ತೊಗಲು ಗೊಂಬೆಯಾಟ

ಬದಲಾಯಿಸಿ

ಕರ್ನಾಟಕದ ಗೊಂಬೆಯಾಟದ ಪ್ರಕಾರಗಳಲ್ಲಿ ತೊಗಲು ಗೊಂಬೆಗೆ ವಿಶಿಷ್ಷ ಸ್ಥಾನವಿದೆ. ಇದು 'ಸಿಳ್ಳೆಕ್ಯಾತ' ಎಂಬ ಜನರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವ ಉದ್ಯೋಗ ಕಲೆ. ಈ ಸಿಳ್ಳೆಕ್ಯಾತ ಅಥವಾ ಕಿಳ್ಳೆಕ್ಯಾತ ಜನಾಂಗ ಮೂಲತಃ ರತ್ನಗಿರಿ ಜಿಲ್ಲೆಗೆ ಸೇರಿದವರು. ಈ ಜನರ ಗುಂಪಿನವರೆಂದು ಹೇಳಲಾಗುವ ಬೆಸ್ತರು ಈಗಲೂ ಕರಾವಳಿಯಲ್ಲಿರುವರೆಂದು ಜೀವನೋಪಾಯಕ್ಕೆ ಯಕ್ಷಗಾನವನ್ನು ಕಲಿತು ತೂಗಲು ಗೊಂಬೆಯಾಟಗಳನ್ನು ಪ್ರದರ್ಶಿಸುತ್ತಿರುವರೆಂದೂ ತಿಳಿದು ಬರುತ್ತಿದೆ. ಈ ಜನರು ಕೆಲವು ಕಡೆ ತಮ್ಮನ್ನು ಕಟಬರೆಂದು ಹೇಳಿಕೊಳ್ಳತ್ತಾರೆ. ಮರಾಠಿ ಮಿಶ್ರಿತ ಕನ್ನಡದಲ್ಲಿ ಮಾತಾಡುತ್ತಾರೆ. ಒಳನಾಡಿನ ಕಟಬರರು ಹೊಳೆಹಳ್ಳಗಳಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಾರೆ. ಅದಕ್ಕಾಗಿ 'ಗೊಡಬು' ಎಂಬ ಮಟ್ಟಿಯನ್ನು ಹುಲಿನೂಲಿನ ಬಲೆಯನ್ನು ಬಳಸುತ್ತಾರೆ. ಅವರದು ಕ್ಷತ್ರೀಯ ಕುಲ. ತೊಗಲುಗೊಂಬೆಯಾಟಕ್ಕೆ ಮತ್ತೊಂದು ಹೆಸರು 'ಮಕ್ಕಳ ಬೊಂಬೆಯಾಟ, ತೊಗಲು ಗೊಂಬೆಯಾಡಿಸುವವರನ್ನು ಕಿಳ್ಳೆಕ್ಯಾತರು, ಸಿಳ್ಳೆಕ್ಯಾತರು, ಗೊಂಬೆರಾಮರು, ಗೊಂಬೆಯೋದು ಹೀಗೆ ಹಲವಾರು ರೀತಿಯಲ್ಲಿ ಕರೆಯುತ್ತಾರೆ. ತೆಲುಗು ದೇಶದಲ್ಲಿ ಇದನ್ನು ಬೊಮ್ಮಲಾಟವಾಳ್ಳು ಎಂದು ಕರೆಯುತ್ತಾರೆ. ಕಿಳ್ಳೆಕ್ಯಾತರ ಮನೆಮಾತು ಮರಾಠಿ. ಮಹರಾಷ್ಟ್ರದ ಕಡೆಯಿಂದ ವಲಸೆ ಬಂದ ಜನರು ಇವರು ಎಂಬುದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತವೆ. ಕೆಲವು ಅರೆ ಚಾರಿತ್ರಿಕ ಐತಿಹ್ಯಗಳೇ ದೊರೆಯುತ್ತದೆ. ಇವರು ಮಹಾರಾಷ್ಟ್ರದ ಕೊಲ್ಲಾಪುರ ಅಥವಾ ಸತಾರ ಪ್ರಾಂತ್ಯಗಳಿಂದ ವಲಸೆ ಬಂದ ಅಲೆಮಾರಿ ಜನಾಂಗ ಎಂದು ಕಂಡುಬರುತ್ತದೆ. ವಲಸೆ ಬರಲು ಕಾರಣವನೇ ಇರಲಿ, ಇವರು ಬಂದ ಕಥೆಯೇ ಹೊಂದಿಕೊಂಡಿರುವುದಂತೂ ನಿಜ. ಯಾವುದೇ ಜನಾಂಗವಾಗಲಿ ಒಂದು ಕಡೆ ವಲಸೆ ಬಂದ ಮೇಲೆ ಅಲ್ಲಿನ ಭಾಷೆಯನ್ನು ಕಲಿಯುವುದು ಅನಿವಾರ್ಯವಾಗುತ್ತದೆ. ಹಾಗೇಯೇ ಇವರು ಸಹ ಕನ್ನಡ ನಾಡಿಗೆ ವಲಸೆ ಬಂದ ಮೇಲೆ ಕನ್ನಡ ಕಲಿತಿದ್ದಾರೆ. ಹೀಗೆ ವಲಸೆ ಬಂದ ಪೂರ್ವಿಕರು ಸ್ಥಳೀಯ ದೇವ ದೇವತೆಗಳನ್ನೇ ತಮ್ಮ ದೇವದೇವತೆಗಳನ್ನಾಗಿ ಮಾಡಿಕೊಂಡರು. ಆಯಾ ಸ್ಥಳದಲ್ಲಿರುವ ಹನುಮಂತರಾಯ, ಮಾರಮ್ಮ, ರಾಮಯ್ಯ, ಕರಿಯಮ್ಮ, ಕಾಳಮ್ಮ ಇವರುಗಳೇ ಕಿಳ್ಳೆಕ್ಯಾತರ ಮನೆದೇವರುಗಳಾಗಿವೆ. ಅದರಂತೆ ಹುಟ್ಟುವ ಮಕ್ಕಳಿಗೂ ದೇವರ ಹೆಸರುಗಳಲ್ಲೇ ಇಡುತ್ತಾ ಬಂದರು. ಕಲಾವಿದರು ಯಾವುದೇ ಪ್ರಸಂಗದಲ್ಲಾಗಲಿ ಮಧ್ಯೆ ಮಧ್ಯೆ ಬಂಗಾರಕ, ಕಿಳ್ಳೆಕ್ಯಾತ ಮುಂತಾದ ಹಾಸ್ಯ ಪಾತ್ರಗಳನ್ನು ತರಲು ಮರೆಯುವುದಿಲ್ಲ. ಪ್ರೇಕ್ಷಕರು ತೂಕಡಿಸಿವಾಗ ಕೆಲವು ಪಾತ್ರಗಳು ಆರ್ಭಟ ಮಾಡಿಕೊಂಡು ಬರುತ್ತವೆ. ಕೊನೆಯ ತನಕ ಪ್ರೇಕ್ಷಕರ ಆಸೆಯನ್ನು ಕಾಯ್ದುಕೊಳ್ಳಲು ಮತ್ತು ಬೇಸರವನ್ನು ಸೂರಿಸಿ, ಮನರಂಜನೆ ನೀಡಲು ಈ ಪಾತ್ರಗಳು ವಿಶಿಷ್ಟ ಪಾತ್ರ ವಹಿಸುತ್ತದೆ. ಕೆಲವು ಸಮಯದಲ್ಲಿ ಅಶ್ಲೀಲ ಎನಿಸಬಹುದಾದ ಹಾಸ್ಯವನ್ನು ತಂದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೆಲಿಸಿಬಿಡುತ್ತಾರೆ. ಇತ್ತೀಚೆಗೆ ಸಿನಿಮಾ ನಾಟಕಗಳ ಪ್ರಭಾವ ಹೆಚ್ಚಾಗಿ ತೊಗಲುಗೊಂಬೆಯಾಟದವರು ಕೂಡ ಮಧ್ಯೆ ಮಧ್ಯೆ ಸಿನಿಮಾ ಹಾಡುಗಳನ್ನು ಹಾಕಿಕೊಳ್ಳುತ್ತಿದ್ದಾರೆ. ತೊಗಲುಗೊಂಬೆಯಾಟದ ಕಲಾವಿದರ ವೇಷಭೂಷಣಗಳಲ್ಲಿ ವಿಶೇಷವೇನಿರುವುದಿಲ್ಲ,

ಪ್ರಾಚೀನತೆ

ಬದಲಾಯಿಸಿ

ಈ ಕಲೆ ಅತಿ ಪ್ರಾಚೀನವೆಂದೊ ಪ್ರಾಚ್ಯ ಖಂಡದಲ್ಲಿಯೇ ಅದು ಹುಟ್ಟಿದೆ ಎಂದೂ ಅಭಿಪ್ರಾಯಗಳಿವೆ. ಗೊಂಬೆಯಾಟ ಚೈನಾದಲ್ಲಿ ಪ್ರಾಚೀನ ಕಾಲದಿಂದಲೂ ರಾಜರ ಆಸ್ಥಾನದಲ್ಲಿ ಇದ್ದಿತೆಂಬುದನ್ನು ಒಂದು ಗಾದೆಯು ತಿಳಿಸುತ್ತದೆ. ಜಪಾನಿನ ಪ್ರಾಚೀನ ಸಾಹಿತ್ಯದಲ್ಲಿ ಕೂಡ ತೊಗಲುಗೊಂಬೆಯಾಟದ ಬಗೆಗೆ ಪ್ರಸ್ತಾಪ ಬರುತ್ತದೆಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕ್ರಿ.ಪೂ ಮೂರನೆಯ ಶತಮಾನದಲ್ಲಿಯೇ ತೊಗಲುಗೊಂಬೆಯಾಟವು ಆಂಧ್ರದಲ್ಲಿ ಪ್ರಚಾರದಲ್ಲಿದ್ದುದಕ್ಕೆ ಆಧಾರಗಳಿವೆ. ಆ ಕಲೆ ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲ್ಲಲ್ಲದೇ ವಿಜಯನಗರ, ತಂಜಾವೂರು, ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತ ಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಕೋರಂಗಿ, ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೆಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ. ಅಲ್ಲಿಂದ ಆ ಕಲೆ ಪಶ್ಚಿಮಮಾಭಿಮುಖವಾಗಿ ಪರ್ಶಿಯಾ, ದೇಶಗಳನ್ನು ಹಾಯ್ದು ಗ್ರೀಸ್ ದೇಶವನ್ನು ಪ್ರವೇಶಿಸಿತು. ಗ್ರೀಸಿನಲ್ಲೇ ಹೊಸ ರೂಪತಳೆದು ಉತ್ತರ ಆಫ್ರಿಕಾದಲ್ಲಿ ಮುಸ್ಲಿಂ ದೇಶಗಳಿಗೆ, ಹದಿನೇಳನೆಯ ಶತಮಾನದಲ್ಲಿಯೂ ಇಟಲಿಗೆ ಅದರ ವಿಪ್ಲವ ಕಾಲದಲ್ಲಿಯೂ ಪಸರಿಸಿದ್ದಲ್ಲದೆ ಅಲ್ಲಿಂದ ಮುಂದೆ ಫ್ರಾನ್ಸಗೂ ಕೂಡ ಹರಡಿತು ಎಂಬ ಅಭಿಪ್ರಾಯವಿದೆ. ಹತ್ತು ಹನ್ನೊಂದನೆಯ ಶತಮಾನಗಳ ಕಾವ್ಯಗಳಲ್ಲಿಯೂ ತೊಗಲುಗೊಂಬೆಯಾಟ ಇದ್ದುದಕ್ಕೆ ಆಧಾರಗಳಿವೆ. ಕೆಲವರು ಗೊಂಬೆಯಾಟದ ಪ್ರಾಚೀನತೆಯನ್ನು ಭಗವದ್ಗಿತೆಯ ಕಾಲಕ್ಕೆ ಎಂದರೆ ಕಿ.ಪೂ ೩೦೦೦ ವರ್ಷಗಳ ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ ಎಂಬುದಾಗಿ ತಿಳಿಸುತ್ತಾರೆ. ಅಲ್ಲದೆ ತೊಗಲುಗೊಂಬೆಯಾಟವನ್ನು ನೆರಳು ಗೊಂಬೆಯಾಟ ಎಂಬುದಾಗಿ ಕರೆದು ಸಂಸ್ಕ್ರತದ ಮಹಾನಾಟಕವನ್ನು ನೆರಳು ಗೊಂಬೆಯಾಟಕ್ಕಾಗಿ ಬರೆದುದು ಎಂದೂ ಅಭಿಪ್ರಾಯ ಪಡೆಯಲಾಗಿದೆ.

ಗೊಂಬೆಯ ರಚನೆ

ಬದಲಾಯಿಸಿ

ತೊಗಲುಗೊಂಬೆಯ ರಚನೆಗೆ ಜಿಂಕೆ ಅಥವಾ ಆಡಿನ ಚರ್ಮವನ್ನು ಉಪಯೋಗಿಸುತ್ತಾರೆ. ಜಿಂಕೆಯ ಚರ್ಮನ್ವಯ ಮತ್ತು ಸೂಕ್ಷ್ಮತೆಯಿಂದ ಕೂಡಿದ್ದು ಬಹುಪಾಲು ಪಾರದರ್ಶಕವಾಗಿರುತ್ತದೆ. ಅಲ್ಲದೇ ಸದಾಕಾಲ ಯಾವ ಬದಲಾವಣೆಗೂ ಒಳಗಾಗದೆ ಒಂದೇ ರೂಪದಲ್ಲಿ ಉಳಿದುಬರುವ ಶಕ್ತಿಯುಳ್ಳದ್ದು. ಆದರೆ ಆಡಿನ ಚರ್ಮ ಕೆಲವೊಂದು ಬಾರಿ ಚಳಿ, ಮಳೆಗೆ ಸುಕ್ಕುಗಟ್ಟುತ್ತದೆ. ಈಚೆಗೆ ಜಿಂಕೆಯ ಚರ್ಮವು ದೊರೆಯುವುದು ದುರ್ಲಭವಾಗಿರುವುದರಿಂದ ಆಡಿನ ಚರ್ಮದ ಬಳಕೆ ಹೆಚ್ಚಾಗಿದೆ. ಕೆಲವೂಂದು ಬಾರಿ ದೇವತಾ ಪಾತ್ರಗಳಿಗೆ ಮೀಸಲಾದ ರಾಮಾಯಣ, ಮಹಾಭಾರತ ಪ್ರಸಂಗದ ಗೊಂಬೆಗಳನ್ನು ಜಿಂಕೆ ಚಮರ್ಮದಿಂದಲೇ ಮಾಡಬೇಕೆಂಬ ನಿಯಮವಿದೆ. ಆಂಧ್ರ ಹಾಗೂ ಗಡಿಭಾಗಗಳಲ್ಲಿ ಗೊಂಬೆಯ ರಚನೆಗೆ ಎಮ್ಮೆಯ ಚರ್ಮವನ್ನು ಬಳಸುವುದುಂಟು. ಆ ಭಾಗದ ಆಳೆತ್ತರದ ಗೊಂಬೆಗಳ ರಚನೆಗೆ ಹೆಚ್ಚಾಗಿ ಎಮ್ಮೆಯ ಚರ್ಮವೇ ಬೇಕಾಗುತ್ತದೆ. ಹೀಗೆ ಚರ್ಮವನ್ನು ಹದಗೊಳಿಸುವುದರ ಮೂಲಕ ಅದನ್ನು ಪಾರದರ್ಶಕ ರೂಪಕ್ಕೆ ತರುತ್ತಾರೆ. ಆನಂತರ ಅದರ ಮೇಲೆ ಬೇಕಾದ ಚಿತ್ರಗಳನ್ನು ಅಂದವಾಗಿ ಬರೆದು ಆಭರಣ, ಸಿರೇಯ ಅಂಚು, ರಥದ ಚಕ್ರ, ಕಿರೀಟ ಇತ್ಯಾದಿ ಕುಸುರಿ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಮಾಡುತ್ತಾರೆ. ಅನಂತರ ಹದವರಿತ ಬಣ್ಣವನ್ನು ಹಾಕುತ್ತಾರೆ ಹೆಚ್ಚಾಗಿ ದೇವತಾ ಪಾತ್ರದ ಗೊಂಬೆಗಳಿಗೆ ನೀಲ, ನಸುಗೆಂಪು, ಹಳದಿ ಬಣ್ಣವನ್ನು ಘೋರ ಪತರ್ಗಳಿಗೆ ಸಿಂಧೂರ, ಕಡುಕೆಂಪು ಕಪ್ಪು, ಹಳದಿ ಬಣ್ಣಗಳನ್ನು ಉಪಯೊಗಿಸುತ್ತಾರೆ. ಬೇರೆ ಬೇರೆ ರೀತಿಯ ಗಿಡಮೂಲಿಕೆಗಳಿಂದ ಸ್ವತ; ಅವರೇ ಬಣ್ಣವನ್ನು ತಯಾರಿಸಿಕೊಳ್ಳುತ್ತಾರೆ. ಹೀಗಾಗಿ ಬಹುಕಾಲದವರೆಗೂ ಬಣ್ಣ ಮಸುಕಾಗದಂತೆ ಈ ಗೊಂಬೆಗಳು ಉಳಿಯುತ್ತದವೆ. ಹೀಗಾಗಿ ಇಂಥ ಬಣ್ಣಗಳ ಸ್ವತ; ತಯಾರಿ ನಿಂತು ಹೋಗಿದ್ದು ಆಧುನಿಕ ಬಣ್ಣಗಳನ್ನೇ ಬಳಸುತ್ತಾರೆ. ಗೊಂಬೆಗಳು ನೇರವಾಗಿ ನಿಂತುಕೊಳ್ಳಲು ಅನುವಾಗುವಂತೆ ಬಿದಿರಿನ ಅಥವಾ ಲಾಳದ ಕಡ್ಡಿಗಳನ್ನು ಮಧ್ಯಕ್ಕೆ ಸೀಳಿ ಅದರ ಮಧ್ಯೆಕ್ಕೆ ಸೀಳಿ ಅದರ ಗೊಂಬೆಯನ್ನು ಸಿಕ್ಕಿಸಿ ದಾರದಿಂದ ಅಲ್ಲಲ್ಲಿ ಹೊಲಿಗೆ ಹಾಕುತ್ತಾರೆ. ಗೊಂಬೆಯನ್ನು ಹಿಡಿದು ಕುಣಿಸಲು ಅನುವಾಗುವಂತೆ ಕೆಳಗಡೆ ಅರ್ಧ ಅಡಿ ಉದ್ದದಷ್ಟು ಕಡ್ಡಿಯನ್ನು ಬಿಟ್ಟಿರುತ್ತಾರೆ. ಇದು ಮೂಲದ ಗೊಂಬೆಗಳ ಏಕರೂಪ ಅನಂತರದಲ್ಲಿ ಕೈಕಾಲು ಮುಖಗಳ ಚಲನೆಯುಳ್ಳ ಗೊಂಬೆಗಳ ಪ್ರದರ್ಶನ ಚಾಲ್ತಿಗೆ ಬಂತು. ಸೂತ್ರದ ಗೊಂಬೆಗಳಿಗಿರುವ ಅಂಗಾಂಗ ಚಲನೆಯ ತಂತ್ರವನ್ನೆ ಇಲ್ಲಿ ಬೇರೊಂದು ರೀತಿಯಲ್ಲಿ ಮಾಡಿಕೊಂಡರು. ಕತ್ತು ಸೊಂಟ , ತೋಳು , ತೊಡೆಯಕೀಲು, ಮಂಡಿ ಇವೆಲ್ಲವುಗಳ ಬಿಡಿಬಿಡಿಯಾಗಿದ್ದು ದಾರದ ಸಹಾಯದಿಂದ ಅವುಗಳನ್ನು ಜೋಡಿಸಲಾಗುತ್ತದೆ. ಕತ್ತು ಎದೆಯಭಾಗ ಸೊಂಟ ಇವು ನೇರವಾಗಿ ನಿಲ್ಲಲು ಅನುಕೂಲವಾಗುವಂತೆ ಅವು ಮೂರನ್ನು ಕೋಡಿಸಲಾಗುತ್ತದೆ. ಆ ಕಡ್ಡಿಗಳ ಸಹಾಯದಿಂದ ಆಟ ಆಡಿಸುತ್ತಾರೆ. ಚಿಕ್ಕಗೊಂಬೆಗಳನ್ನು ಕುಳಿತುಕೊಂಡೆ ಆಡಿಸುತ್ತಾರೆ, ಆದರೆ ಆಳೆತ್ತರದ ಗೊಂಬೆಗಳಾದರೆ ನಿಂತುಕೊಂಡೇ ಆಡಿಸಬೇಕಾಗುತ್ತದೆ.

ಗೊಂಬೆಗಳನ್ನು ಸುಕ್ಕು ಬಾರದಂತೆ, ಒಣಗಿ ಒರಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅವರು ಗಿಡಮೂಲಿಕೆಗಳಿಂದ ತಯಾರಿಸಿದ ಒಂದು ಬಗೆಯ ದ್ರವ್ಯವನ್ನು ಅವುಗಳಿಗೆ ಆಗಿಂದಾಗ್ಗೆ ಬಳಿಯುತ್ತರುತ್ತಾರೆ. ಹೀಗೆ ಸಂರಕ್ಷಿಸುವುದರಿಂದ ಗಂಬೆಗಳು ಮೂಲ ರೂಪವನ್ನು ಉಳಿಸಿಕೊಂಡು ನೂರಾರು ವರುಷಗಳ ಕಾಲ ಬಾಳಿಕೆ ಬರಬಲ್ಲವು. ಆಟದ ಆನಂತರ ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಅದಕ್ಕೆಂದೇ ಮಾಡಿದ ಬಿದಿರು ಪೆಟ್ಟಿಗೆಯಲ್ಲಿ ಜೋಡಿಸಿರುತ್ತಾರೆ. ಇದಕ್ಕೆ 'ಬಾದಲಿ' ಎಂದು ಹೆಸರು. ಇದು ಅವರಿಗೆ ಪೂಜ್ಯ ವಸ್ತು ಹೀಗಾಗಿ ಆವೃತ್ತಿಯನ್ನು ಕೈಬಿಟ್ಟವರೆನೆಕರು ಆ ಗೊಂಬೆಗಳನ್ನು ಮನೆಯಲ್ಲಿ ಹಾಗೆಯೇ ಬಿಡಬಾರದೆಂದು ಅವನ್ನು ನೀರಲ್ಲಿ ತೇಲಿ ಬಿಡುವ ಕ್ರಮವೂ ಇದೆ. ಕರ್ನಾಟಕದಲ್ಲಿ ಮೂರು ಜಾತಿಯ ಗೊಂಬೆಗಳು ಕಂಡು ಬರುತ್ತದೆ. ಕೈಕಾಲುಗಳ ಚಲನೆ ಇಲ್ಲದ ಆದರೆ ಸುಂದರ ಹಾಗೂ ಕಲಾತ್ಮಕವಾದ ಗೊಂಬೆಗಳು. ಅವು ಬಹುತೇಕ ಉತ್ತರ ಕರ್ನಾಟಕದವು ಈಗಾಗಲೇ ಹೇಳಿದಂತೆ ಕೈಕಾಲುಗಳ ಚಲನೆಯುಳ್ಳ ಚುರುಕಾಗಿ ಆಡಿಸಬಲ್ಲ ಗೊಂಬೆಗಳು. ಅವೆರಡೊ ಗೊಂಬೆಗಳೂ ಒಂದರಿಂದ ಮೂರು ಅಡಿ ಎತ್ತರವಿರುತ್ತವೆ. ಆಂಧ್ರ ಭಾಗದ ಗೊಂಬೆಗಳು ಚಲನೆಯುಳ್ಳ ಅಂದರೆ ಕೀಲುಗಳುಳ್ಳ ಗೊಂಬೆಗಳಾಗಿದ್ದು ಆಳೆತ್ತರ ಇರುತ್ತವೆ. ಅವುಗಳನ್ನು ನಿಂತೇ ಆಡಿಸಬೇಕು. ನಿಂತಾಗ ಸ್ವತ; ಗೊಂಬೆಗಳಿಂದಲೇ ತಮ್ಮನ್ನು ಮರೆಮಾಡಿಕೊಳ್ಳುತ್ತಾರೆ.

ಕಥಾವಸ್ತುವಿಗೆ ಪೂರಕ ಗೊಂಬೆಗಳು

ಬದಲಾಯಿಸಿ
ತೊಗಲುಗೊಂಬೆಯಾಟಕ್ಕೆ ಬಳಸಿಕೊಳ್ಳುವ ಕಥಾವಸ್ತು ಬಯಲಾಟದಂತೆ ರಾಮಾಯಣ, ಮಹಾಭಾರತ,ಭಾಗವತಗಳಿಗೆ ಸಂಬಂದಿಸಿದ್ದಾಗಿರುತ್ತದೆ. ಭೀಮ, ದುರ್ಯೋಧನ, ರಾವಣರಂತಹ ಪಾತ್ರಗಳು ಹೆಚ್ಚು ಕೆಂಪು, ಕಪ್ಪು, ಬಣ್ಣಗಳಿಂದಕೂಡಿ ರಂಗುರಂಗಾಗಿರುತ್ತವೆ. ಅವುಗಳ ರೌದ್ರ ರೂಪವನ್ನು ತಮ್ಮ ಬಣ್ಣಗಾರಿಕೆಯಲ್ಲಿಯೇ ಸ್ಪಷ್ಟವಾಗಿ ಮೂಡಿಸಿ ಬಿಟ್ಟಿರುತ್ತಾರೆ. ಹಿಡಿಂಬೆ,ಶೂರ್ಪನಕಿಯರ ಪಾತ್ರಗಳ ಚಿತ್ರಣವು ಅಷ್ಟೇ ಬಿರುಸಾಗಿ ಅವುಗಳ ಸ್ವರೂಪನ್ನು ಹೊರಹೊಮ್ಮಿಸುವಂತಿರುತ್ತವೆ.ರಾಮ, ಕೃಷ್ಣ , ಅರ್ಜುನ, ಧರ್ಮರಾಯ, ಮುಂತಾದ ಪಾತ್ರಗಳ ಗೊಂಬೆಗಳು ನೋಡಲು ಅಂದವಾಗಿರುತ್ತವೆ.ರಥದ ಮೇಲೆ ಕುಳಿತು ಯುದ್ದಮಾಡುವ ಗೊಂಬೆಗಳು, ಆನೆ, ಒಂಟೆ, ಕುದುರೆ, ಮುಂತಾದ ಪ್ರಾಣಿಗಳ ಬೊಂಬೆಗಳು ನೋಡಲು ಅಂದವಾಗಿರುತ್ತವೆ. ಅವುಗಳಲ್ಲೆಲ್ಲಾ ಕಲಾಕಾರನ ವಿಶಿಷ್ಟ ಕೌಶ್ಯಲ್ಯವನ್ನು ಗುರುತಿಸಬಹುದು.ಹೆಣ್ಣು ಗೊಂಬೆಗಳು ಬಹಳ ವಿಶಿಷ್ಟವಾಗಿರುತ್ತವೆ. ಇವುಗಳ ವೇಷಭೂಷಣ ಸಮಾನ್ಯವಾಗಿ ಬಯಲಾಟದ ವೇಷಭೂಷಣದಂತಿರುತ್ತದೆ. 

ರಂಗಸ್ಥಳ ಮತ್ತು ಆಟ

ಬದಲಾಯಿಸಿ

ಸಾಮಾನ್ಯವಾಗಿ ಹಳ್ಳಿಗಳು ಇಂತಹ ಮನೋರಂಜನೆ ಏರ್ಪಡಿಸುತ್ತಿದ್ದು ಸುಗ್ಗಿಯ ಕಾಲದಲ್ಲಿ ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಇಂತಹ ಮನರಂಜನೆಗೆ ತೊಡಗುತ್ತಿದ್ದರು. ಕಲಾವಿದರು ಮೊದಲಿಗೆ ಊರಿನ ಮುಖಂಡರನ್ನೇ ಕಂಡು ಗೊಂಬೆಯಾಟಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಬೇಕಾಗಿತ್ತು. ಅವರಿಂದ ಅನುಮತಿ ಸುಲಭವಾಗಿ ದೊರಕುತ್ತಿತ್ತು. ಈಡೀ ರಾತ್ರಿ ದೀಪಕ್ಕೆ ಬೇಕಾದ ಎಣ್ಣೆಯ ಖರ್ಚನ್ನು ಅವರೇ ಕೊಡುತ್ತಿದ್ದರು. ಅಲ್ಲದೆ ಸಂಭಾವನೆಯ ಜೊತೆಗೆ ಒಂದಿಷ್ಟು ದವಸ ಧಾನ್ಯವನ್ನು ಊರಿನವರಿಂದ ಸಂಗ್ರಹಿಸಿ ಕೊಡುತ್ತಿದ್ದರು. ಗೊಂಬೆಯಾಟದವರು ಅಲೆಮಾರಿಗಳಾದರು ಕೆಲವರು ಇಂತಿಷ್ಟು ಪ್ರದೇಶವೆಂದು ಹಂಚಿಕೊಂಡು ಅದಕ್ಕೆ ಸೇರಿದ ಹಳ್ಳಿಗಳಲ್ಲಿ ಮಾತ್ರ ಆಟ ಆಡಿಸುತ್ತಿದ್ದರು. ಊರಿನ ಮಧ್ಯಭಾಗದಲ್ಲಿ ವಿಶಾಲವಾದ ಜಾಗವಿರುವಡೆಯಲ್ಲಿ ಆಟದ ಎರ್ಪಾಡು ನಡೆಯುತ್ತದೆ. ಇದೊಂದು ಸಂಚಾರಿ ಕಲೆಯಾದುದರಿಂದ ಸಂಚಾರಕ್ಕೆ ಸುಲಭವಾದ ರಂಗಪರಿಕರಗಳನ್ನು ಹೊಂದಿರುವುದು ಕಂಡು ಬರುತ್ತದೆ. ರಂಗ ಮಂದಿರಕ್ಕೆ ನೆಡುವುದಕ್ಕಾಗಿ ನಾಲ್ಕು ಬಿದಿರುಗಳು, ಮೇಲ್ಬಾಗದಲ್ಲಿ ಕಟ್ಟುವುದಕ್ಕೆ ನಾಲ್ಕು ಬಿದಿರುಗಳು, ಮೇಲ್ಭಾಗ ಮತ್ತು ಗೊಂಬೆಗಳನ್ನು ತೋರಿಸುವ ಭಾಗವನ್ನು ಉಳಿದು ಮಿಕ್ಕ ಮೂರು ಕಡೆಗಳಲ್ಲಿ ಮರೆಮಾಡಲು ಬೇಕಾಗುವ-ಚಾಪೆ, ತಡಿಕೆ, ಗೊಂಬೆಗಳ ಪ್ರದರ್ಶನದ ಭಾಗಕ್ಕೆ ಬೇಕಾಗುವ ಬಿಳಿಯ ಪಂಚೆ ಹಾಗು ಕರಿಯ ಕಂಬಳಿ ಇವಿಷ್ಟಿದ್ದರೆ ತೊಗಲು ಗೊಂಬೆಯಾಟದ ರಂಗಮಂದಿರ ಸಿದ್ದಗೊಳ್ಳುತ್ತದೆ. ಜೊತೆಗೆ ಶುಭದ ಸಂಕೇತವಾಗಿ ಮಾವಿನಸೊಪ್ಪನ್ನು ಕಟ್ಟುವ ಕ್ರಮವೂ ಇದೆ. ಕುಳಿತುಕೊಂಡು ಕುಣಿಸುವ ಚಿಕ್ಕದಾದ ಗೊಂಬೆಗಳ ರಂಗಮಂದಿರ ಆರು ಅಡಿ ಎತ್ತರವಿದ್ದು ಎಂಟು ಅಡಿಯಷ್ಟು ಚಚ್ಚೌಕವಾಗಿರುತ್ತದೆ. ರಂಗದ ಮುಂಭಾಗದಲ್ಲಿ ಕೆಳಗಡೆ ಎರಡುವರೆ ಅಡಿಯಷ್ಟು ಕರಿಯ ಕಂಬಳಿಯನ್ನು ಕಟ್ಟುತ್ತಾರೆ . ಮೇಲ್ಭಾಗದಲ್ಲಿ ಇನ್ನುಳಿದ ಜಾಗಕ್ಕೆ ಅಪ್ಪಟ ಬಿಳಿಯ ಬಣ್ಣದ ಪಂಚೆಯನ್ನು ಕಟ್ಟುತ್ತಾರೆ. ಗೊಂಬೆಗಳನ್ನು ಅದರ ಹಿಂಬದಿಯಲ್ಲಿಯೆ ಪ್ರದರ್ಶಿಸುವುದು. ಗೊಂಬೆಗಳನ್ನು ಆಡಿಸುವವರು ಒಳಭಾಗದಲ್ಲಿಯೇ ಕುಳಿತಿದ್ದು ಕರಿ ಕಂಬಳಿಯಿಂದಾಗಿ ಅವರು ಯಾರು ಪ್ರೇಕ್ಷಕರ ಕಣ್ಣಿಗೆ ಬೀಳುವುದಿಲ್ಲ. ಒಳಗಡೆ ಅದರ ಹಿಂಭಾಗದಲ್ಲಿ ಒಂದು ದೀಪವನ್ನು ತೂಗು ಬಿಟ್ಟರುತ್ತಾರೆ. ಇತ್ತೀಚೆಗೆ ಗ್ಯಾಸ್ ಹಾಗು ಗ್ಯಾಸ್ ಲೈಟಿನ ಬಳಕೆಯೂ ಇದೆ. ಅದರ ಬೆಳಕು ತೊಗಲುಗೊಂಬೆಗಳ ಮೇಲೆ ಬಿದ್ದು ಆ ಗೊಂಬೆಗಳ ಪ್ರತಿಫಲನ ಪಂಚೆಯ ಮೇಲೆ ಅದ್ಭುತವಾಗಿ ಕಾಣಿಸಿ ಕೊಳ್ಳುತ್ತದೆ. ಈ ರೀತಿಯ ರಂಗ ಮಂದಿರ ಚಿಕ್ಕ ಗೊಂಬೆಗಳಿಗೆ ಮಾತ್ರ ಸಾಧ್ಯವಾಗುತ್ತಿತ್ತು. ಆಳೆತ್ತರದ ಗೊಂಬೆಗಳ ರಚನೆಯೇ ಬೇರೆ ಇದು ಬಯಲು ಸೀಮೆಯ ಬಯಲಾಟದ ರಂಗಮಂದಿರವನ್ನೇ ಹೆಚ್ಚು ಕಡಿಮೆ ಹೋಲುತ್ತದೆ. ಆಳೆತ್ತರದ ಗೊಂಬೆಗಳನ್ನು ಕುಣಿಸಬೇಕಾದರೆ ಕಲಾವಿದ ನಿಂತುಕೊಳ್ಳಬೇಕಾಗುತ್ತದೆ. ನಿಂತುಕೊಂಡೆ ಸೂತ್ರದ ಗೊಂಬೆಯನ್ನಾಡಿಸುವಂತೆ ಕಡ್ಡಿಯ ಸಹಾಯದಿಂದ ಇದನ್ನು ಆಡಿಸುತ್ತಾನೆ. ಪಾತ್ರವನ್ನು ಕುಣಿಸುವಾಗ ಜೊತೆಯಲ್ಲಿ ತಾನೂ ಕುಣಿಯುತ್ತಾನೆ.

ಬಯಲಾಟದ ಪಾತ್ರಧಾರಿಗಳಂತೆ ಕಾಲಿಗೆ ಗೆಜ್ಜೆಯನ್ನು ಈತ ಕಟ್ಟಿಕೊಂಡಿರುತ್ತಾನೆ. ಕೆಳಭಾಗದಲ್ಲಿ ಹಲಗೆಗಳನ್ನು ಹಾಸಿಕಟ್ಟಿಯನ್ನು ನಿರ್ಮಿಸುವುದು ವಾಡಿಕೆ. ಇದೆಲ್ಲಾ ಆದ ಬಳಿಕ ಆಡಿಸು ಭಾಗವೊಂದನ್ನು ಬಿಟ್ಟು ಉಳಿದ ಮೂರು ಕಡೆಗಳನ್ನು ಸೋಗೆಯಗರಿಯಿಂದಲೋ, ಚಾಪೆ ಅಥವಾ ತಡಿಕೆಯಿಂದಲೋ ಮರೆ ಮಾಡುತ್ತಾರೆ. ಮುಂಭಾಗವನ್ನು ನೀಲಿಯ ಪಂಚೆಯಿಂದ ಮುಚ್ಚುತ್ತಾರೆ. ಉಳಿದೆಲ್ಲಾ ತಂತ್ರವೂ ಕುಳಿತುಕೊಂಡು ಆಡಿಸುವ ಗೊಂಬೆಗಳ ರಂಗ ಮಂದಿರದಂತೆಯೇ ಇರುತ್ತದೆ. ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಆಟ ಪ್ರಾರಂಭವಾಗುತ್ತದೆ. ತೊಗಲು ಗೊಂಬೆಯಾಟವನ್ನು ಆಕರ್ಷಣೀಯವನ್ನಾಗಿ ಮಾಡಿ ಪ್ರೇಕ್ಷಕರನ್ನು ಅಲೌಕಿಕ ಪ್ರಪಂಚಕ್ಕೆ ಕರೆದೊಯ್ಯುವ ಚಮತ್ಕಾರವು ಆಡಿಸುವವನ ಕೈಚಳಕದಲ್ಲಿರುತ್ತದೆ. ಅವನು ಚುರುಕಾಗಿದ್ದಷ್ಟೂ ಕಲೆಗಾರಿಕೆ ಉತ್ತಮವಾಗಿರುತ್ತದೆ. ಆಯಾ ಪಾತ್ರಗಳ ಗುದ್ದುಗಾರಿಕೆಗೆ ಸರಿ ಹೊಂದುವಂತೆ. ಹಾಡನ್ನು ಸಂಭಾಷಣೆಯನ್ನು ಜೊಡಿಸುತ್ತಾ ತನ್ನ ಎರಡೂ ಕೈಗಳಿಂದ ಒಂದೊಂದು ಗೊಂಬೆಯನ್ನು ಹಿಡಿದು ಕುಣಿಸು ರೀತಿ ಅಚ್ಚರಿಯನ್ನು ಉಂಟುಮಾಡುವಂತದ್ದು. ಯುದ್ದದ ಸಂದರ್ಭ, ಬಾಣವನ್ನು ಬಿಡುವ ಗತ್ತು, ಗಧೆಯನ್ನು ಬೀಸುವ ವೈಖರಿ, ತನ್ನ ಮಾತಿನ ಗತ್ತಿನ ಕ್ರಮಕ್ಕೆ ಸರಿಹೊಂದುವಂತೆ ಕತ್ತು ಕೈಕಾಲುಗಳನ್ನು ಆಡಿಸುವ ರೀತಿ ಇವೆಲ್ಲವೂ ಅಪೂರ್ವವಾದ ದೃಶ್ಯಗಳಂತೆ ತೋರುತ್ತವೆ. ಒಂದು ಪಾತ್ರದ ಪ್ರವೇಶ, ನಿರ್ಗಮನಗಳನ್ನು ಬಹಳ ಚಮತ್ಕಾರಗಳಿಂದ ನಿರ್ವಹಿಸಬೇಕಾಗುತ್ತದೆ. ನಾಲ್ಕಾರು ಪಾತ್ರಗಳು ಒಟ್ಟೊಟ್ಟಿಗೆ ಬಂದಾಗ ಅವೆಲ್ಲವುಗಳ ಸಂಭಾಷಣೆ, ಹಾಡನ್ನು ಅದಕ್ಕೆ ತಕ್ಕ ಅಭಿನಯವನ್ನು ಏಕಕಾಲದಲ್ಲಿ ಕಲಾವಿದರು ನಿರ್ವಹಿಸಬೇಕಾಗುತ್ತದೆ. ಇವೆಲ್ಲವೂ ಅಭ್ಯಾಸ ಮತ್ತು ವಿಶಿಷ್ಟ ಕಲಾಶಕ್ತಿಯಿಂದ ನೆರವೇರುತ್ತದೆ. ಮೈಸೂರು ಭಾಗದ ಗೊಂಬೆಯಾಟದಲ್ಲಿ ನಾಲ್ಕಾರು ಜನ ಕಲಾವಿದರು ಒಟ್ಟಿಗೆ ಗೊಂಬೆಯಾಡಿಸುವ ಕ್ರಮವುಂಟು.

ಉಲ್ಲೇಖ

ಬದಲಾಯಿಸಿ
  1. ' ' 'ಹಿ.ಚಿ.ಬೋರಲಿಂಗಯ್ಯ' ' ' ,ಕರ್ನಾಟಕ ಜನಪದ ಕಲೆಗಳ ಕೋಶ, ಪುಟಸಂಖ್ಯೆ, ೨೭೬-೨೭೯