ಕಾಡೆಮ್ಮೆ ಕುಣಿತ

ಬದಲಾಯಿಸಿ

ಮುನ್ನುಡಿ

ಬದಲಾಯಿಸಿ

ಮೈಸೂರು ಜಿಲ್ಲೆ ಕೊಳ್ಳೇಗಾಲದಲ್ಲಿ ಕಂಡು ಬರುವ ಒಂದು ವಿಶಿಷ್ಟ ಕಲೆ 'ಕಾಡೆಮ್ಮೆ ಕುಣಿತ'. ಮಾರಿ ಉತ್ಸವದ ಕಾಲದಲ್ಲಿ ನಡೆಯುವ ಕುಣಿತ ಮಾರಿಯ ಪ್ರೀತ್ಯರ್ಥವಾಗಿ ಕಾಡೆಮ್ಮೆಯನ್ನು ಜೀವಂತ ಹಿಡಿದು ಹೊತ್ತು ತಂದು ಬಲಿ ಕೊಡುವ ಸಂಕೇತವೆಂಬಂತೆ ಕಾಣುತ್ತದೆ. ಕಾಡಿನ ಪರಿಸರದ ಹಳ್ಳಿಗಳಲ್ಲೇ ಕಂಡು ಬರುವುದರಿಂದ ಈ ಮಾತಿಗೆ ಪುಷ್ಠಿ ದೊರಕುತ್ತದೆ. ಕುಣಿತದಲ್ಲಿ ಹಳ್ಳಿಯ ಬಹುತೇಕ ಪುರುಷರು ಯಾವುದೇ ಭೇದವಿಲ್ಲದೆ ಪಾಲುಗೊಳ್ಳುತ್ತಾರೆ.

ಆಕೃತಿ ತಯಾರಿಕೆ

ಬದಲಾಯಿಸಿ

ಕುಣಿತದಲ್ಲಿ ಆಕರ್ಷಣೀಯ ದೃಶ್ಯವೆಂದರೆ 'ಕಾಡೆಮ್ಮೆ'ಯ ಆಕೃತಿ. ಇದು ಸುಮಾರು ೨೦ ಅಡಿ ಉದ್ದದ ದರ್ಬೆಯಿಂದ ತಯಾರು ಮಾಡಿದ ಹಂದರ. ಬಿದಿರಿನ ದರ್ಬೆಯನ್ನು ಕಮಾನಿನ ರೀತಿಯಲ್ಲಿ ಬಾಗಿಸಿ ಕಾಡೆಮ್ಮೆ ಆಕಾರ ಬರುವಂತೆ ಮಾಡುತ್ತಾರೆ. ಕಾಡೆಮ್ಮೆಯ ತಲೆ ಮತ್ತು ಬಾಲಗಳನ್ನು ಸಹ ಆರೇಳು ಅಡಿ ಉದ್ದದ ತೆಳು ಬಿದಿರಿನ ದರ್ಬೆಯಿಂದಲೇ ತಯಾರಿಸಿ ಅದರ ಮೇಲೆ ಬಟ್ಟೆ ಸುತ್ತಿರುತ್ತಾರೆ. ತಲೆಯು ಕಟ್ಟಿಗೆಯಿಂದ ತಯಾರಾದದ್ದೇ. ಕೊಂಬು, ನಾಲಿಗೆ, ಕಣ್ಣು, ಕಿವಿ ಎಲ್ಲವೂ ಇರುವಂತೆ ಇದರ ರಚನೆಯಾಗಿರುತ್ತದೆ.

ಬಣ್ಣಗಳು

ಬದಲಾಯಿಸಿ

ಕೊಂಬುಗಳಲ್ಲಿ ಒಂದಕ್ಕೆ ಬಿಳಿಯ ಬಣ್ಣ ಇನ್ನೊಂದಕ್ಕೆ ಕೆಂಪು ಬಣ್ಣ ಹಚ್ಚಾಲಾಗಿರುತ್ತದೆ. ಕಿವಿ ಮತ್ತು ನಾಲಿಗೆಗಳಿಗೂ ಕೆಂಪು ಬಣ್ಣವೇ. ಮುಖದ ಭಾಗಕ್ಕೇ ಕಪ್ಪು ಬಣ್ಣ ಬಳಿದಿದ್ದರೆ, ಬಿದಿರಿನ ಹಂದರದ ಮೇಲಕ್ಕೆ ಕರಿ ಕಂಬಳಿ ಹೊದಿಕೆಯಿರುತ್ತದೆ. ಮೇಲ್ನೋಟಕ್ಕೆ ಬೃಹದಾಕಾರದ ಕಾಡೆಮ್ಮೆಯಂತೆ ಕಾಣುವ ಈ ಆಕೃತಿಗೆ ಕಾಲುಗಳಿರುವುದಿಲ್ಲ.

ಕುಣಿತದ ಬಗೆ

ಬದಲಾಯಿಸಿ

ಹೆಗಲ ಮೇಲೆ ಹೊತ್ತು ಕುಣಿಯಲು ಅನುಕೂಲವಾಗುವಂತೆ ಕೆಳ ಭಾಗದಲ್ಲಿ ದೊಡ್ಡ ದೊಡ್ಡ ಎರಡು ಬಿದಿರಿನ ಬೊಂಬುಗಳನ್ನು ಎರಡು ಕಡೆ ಉದ್ದಕ್ಕೂ ಕಟ್ಟಲಾಗಿರುತ್ತದೆ. ಹಂದರದೊಳಗೆ ಒಬ್ಬ ವ್ಯಕ್ತಿ ನಿಂತುಕೊಂಡು 'ಕಾಡೆಮ್ಮೆಯ' ಕಿವಿ ಮತ್ತು ನಾಲಿಗೆಗಳನ್ನು ಆಡಿಸಲು ಅನುಕೂಲವಾಗುವಂತೆ ಅವನ್ನು ಸಡಿಲಾವಾಗಿ ಜೋಡಿಸಲಾಗಿರುತ್ತದೆ. ಸಾಮಾನ್ಯವಾಗಿ ಆಗ ತಾನೇ ತಂದ ಹಸಿರು ಬಿದಿರೇ ಈ ಆಕೃತಿ ತಯಾರಿಕೆಗೆ ಅನುಕೂಲ. ಏಕೆಂದರೆ ಅದು ಸುಲಭವಾಗಿ ಬಾಗುತ್ತದೆ. ಆಕೃತಿ ತಯಾರಕರೂ ಅನುಭವಸ್ಥರೇ ಆಗಿರಬೇಕು. ಮಾರೀ ಹಬ್ಬದ ದಿನದಂದು ಮಾರಿ ಪೂಜೆಯ ವಿಧಿಗಳೆಲ್ಲ ಮುಗಿದ ನಂತರ ರಾತ್ರಿ ವೇಳೆ ರಂಗದ ಕುಣಿತ, ವೀರ ಮಕ್ಕಳ ಕುಣಿತ ನಡೆಯುತ್ತದೆ. ಮಧ್ಯರಾತ್ರಿಯ ಹೊತ್ತು ಆಗುತ್ತಿದಂತೆ ಕಾಡೆಮ್ಮೆ ದೊಡ್ಡಿನ ಕುಣಿತದ ಆರಂಭ. ಬಿದಿರಿನ ಹಂದರ ಹೊತ್ತವರಿಂದ ಡೋಲು ಮತ್ತು ತಮಟೆ ವಾದ್ಯಗಳಿಗೆ ತಕ್ಕಂತೆ ಕುಣಿತ ರಾತ್ರಿಯೆಲ್ಲ ಸಾಗುತ್ತದೆ. ಕಾಡೆಮ್ಮೆ ಆಕೃತಿಯ ಮುಂದೆ ಸೋಲಿಗರ ವೇಷದವರು ಕುಣಿಯುತ್ತಾರೆ. ಕುಣಿತದಲ್ಲಿ ಹಿಗ್ಗು - ಹರ್ಷಗಳೇ ಪ್ರಧಾನ. ಕಾಡೆಮ್ಮೆ ದುಷ್ಟ ಶಕ್ತಿಯ ಸಂಕೇತವು ಹೌದು. ದುಷ್ಟ ಶಕ್ತಿಯನ್ನು ದಮನ ಮಾಡಿದ ಹಿಗ್ಗಿನ ಅಭಿವ್ಯಕ್ತಿ ಆ ವಾದ್ಯಗಳ ಬಡಿತ ಮತ್ತು 'ಕಾಡೆಮ್ಮೆ ಕುಣಿತ'.

ಉಲ್ಲೇಖ

ಬದಲಾಯಿಸಿ
  1. ಗೊ.ರು. ಚನ್ನಬಸಪ್ಪ, ಕರ್ನಾಟಕ ಜಾನಪದ ಕಲೆಗಳು, ಬೆಂಗಳೂರು