ಹೆಣ್ಣು
   
         ಹೆಣ್ನು ಮನೆಯ ಕಣ್ಣು ಸುಖ ಸಂಪತ್ತಿಗೆ ಆಕೆಯೇ ಮೂಲ ಎಂಬ ಮಾತಿದೆ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ ಗೌರವವಿದ್ದು ಆಕೆ ಕಾಲಿಟ್ಟ ನೆಲದಲ್ಲಿ ಆರ್ಥಿಕತೆ ತುಂಬಿ ತುಳುಕುತ್ತದೆ. ಬಲಗಾಲಿಟ್ಟು ಮನೆಗೆ ಅಡಿ ಇಟ್ಟ ಭಾಗ್ಯದೇವತೆ ಹೆಣ್ಣು ಎಂಬುದು ಸರ್ವ ಕಾಲದಲ್ಲೂ ವಿಧಿತವಾದುದು. ಎಷ್ಟೇ ಗಂಡುಮಕ್ಕಳಿದ್ದರೂ ಹೆಣ್ಣು ಮಗು ಇರಬೇಕು ಎಂಬ ಬೇಡಿಕೆ ಹೆತ್ತವರಿಗೆ ಇದ್ದೇ ಇರುತ್ತದೆ. ಇಂದಿನ ಸಮಾಜ ಹಿಂದಿನಂತಿರದೇ ಎಲ್ಲದಕ್ಕೂ ಗಂಡಿಗಿಂತಲೂ ಹೆಣ್ಣನ್ನೇ ಆಶ್ರಯಿಸುವ ಕಾಲ ಬಂದಿದೆ. ಗಂಡು ಹುಡುಗರಿಗಿಂತಲೂ ಹೆಣ್ಣು ಮಗಳು ನಮ್ಮನ್ನು ಚೆನ್ನಾಗಿ ಸಾಕುತ್ತಾಳೆ ಎಂಬುದೇ ತಂದೆತಾಯಿಗಳು ಹೇಳುವ ಮಾತು. ಅಷ್ಟೊಂದು ನಂಬಿಕೆ ಇಂದು ಹೆಣ್ಣಿನ ಮೇಲಿದೆ. ಮನೆಯ ಪ್ರತಿಯೊಬ್ಬ ಸದಸ್ಯರ ಮುದ್ದಿನ ಕಣ್ಮಣಿಯಾಗಿ ಬಾಳುವ ಹುಡುಗಿಯರು ತಾವು ಕೇಳಿದ್ದನ್ನೆಲ್ಲಾ ಕೂಡಲೇ ಪಡೆದುಕೊಳ್ಳುತ್ತಾರೆ. ಅಷ್ಟೊಂದು ಪ್ರಭಾವವನ್ನು ಅವರು ಪಡೆದುಕೊಂಡಿರುತ್ತಾರೆ. ಅಪ್ಪನ ಮುದ್ದಿನ ಕುವರಿಯಾಗಿರುವ ಹೆಣ್ಣು ಮಗಳು ಅವರನ್ನು ತನ್ನ ಸ್ನೇಹಿತನಂತೆಯೇ ಕಾಣುತ್ತಾಳೆ. ಅಮ್ಮನಾದರೂ ಕೊಂಚ ಹಿಡಿತವನ್ನು ಆಕೆಯ ಮೇಲೆ ಮಾಡಿದರೂ ಅಪ್ಪ ಮಾತ್ರ ಸ್ವತಂತ್ರ ಮನೋಭಾವದಿಂದಲೇ ಆಕೆಯನ್ನು ಕಾಣುತ್ತಾರೆ. ಅದಾಗ್ಯೂ ಆಕೆ ಹೆಚ್ಚು ಕಲಿಯಬೇಕಾಗಿರುವುದು ತನ್ನ ತಾಯಿಯಿಂದಲೇ ಆಗಿರುತ್ತದೆ. ಮನೆಯ ಅಚ್ಚುಕಟ್ಟುತನ, ಸಂಸಾರವನ್ನು ತೂಗಿಸಿಕೊಂಡು ಹೋಗುವ ಕಲೆ ಹೆಣ್ಣಿನದ್ದು.