ಪಾರ್ಶ್ವನಾಥ ಸ್ವಾಮಿ ಬಸದಿ, ಬಳ್ಳಮಂಜ

(ಸದಸ್ಯ:Bharathi Sajjan/ನನ್ನ ಪ್ರಯೋಗಪುಟ5 ಇಂದ ಪುನರ್ನಿರ್ದೇಶಿತ)

ಬಳ್ಳಮಂಜದ ಪಾಶ್ರ್ವನಾಥ ಸ್ವಾಮಿ ಬಸದಿಯು ಕರ್ನಾಟಕದ ಜೈನ ಬಸದಿಗಳಲ್ಲಿ ಒಂದು.

ಸ್ಥಳ ಬದಲಾಯಿಸಿ

ಶ್ರೀ ಪಾಶ್ರ್ವನಾಥ ಬಸದಿಯು ಮಚ್ಚಿನ ಗ್ರಾಮದ ಬಳ್ಳಮಂಜ ಊರಿನಲ್ಲಿದೆ. ಈ ಬಸದಿಯು ಬೆಳ್ತಂಗಡಿ ಪೇಟೆಯಿಂದ ೧೪.೫ ಕಿ.ಮೀ. ದೂರದಲ್ಲಿದೆ. ಮಡಂತ್ಯಾರು ಪೇಟೆಯಿಂದ ಕಾಲೇಜು ಹೋಗುವ ರೋಡ್‍ನಲ್ಲಿ ಮುಂದುವರಿದು ಸ್ವಲ್ಪಗ್ರಾಮೀಣ ಪ್ರದೇಶದ ರಸ್ತೆಯಲ್ಲಿ ನಡೆದಾಗ ಈ ಬಸದಿಯು ಕಾಣ ಸಿಗುತ್ತದೆ. ಬಸದಿಗೆ ಸಾರ್ವಜನಿಕ ವಾಹನಗಳು ಮುಖ್ಯವಾಗಿ ಆಟೋರಿಕ್ಷಾಗಳ ಸೇವೆ ಲಭ್ಯವಿದೆ.[೧]

ಇತಿಹಾಸ ಬದಲಾಯಿಸಿ

ಈ ಬಸದಿಯು ೩೦೦ ವರ್ಷಗಳ ಹಿಂದೆ ಪಣಕಜೆ ಎಂಬಲ್ಲಿತ್ತು. ತೀರ್ಥಂಕರರ ಮೂರ್ತಿಯನ್ನು ಬಳ್ಳಮಂಜದಲ್ಲಿ ಇಡಲಾಗಿತ್ತು. ಈ ತೀರ್ಥಂಕರರ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ.ಪದ್ಮಪೀಠವು ಕಲ್ಲಿನದ್ದಾಗಿದೆ.ಯಕ್ಷಧರಣೇಂದ್ರ ಹಾಗೂ ಯಕ್ಷಿ ಪದ್ಮಾವತಿಯರು. ಇವು ಸಣ್ಣ ಮೂರ್ತಿಗಳಾಗಿರುವುದರಿಂದ ಇವರ ಆಯುಧಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಬಸದಿಯಲ್ಲಿ ಪೂಜೆಗೊಳ್ಳುವ ತೀರ್ಥಂಕರರ ಮೂರ್ತಿಯು ಕಪ್ಪು ಶಿಲೆಯಿಂದಾಗಿದ್ದು ಪ್ರಭಾವಲಯ ಪಂಚಲೋಹದ್ದಾಗಿದೆ. ಮೂಲನಾಯಕ ಮೂರ್ತಿಯ ಕೆಳಗೆ ಸರ್ಪಲಾಂಛನವಿದೆ. ಮೂರ್ತಿಯ ಮುಖ ಪ್ರಸನ್ನವಾಗಿದೆ.ತೀರ್ಥಂಕರರನ್ನು “ನಮಸ್ತೆ ಪಾಶ್ರ್ವನಾಥಾಯ ಘಾತಿ ಕರ್ಮವಿನಾಶಿನೇ ನಾಗರಾಜೇಂದ್ರ ವಿಸ್ತೀರ್ಣ ಫಣಾಲಂಕೃತ ಮೂರ್ತಿಯೇ” ಎಂದು ಮೊದಲು ಸ್ತುತಿಸಲಾಗುತ್ತದೆ. ಈ ಬಸದಿಯು ೩೦೦ ವರ್ಷಗಳಷ್ಟು ಪ್ರಾಚೀನದ್ದಾಗಿದೆ ಹಾಗೂ ಮೂರ್ತಿ ೬೦೦ ವರ್ಷಗಳಷ್ಟು ಪ್ರಾಚೀನವಾಗಿದೆ. ಅಂದರೆ ೧೩ನೇ ಶತಮಾನದಲ್ಲಿ ನಿರ್ಮಾಣಗೊಂಡಿತ್ತು.

ಪೂಜಾ ವಿಧಾನ ಬದಲಾಯಿಸಿ

ತೀರ್ಥಂಕರರಿಗೆ ಅಭಿಷೇಕ ಮಾಡುವಾಗ “ಓಂ ಹೀಂ ಅರ್ಹಂ ಪವಿತ್ರತಂ ಜಲೇನ ಅಭಿಷೇಚಯಾಮಿ ಸ್ವಾಹಾ” ಎಂಬ ಮಂತ್ರವನ್ನು ಹೇಳುತ್ತಾರೆ. ಬಸದಿಯಲ್ಲಿ ದಿನಕ್ಕೆ ಬೆಳಿಗ್ಗೆ ಮಾತ್ರ ಅಭಿಷೇಕ ಪೂಜೆಗಳು ನಡೆಯುತ್ತವೆ. ಅಭಿಷೇಕವನ್ನು ನೀರು, ಹಾಲು, ಸೀಯಾಳ, ಗಂಧದಿಂದ ಮಾಡುತ್ತಾರೆ. ಬಸದಿಯಲ್ಲಿ ಇಬ್ಬರು ಪುರೋಹಿತರು. ಅವರು ಶ್ರೀ ಯಶೋಧರ ಇಂದ್ರರು ಮತ್ತು ಶ್ರೀ ರಾಜವೀರ ಇಂದ್ರರು. ಬಸದಿಯಲ್ಲಿ ಗಂಧಕುಟಿಯಿದೆ. ಆದರೆ ಒಳಗಡೆ ಮೂರ್ತಿಗಳಿಲ್ಲ. ಮೂರ್ತಿಗಳ ಪೈಕಿ ಪಂಚಪರಮೇಷ್ಠಿಗೆ ಅಭಿಷೇಕ ಪೂಜೆ ಮಾಡಲಾಗುತ್ತಿದೆ. ನೋಂಪಿ ವ್ರತ ಮಾಡಲಾಗುತ್ತದೆ. ನಾಲ್ಕು ಇತರ ತೀರ್ಥಂಕರರ ಮೂರ್ತಿಗಳು ಇಲ್ಲಿವೆ.

ಪೂಜಾ ವಿಶೇಷತೆ ಬದಲಾಯಿಸಿ

ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಶಿಲೆಯದ್ದಾಗಿದೆ. ಅದನ್ನು ದೇವಕೋಷ್ಠದಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ. ಮೂಲ ತೀರ್ಥಂಕರ ವಿಗ್ರಹದ ಕೆಳಗೆಯೂ ಅಮ್ಮನವರ ಇನ್ನೊಂದು ಮೂರ್ತಿ ಇದೆ. ಈ ಮೂರ್ತಿಯು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ. ಮೂರ್ತಿಗೆ ವಿಶೇಷ ದಿನಗಳಲ್ಲಿ ಸೀರೆ ಉಡಿಸುತ್ತಾರೆ. ಶುಕ್ರವಾರ ದಿನ ವಿಶೇಷ ಪೂಜೆ ಇದೆ. ಹೂ ಹಾಕಿ ನೋಡುವ ಕ್ರಮವಿದೆ. ಪೂಜೆಯಲ್ಲಿ ಪದ್ಮಾವತಿ ದೇವಿಗೆ ನೈವೇದ್ಯ, ಚರು ಮತ್ತು ಫಲವಸ್ತುಗಳನ್ನು ಸಮರ್ಪಿಸಲಾಗುತ್ತದೆ. ಪದ್ಮಾವತಿದೇವಿಗೆ ವಿಶೇಷ ಹರಕೆಗಳನ್ನು ಹೇಳಲಾಗುತ್ತದೆ. ಹರಕೆ ಹೇಳಿ ಈಡೇರಿದ ಘಟನೆಗಳ ಬಗ್ಗೆ ಅನೇಕ ಕಥೆಗಳಿವೆ. ಬ್ರಹ್ಮದೇವರ ಮೂರ್ತಿ ಇದೆ. ತೀರ್ಥಂಕರರ ಮೂರ್ತಿಯ ಕೆಳಭಾಗದಲ್ಲಿ ಸಣ್ಣ ಯಕ್ಷಯಕ್ಷಿಯರ ಮೂರ್ತಿಗಳಿವೆ.

ಪ್ರಾಂಗಣ ಬದಲಾಯಿಸಿ

ಈ ಬಸದಿಯ ಗರ್ಭಗೃಹದಿಂದ ಹೊರಗೆ ಬರುತ್ತಿರುವಂತೆ ಪ್ರಾರ್ಥನಾ ಮಂಟಪ ಮತ್ತು ಒಂದು ತೀರ್ಥಂಕರ ಮಂಟಪವಿದೆ. ಪ್ರಾರ್ಥನಾ ಮಂಟಪದಲ್ಲಿ ಜಪಗಳನ್ನು ಮಾಡಲಾಗುತ್ತದೆ. ಪ್ರಾರ್ಥನಾ ಮಂಟಪದ ಕಂಬಗಳ ಮೇಲೆ ಚಿತ್ರಗಳು ಅಥವಾ ಆಕೃತಿಗಳು ಇಲ್ಲ. ಆದರೆ ಇಲ್ಲಿ ಗೋಡೆಗಳ ಮೇಲೆ ಜೈನ ಕಥೆಗಳ ವರ್ಣ ಚಿತ್ರಗಳು ಇವೆ. ಇದರ ಹೊರಗಡೆ ಇರುವ ಜಗಲಿ ಟೈಲ್‍ನದ್ದಾಗಿದೆ. ದ್ವಾರಪಾಲಕರ ಬಣ್ಣದ ಚಿತ್ರಗಳು ಇವೆ. ಬೇರೆ ಕಲಾಕೃತಿಗಳು ಇಲ್ಲ. ಬಸದಿಯ ಎದುರು ಗೋಪುರ ಇದೆ. ಅದರ ಗೋಡೆಯ ಮೇಲೆ ಬಣ್ಣದ ಚಿತ್ರಗಳಿವೆ. ಈ ಗೋಪುರಗಳು ಬಂದವರಿಗೆ ಪೂಜೆಯ ವೇಳೆಯಲ್ಲಿ ಕುಳಿತುಕೊಳ್ಳುವ ಉದ್ದೇಶಕ್ಕೆ ಬಳಸಲಾಗುತ್ತಿದೆ. ಕಂಬಗಳು ಮರದವುಗಳಾಗಿವೆ.ಬಸದಿಯ ಸುತ್ತ ಅಂಗಳ ಇದೆ. ಪಾರಿಜಾತ ಹೂವಿನ ಗಿಡ ಇದೆ. ಕ್ಷೇತ್ರಪಾಲ ಸನ್ನಿಧಾನ ಇದೆ. ಆತನ ಮೂರ್ತಿ ಇದೆ. ಆತನ ಕೈಯಲ್ಲಿ ತ್ರಿಶೂಲ ಇದೆ. ಈ ಕ್ಷೇತ್ರಪಾಲನ ಕಾರಣಿಕ ಶಕ್ತಿಯ ವಿಶೇಷ ವಿಚಿತ್ರಗಳು ಏನೂ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಿಲಾಶಾಸನಗಳಿರುವ ಶಿಲಾಫಲಕಗಳನ್ನು ಹೋಲುವ ನೆಟ್ಟಗೆ ನಿಲ್ಲಿಸಿರುವ ನಾಲ್ಕು ಕಲ್ಲುಗಳಿವೆ.

ಜೀರ್ಣೋದ್ದಾರ ಬದಲಾಯಿಸಿ

ಬಸದಿಯು ೧೯೮೫ ರಲ್ಲಿ ಜೀರ್ಣೋದ್ದಾರವಾಗಿದೆ. ಆದರಿಂದಾಗಿ ಬಸದಿಯು ತೀರಾ ಹಳೆಯ ಸ್ಥಿತಿಯಲ್ಲಿ ಇಲ್ಲ. ಜೀರ್ಣೋದ್ದಾರವನ್ನು ಸಾರ್ವಜನಿಕರು ಮತ್ತು ಶ್ರಾವಕರು ಸೇರಿ ಮಾಡಿದ್ದಾರೆ. ಈಗ ಬಸದಿಯಲ್ಲಿ ಹಿಂದಿಗಿಂತ ಹೆಚ್ಚು ವ್ಯವಸ್ಥಿತವಾಗಿ ಅಭಿಷೇಕ ಪೂಜೆಗಳು ನಡೆಯುತ್ತಿವೆ. ಈ ಬಸದಿಗೆ ನಿರ್ಗ್ರಂಥ ಮುನಿಗಳಾದ ಆಚಾರ್ಯ ವಿಶ್ವನಂದಿ ಮುನಿಮಹಾರಾಜರು ಚಿತ್ತೈಸಿದ್ದರು. ಇದು ಕಾರ್ಕಳದ ಶ್ರೀಮಠ ಸಂಪ್ರದಾಯಕ್ಕೆ ಸೇರಿದುದಾಗಿದೆ. ಊರ ಪರವೂರ ಜೈನ ಶ್ರಾವಕರ ದೇಣಿಗೆಯಿಂದ ಬಸದಿ ನಡೆಯುತ್ತಿದೆ.ಈಗ ಧಾರ್ಮಿಕ ನಾಯಕರ ಮಾರ್ಗದರ್ಶನದಂತೆ ಅಭಿಷೇಕ, ಪೂಜಾದಿಗಳು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೨೦೨-೨೦೩.