ಚಿಕ್ಕಮಗಳೂರು;ಬಿಂಡಿಗ ದೀಪೋತ್ಸವ
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಪಿsಯ ತವರಿನ ವಿಶೇಷಗಳಲ್ಲಿ ಒಂದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ. ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ.