ಶಾಂತಿನಾಥ ಸ್ವಾಮಿ ಬಸದಿ, ಕುತ್ಲೂರು
ಶ್ರೀ ಶಾಂತಿನಾಥ ಸ್ವಾಮಿ ಬಸದಿ, ಪುರುಷ ಗುಡ್ಡೆಯು ದಕ್ಷಿಣ ಕನ್ನಡದಲ್ಲಿರುವ ಜೈನ ಬಸದಿಗಳಲ್ಲೊಂದು. ಪುರುಷಗುಡ್ಡೆ ಜೈನರ ಪ್ರಸಿದ್ಧ ಜಿನ ಚೈತ್ಯಾಲಯದ ಅತಿಶಯ ಕ್ಷೇತ್ರ. ಪುರುಷ ಎಂದರೆ ಚಿನ್ನ ಮುಟ್ಟಿದ್ದನ್ನು ಚಿನ್ನವಾಗಿಸುವ ಶಿಲೆ ಎಂದು ನಿಘಂಟಿನಲ್ಲಿ ಅರ್ಥವಿದೆ.
ಇತಿಹಾಸ
ಬದಲಾಯಿಸಿಈ ಚೈತ್ಯಾಲಯವನ್ನು ಸುಮಾರು ೮೦೦ ವರ್ಷಗಳ ಹಿಂದೆ ಕಟ್ಟಿದ್ದಾರೆಂಬುದು ಪ್ರತೀತಿ. ಆದರೆ ಇದು ಯಾವಾಗ ಸ್ಥಾಪಿಸಲ್ಪಟ್ಟಿತೆಂದು ತಿಳಿಸುವ ನಿಖರವಾದ ದಾಖಲೆಗಳಿಲ್ಲ. ದಂತಕಥೆ ರೂಪದಲ್ಲಿ, ಜನಪದ ರೀತಿಯಲ್ಲಿ ಸ್ಥಳಪುರಾಣದ ಹಿನ್ನೆಲೆ ಸಾಕಷ್ಟು ಹರಡಿದೆ. ಈಗ ಚೈತ್ಯಾಲಯವಿರುವ ಜಾಗದಲ್ಲಿ ಬಹುಕಾಲದ ಹಿಂದೆ ಜೈನ ಮುನಿಯೋರ್ವರು ತಪಸ್ಸಿಗೆ ಕುಳಿತಿದ್ದರೆಂದು ಐತಿಹ್ಯವಿದೆ. ಈ ಮುನಿವರ್ಯರ ಕಮಂಡಲದಿಂದ ಹರಿದ ನೀರು ರಸಬಾವಿಯಾಗಿ ‘ಪುರುಷ’ವಾಯಿತೆಂದು ಹೇಳಲಾಗುತ್ತದೆ.[೧]
ಸ್ಥಳ
ಬದಲಾಯಿಸಿದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬ ಗ್ರಾಮದಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಒಂದು ಸುಂದರ ಬೆಟ್ಟವಿದೆ. ಈ ಬೆಟ್ಟ ಏರಿ ನಿಂತು ವೀಕ್ಷಿಸಿದಾಗ ಬಲಭಾಗದಲ್ಲಿ ಸುಂದರವಾದ ಸಹ್ಯಾದ್ರಿ ಬೆಟ್ಟಗಳ ಸಾಲುಗಳ ಕಾಣುತ್ತವೆ. ಕಣ್ಮನ ತಣಿಸುವ ಈ ಸುಂದರ ಪ್ರದೇಶದಲ್ಲಿ ಈ ಪುರುಷಗುಡ್ಡೆ ಜಿನ ಚೈತ್ಯಾಲಯ ಇದೆ. ಕಾರ್ಕಳ, ನಾರವಿ, ಬೆಳ್ತಂಗಡಿ, ಧರ್ಮಸ್ಥಳದ ರಾಜ್ಯ ಹೆದ್ದಾರಿಯಲ್ಲಿ ಬೆಳ್ತಂಗಡಿಯಿಂದ ಕಾರ್ಕಳ ರಸ್ತೆಯಲ್ಲಿ ಸುಮಾರು ಇಪ್ಪತ್ತೇಳು ಕಿಲೋ ಮೀಟರ್ ದೂರ ಸಾಗಿದಾಗ ನಮಗೆ ಸಿಗುವ ಐತಿಹಾಸಿಕ ಸ್ಥಳ ಅರಸುಕಟ್ಟೆ. ಅಲ್ಲಿಂದ ವೇಣೂರು ಮಾರ್ಗವಾಗಿ ಸುಮಾರು ಎರಡು ಕಿಲೋ ಮೀಟರ್ ಸಾಗಿದರೆ ಸಿಗುವ ಜಿನ ಚೈತ್ಯಾಲಯವೇ ಈ ಪುರುಷಗುಡ್ಡೆಯ ಜಿನ ಚೈತ್ಯಾಲಯ.
ದೈವ
ಬದಲಾಯಿಸಿಭಗವನ್ ಶ್ರೀ ಶಾಂತಿನಾಥ ಸ್ವಾಮಿ ಇಲ್ಲಿಯ ಮೂಲನಾಯಕ ಜೊತೆಗೆ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ಅಮ್ಮನವರು ಪೂಜಿಸಲ್ಪಡುತ್ತಾರೆ.
ಕಲಾಕೃತಿ
ಬದಲಾಯಿಸಿಚೈತ್ಯಾಲಯದ ಮೇಗಿನ ನೆಲೆಯಲ್ಲಿರುವ ಭಗವನ್ ಶ್ರೀ ಪಾರ್ಶ್ವನಾಥ ಸ್ವಾಮಿ ಸ್ಥಾಪನೆ ಸುಮಾರು ೪೦೦-೫೦೦ ವರ್ಷಗಳ ಹಿಂದಿನದೆಂದು ಹೇಳಲಾಗುತ್ತದೆ. ಚೈತ್ಯಾಲಯದ ಮೂಲ ನಾಯಕರಾದ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ಬಿಂಬವನ್ನು ಚಂದ್ರಕಾಂತ ಶಿಲೆಯಿಂದ ತಯಾರಿಸಲಾಗಿದೆ. ಈ ಬಿಂಬದ ವೈಶಿಷ್ಟ್ಯವೆಂದರೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ವೇಳೆಯಲ್ಲಿ ಬೇರೆ ಬೇರೆ ಬಣ್ಣಗಳಿಂದ ಕಂಗೊಳಿಸುವ ಗುಣವನ್ನು ಹೊಂದಿದೆ. ಮೂಲ ವಿಗ್ರಹವು ೧೮ ಇಂಚು ಎತ್ತರವಿದೆ. ಸ್ವಾಮಿಯ ಪ್ರಭಾಲಯವು ಕಂಚಿನದ್ದಾಗಿದೆ. ಬಿಂಬವು ಖಡ್ಗಾಸನ ಭಂಗಿಯಲ್ಲಿದೆ. ಪದ್ಮಪೀಠವನ್ನು ಕಲ್ಲಿನಿಂದ ತಯಾರಿಸಲಾಗಿದೆ. ಇಲ್ಲಿನ ಯಕ್ಷ ಗರುಡ, ಯಕ್ಷಿ-ಕಂದರ್ಪಿಣಿ, ತೀರ್ಥಂಕರ ಮೂರ್ತಿಯ ಕೆಳಗೆ ನಾವು ಜಿಂಕೆಯ ಲಾಂಛನವನ್ನು ಕಾಣಬಹುದು. ಸ್ವಾಮಿಯ ಮುಖವು ನಗೆ ಸೂಸುವಂತಹದ್ದು. ಮೂರ್ತಿಯ ಜೊತೆ ಅಷ್ಟು ಮಹಾಪ್ರಾತಿಹಾರ್ಯಗಳನ್ನು ಕಾಣಬಹುದು.
ಧಾರ್ಮಿಕ ಕಾರ್ಯಗಳು
ಬದಲಾಯಿಸಿಈ ಬಸದಿಯಲ್ಲಿ ದಿನಕ್ಕೆ ಒಂದು ಸಲ ಅಂದರೆ ಬೆಳಗ್ಗೆ ಮಾತ್ರವೇ ಅಭಿಷೇಕ, ಪೂಜೆ ನಡೆಯುತ್ತದೆ. ಬಸದಿಯ ಗರ್ಭಗುಡಿಯಲ್ಲಿ ಶ್ರುತ, ಸರ್ವಾಹ್ನ ಯಕ್ಷ, ತೀರ್ಥಂಕರರ ಮೂರ್ತಿ ಇದೆ. ಇವುಗಳ ಮೇಲೆ ಯಾವುದೇ ರೀತಿಯ ಬರವಣಿಗೆ ಇಲ್ಲ. ಇಲ್ಲಿ ಮುಖ್ಯವಾಗಿ ಶಾಂತಿನಾಥ ಸ್ವಾಮಿ ಮೂರ್ತಿಗೆ ಅಭಿಷೇಕ ನಡೆಯುತ್ತದೆ. ನೋಂಪಿ ಉದ್ಯಾಪನೆ ಮಾಡಿದ ಮೂರ್ತಿಗಳು ಇಲ್ಲಿ ಇಲ್ಲ. ಅಷ್ಟಮನಂದೀಶ್ವರ ಮೂರ್ತಿ ನಾವು ನೋಡಬೇಕಾದ ಇನ್ನೊಂದು ಆಕರ್ಷಕ ಬಿಂಬ.ಈ ಮೂರ್ತಿಗಳ ಜೊತೆ ಪೂಜೆಗೊಳ್ಳುವ ಇನ್ನೊಂದು ಮುಖ್ಯ ಮೂರ್ತಿ ಎಂದರೆ ಶ್ರೀ ಪದ್ಮಾವತಿ ಅಮ್ಮ. ಇದು ಕೂಡ ಶಿಲೆಯಿಂದ ತಯಾರಿಸಿದ್ದಾಗಿದೆ. ಇದನ್ನು ನಾವು ತೀರ್ಥಂಕರರ ಮಂಟಪದಲ್ಲಿ ಕಾಣಬಹುದು. ಇದು ಉತ್ತರಕ್ಕೆ ಮುಖ ಮಾಡಿ ಕುಳಿತಿದೆ. ಇನ್ನೂ ಮುಖ್ಯವಾಗಿ ಇಲ್ಲಿ ಪೂಜಿಸಲ್ಪಡುವ ಮೂರ್ತಿ ಎಂದರೆ ಬ್ರಹ್ಮದೇವರು. ಈ ಮೂರ್ತಿಯು ಕಪ್ಪು ಶಿಲೆಯಿಂದ ತಯಾರಿಸಲ್ಪಟ್ಟಿದೆ. ಕುದುರೆಯ ಮೇಲೆ ಕುಳಿತುಕೊಂಡ ಭಂಗಿಯಲ್ಲಿ ಮೂರ್ತಿಯನ್ನು ಕಾಣಬಹುದು.
ಆವರಣ
ಬದಲಾಯಿಸಿನಾವು ಗರ್ಭಗುಡಿಯಿಂದ ಹೊರ ಬರುತ್ತಿರುವಂತೆಯೆ ತೀರ್ಥ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಘಂಟಾ ಮಂಟಪದಲ್ಲಿ ಯಾವುದೇ ರೀತಿಯ ಆಕೃತಿಗಳಿಲ್ಲ. ಬಸದಿಯ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರವನ್ನು ಬಿಡಿಸಲಾಗಿದೆ. ಬಸದಿಯ ಎದುರು ಗೋಪುರವನ್ನು ಕಾಣಬಹುದು. ಆದರೆ ಈ ಗೋಪುರದಲ್ಲಿ ಯಾವುದೇ ರೀತಿಯ ಚಿತ್ರಗಳು ಕಾಣಸಿಗುವುದಿಲ್ಲ. ಗರ್ಭಗ್ರಹದ ಮೇಲೆ ಮೇಗಿನ ನೆಲೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂರ್ತಿಗೆ ಪೂಜೆ ಮಾಡಲಾಗುತ್ತದೆ. ಇಲ್ಲಿ ಗಂಧಕುಟಿ ಇದೆ. ಪಾರ್ಶ್ವನಾಥ ಸ್ವಾಮಿಯ ಹಳೆಯ ಮತ್ತೊಂದು ಮೂರ್ತಿ ಇದೆ. ಈ ಎಲ್ಲಾ ಮೂರ್ತಿಗಳನ್ನು ಬಹಳ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಪಂಚ ಪರಮೇಷ್ಠಿಗಳ ಮೂರ್ತಿಗಳು ಇಲ್ಲಿವೆ. ನಾಗನ ಮೂರ್ತಿ ಕ್ಷೇತ್ರಪಾಲನಾಗಿ ಇರುವುದನ್ನು ಕಾಣಬಹುದು. ಈ ಮೂರ್ತಿ ಕಲ್ಲಿನದಾಗಿದ್ದು ಚಿಕ್ಕದಾಗಿದೆ. ಬಸದಿಯಲ್ಲಿ ದಶಕಾಲ್ಪಕರ ಕಲ್ಲುಗಳು ಇವೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ.: ಮಂಜುಶ್ರೀ ಪ್ರಿಂಟರ್ಸ್.