ಸದಸ್ಯ:Bgupadhya/ನನ್ನ ಪ್ರಯೋಗಪುಟ

ವಾಯುಸ್ತುತಿಯು ಶ್ರೇಷ್ಠ ವಿದ್ವಾಂಸರಾದ ತ್ರಿವಿಕ್ರಮ ಪಂಡಿತರಿಂದ ರಚಿತವಾದ ಒಂದು ಪ್ರಸಿದ್ಧ ಸ್ತುತಿ. ಇದರಲ್ಲಿ ಅವರು ವಾಯುದೇವರ ಹಾಗೂ ಅವರ ೩ ಅವತಾರಗಳಾದ ಹನುಮ, ಭೀಮ ಹಾಗು ಮಧ್ವಾಚಾರ್ಯರ ಮಹಿಮೆಗಳನ್ನು ವರ್ಣಿಸುತ್ತಾರೆ. ದ್ವೈತ ಮತದ ಪ್ರತಿಪಾದಕರಾದ ಮಧ್ವಾಚಾರ್ಯರ ಸಮಕಾಲೀನರಾದ ತ್ರಿವಿಕ್ರಮ ಪಂಡಿತರು ಮೊದಲು ಅದ್ವೈತ ಮತದ ಉಪಾಸಕರಾಗಿದ್ದರು. ಆದರೆ ಮಧ್ವಾಚಾರ್ಯರ ಜೊತೆ ನಡೆಸಿದ ಚರ್ಚೆಯಲ್ಲಿ ಸೋತು ಮಧ್ವಾಚಾರ್ಯರ ಅಪಾರ ಜ್ಞಾನಕ್ಕೆ ಮನಸೋತು ದ್ವೈತ ಮತದ ಅಧ್ಯಯನ ಮಾಡಿ ವಾಯುಸ್ತುತಿಯಂತಹ ಅನೇಕ ಸ್ತುತಿಗಳನ್ನು ಬರೆದರು.  ತ್ರಿವಿಕ್ರಮ ಪಂಡಿತರು ಮಧ್ವಾಚಾರ್ಯರ ಅಚ್ಚುಮೆಚ್ಚಿನ ಗ್ರಹಸ್ಥ ಶಿಷ್ಯರಾಗಿದ್ದರು. ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯಕ್ಕೆ ಅವರ ಅಪೇಕ್ಷೆಯಂತೆ ಟಿಪ್ಪಣಿಯನ್ನು ಇವರು ಬರೆದರು. ಇವರು ರುದ್ರದೇವರ ಅವತಾರವೆಂದೂ ಒಂದು ಐತಿಹ್ಯ ಇದೆ.

ತ್ರಿವಿಕ್ರಮ ಪಂಡಿತರು ಇದನ್ನು ರಚಿಸಲು ಕಾರಣಕ್ಕೂ ಒಂದು ಕಥೆ ಇದೆ. ಉಡುಪಿಯಲ್ಲಿ ಮಧ್ವಾಚಾರ್ಯರು ಶ್ರೀ ಕೃಷ್ಣನ ಪೂಜೆ ಅಂಗವಾಗಿ ನೈವೇದ್ಯ ಮಾಡುವಾಗ ತ್ರಿವಿಕ್ರಮ ಪಂಡಿತರು ದ್ವಾದಶ ಸ್ತೋತ್ರ ಪಾರಾಯಣ ಮಾಡುತಾ ಇದ್ದರು. ನೈವೇದ್ಯ ಆಗುವಾಗ ಪರದೆ ಹಾಕಿ ಸಮರ್ಪಣೆ ಮಾಡುವುದು ಸಂಪ್ರದಾಯ. ನೈವೇದ್ಯ ಆದ ಮೇಲೆ ಘಂಟೆ ಬಾರಿಸಿ ನೈವೇದ್ಯ ಮುಗಿದ ಸೂಚನೆ ಕೊಡುವುದು ಕ್ರಮ. ಒಂದು ದಿನ ಎಷ್ಟು ಸಮಯ ಕಳೆದರೂ ಘಂಟೆ ಶಬ್ದ ಬರಲಿಲ್ಲ.  ಆಶ್ಚರ್ಯಗೊಂಡ ತ್ರಿವಿಕ್ರಮ ಪಂಡಿತರು ಕುತೂಹಲದಿಂದ ಪರದೆ ಸರಿಸಿ ನೋಡುತ್ತಾರೆ.  ಅಲ್ಲಿ ಅವರಿಗೆ ಮಧ್ವಾಚಾರ್ಯರು ತನ್ನ ಮೂರು ರೂಪದಿಂದ ದೇವರ ಉಪಾಸನೆ ಮಾಡುವುದು ನೋಡುತ್ತಾರೆ. ಹನುಮನು ರಾಮನನ್ನು, ಭೀಮನು ಕೃಷ್ಣನನ್ನು ಹಾಗು ಮಧ್ವಾಚಾರ್ಯರು ಭಗವಾನ್ ವೇದವ್ಯಾಸರನ್ನು ಪೂಜಿಸುವುದನ್ನು ನೋಡಿ ಭಕ್ತಿಯಿಂದ ವಾಯುಸ್ತುತಿ ರಚಿಸಿದರು.