಂಭಿಸಿದಂತೆ ತೋರುತ್ತದೆ. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯಗಳಿಂದ ಪಡೆದರು.
ವೃತ್ತಿ ಜೀವನ
ಬದಲಾಯಿಸಿಎಂ.ಗೋಪಾಲ ಕೃಷ್ಣ ಅಡಿಗರು ಮೈಸೂರಿನ ಶಾರದಾ ವಿಲಾಸ ಕಾಲೇಜು, ಸಂತ ಫಿಲೋಮಿನ ಕಾಲೇಜು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಶಿವಮೊಗ್ಗ ಜಿಲ್ಲೆಯ ಸಾಗರದ ಲಾಲ್ ಬಹುದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಕೆಲಸ ಮಾಡಿದ ಅಡಿಗರು, ನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿ, ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.
ಪ್ರಶಸ್ತಿ ಗೌರವಗಳು
ಬದಲಾಯಿಸಿಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಅಸಾನ್ ಪ್ರಶಸ್ತಿ ಹಾಗೂ ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು “ತಮ್ಮ ಕಿರಿಯ ತಲೆಮಾರಿನವರ ಮೆಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ”.
ಕೃತಿಗಳು
ಬದಲಾಯಿಸಿಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ ಪ್ರಕಟವಾದದ್ದು 1946ರಲ್ಲಿ. ಅಲ್ಲಿಂದೀಚೆಗೆ ಅವರ ಹತ್ತು ಕವನ ಸಂಕಲನಗಳು ಪ್ರಕಟವಾಗಿವೆ. ಕಟ್ಟುವೆವು ನಾವು (1948), ನಡೆದು ಬಂದ ದಾರಿ (1952), ಚಂಡೆಮದ್ದಳೆ (1954), ಭೂಮಿಗೀತ (1959), ವರ್ಧಮಾನ (1972), ಇದನ್ನು ಬಯಸಿರಲಿಲ್ಲ (1975), ಮೂಲಕ ಮಹಾಶಯರು (1981), ಒತ್ತಲಾರದ ಗಂಗೆ (1983), ಚಿಂತಾಮಣಿಯಲ್ಲಿ ಕಂಡ ಮುಖ (1987), ಹಾಗೂ ಸುವರ್ಣ ಪುತ್ಥಳಿ (1990), ಪ್ರಕಟವಾಗಿವೆ. 1937ರಿಂದ 1976ರ ವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ (ಐ.ಬಿ.ಎಚ್. ಪ್ರಕಾಶನ 1987) ಪ್ರಕಟವಾಗಿದೆ. ಅಡಿಗರು ಅನಾಥೆ, ಆಕಾಶದೀಪ- ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕ ಅನುವಾದ ಕೃತಿಗಳೂ ಪ್ರಕಟವಾಗಿವೆ.
ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ- ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಎಲ್ಲಾ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’(ಸಾಕ್ಷಿಪ್ರಕಾಶನ, 1977) ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲದಲ್ಲಿದ್ದ ನಾವಿನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬೀ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ದಾರಿಯನ್ನು ಬಿಟ್ಟ ಹೊಸದಾರುಯನ್ನು ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯ ರಚನೆಯಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆ ಎಂದು ತೋರುತ್ತದೆ. ಅಡಿಗರ ಕವನದ ಸಾಲುಗಳು
ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ
‘ಭಾವತರಂಗದ’ ಮೊದಲ ಕವಿತೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳುವ ಮನೋಭಾವವನ್ನು ಅಡಿಗರು ಸ್ಪಷ್ಟವಾಗಿ ಸೂಚಿಸಿದ್ದಾರೆ.
ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ
ಕೆಚ್ಚೆದೆತನದ ಬಲ್ಮೆಯನ್ನು ಬಿತ್ತರಿಪೆನು
ಪದವನಿಡುತೆನ್ನೆದೆಯ ಮೇಲೆ ತಾಮಡವವೆಸಗು
ಬೆದರುವೆನೆ ಬೆಚ್ಚುವೆನೆ ನಿನಗೆ ನಾನು(ವಿಧಿಗೆ)
ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ. ದ್ವಿತೀಯ ಪ್ರಾಸ, ಮಾರಾಂತು, ಬಿತ್ತರಿ ಪೆನು, ಎಸಗು ಮೊದಲಾದ ಪದಪ್ರಯೋಗಗಳ ನಡೆದಿದೆ.
ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ
ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ
ಮಂಜುತರ ಸೃಷ್ಟಿಗಾನದಲಿ ಮೈಮರೆಯೆ
ಎಂಜಲಾಗದ ಮಧುರ ಮಧುರಸವ ಸವಿಯೆ
ರಂಜಿಸುವ ಕಾಡುಮೇಡುಗಳನಂಡಲೆಯೆ(ಹೊಸ ಹಾದಿ)
ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ
ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ
ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ
ಸರದೊಳಾವುದೋ ಕಲ್ಲು ಬಿದ್ದ ಹಾಗೆ
ಹಲವು ತಾನಗಳ ಸಂತಾನವಾದುದು ಮಧುರ
ನೊಳಬಾಳು; ಹರಯದೊಡ್ಡೋಲಗದಲಿ
ತನಗೆಲ್ಲಿ ನೆಲೆ? ಬಾಲಹಾಡಿಗೆಲ್ಲಿಹುದು ಬೆಲೆ?
ಎಂದು ಮುರುಟಿದನು ತನುಮನಗಳಲ್ಲಿ(ಒಳತೋಟಿ)
ಕಂಡು ಮಾತಾಡಿ ಮೈ
ದಡವಿ ನಗಿಸಿ ನಲಿವರಿಲ್ಲ
ಬೆಂದ ಬಗೆಗೆ ಸೊದೆಯನೆರೆದು
ಕಂಬನಿಯ ತೊಡೆವರಿಲ್ಲ
ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ.
ಕಲ್ಲಾಗು ಕಲ್ಲಾಗು ಬಾಳ ಬಿರುಗಾಳಿಯಲಿ
ಅಲ್ಲಾಡದೆಯೆ ನಿಲ್ಲು ಜೀವ( ಕಲ್ಲಾಗು ಕಲ್ಲಾಗು )
ಹತಾಶೆಯ ಸ್ಥಿತಿಯಲ್ಲಿ ಕವಿ ಮನಸ್ಸು ನಿಷ್ಠುರವಾಗಲು ಪ್ರಯತ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ಹರೆಯದ ಮನಸ್ಸನ್ನು ಸಹಜವಾಗಿ ಸೆಳೆಯಬಹುದಾಗಿದ್ದ ಹೆಣ್ಣಿನ ಸ್ನೇಹ ಕವಿಗೆ ಕಪಟವೆನಿಸುತ್ತದೆ. ಕವಿ ಅನುಭವಿಸುವ ಹತಾಶ ಸ್ಥಿತಿ ಸ್ವಾನುಕಂಪೆಯಾಗಿ ಕರುಣಾಜನಕ ಸ್ಥಿತಿ ತಲುಪದೆ, ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಸಾಧನವಾಗಿ, ಏಕಾಗ್ರತೆಗೆ ಧ್ಯಾನಕ್ಕೆ ಹಿನ್ನಲೆಯಾಗಿ ನಿಲ್ಲುವಲ್ಲಿ ಅಡಿಗರ ಕಾವ್ಯದ ಸತ್ವವಿದೆ. ಈ ಹಂತದಲ್ಲಿ ಅಡಿಗರ ಕಾವ್ಯ ‘ಬಗೆಯೊಳಗನೇ ತೆರೆದು ನೋಡುವ’ ರೀತಿಯದಾಗುತ್ತದೆ.
ಒಲವೆಯೆಂದು ನಲುವೆಯೆಂದು ನಾವು ಹುಸಿಯ ಮುಸುಕನು
ತೊಡಿಸಿ ನಿಜಕೆ ಮರೆವುವು
ಒಲವು ಸುಳ್ಳು ನಲವು ಜಳ್ಳು ನಮ್ಮ ನಾವೆ ವಂಚಿಸುವೆವು
ಇಲ್ಲದುದನೆ ಹೊರವೆವು
ನಾನೆ ನನ್ನ ನಲ್ಲ ನಲ್ಲೆ ನಲುಮೆ ಒಲುಮೆ ಸಂಭ್ರಮ
ಉಳಿದುದೆಲ್ಲ ವಿಭ್ರಮ(ಬಿಡುಗಡೆಯ ಹಾಡು)
ಸ್ನೇಹ-ಪ್ರೀತಿ, ಕೋಪ-ತಾಪ, ಅಳು-ನಗು ಎಲ್ಲವನ್ನು ನಿರಾಕರಿಸಿ ಜನವಿದೂರ ಹೋಗ ಬಯಸುವ ಕಾವ್ಯ ಬದುಕನ್ನೆ ನಿರಾಕರಿಸುವಂಥದಾಗಿ ತೋರುವುದು ಮೇಲ್ನೋಟಕ್ಕೆ ಸಹಜ. ಆದರೆ ಮೇಲ್ಪಪದರದ ಈ ಆಕ್ರೋಶದ ಹಿಂದಿನ ಆಳವಾದ ವಿಷಾದ ವಾಸ್ತವ ಬದುಕಿನ ಸ್ವೀಕರಣೆಯ ಕಡೆ ಮುಖಮಾಡಿದೆ. ಬದುಕಿನಲ್ಲಿ ಹಿರಿಯಾಸೆ ಹೊತ್ತ ಮಹತ್ವಾಂಕ್ಷೆಯ ಕವಿ ಮೋಹದ ಸುಳಿಯೊಳಗೆ ಸಿಲುಕಬಾರದೆಂಬ ಎಚ್ಚರದಿಂದ ಇವೆಲ್ಲವನ್ನೂ ಮೀರಲು ಬಯಸುತ್ತಾರೆ. ಕವಿಯ ಈ ಮಹತ್ವಾಕಾಂಕ್ಷೆ ಉನ್ನತವಾದುದನ್ನು ತನ್ನದಾಗಿಸಿಕೊಳ್ಳಬೇಕೆಂಬ ಬಯಕೆ –ಇದರಿಂದಾಗಿ ಅಡಿಗರ ಕಾವ್ಯ ದೈನಿಕ ಸಹಜ ವಿವರಗಳಿಂದ, ಬದುಕಿನ ವೈವಿಧ್ಯದಿಂದ, ಕೌಟುಂಬಿಕ ಜಗತ್ತಿನಿಂದ ವಂಚಿತವಾಗುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರಿತಿ, ಚೆಲುವು, ಒಲವುಗಳಿಗೆ ಜಡರೇನು ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮಖ್ಯವಾಗಿ ಧ್ಯಾನರೂಪಿ ಮನಸ್ಸು, ಅವರ ಮಾತಿನಲ್ಲೇ ಹೇಳುವುದಾದರೆ – ‘ಹುತ್ತಗಟ್ಟಿದ ಚಿತ್ತ’. ಬದುಕಿನಲ್ಲಿ ತಾನು ಅನುಭವಿಸಿದ ನೋವು, ಅಪಮಾನ, ಪ್ರೀತಿಯ ಕೊರತೆ-ಸ್ವಭಾವತಃ ಅಂತರ್ಮುಖಿಯಾಗುವಂತೆ ಮಾಡುತ್ತವೆ. ಆದರೆ ಈ ಅಂತರ್ಮುಖತೆ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳದೆ, ಅದನ್ನು ಅರ್ಥ ಮಾಡಿಕೊಳ್ಳುವ ಸಮರ್ಥ ರೀತಿಯಲ್ಲಿ ಅಡಿಗರ ಕಾವ್ಯ ರೂಪುಗೊಳ್ಳುತ್ತದೆ. ಆದ್ದರಿಂದಲೇ ಅಡಿಗರ ನಂತರದ ಕಾವ್ಯ ಏಕಕಾಲಕ್ಕೆ ವೈಯುಕ್ತಿಕವೂ, ಸಾಮಾಜಿಕವೂ ಆಗಿಬಿಡುತ್ತದೆ. ಈ ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ, ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ- ಅಡಿಗರ ಕಾವ್ಯರೀತಿ.
ಮರೆತುಬಿಡಲೋ ಮಗುವೆ ನಿನ್ನ ಒಲವಿನಂಗಭಂಗವ
ತೆರೆಯೋ ಅಂತರಂಗವ
ಅಲ್ಲಿ ಹುಡುಕು ಕಳಚಿಬಿದ್ದ ನಿನ್ನ ಜೀವರತ್ನವ
ತನ್ನತನದ ಸತ್ವವ
ಸಿಕ್ಕಬಹುದು, ಸಿಕ್ಕದಿದ್ದರೇನು? ಹುಡುಕಾಟವೇ
ಅದರ ದಿವ್ಯಪಾರವೇ
ಎದೆಗೆ ಬಲವ ಮತಿಗೆ ಧೃತಿಯ ಬಾಳಿಗೊಂದು ಶಾಂತಿಯ
ನೀಡಬಹುದು ಕಾಂತಿಯ(ಬಿಡುಗಡೆಯ ಹಾಡು)
“ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗುವೂದಿದ್ದರೂ ಅದು ವ್ಯಕ್ತಿಯಲ್ಲಿ. ಈ ಬಂಡಾಯದ ಕಲ್ಪನೆ ಕೂಡ ವಿಶಿಷ್ಟವಾದದ್ದು. ಸೃಷ್ಟಿಯಲ್ಲಿನ ಪ್ರತಿಯೊಂದು ಚೇತನವೂ ಬೆಲೆಯುಳ್ಳದ್ದು, ಮುಂದೆ ವಿಕಾಸಗೊಂಡು ಪರಿಪೂರ್ಣಾವಸ್ಥೆಗೆ ಸಲ್ಲಬಹುದಾದ ಸ್ವವಿಶಿಷ್ಟವಾದ ಶೀಲದ್ರವ್ಯವೇನನ್ನೋ ಪಡೆದು ಬಂದಿರುವಂತದು. ಅದನ್ನು ಕಂಡುಕೊಳ್ಳುವುದೇ, ಬೆಳೆಸಿಕೊಳ್ಳುವುದೇ, ಫಲಾವಸ್ಥೆಗೆ ಮುಟ್ಟಿಸುವುದೇ ಬದುಕಿನ ಗುರಿ. ಅದೇ ನಿಜವಾದ ಸ್ವಸ್ವರೂಪ ದರ್ಶನ, ಆತ್ಮ ಸಾಕ್ಷಾತ್ಕಾರ” “ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ಮುಂದೆ ಜೊತೆ ಕ್ರಾಂತಿ ಮಾಡುವುದು ನಿರರ್ಥಕವಷ್ಟೇ ಅಲ್ಲ, ಅದು ಬೇಕು-ಬೇಡಗಳನ್ನು ದಾಟಿ, ದಬ್ಬಾಳಿಕೆಯಲ್ಲಿ, ಪೀಡಕ ರಾಜ್ಯದಲ್ಲಿ ಕೊನೆಯಾಗುತ್ತದೆ. ಈ ಸತ್ಯ ನಮಗೆ ಕಾಣುವ ಹಾಗೆ, ಸ್ಪರ್ಶದ ಅನುಭವಕ್ಕೆ ಬರುವ ರೀತಿಯಲ್ಲಿ ಅಡಿಗರ ರೂಪಕಗಳಲ್ಲಿ ಅವತರಿಸುತ್ತದೆ. ನಿಜವಾದ ಪ್ರಜಾರಾಜ್ಯದಲ್ಲಿ ಪ್ರತಿಯೊಬ್ಬನಿಗೂ ತನಗೆ ತಕ್ಕ ಸಿಂಹಾಸನವಿದೆ. ಅದನ್ನು ದೊರಕಿಸಿಕೊಳ್ಳಬೆಕು. ದಂಗೆ ಮಾಡಿ, ಚಿನ್ನ, ಮಣ್ಣು ಮರದ್ದಗಬಹುದು ಸಿಂಹಾಸನ-ಡೆಮಾಕ್ರಸಿಯಲ್ಲಿ ಪ್ರತಿ ಪ್ರಜೆಯೂ ರಾಜ. ಈ ಅರ್ಥವನ್ನು ಅಡಿಗರು ಸೊಗಸಾಗಿ ಚಿತ್ರಿಸುತ್ತಾರೆ. ದಂಗೆಯೇಳಬೇಕಾಗುತ್ತಲೇ ಇರುತ್ತದೆ ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ(ಬಂಡಾಯ) ವ್ಯಕ್ತಿತ್ವದ ಸಿದ್ಧಿ ಸಿದ್ಧಿಸುವವರೆಗೆ ಈ ಬಂಡಾಯ ನಿರಂತರ, ಹೋರಾಟ ಅನಿವಾರ್ಯ. ಅಂತರಂಗದ ಶೋಧನೆಯಂತೆಯೇ ಬಹಿರಂಗದ ತಿಳುವಳಿಕೆಯೂ ವ್ಯಕ್ತಿತ್ವ ವಿಕಾಸದ ಮುಖ್ಯ ಆಯಾಮ. ‘ಪರಿಪೂರ್ಣತೆ’ ಒಳಹೊರಗುಗಳ ಸಂಯೋಗದಲ್ಲಿ. ಈ ವೈಯಕ್ತಿಕ-ಸಾಮಾಜಿಕ ಏಕತ್ರ ಬಿಂದುವಿನ ಮತ್ತೊಂದು ಮಜಲು-ಚಿಂತಾಮಣಿಯಲ್ಲಿ ಕಂಡ ಮುಖ’. ‘ಕೂಪ ಮಂಡೂಕ’ದಲ್ಲಿ ತನ್ನೊಳಗಿನ ಚೇತನವನ್ನು ಗೆಳೆಯನೆಂದು ಕೆರದ ಜಿ.ಎಸ್ ಸಿದ್ಧಲಿಂಗಯ್ಯ ಅಡಿಗರು ಅದೇ ಚೇತನವನ್ನು ಇಲ್ಲಿ ಸಭೆಯ ಮಧ್ಯೆ ಸಾಮಾಜಿಕವಾಗಿ ಗುರಿತಿಸುತ್ತಾರೆ. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ಸಾಮಾಜಿಕವಾದ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು. ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ ‘ವ್ಯಕ್ತಿತ್ವ ವಿಕಾಸದ ಹೋರಾಟ’ವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ.