ಸದಸ್ಯ:Anupriya salian/ನನ್ನ ಪ್ರಯೋಗಪುಟ4
ಶ್ರೀ ಮಹಾವೀರ ಸ್ವಾಮಿ ಬಸದಿ, ಮಾರುಗದ್ದೆ, ಅಗಸೂರು
ಪರಿಚಯ
ಬದಲಾಯಿಸಿಮಹಾವೀರ ಸ್ವಾಮಿಯ ಈ ಬಸದಿಯನ್ನು ಶ್ರೀ ಶಾಂತಿನಾಥ ಬಸದಿಯೆಂದೂ ಕರೆಯುತ್ತಾರೆ. ಏಕೆಂದರೆ ಪಾಣಿಪೀಠದ ಮೇಲೆ ತೀರ್ಥಂಕರರ ಲಾಂಛನವಿಲ್ಲ. ಬದಲಾಗಿ ಕೀರ್ತಿ ಮುಖವನ್ನು ಹೋಲುವ ಒಂದು ಆಕೃತಿ ಸ್ವಾಮಿಯ ಪಾದಗಳ ಕೆಳಗಿನ ಪೀಠದಲ್ಲಿದ್ದು ಅದು ಎರಡು ಕಾಲನ್ನು ಹೊಂದಿದೆ. ಇದು ಸಿಂಹವೆಂದು ಭಾವಿಸಿ ಇದನ್ನು ಸಿಂಹ ಲಾಂಛನವೆಂದೂ, ತೀರ್ಥಂಕರರು ಮಹಾವೀರ ಸ್ವಾಮಿಯೆಂದೂ ಯಾರೋ ಇಲ್ಲಿಯವರಿಗೆ ಹೇಳಿರಬೇಕು. ಆದ್ದರಿಂದ ಇಲ್ಲಿಯವರು ಇದನ್ನು ಮಹಾವೀರ ಬಸದಿಯೆಂದೂ, ಮೂಲನಾಯಕರನ್ನು ಮಹಾವೀರ ಸ್ವಾಮಿಯೆಂದೂ ಕರೆಯುತ್ತಾರೆ. ಆದರೆ ಹಿಂದೆ ಇಲ್ಲಿ ಬಂದ ಸಾಧಕ ಸನ್ಯಾಸಿಯೊಬ್ಬರು ಇವರು ಶ್ರೀ ಶಾಂತಿನಾಥ ಸ್ವಾಮಿಯೆಂದು ಹೇಳಿದ್ದರು. ಇದಕ್ಕೆ ಸಮರ್ಥನೆಯಾಗಿ ಈ ಜಿನಬಿಂಬವು ಮಂಕಿ ಬಸದಿಯ ಶ್ರೀ ಶಾಂತಿನಾಥ ಸ್ವಾಮಿಯ ಬಿಂಬವನ್ನೇ ಹೋಲುತ್ತದೆ ಎನ್ನಬಹುದು.
ಸ್ಥಳ
ಬದಲಾಯಿಸಿಜಿನಾಲಯವು ದೂರದ ಅರಣ್ಯ ಪ್ರದೇಶದಲ್ಲಿದೆ. ಅಂಕೋಲ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ಸಿಗುವ ಹೊನ್ನಳ್ಳಿ ಕ್ರಾಸ್‌ನಲ್ಲಿ ತಿರುಗಿ ಮಾರುಗದ್ದೆ ರಸ್ತೆಯಲ್ಲಿ ಸುಮಾರು ೯ ಕಿಲೋಮೀಟರ್ ಗೊಂಡಾರಣ್ಯದಲ್ಲಿ ಪ್ರಯಾಣಿಸಬೇಕು. ಅಲ್ಲಿನ ಕಾಡಮಧ್ಯದಲ್ಲಿ ಒಂದು ಸಮತಟ್ಟಾದ ಪ್ರದೇಶದಲ್ಲಿ ಈ ಬಸದಿ ಇದೆ.[೧]
ಶಿಲಾ ವಿನ್ಯಾಸ
ಬದಲಾಯಿಸಿಇದು ಒಂದು ಚಿಕ್ಕ ಗುಡಿಯಂತೆ ಕಾಣುತ್ತದೆ. ಒಂದು ಗರ್ಭಗೃಹ, ಅದರ ಮೇಲೊಂದು ಚಿಕ್ಕ ಶಿಖರ ಮತ್ತು ಎದುರಲ್ಲಿ ಒಂದು ಪ್ರಾರ್ಥನಾ ಮಂಟಪ ಮಾತ್ರ ಇದಕ್ಕಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರ ನೀಡದ ಮೇಲೆ ಈ ಜಿನಬಿಂಬವು ಪ್ರತಿಷ್ಠಾಪಿಸಲ್ಪಟ್ಟಿದೆ. ಸುಮಾರು ಎರಡುವರೆ ಅಡಿ ಎತ್ತರವಿದೆ, ಕಾಯೋತ್ಸರ್ಗಭಂಗಿಯಲ್ಲಿದೆ. ಇಲ್ಲಿರುವ ಒಂದು ವೈಶಿಷ್ಟ್ಯವೆಂದರೆ, ಸ್ವಾಮಿಯ ತೋಳುಗಳು ಸಾಮಾನ್ಯವಾಗಿ ಬೇರೆ ಕಡೆ ಇರುವಂತೆ ಕಾಲುಗಳನ್ನು ಸ್ಪರ್ಶಿಸದೆ ದೂರದಲ್ಲಿ ನೀಳವಾಗಿ ಹರಡಿಕೊಂಡಿವೆ. ಪ್ರಭಾವಳಿಯಲ್ಲಿ ಹೊಯ್ಸಳ ಪೂರ್ವಕಾಲದ ಮಕರ ತೋರಣದ ಅಲಂಕಾರವಿದೆ. ಪಾದಪ್ರದೇಶದಲ್ಲಿರುವ ಯಕ್ಷ-ಯಕ್ಷಿಯರ ವಿಗ್ರಹಗಳು ಬಹುಚಿಕ್ಕದಾಗಿದ್ದು, ಅಸ್ಪಷ್ಟವಾಗಿ ಕುಳಿತುಕೊಂಡ ಭಂಗಿಯಲ್ಲಿವೆ.
ಆಚರಣೆ
ಬದಲಾಯಿಸಿಸಾಮಾನ್ಯವಾಗಿ ದಿನ ಬೆಳಗ್ಗೆ ಪೂಜೆ ಮಾಡುತ್ತಾರೆ. ಯಾರಾದರೂ ದೇವರಿಗೆ ಹಣ್ಣಿಕಾಯಿ ಅರ್ಪಿಸಿ ಪೂಜೆ ಮಾಡಿ ಕೊಡಿ ಎಂದು ಕೇಳಿಕೊಂಡರೆ ಪೂಜೆ ಮಾಡಿ ಕೊಡುತ್ತಾರೆ. ಇದನ್ನೆಲ್ಲ ನಡೆಸುವವರು ಇಲ್ಲಿಯ ಹಾಲಕ್ಕಿ ಗೌಡ ಶ್ರೀ ಲಕ್ಷ್ಮಣದೇವು ಗೌಡ ಎಂಬವರು. ಹಿಂದೆ ಇವರ ತಂದೆ ದೇವು ಕರಿಯ ಗೌಡರು ಪೂಜೆ ಮಾಡುತ್ತಿದ್ದರು. ಹಿಂದೆ ಇಲ್ಲಿ ಪೂರ್ಣ ಪ್ರಮಾಣದ ಒಂದು ಬಸದಿ ಇತ್ತೆಂದು ತಿಳಿಯುತ್ತದೆ. ಈಗಿನ ಗರ್ಭಗೃಹದ ಎದುರಿಗೆ ಬಸದಿಗೆ ಇರಬೇಕಾದ ಬೇರೆ ಮಂಟಪಗಳು ಇದ್ದಂತಹ ಪಂಚಾಂಗ ಕಂಡುಬರುತ್ತದೆ. ಸುತ್ತಲೂ ಅಂಗಳವಿದ್ದು, ಅದರ ಬದಿಯಲ್ಲಿ ಪೌಳಿಗಳು ಅಥವಾ ಬಸದಿಯ ಪ್ರಾಕಾರ ಗೋಡೆಗಳು ಇದ್ದಂತಹ ಗುರುತುಗಳು ಹಾಗೂ ಕೆಲವು ಮುರಕಲ್ಲಿನ ಇಟ್ಟಿಗೆಗಳು ಕಂಡುಬರುತ್ತವೆ. ಅಂಗಳವನ್ನು ಪ್ರವೇಶಿಸುವಲ್ಲಿ ಪದ್ಮಾಸನಸ್ಥ, ಮುಕ್ಕೊಡೆಗಳಿರುವ ಒಂದು ಜಿನಬಿಂಬದ ಶಿಲಾಖಂಡವನ್ನು ಇಡಲಾಗಿದೆ. ಸದ್ಯಕ್ಕೆ ಇದರ ಅಧ್ಯಯನ ಕಷ್ಟಸಾಧ್ಯ. ಮಕರತೋರಣ ಇತ್ಯಾದಿ ಅಲಂಕಾರಗಳಿಲ್ಲದ ಈ ಜಿನಬಿಂಬವನ್ನು ಬಹು ಪುರಾತನವಾದುದು ಎಂದಷ್ಟೇ ಹೇಳಬಹುದು.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೪೦೭-೪೦೮.