ಸತ್ಯದೇವತೆ (ಹೊಸ ಭೂತ)
  ತುಳುನಾಡಿನಲ್ಲಿ ಪ್ರಾದೇಶಿಕವಾಗಿ ಪೂಜೆ ಪಡೆಯುವ ಗಂಡು-ಹೆಣ್ಣು ದೈವಗಳು ಬೇಕಾದಷ್ಟಿವೆ, ಆದರೆ ಇಂತಹ ಶಕ್ತಿಗಳಿಗೆ ಪ್ರಾದೇಶಿಕ ನೆಲೆಯಲ್ಲಿ ಪೂಜೆ ಸಲ್ಲುವುದೇ ವಿನಹಾ ಅವುಗಳು ತುಳುನಾಡಿನಾದ್ಯಂತ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದು ತಿಳಿಯುವುದಿಲ್ಲ.
   ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ನಂಬಿಕೊAಡು ಬರುವವರು ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊAಡು ಬರಲಾಗುತ್ತಿದೆ. ಈ ದೈವದ ಹುಟ್ಟು ಪ್ರಸರಣದ ಕುರಿತಾಗಿ ಪಾರ್ದನ ಲಭ್ಯವಾಗಿಲ್ಲ. ಸತ್ಯದೇವತೆಯ ಕುರಿತಾಗಿ ಈ ಕೆಳಗಿನ ಮಾಹಿತಿ ಮಾತ್ರ ದೊರಕುವುದು.
  ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಹೊಸ ಭೂತವಾಗಿ ಮನೆಯ ಯಜಮಾನ್ತಿಯಾಗಿ ಕೊಂಗನಾಡಿನ ಸತ್ಯ ಶಕ್ತಿಯೆಂಬ ಕೀರ್ತಿಯನ್ನು ಪಡೆದುಕೊಂಡು, ಪೊಳಲಿಯಲ್ಲಿ ಅಮ್ಮುಂಜೆ ಗುತ್ತಿನಲ್ಲಿ ದೇವಿ ಸತ್ಯದೇವತೆ, ಭದ್ರಕಾಳಿ ಶಕ್ತಿಯೆಂದು ಕರೆಸಿಕೊಂಡು ಮನೆತನದಿಂದ ಹಾಲು ಸ್ವೀಕರಿಸಿದರು.
   ತುಳುನಾಡಿನ ಎಲ್ಲೆಡೆ ಮೂಲ ಮೈಸಂದಾಯನಿಗೆ ದೈವಗಳ ಸಾಲಿನಲ್ಲಿ ಪ್ರಥಮ ಪೂಜೆ ಸಲ್ಲುವುದು ಮೂಲ ಮೈಸಂದಾಯ-ಮಹಿಷಾ (ಕೋಣ)ವಾಗಿರುವುದು. ಕೆಲವೆಡೆ ಎತ್ತು/ಹೋರಿ ಎಂಬುದಾಗಿಯೂ ಹೆಸರಿಸಲಾಗುವುದು. ಈ ದೈವಶಕ್ತಿ ಗೆ ರಕ್ತಹಾರದ ಸೇವೆ ನಡೆಯುವುದಿಲ್ಲ. ಆದರೆ ಮೂಲ ಮೈಸಂದಾಯ ಪೂಜೆ ಪಡೆಯುವ ಎಲ್ಲಾ ಮಣೆಮಂಚದಲ್ಲೂ ರಕ್ತಾಹಾರದ ದೈವಗಳಿರುವುದೇ ಹೆಚ್ಚು.
   ಮೂಲ ಮೈಸಂದಾಯನಿರುವಲ್ಲಿ ಮೊದಲ ಪೂಜೆ ಅದೇ ದೈವಕ್ಕೆ ನಡೆಯುವುದು. ಅದೇ ಮಣೆ ಮಂಚದಲ್ಲಿ ಯಾ ಸ್ಥಾನದಲ್ಲಿ ‘ಸತ್ಯದೇವತೆಯು’ ನೆಲೆಯಾಗಿದ್ದಾರೆ. ಪ್ರಧಾನ ದೈವಕ್ಕೆ ಸೇವೆ ನಡೆಯುವ ಮೊದಲು, ಮೂಲ ಮೈಸಂದಾಯನ ಸೇವೆಯಾದ ಬಳಿಕ ಸತ್ಯ ದೇವತೆಯ ಪೂಜೆ ನಡೆಯುವುದು. ಹರಕೆ ಯಾ ಕಾಲವಧಿಯ ಕೋಲ ನಡೆಯುವ ಸಂದರ್ಭಗಳಲ್ಲೂ ಇದೇ ಕ್ರಮವನ್ನು ಅನುಸರಿಸುವರು.
  ಪಂಜುರ್ಲಿ ಮೊದಲಾಗಿ ಯಾವುದೇ ಪ್ರಧಾನ ದೈವವಿದ್ದರೂ ಸತ್ಯ ದೇವತೆಯನ್ನು ‘ತಾಯಿಯ’, ‘ಒಡತಿಯ’ ಸ್ವರೂಪ ಕೊಟ್ಟು ಆರಾಧಿಸುವರು. ಆದುದರಿಂದ ಪ್ರಧಾನ ದೈವತಾ ಮಂಚದ ಬಲದಲ್ಲಿ ಬೇರೆಯೇ ಮಂಚದಲ್ಲಿ ಸತ್ಯದೇವತೆಯ ಪೂಜೆ ನಡೆಯುವುದು.
    ಸತ್ಯ ದೇವತೆಗೆ ಮನೆಯ ಒಡತಿ, ಯಜಮಾನ್ತಿ ಎಂದೇ ಗೌರವವಿದೆ. ಇತರ ದೈವಗಳಂತೆ ಹೆಂಗಸರು ಈ ದೈವದ ಬಳಿ ಸುಳಿಯಬಾರದು ಎಂಬ ನಿರ್ಬಂಧ ಇರುವುದಿಲ್ಲ. ಸಾಮಾನ್ಯವಾಗಿ ದೈವದ ಸ್ಥಾನ ಚಾವಡಿಯನ್ನು ಬಿಟ್ಟು 'ಚಾವಡಿಯ ಭಾವ' ಲ್ಲಿ ಸಣ್ಣ ಮಂಚವನ್ನು ತಯಾರಿಸಿ ಗೋಡಿಗೆ ಆನಿಸಿದ ಮದನ ಕೈಗೆ ಜೋಡಿಸುವರು. ಸಣ್ಣ ಕಂಚು ಲೋಹದ ಮೂರ್ತಿಯ ರೂಪದಲ್ಲಿ ಆರಾಧನೆ ನಡೆಯುವುದು. ಸಾಧಾರಣ ೯ ಇಂಚು ಗಾತ್ರದ ನಿಂತಿರುವ ಸತ್ಯ ದೇವತೆಯ ಮೂರ್ತಿ ಇರುವುದು. ಮೂರ್ತಿಯ ಜೊತೆ ನಾಗಬೆತ್ತವನ್ನು ಇರಿಸಿ ಆರಾಧನೆ ಮಾಡುವರು. ಇದೇ ರೀತಿ ಈ ದೈವಕ್ಕೆ ಮನೆಯ ಮುತ್ತೈದೆಯರು ನೀರು ಇಟ್ಟು ಪೂಜೆ ಮಾಡಬಹುದಾಗಿದೆ.
  ತುಳುನಾಡಿನ ತೆಂಕು ಮತ್ತು ಪೂರ್ವ ದಕ್ಷಿಣವಲಯದಲ್ಲಿ ಎಲ್ಲಾ ದೈವಗಳಿಗೆ ಕೋಲ ನಡೆಯುವ ಸಂದರ್ಭದಲ್ಲಿ 'ಉಲ್ಲಾಲ್ದಿ'ಗೆ ಅಗ್ರಮಾನ್ಯವಾದ ಮರ್ಯಾದೆಯನ್ನು ನೀಡುವ ಕ್ರಮವಿರುವುದು. ಉಳ್ಳಾಲ್ದಿ ಅಂದರೆ ಒಡತಿ- ಈ ಪ್ರದೇಶದಲ್ಲಿ ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ ಮೊದಲಾದ ದೇವಿ ಶಕ್ತಿಗಳನ್ನು ದೈವ ಭಾಷೆಯಲ್ಲಿ ಉಳ್ಳಾಲ್ದಿ ಎಂದು ಸಂಬೋಧಿಸಲಾಗಿದೆ.
   ಕೋಲ ನಡೆಯುವ ಗ್ರಾಮದಲ್ಲಿ ಈ ಉಳ್ಳಾಲ್ದಿಯ ಕ್ಷೇತ್ರವಿದ್ದಲ್ಲಿ ಕೋಲದ 'ಮತ್ತಾರ್ನೆ'ಯಲ್ಲಿ ಉಳ್ಳಾಲ್ದಿಗೆ ಗೌರವ ಸೂಚಕವಾಗಿ ಒಂದು ಕಲಶ ಸ್ಥಾಪನೆ ಮಾಡಲಾಗುವುದು. ಮತ್ತಾರ್ನೆಯಲ್ಲಿ ಇತರ ಎಲ್ಲಾ ದೈವಗಳ ಸ್ಥಾನಮಾನಗಳ ಬಲಭಾಗದಲ್ಲಿ ಉಳ್ಳಾಲ್ದಿಯ ‘ಗದ್ದಿಗೆ’ ಸ್ಥಾಪಿಸುವರು. ಇದನ್ನು ‘ಅಮ್ನೂರು’ ಎಂದು ಕರೆಯುವರು. ಕಲಶ ರೂಪದಲ್ಲಿ ಕೆಂಪು ಪಟ್ಟೆಯನ್ನು ಅಲಂಕರಿಸಿ ಸ್ಥಾಪಿಸುವ ಈ ಗದ್ದಿಗೆೆಯು ದೇವಿ ಕುಳಿತಂತೆ ಮನೋಜ್ಞವಾಗಿ ಭಾವುಕರನ್ನು ಆಕರ್ಷಿಸುವುದು.
  ಒಂದೆಡೆ ಮನೆಯೊಡತಿಯಾದ ‘ಪೊಸಭೂತ’ ವನ್ನು ಸೌಮ್ಯಶಕ್ತಿಯಾಗಿ ಚಿತ್ರೀಕರಿಸಿದೆ. ‘ಚಾವಡಿಯ ಭಾವ’ ದಲ್ಲಿ ಹೆಂಗಸರಿAದ ಪೂಜೆ ಪಡೆಯುವ ಶಕ್ತಿಯಾಗಿ ರೂಪಿಸಲಾಗಿದೆ. ಆದರೆ ದೈವ ನರ್ತಕನ ಮುಖವರ್ಣಿಕೆ ಭಾವಭಂಗಿ, ನರ್ತನ ಇವೆಲ್ಲವೂ ಉಗ್ರ ಸ್ವರೂಪವನ್ನು ಬಿಂಬಿಸುತ್ತವೆ. ಜಾಗ-ಜಾಗದ ಮರ್ಯಾದೆ ನಡೆಸುವ ಸಂದರ್ಭದಲ್ಲಿ ದೈವನರ್ತಕ ಮುಖದಲ್ಲಿ ಸೌಮ್ಯಕಳೆ ತೋರುವುದಿಲ್ಲ. ಇಲ್ಲಿಯ ಭಾವಭಂಗಿಗಳನ್ನು ಸೂಕ್ಷ್ಮದಲ್ಲಿ ಅವಲೋಕಿಸಿದರೆ ಕಲ್ಕುಡನ ಸಹೋದರಿ ‘ಕಲ್ಲುರ್ಟಿ’ಯ ಕಾರ್ಯಭಾರವನ್ನು ನಮಗೆ ನೆನಪಿಸುವುದು. ಹಾಗಾಗಿ ಈ ಶಕ್ತಿ ಕಲ್ಕುಡನ ಸಹೋದರಿಯ ಒಂದು ಪ್ರಭೇದವೇ ಆಗಿರಬೇಕು ಎಂದು ಅಭಿಪ್ರಾಯ ಪಡಲಾಗಿದೆ ಸತ್ಯದೇವತೆಯ ಕುರಿತಾಗಿ ಗೊಂದಲವಿರುವುದು ಸ್ಪಷ್ಟ.
ಸತ್ಯದೇವತೆಗೆ ಕೋಲ
  ಪ್ರಧಾನ ದೈವಗಳಿಗಿಂತ ಮೊದಲು ಮೂಲಮೈಸಂದಾಯ ದೈವವು ಆ ಮನೆತನದ ಮಣೆಮಂಚದಲ್ಲಿ ನಂಬಲ್ಪಟ್ಟಿದ್ದರೆ, ಮೂಲಮೈಸಂದಾಯನ ಕೋಲದ ಬಳಿಕ ಸತ್ಯದೇವತೆಯ ಕೋಲ ನಡೆಯುವುದು.
 ದೈವ ನರ್ತಕನ ಮುಖ ವರ್ಣಿಕೆಯಲ್ಲಿ ಕಪ್ಪು ಬಣ್ಣ ಪ್ರಧಾನವಾಗಿರುವುದು. ಮುಖದಲ್ಲಿ ಕಣ್ಣಿನ ಸುತ್ತಮುತ್ತ ಇತರೆಡೆ ಬಿಳಿ ಬಣ್ಣದ ಬೊಟ್ಟಗಳನ್ನು ಸಾಲಾಗಿ ವಿನ್ಯಾಸ ರೂಪದಲ್ಲಿ ಬರೆಯುವರು. ಕಣ್ಣುಗಳ ಸುತ್ತ ಕ್ರೋಧ ಸೂಚಕವಾದ ರೀತಿ ಕೆಂಪನೆಯ ಪಟ್ಟಿಗಳನ್ನು ಬಿಡಿಸುವರು.
 ಬೆಳ್ಳಿಯ ಅಂದವಾದ ತಲೆಮಣಿ ಮತ್ತು ಕರ್ಣಾಭರಣಗಳು ಅದನ್ನು ಕೇಪುಳ, ಮಲ್ಲಿಗೆ, ಅಬ್ಬಲಿಗೆ ಹೂಗಳಿಂದ ಅಲಂಕರಿಸುವರು. ಸೊಂಟದ ಮೇಲೆ ಬರಿಮೈ ತೋಳು, ಉದರಭಾಗ ಮತ್ತು ಬೆನ್ನಿನ ಬಿಳಿಯ ದಪ್ಪನೆಯ ಅಡ್ಡನಾಮವಿಡುವರು. ಇದು ಶೈವಾರಾಧನೆಯ ಸಂಕೇತವನ್ನು ಪ್ರತಿಬಿಂಬಿಸುವುದು, ಅದರ ಜೊತೆಗೆ ‘ಅರದಾಲ’ ದಿಂದ ಬಣ್ಣದ ಪಟ್ಟಿ ಬರೆಯುವರು.
  ಗಗ್ಗರದ ಪ್ರಥಮ ಚರಣದ ಸೇವೆ ನಡೆದ ಬಳಿಕ ಗಗ್ಗರವನ್ನು ಕಾಲಿಗೆ ಕಟ್ಟುವರು. ಗಗ್ಗರ ಕಟ್ಟುವಲ್ಲಿ ಬಡಗಲಾಗಿನ ಉಡುಪಿ ವಲಯಕ್ಕಿಂತ ಭಿನ್ನತೆ ಮತ್ತು ವಿಶೇಷತೆ ಇದೆ. ಬಡಗಲಾಗಿನಂತೆ ಕಾಲಿನ ಪಾದದ ಮೇಲ್ಭಾಗದಲ್ಲಿ ಗಗ್ಗರ ಕಟ್ಟುವುದಿಲ್ಲ. ಪಾದಮೂಲವನ್ನು ಬಿಟ್ಟು ಸುಮಾರು ಆರು ಅಂಗುಲ ಮೇಲ್ಬಾಗಕ್ಕೆ ಗಗ್ಗರದ ಕೆಳತುದಿ ಬರುವಂತೆ ಜೋಡಿಸಿ ಮೇಲ್ತುದಿಯನ್ನು ನೇರವಾಗಿ ಕಟ್ಟುವರು. ಹೀಗೆ ಜೋಡಿಸಿದ ಗಗ್ಗರವು ದೈವನರ್ತಕನ ಕಾಲಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ. ಬಡಗಿನಂತೆ ಗಗ್ಗರದ ಒಳಪದರಿಗೆ ಅಡಿಕೆಯ ಹಳೆಯ ಕವಚವನ್ನು ಕಟ್ಟುವುದಿಲ್ಲ. ದೈವನರ್ತಕನಿಗೆ ಕಟಿ ಪ್ರದೇಶದ ಕೆಳ ಭಾಗಕ್ಕೆ ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕೆಂಪು ಬಟ್ಟೆ ಉಡಿಸುವರು.ಅದರ ಮೇಲೆ ಬಣ್ಣ ಬಣ್ಣದ ನೆರಿಗೆಯಿರುವ ಬಟ್ಟೆಯನ್ನು ತೊಡಿಸುವರು. ಗಗ್ಗರ ಸೇವೆ ಕುಳಿತ ಭಂಗಿಯಲ್ಲಿ ನಡೆಯುವುದು, ಪ್ರಾರಂಭದಲ್ಲಿ ಒಂದು ಊದುಬತ್ತಿಯನ್ನು ಬೆಂಕಿ ಹಚ್ಚಿ ತಲೆಮಣಿಗೆ ಹೊಂದಿಸಿಕೊಳ್ಳುವ ಕ್ರಮವು ಇದೆ. ಇದು ದೀವಟಿಗೆಯನ್ನು ಸಂಕೇತಿಸುತ್ತದೆ.

ಸತ್ಯ ದೇವತೆಯ ಕುರಿತಾಗಿ ಪ್ರಥಮದಲ್ಲಿ ಮದಿಪು ಹೇಳುವಾಗ ಈ ರೀತಿ ಪ್ರಾರ್ಥಿಸುವರು.

ಬಡಗಲಾಗೆ ಬಾರ್ಕೂರು ಹೋಬಳಿಯಲ್ಲಿ ದೇವತೆಯಾಗಿ ಮೆರೆದಿರುವ ಶಕ್ತಿ, ತೆಂಕಣ ರಾಜ್ಯಕ್ಕೆ ಕಾಳಿ-ಮಹಾಕಾಳಿಯಾಗಿ, ಕೊಂಗನಾಡಿನ ಶಕ್ತಿಯಾಗಿ, ಹೊಸ ಭೂತ ಎನ್ನುವ ಕೀರ್ತಿಯನ್ನು ಪಡೆದುಕೊಂಡೆ. ದೇವರಿಗೆ ಏಳು ಹೆಜ್ಜೆ ಹಿಂದೆ, ದೈವಗಳಿಗೆ ಏಳು ಹೆಜ್ಜೆ ಮುಂದೆ ನಿಂತು ನೀನು ಸೇವೆ ಪಡೆಯುವ ತಾಯಿ, ಚಾವಡಿಯ ಭಾವದಲ್ಲಿ ನೆಲೆಯಾಗಿ ಮನೆಯೊಡತಿಯಾಗಿರುವ ಅಧಿಕಾರ ನಿನ್ನ ಪಾಲಿಗೆ ಬಂದಿದೆ.
 ಸತ್ಯದೇವತೆಯ ಅಲಂಕಾರಗೊAಡ ದೈವ ನರ್ತಕನು ಮೊದಲು ಕುಳಿತಲ್ಲಿ ಒಂದು ಸುತ್ತು ಗಗ್ಗರದ ಸೇವೆ ನಡೆಸುವನು. ಬಳಿಕ ಹೊರಳಿಕೊಂಡು ಸುತ್ತು ಬಂದು ಗಗ್ಗರ ಕುಣಿಸುವುದು. ಬಳಿಕ ಕುಪ್ಪಳಿಸಿ ಸುತ್ತು ಬರುವುದು. ಒಂದು ರೀತಿಯಲ್ಲಿ ಶೋಧ ನಡೆಸುವುದು. ಬಳಿಕ ‘ಅಮ್ನೂರ’ ಪೂಜೆ, ಬಲಿಪೂಜೆ, ಚಪ್ಪರದ ಪಕ್ಕದಲ್ಲಿರುವ ದೈವಸ್ಥಾನ ಚಾವಡಿಗೆ ಭೇಟಿ ನಡೆಯುವುದು. ಜಾಗ ಜಾಗಕ್ಕೆ ಗೌರವಾರ್ಪಣೆ ನೀಡಿದ ಬಳಿಕ ದೈವನರ್ತಕನು ಹತ್ತಿಯ ಬತ್ತಿಯನ್ನು ಬೆಂಕಿಹಚ್ಚಿ ಬಾಯೊಳಗಿಟ್ಟು ಗೌರವ ನೀಡುವನು. ಈ ಎಲ್ಲಾ ಸಂದರ್ಭಗಳಲ್ಲಿ ದೈವ ನರ್ತಕನ ಮಾತನಾಡುವುದಿಲ್ಲ. ಎಲ್ಲವನ್ನು ಕೈ ಭಾಷೆಯ ಸಂಭಾಷಣೆಯಲ್ಲಿ ನಡೆಸುವನು.
 ಇದಾದೊಡನೆ ಕಾಲಿಗೆ ಗಗ್ಗರ ಕಟ್ಟಿ ಉಗ್ರ ನರ್ತನ, ಈಗ ‘ಮಾನೆಚ್ಚಿ’ಯ ಪಾತ್ರಿಯು ಜೋಡು ತೆಂಗಿನಕಾಯಿಯನ್ನು ಹಿಡಿದು ದೈವಕ್ಕೆ ಅರ್ಪಿಸುವನು. ತೆಂಗಿನಕಾಯಿಯನ್ನು ದೈವಸ್ಥಾನಕ್ಕೆ ಕೊಂಡೊಯ್ದು, ಚಪ್ಪರಕ್ಕೆ ತಂದು ಚಪ್ಪರದ ನಡುವೆ ಹೊಡೆಯುವುದು. ಇಲ್ಲಿಗೆ ‘ಗಗ್ಗರದೆಚ್ಚಿ’ ಮುಗಿದು ದೈವ ನರ್ತಕನು ಆಸನದಲ್ಲಿ ಮಂಡಿಸಿ ಆಯಾಸ ಪರಿಹರಿಸುವನು.
  ಈ ತನ್ಮಧ್ಯೆ ಪ್ರಧಾನ ದೈವಗಳಿಗೆ ‘ಎಣ್ಣೆಬೂಲ್ಯ’ ನೀಡುವರು. ಪೊಸಭೂತಕ್ಕೆ ಓಲೆಗರಿಗಳಿಂದ ತಯಾರಿಸಿದ ಕದಿರು ಮುಡಿಯನ್ನು ತಲೆಗೆ ಏರಿಸಿ ಕಟ್ಟುವರು. ಆ ಬಳಿಕ ನರ್ತನ, ನೈವೇದ್ಯ ಸ್ವೀಕಾರದ ಕಾರ್ಯ ನಡೆಯುವುದು. ನೈವೇದ್ಯದಲ್ಲಿ ಅನ್ನವನ್ನು ‘ಚುರು’ ಬಡಿಸುವರು. ‘ಬದುವರ‍್ನೆ’ ಯಲ್ಲಿ ದೊಡ್ಡ ‘ಹೂಂಜ’ ವನ್ನು ಬಲಿ ಕೊಡುವರು. ಆದುದರಿಂದ ಇದನ್ನು ರಕ್ತಗತವಾಗಿಯೇ ವರ್ಗೀಕರಿಸಲಾಗಿದೆ.