ಸದಸ್ಯ:Balyada lavakumar/ನನ್ನ ಪ್ರಯೋಗಪುಟ
ಕಬಿನಿ ಹಿನ್ನೀರಲ್ಲಿ ಅಪರೂಪದ ಅತಿಥಿ ಧೈತ್ಯಗಜ
ಮೈಸೂರ ಕಬಿನಿ ಜಲಾಶಯದ ಹಿನ್ನೀರು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಸೌಂದರ್ಯವನ್ನು ಸವಿಯಲೆಂದು ಜನ ಇತ್ತ ದೌಡಾಯಿಸಿದರೆ, ಪಕ್ಕದ ನಾಗರಹೊಳೆ ಅಭಯಾರಣ್ಯದಿಂದ ವಿವಿಧ ಪ್ರಾಣಿಗಳು, ಪಕ್ಷಿಸಂಕುಲಗಳು ನೀರು ಕುಡಿದು ದಣಿವಾರಿಸಿಕೊಳ್ಳಲು ಬರುತ್ತವೆ.
ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹಿನ್ನೀರಿನಲ್ಲಿ ಪ್ರಾಣಿಗಳ ದಂಡುಗಳು ಕಂಡು ಬರುತ್ತವೆ. ಇವು ಎಲ್ಲ ದಿನಗಳಲ್ಲಿ ಕಾಣಲು ಅಸಾಧ್ಯ. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಮಾತ್ರ ಕಂಡು ಬರುತ್ತದೆ. ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡ್ಡಾಡುವುದರಿಂದ ಪ್ರತಿದಿನವೂ ಇಲ್ಲಿಗೆ ಬಾರದೆ ಯಾವತ್ತಾದರೊಮ್ಮೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸುತ್ತಿವೆ.
ಸಾಮಾನ್ಯವಾಗಿ ನೀರು ಕುಡಿಯಲು ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತವೆ. ಆದರೆ ಭಾರೀ ಗಾತ್ರದ, ಉದ್ದದ ಕೋರೆಯ ಕಾಡಾನೆಯೊಂದು ಅಪರೂಪಕ್ಕೆ ಕಾಣಿಸಿಕೊಂಡು ಗಮನಸೆಳೆಯುತ್ತಿದೆ.
ತನ್ನ ಪಾಡಿಗೆ ತಾನಾಯಿತು ಎಂಬಂತೆ ಅರಣ್ಯದಲ್ಲಿ ಸುತ್ತಾಡುತ್ತಾ ಆಗೊಮ್ಮೆ, ಈಗೊಮ್ಮೆ ಕಬಿನಿ ಹಿನ್ನೀರಿನಲ್ಲಿ ನೀರು ಕುಡಿದು ಅರಣ್ಯದತ್ತ ಹೆಜ್ಜೆ ಹಾಕುವ ಈ ಆನೆ ಹಲವರಿಗೆ ಕುತೂಹಲದ ಪ್ರಾಣಿಯಾಗಿ ಕಾಣುತ್ತಿದೆ. ಕಾರಣ ಇದು ಎಲ್ಲ ಆನೆಗಳಂತೆ ಇಲ್ಲ. ಒಂದಷ್ಟು ವಿಭಿನ್ನವಾಗಿಯೂ, ಧೈತ್ಯಕಾರವಾಗಿಯೂ ಇರುವ ಈ ಆನೆಯ ವೈಶಿಷ್ಟ್ಯ ಏನೆಂದರೆ ಉದ್ದವಾದ ಕೋರೆಗಳು. ಇಷ್ಟೊಂದು ಉದ್ದದ ಕೋರೆಗಳು ಆನೆಗಳಿಗೆ ಇರುವುದು ಅಪರೂಪ ಆದರೆ ಈ ಆನೆಗೆ ಅದುವೇ ಭೂಷಣ.
ಸಾಮಾನ್ಯವಾಗಿ ಇತ್ತ ಕಡೆ ಬರುವ ಪ್ರವಾಸಿಗರು ತಮ್ಮ ಕ್ಯಾಮರಾಕ್ಕೆ ಆ ಕಾಡಾನೆ ಸಿಗುತ್ತಾ ಎಂದು ಕುತೂಹಲದಿಂದ ಕಾಯುತ್ತಾರೆ. ಒಂದು ವೇಳೆ ಸಿಕ್ಕರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಅರಣ್ಯ ಇಲಾಖೆಗಳ ಮೂಲಗಳು ತಿಳಿಸುವಂತೆ ಈ ಆನೆಗೆ ಅಂದಾಜು ೭೦ವರ್ಷ ವಯಸ್ಸಿರಬಹುದಂತೆ. ಇದರ ಕೋರೆ ಅಂದಾಜು ೪ ಅಡಿ ಇದೆಯಂತೆ. ದೈತ್ಯ ದೇಹ ಹೊಂದಿದ ಈ ಆನೆಯ ಹಣೆಭಾಗ ಅಗಲವಾಗಿ, ಕಿವಿಯು ಮೊರದಗಲವಿದೆ.
ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ಈ ಆನೆಯ ನಡಿಗೆಯಲ್ಲಿಯೂ ಗಾಂಭೀರ್ಯತೆಯಿದೆ. ನಾಡಿಗೆ ಬಂದು ಉಪಟಳ ಮಾಡಿದ ನಿದರ್ಶನವಿಲ್ಲ. ಹಿಂಡಿನೊಂದಿಗೆ ಮೊದಲೆಲ್ಲ ಕಾಣಿಸಿಕೊಳ್ಳುತ್ತಿದ್ದಾದರೂ ಇತ್ತೀಚೆಗೆ ಹೆಚ್ಚಾಗಿ ಏಕಾಂಗಿಯಾಗಿ ಮೇವು ತಿನ್ನುತ್ತಾ, ನೀರುಕುಡಿಯುತ್ತಾ ಸಾಗುತ್ತಿರುತ್ತದೆಯಂತೆ.
ಹಾಗೆನೋಡಿದರೆ ಇವತ್ತು ವಿವಿಧ ಆನೆಶಿಬಿರಗಳಲ್ಲಿ ಕಾಣಸಿಗುವ ಆನೆಗಳ ಪೈಕಿ ಹೆಚ್.ಡಿ.ಕೋಟೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಆನೆಗಳೆಲ್ಲವೂ ದೈತ್ಯ ಗಾತ್ರ ಹೊಂದಿದ ಆನೆಗಳಾಗಿವೆ.