ಸದಸ್ಯ:Ankitha Patla/ನನ್ನ ಪ್ರಯೋಗಪುಟ
ಶ್ರೀ ಆದಿನಾಥ ಸ್ವಾಮಿಯ ಅಬ್ಬಗ ದೇವಿ ಬಸದಿ ಕಾರ್ಕಳ
ಸ್ಥಳ
ಬದಲಾಯಿಸಿಶ್ರೀ ಆದಿನಾಥ ಸ್ವಾಮಿಯ ಅಬ್ಬಗ ದೇವಿ ಬಸದಿಯು ಕಾರ್ಕಳ ತಾಲೂಕಿನ ಹಿರಿಯಂಗಡಿಯಲ್ಲಿದೆ. ಹಿರಿಯಂಗಡಿ ರಸ್ತೆಯಲ್ಲಿ ಅರಮನೆ ಬಸದಿಯ ನಂತರ ರಸ್ತೆಯ ಎಡಭಾಗದಲ್ಲಿದೆ. ಇದರ ಎದುರುಗಡೆ ಮಹಾವೀರ ಭವನವು ಕಾಣಸಿಗುತ್ತದೆ. ಈ ಬಸದಿಗೆ ಬರುತ್ತಾರೆಯೇ ಹೊರತು ಇದಕ್ಕೆ ಸಂಬಂಧ ಪಟ್ಟದ್ದೆಂದು ಹೇಳುವ ಯಾವುದೇ ಕುಟುಂಬವಿಲ್ಲ. ಈ ಬಸದಿಯು ತಾಲೂಕು ಕೇಂದ್ರದಿಂದ ಎರಡು ಕಿಲೋ ಮೀಟರ್ ದೂರದಲ್ಲಿದೆ. ಇದು ಕಾರ್ಕಳ ಮಠಕ್ಕೆ ಸೇರಿದ್ದಾಗಿದೆ. ಕಾರ್ಕಳ ಹಿರಿಯಂಗಡಿ ರಸ್ತೆ ಮೂಲಕ ಬಂದರೆ ಇದನ್ನು ಸುಭವಾಗಿ ತಲುಪಬಹುದು.
ಇತಿಹಾಹ
ಬದಲಾಯಿಸಿಈ ಅಬ್ಬಗದೇವಿ ಬಸದಿಯನ್ನು ಯಾರು ಕಟ್ಟಿಸಿದ್ದೆಂದು ತಿಳಿದು ಬಂದಿಲ್ಲ. ಆದರೆ ಹೆಸರಿನ ಸಾಮ್ಯತೆಯಿಂದ ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಕಟ್ಟಿಸಿರಬೇಕೆಂದು ಹೇಳಲಾಗುತ್ತದೆ. ಇದು ಮುನ್ನೂರು ವರ್ಷಗಳ ಹಿಂದೆ ಕಟ್ಟಲ್ಪಟ್ಟಿತ್ತೆಂದು ಹೇಳುತ್ತಾರೆ. ಈ ಬಸದಿಯು ಸುಮಾರು ಮೂವತ್ತೊಂದು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದೆ. ಹಾಗೂ ಶೀಘ್ರದಲ್ಲೇ ಇನ್ನೊಮ್ಮೆ ಜೀರ್ಣೋದ್ಧಾರಗೊಳ್ಳಲಿದೆ.
ದೈವ
ಬದಲಾಯಿಸಿಭೈರಾದೇವಿ ಜಿನೇಂದ್ರ ಸ್ವಾಮಿಯು ಈ ಬಸದಿಯ ದೈವ.
ವಿನ್ಯಾಸ
ಬದಲಾಯಿಸಿಈ ಬಸದಿಗೆ ಮೇಗಿನ ನೆಲೆ ಇಲ್ಲ. ಇಪ್ಪತ್ತ ನಾಲ್ಕು ತೀರ್ಥಂಕರ ಮೂರ್ತಿಗಳಿವೆ. ಈ ಬಸದಿಯ ಪ್ರಾರ್ಥನಾ ಮಂಟಪದಲ್ಲಿ ಬೇರೆ ಬಸದಿಗಳಲ್ಲಿರುವಂತೆ ನಾಲ್ಕು ಕಂಬಗಳಿರುವ ಮಂಟಪ ಇಲ್ಲ. ಆದರೆ ಬೇರೆ ರೀತಿಯಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಈ ಬಸದಿಯಲ್ಲಿ ಪ್ರಾರ್ಥನಾ ಮಂಟಪದಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ಘಂಟಾಮಂಟಪವೆಂದು ಕರೆಯುತ್ತಾರೆ. ಈ ಬಸದಿಯಲ್ಲಿರುವ ಮೂಲನಾಯಕ ಶ್ರೀ ಆದಿನಾಥ ಸ್ವಾಮಿಯ ಮೂರ್ತಿಯು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಎರಡೂವರೆ ಅಡಿ ಎತ್ತರವಿದೆ. ಬಸದಿಯ ಆವರಣ ಗೋಡೆಯನ್ನು ಕರ್ಗಲ್ಲು ಮತ್ತು ಮುರಕಲ್ಲು ಮುಂತಾದವುಗಳಿಂದ ಭದ್ರವಾಗಿ ನಿರ್ಮಿಸಲಾಗಿದೆ.[೧]
ವಿಧಿ ವಿಧಾನ
ಬದಲಾಯಿಸಿದಿನವೂ ಸ್ವಾಮಿಗೆ ಜಲಾಭಿಷೇಕ ಮತ್ತು ನಿತ್ಯಪೂಜೆಯನ್ನು ಮಾಡಲಾಗುತ್ತದೆ. ಈ ಬಸದಿಯಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಪೂಜೆ ಮಾಡಲಾಗುತ್ತದೆ. ಇಲ್ಲಿ ಜೀವದಯಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಸದಿಯಲ್ಲಿ ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದೆ. ಇಲ್ಲಿ ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ತೊಡಿಸಿ, ಹೂವಿನಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ.
ಆವರಣ
ಬದಲಾಯಿಸಿಮುಂಭಾಗದಲ್ಲಿ ಒಂದು ಪಾರಿಜಾತ ಹೂವಿನ ಗಿಡವಿದೆ. ಇದಲ್ಲದೆ ಅಂಗಳದಲ್ಲಿ ಇತರ ಹೂವಿನ ಗಿಡಗಳನ್ನು ನೆಡಲಾಗಿದೆ. ತೀರ್ಥಂಕರ ಮಂಟಪದಲ್ಲಿ ಗಂಧಕುಟಿ ಇದೆ. ಇದರ ಬಳಿಯಲ್ಲಿ ಗಣಧರಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳು ಕಾಣಸಿಗುತ್ತವೆ. ಈ ಮೂರ್ತಿಯು ಉತ್ತರಕ್ಕೆ ಮುಖಮಾಡಿಕೊಂಡಿದೆ. ಆದರೆ ಅಮ್ಮನವರ ಕಾಲಿನ ಬಳಿ ಕುಕ್ಕುಟ ಸರ್ಪವಿಲ್ಲ. ಇಲ್ಲಿರುವ ಜಿನಬಿಂಬಗಳ ಪೀಠದ ಮೇಲೆ ಅವರ ಲಾಂಛನವನ್ನು ಮತ್ತು ಕೆಲವು ಅಂಕೆಗಳನ್ನು ಕಾಣಬಹುದು. ಆದರೆ ಬಸದಿಯ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿದಿ ಇದೆ. ಇಲ್ಲಿ ತ್ರಿಶೂಲ, ನಾಗನಕಲ್ಲು ಇತ್ಯಾದಿಗಳು ಇವೆ. ಆದರೆ ಇದನ್ನು ಯಾವುದೇ ಪೀಠದ ಮೇಲೆ ಪ್ರತಿಷ್ಠಾಪಿಸಿಲ್ಲ. ಈ ಬಸದಿಗೆ ಸಂಬಂಧಿಸಿ ಯಾವುದೇ ಕಛೇರಿ, ಕಲಾಭವನ, ಸಭಾಭವನ ಇಲ್ಲ.
ಆಡಳಿತ
ಬದಲಾಯಿಸಿಇಲ್ಲಿನ ಸ್ಥಳೀಯ ಶ್ರಾವಕರು ಈ ಬಸದಿಗೆ ಬರುತ್ತಾರೆಯೇ ಹೊರತು ಇದಕ್ಕೆ ಸಂಬಂಧ ಪಟ್ಟದ್ದೆಂದು ಹೇಳುವ ಯಾವುದೇ ಕುಟುಂಬವಿಲ್ಲ. ಈ ಬಸದಿಗೆ ಯಾವುದೇ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ಅರ್ಚಕರು ಮತ್ತು ಮುಕ್ತೇಸರರಾದ ಶ್ರಿ ಕೆ. ಬ್ರಹ್ಮಯ್ಯ ಇಂದ್ರರು ನಡೆಸುತ್ತಿದ್ದಾರೆ.
ಆಚರಣೆ
ಬದಲಾಯಿಸಿಇದಕ್ಕೆ ಸಂಬಂಧಪಟ್ಟಂತೆ ಯಾವುದೇ ವಾರ್ಷಿಕೋತ್ಸವ, ರಥೋತ್ಸವ ನಡೆಯುವುದಿಲ್ಲ. ಇವು ಕೇವಲ ಚರಸ್ಥಿತಿಯಲ್ಲಿವೆ. ಈ ಬಸದಿಗೆ ಯಾವುದೇ ರೀತಿಯ ಸರಕಾರದ ಸಹಾಯಧನ ಬಂದಿರುವುದಿಲ್ಲ. ಆದರೂ ನಿತ್ಯಾನುಷ್ಠಾನಗಳನ್ನು ಯಥಾ ಸಾಧ್ಯ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೭.