ರಾಷ್ಟ್ರೀಯ ವರಮಾನ

ಬದಲಾಯಿಸಿ

ಯಾವುದೇ ರಾಷ್ಟ್ರದ ಜನತೆಯ ಕಲ್ಯಾಣವು ಆ ರಾಷ್ಟ್ರವು ಉತ್ಪಾದಿಸುವ ಸರಕು ಸೇವೆಗಳ ಪ್ರಮಾಣ,ಅವುಗಳ ಸಂಯೋಜನ ಮತ್ತು ಅವುಗಳ ಹಂಚಿಕೆಗಳನ್ನು ಅವಲಂಬಿಸಿರುತ್ತದೆ.ಒಂದು ವರ್ಷದಲ್ಲಿ ರಾಷ್ಟ್ರವು ಉತ್ಪಾದಿಸುವ ಸರಕು ಸೇವೆಗಳ ಒಟ್ಟು ಮೌಲ್ಯವೇ ಆ ರಾಷ್ಟ್ರದ ರಾಷ್ಟ್ರೀಯ ವರಮಾನವಾಗಿದೆ.ಇತರ ಸ್ಥಿತಿ-ಗತಿಳೆಲ್ಲವೂ ಸ್ಥಿರವಾಗಿದ್ದು,ರಾಷ್ಟ್ರೀಯ ವರಮಾನವು ಅಧಿಕವಾಗುತ್ತಿದ್ದರೆ,ಜನತೆಯ ಕಲ್ಯಾಣವು ಅಧಿಕವಾಗುತ್ತಿರುತ್ತದೆ.

ರಾಷ್ಟ್ರೀಯ ವರಮಾನದ ಅರ್ಥವಿವರಣೆ

ಬದಲಾಯಿಸಿ

ರಾಷ್ಟ್ರೀಯ ವರಮಾನವನ್ನು ವಿವಿಧ ಅರ್ಥಶಾಸ್ತ್ರಜ್ಞರು ವಿವಿಧ ರೀತಿಯಲ್ಲಿ ನಿರೂಪಿಸಿದ್ದಾರೆ. ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಎಲ್ಲಾ ಸರಕು ಸೇವೆಗಳ ಹಣದ ಮೌಲ್ಯಕ್ಕೆ ರಾಷ್ಟ್ರೀಯ ವರಮಾನವೆಂದು ಕರೆಯುತ್ತಾರೆ. ಮಾರ್ಷಲ್ ಅವರು ರಾಷ್ಟ್ರೀಯ ವರಮಾನದ ವ್ಯಾಖ್ಯೆಯನ್ನು ಹೀಗೆ ನೀಡಿದ್ದಾರೆ. "ಒಂದು ರಾಷ್ಟ್ರದ ಕಾರ್ಮಿಕರು ಮತ್ತು ಬಂಡವಾಳದಾರರು ಕೂಡಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿ,ಪ್ರತಿವರ್ಷ ಭೌತಿಕ ವಸ್ತುಗಳನ್ನು ಮತ್ತು ಎಲ್ಲಾ ವಿಧವಾದ ಸೇವೆಗಳನ್ನು ಒಂದು ನಿವ್ವಳ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ.ಇದೇ ರಾಷ್ಟ್ರದ ನಿಜವಾದ ನಿವ್ವಳ ವಾರ್ಷಿಕ ವರಮಾನವಾಗಿದೆ." ಮಾರ್ಷಲ್ ಅವರು 'ನಿವ್ವಳ' ಶಬ್ದವನ್ನು ಉಪಯೋಗಿಸಿರುವುದು ಮಹತ್ವದಾಗಿದೆ. ಉತ್ಪಾದನೆಯಲ್ಲಿ ಉಪಯೋಸಿದ ಬಂಡವಾಳ ಸರಕುಗಳ ಸವೆತವನ್ನು ಮತ್ತು ದುರಸ್ಥಿಯ ಹಾಗೂ ಬದಲಾವಣೆಗಳ ವೆಚ್ಚವನ್ನು ಒಟ್ಟು ರಾಷ್ಟ್ರೀಯ ವರಮಾನದಿಂದ ಕಳೆದರೆ ನಿವ್ವಳ ರಾಷ್ಟ್ರೀಯ ವರಮಾನ ಬರುತ್ತದೆ.

ಎ.ಸಿ.ಪೀಗೂ ಅವರು ನೀಡಿದ ರಾಷ್ಟ್ರೀಯ ವರಮಾನದ ವ್ಯಾಖ್ಯೆ ಈ ರೀತಿಯಾಗಿದೆ:"ವಿದೇಶಗಳಿಂದ ಬರುವ ಆದಾಯವನ್ನೊಳಗೊಂಡ ಸಮಾಜದ ಭೌತಿಕ ವರಮಾನವನ್ನು ಹಣದ ರೂಪದಲ್ಲಿ ಅಳೆದಾಗ,ದೊರೆಯುವ ಆದಾಯವೇ ರಾಷ್ಟ್ರೀಯ ವರಮಾನ".ಹೀಗೆ ಪೀಗೂ ಮತ್ತು ಮಾರ್ಷಲ್ ಅವರು ರಾಷ್ಟ್ರೀಯ ವರಮಾನವನ್ನು ಉತ್ಪಾದನೆಯ ಮೂಲಕ ವ್ಯಾಖ್ಯಾನಿಸಿದ್ದಾರೆ.ಆದುದರಿಂದ ಅವರ ವ್ಯಾಖ್ಯೆಗಳ ನಡುವೆ ಸ್ವಾಮ್ಯವನ್ನು ಕಾಣಬಹುದು.

ಮೇಲೆ ಕೊಟ್ಟ ಹಲವಾರು ವ್ಯಾಖ್ಯೆಗಳಿಂದ,ರಾಷ್ಟ್ರೀಯ ವರಮಾನವು ಕೆಳಗೆ ಕೊಟ್ಟ ಅಂಶಗಳನ್ನು ಒಳಗೊಂಡಿರುತ್ತದೆ. ಅ)ರಾಷ್ಟ್ರೀಯ ವರಮಾನವು ಒಂದು ದೇಶಕ್ಕೆ ಸಂಬಂಧಿಸಿದ ಹಣದ ರೂಪದ ವರಮಾನವಾಗಿದೆ. ಆ)ಸಾಮಾನ್ಯವಾಗಿ ಅದು ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಹಣದ ಮೌಲ್ಯಕ್ಕೆ ಸಮವಾಗಿರುತ್ತದೆ. ಇ)ರಾಷ್ಟ್ರೀಯವರಮಾನವನ್ನು ಲೆಕ್ಕ ಮಾಡುವಾಗ ಯಾವುದೇ ವಸ್ತುವನ್ನಾಗಲಿ ಅಥವ ಸರಕನ್ನಾಗಲಿ ಒಂದೇ ಬಾರಿ ಗಣನೆಗೆ ತೆಗೆದುಕೊಳ್ಳಬೇಕು. ಈ)ವಿದೇಶಗಳಿಂದ ಬರಬೇಕಾದ ನಿವ್ವಳ ಆದಾಯವನ್ನು ಅದರಲ್ಲಿ ಸೇರಿಸಬೇಕು ಮತ್ತು ವಿದೇಶಗಳಿಗೆ ಕೊಡಬೇಕಾದ ಸಾಲವನ್ನು ಅದರಲ್ಲಿ ಕಳೆಯಬೇಕು. ಉ)ಉತ್ಪಾದನೆಯಲ್ಲಿ ಉಪಯೋಗಿಸಿದ ಬಂಡವಾಳ ಸರಕುಗಳ ಸವೆತ ಮತ್ತು ದುರಸ್ಥಿ ಹಾಗೂ ಬದಲಾವಣೆಗಳ ವೆಚ್ಚಗಳನ್ನು ಅದರಲ್ಲಿ ಕಳೆಯಬೇಕು.