ಸದಸ್ಯ:1810266apoorva8
ಶೀರ್ಷಿಕೆ:ಆಯ್ಕೆ
ರಚನೆ: ಯಶಸ್ , ವಿಜಯ್ , ಶರತ್
ದೃಶ್ಯ-೧
(ಶಿವು ವೇದಿಕೆಗೆ ಪ್ರವೇಶಿಸುತ್ತಾನೆ)
ಶಿವು: ಶಂಕ್ರ ಶಂಕ್ರ..... ಎಲ್ಲಿದಿಲಾ ಬಾರ್ಲಾ ಹೊರಗೆ, ಮಾಡದೆಲ್ಲ ಮಾಡ್ಬುಟ್ಟು ಒಳಗ್ ತೆಪ್ಪುಗ್ ಕುತ್ತಿದಿಯಾ, ನಿನ್ ಬಗ್ಗೆ ಎಲ್ಲಾ ಗೊತ್ತಾಯ್ತು ಕಲ್ಲಾ
ಒಡಹುಟ್ಟಿದ್ ತಮ್ಮನ್ಗಿಂತ ಹೆಚ್ಚಾಗಿದ್ನಲ್ಲೋ... ನಂಗೇ ಬೆನ್ನಿಗ್ ಚೂರಿ ಹಾಕೋ ಕೆಲ್ಸ ಮಾಡ್ಬುಟ್ಟಲ್ಲೋ
ಅವ್ವ...... ಅವ್ವ....... ಎಲ್ಲಿದ್ದೀಯವ್ವಾ ನೋಡವ್ವ, ನಿನ್ ಹಿರಿಮಗುನ್ ಬಂಡ್ವಾಳ ಬಯಲಾಯ್ತು, ರಾಮ-ಲಕ್ಷ್ಮಣರತರ ಇದ್ಕೊಂಡು ನಂಗೇ ಮೋಸ ಮಾಡಕ್ ನೋಡ್ತಾವ್ನಲ್ಲ. ಇಂಥಾ ಗುಳ್ಳೆನರಿ ಕೆಲ್ಸ ಯಾಕೆ ಮಾಡ್ಬೇಕಿತ್ತು ಅದೂ ಬರೀ ಒಂದು ಆಸ್ತಿಗೋಸ್ಕರ. ಅದನ್ನಾದ್ರೂ ಅವನ್ ದುಡ್ದಿದಾನ? ಇಲ್ಲ.....!
ಅದ್ರುಮ್ಯಾಗೆ ಅವನಿಗೆ ಎಷ್ಟು ಹಕ್ಕಿದೆಯೋ ನಂಗುವಾ ಅಷ್ಟೇ ಹಕ್ಕ್ಯೆತೆ.
ಅದು ಅಪ್ಪಯ್ಯ ನಮಗೆ ಅಂತ ಬಿಟ್ಟೋಗಿರೋ ಸಂಪತ್ತು.
ಹಾ..... ಹಾ........ ಆವಯ್ಯ ಹೇಳಿದ್ ಮಾತೆಲ್ಲಾ ನಂಗೀವಾಗ ಅರ್ಥ ಆಗ್ತೈತೆ. ಛೇ ಎಂಥಾ ದಡ್ಡ ಬಡ್ಡಿಮಗ ನಾನು. ಹೋಗಿ ಹೋಗಿ ಇಂಥವ್ರನ್ನ ನಂಬುದ್ನಲ್ಲ ನನ್ನ ಮೆಟ್ಟು ತಕೊಂಡು ನಾನೇ ಹೊಡ್ಕೋಬೇಕು.
(ಶಂಕ್ರುವಿನ ಆಗಮನ)
ಶಂಕ್ರು: ಏನೋ ಶಿವೂ.... ಯಾಕ್ಲಾ ಕಿರುಚಾಡ್ತಿದ್ದೀಯ? ಒಸಿ ತಣ್ಣಗಾಗು, ಬಾ ಕುತ್ಕೊ ಅದೇನಿದ್ರೂ ಮಾತಾಡುವ
(ಶಂಕ್ರು ಶಿವುವಿನ ಕೈ ಹಿಡಿದು ಸಮಾಧಾನಿಸಲು ಪ್ರಯತ್ನಿಸುತ್ತಾನೆ. ಆದರೆ ಶಿವೂ ಬಿಗಿಯಾಗಿ ಕೈಯನ್ನು ಬಿಡಿಸಿಕೊಳ್ಳುತ್ತಾನೆ.)
ಶಿವು: ಬಿಡಯ್ಯ ನನ್ ಕೈನ ,ನಿನ್ ಸ್ವಾರ್ಥಕ್ಕೋಸ್ಕರ ಎಂಥ ನೀಚ ಕೆಲಸ ಮಾಡೋಕೂ ಹೇಸೋನಲ್ಲ ನೀನು. ನಿನ್ ಮಾತ್ ನಾನ್ಯಾಕ್ ಕೇಳಿ.
ಶಂಕ್ರು: ಏನ್ಲಾ ಮಾತಾಡ್ತಿದ್ದೀಯ, ಬುದ್ದಿ-ಗಿದ್ದಿ ಕೆಟ್ಟಯ್ತಾ ನಿಂಗೆ?
ಶಿವೂ: ಸಾಕ್ ಮಾಡೋ ನಿನ್ ನಾಟ್ಕವ, ನೀನು ನಾಟಕಕಾರ ಅಂತ ನಂಗೂ ಗೊತ್ತು ಸಭ್ಯಸ್ತನ್ ತರ ಮಾತಾಡ್ಬೇಡ. ಅದೇನೋ ಹೇಳ್ತಾರಲ್ಲ ಬೆಕ್ಕು ತಾನ್ ಕಣ್ಮುಚ್ಕೊಂಡು ಹಾಲು ಕುಡಿದು
ಪ್ರಪಂಚಕ್ ಗೊತ್ತಾಗಲ್ಲ ಅನ್ಕೋಳ್ತಂತೆ ಹಂಗೆ ನೀನು ಮಾಡದು ನಂಗೇನ್ ಗೊತ್ತಾಯ್ಕಿಲ್ಲ ಅನ್ಕೊಂಡಿದೀಯ?
ಶಂಕ್ರು:ಲೇ ಶಿವೂ, ನಾಲ್ಗೇಮೇಲ್ ಹಿಡಿತ ಇರ್ಲಿ, ಅಣ್ಣ ಅನ್ನೋ ಮರ್ವಾದೆ ಇಲ್ವಾ ನಿಂಗೇ?
ಶಿವು : ಓ..... ಅಣ್ಣ, ( ನಗುತ್ತಾ) ನಾನ್ ನಿನ್ ತಮ್ಮಯ್ಯ ಅಂತ ಇವಾಗ್ ಗೆಪ್ತಿ ಆಯ್ತ ನಿಂಗೆ, ಆಸ್ತಿ ಒಡಿಬೇಕಾದ್ರೆ ಎಲ್ಲೋಗಿತ್ತಪ್ಪಾ ಇವೆಲ್ಲಾ?
ಶಂಕ್ರು:ಶಿವೂ...... ಶಿವೂ........ ನೀನ್ ಅನ್ಕೊಂಡಂಗೆ ಅಲ್ಲಪ್ಪ ಅದು. ಊರೋರ್ ಮಾತು ಕಟ್ಕೊಂಡು ಮನೆಗೆ ಬಂದು ರಂಪ ಮಾಡದು ಎಷ್ಟು ಸರಿ ಅಂತ ನೀನೆ ಯೋಚ್ನೆ ಮಾಡು.
ಶಿವು : ಇನ್ನೇನು ಉಳ್ಸಿದ್ಯಾ ಯೋಚ್ನೆ ಮಾಡಾಕೆ ನಿನ್ನತ್ರ ನಂಗೇನ್ ಮಾತು. ನನ್ನ ಪಾಲಿಂದು ಅದೇನೇಯ್ತೋ ಅದನ್ನು ಕೊಟ್ಬಿಡು. ಆ ರಾಮಯ್ಯಕಿತ ಸೇರಿ ನನ್ನ ಹೊಲನೂ
ಸಾಹುಕಾರಂಗೆ ಮಾರ್ಕೊಳ್ತೀನಿ. ನೀವು ಬೇಡ ನಿಮ್ಮ ಸಹವಾಸವನೂ ಬೇಡ ! ಎಂತಾ ನವರಂಗಿ ಆತ ಆಡ್ಬುಟ್ಟಲ್ಲೋ
ಹ್ಮು... ನೀನು ಹಿಂಗೆಲ್ಲ ಆಡದ್ ನೋಡುದ್ರೆ..... ನಮ್ಮಮ್ಮನ, ಅಪ್ಪ ಏನ್ ತೀಟೆಗ್ ಮದ್ವೆ ಆದ್ರೇನೋ.....!
ಶಂಕ್ರು: ಏನ್ಲಾ ಅಂದೇ? ಅಪ್ಪಯ್ಯನ ಬಗ್ಗೆ ಏನ್ಲಾ ಅಂದೇ ನೀನು?
(ಶಂಕ್ರು ಶಿವುಗೆ ಕಪಾಳಮೋಕ್ಷ ಮಾಡುತ್ತಾನೆ)
ಹಹಹಹಹಹಹಹಹಹಹಹಹ ಚಿಕ್ಕಮ್ಮನ ಹೆಂಗ್ ಕಟ್ಕೊಂಡ್ರು ಅಂತ ಗೊತ್ತೇನ್ನ್ಲ ನಿಂಗೆ?
ಕಾಡಲ್ಲಿ ಕಿರಾತಕರ ಕೈಯಲ್ಲಿ ಸಿಕ್ಕಿ ಒದ್ದಾಡ್ತಿರ್ರ್ಬೇಕಾದ್ರೆ ಚಿಕ್ಕವ್ವನ ಕಾಪಾಡಿ ಅವರಿಗೆ ಒಂದು ಬಾಳು ಕೊಟ್ಟೋವ್ರು ಕಣೋ ನಮ್ಮಪ್ಪ ಅಂತವರ ಬಗ್ಗೆ ಮಾತಾಡಕೂ
ಯೋಗ್ಯತೆ ಇಲ್ಲ ನಿಂಗೆ
ಇನ್ನೊಂದು ಮಾತು ಹೆಚ್ಗೆ ಮಾತಾಡುದ್ರೂ ನಾಲಗೆ ಸೀಳಿ ನಾಯಿಗೆ ಹಾಲ್ಬಿಡ್ತೀನಿ.
ಶಿವು : ಇಷ್ಟೆಲ್ಲಾ ಮಾಡಿದ್ದಲ್ದೇ ಕಥೆ ಬೇರೆ ಕತ್ತಿಯ? ಮಾಡ್ತೀನ್ ತಡಿ ನಿಂಗೆ.
(ಶಿವೂ ಹೋಗಿ ದೊಣ್ಣೆ ತಗೊಂಡು ಹೊಡೀತಾನೆ......) ಹಹ್ಹಹಹಹಹಹಹಹಹಹಹಹಹಹಹಹಹ
ದೃಶ್ಯ-೨
ಶಂಕ್ರು(ರಾಮನಾಗಿ): ಮಹರಾಜ, ನಮ್ಮ ಪಿತ್ರುವಿನ ಸಮಾನರಾದ ನೀವು ಧರ್ಮವನ್ನು ಪ್ರತಿಪಾದಿಸುವ ಮಹಾಗುರು. ಹೀಗಾಗಿ ನನಗೆ ನಿಮ್ಮ ಮೇಲೆ ಪರಿಪೂರ್ಣವಾದ
ವಿಶ್ವಾಸವಿದೆ. ನೀವು ನನ್ನ ಧರ್ಮವನ್ನು ರಕ್ಷಿಸುವಿರಿ ಎಂಬ ನಂಬಿಕೆ ಇದೆ.
ನಮ್ಮ ತಂದೆಯ ಮಾತಿನಂತೆ ರಘುಕುಲ ವಂಶಕ್ಕೆ ಸೇರಿರುವ ಸಕಲ ರಾಜ್ಯವೂ ನನ್ನ ಸಹೋದರನಾದ ಭರತನಿಗೆ ಸಲ್ಲತಕ್ಕದ್ದು. ನನ್ನನ್ನು ನಿಮ್ಮ
ಸೇವಕನೆಂದು ಪರಿಗಣಿಸಿ ನೀವು ಏನೇ ತೀರ್ಪು ನೀಡಿದರೂ... ಕಾಯ, ವಾಚ ಮನಸ್ಸಿನಿಂದ ಪರಿಪಾಲಿಸಲು ನಾನು ಸಿದ್ಧವಿದ್ದೇನೆ.
ಶಿವು(ಭರತನಾಗಿ):ಮಹಾಗುರು, ನೀವು ನನಗೆ ಆದರಣೀಯ ಸ್ಥಾನದಲ್ಲಿರುವಿರಿ. ಹಾಗೂ ನನ್ನನ್ನು ಅಧರ್ಮದಿಂದ ಕಾಪಾಡುವಿರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನೀವು ಓರ್ವ ರಾಜನೂ ಹೌದು. ಓರ್ವ ಮಹಾಗುರುವೂ ಹೌದು. ಆದ್ದರಿಂದ ನೀವು ನಿಶ್ಪಕ್ಷಪಾತವಾಗಿ ನಮ್ಮಿ ಸಹೋದರ ಬಾಂಧವ್ಯದಲ್ಲಿರುವ ಕಲಹವನ್ನು ಬಗೆಹರಿಸಿ ಎಂದು ನಿಮ್ಮನ್ನು ಬೇಡುತ್ತೇನೆ.
ನಾನು, ನನ್ನ ಅಣ್ಣ ರಾಮನ್ನು ಪಡೆದುಕೊಳ್ಳಲು ಸಕಲ ರಾಜ್ಯ ವ್ಯೆಭೋಗವನ್ನು ತೊರೆದು ಅವನ ಪಟ್ಟಾಭಿಷೇಕಕ್ಕಾಗಿ ಸಕಲ ಸಿದ್ಧತೆಗೆ ವ್ಯವಸ್ಥೆ ಮಾಡಿಕೊಳ್ಳುತ್ತೇನೆ.
(ಪ್ರತಿ ವರ್ಷ ಋಷಿಯ ಪಾತ್ರ ಮಾಡುತ್ತಿದ್ದ ಅಪ್ಪನನ್ನು ನೆನೆಸಿಕೊಂಡು ಇಬ್ಬರು ಸ್ತಬ್ಧನಾಗುತ್ತಾನೆ)
(ಅಮ್ಮ ವೇದಿಕೆಗೆಪ್ರವೇಶಿಸಿ, ಅಪ್ಪನ ಸಂಭಾಷಣೆ ಮುಂದುವರಿಸುತ್ತಾರೆ)
ಅಮ್ಮ(ಋಷಿಯಾಗಿ): ಶ್ರೀರಾಮ, ಭರತ ನಿಮ್ಮಿಬ್ಬರ ಸಹೋದರ ಬಾಂಧವ್ಯ ನೋಡಿ ನನಗೆ ಮಾತೇ ಹೊರಡುತ್ತಿಲ್ಲ ಇದರ ನಿರ್ಣಯ ಸ್ವತಃ ಬ್ರಹ್ಮನೂ ಕೂಡ
ಮಾಡಲಾರನು.
ಒಂದೆಡೆ ಧರ್ಮ ಮತ್ತು ವಾಕ್ಯಪರಿಪಾಲನೆಯ ಅವತಾರಪುರುಷನಾದ ಶ್ರೀರಾಮಚಂದ್ರ, ಇನ್ನೊಂದೆಡೆ ಪ್ರೀತಿ- ವಾತ್ಸಲ್ಯದಿಂದಿರುವ ಭರತ. ಇಂತಹ
ಮಹಾನ್ ವ್ಯಕ್ತಿಗಳ ನಡುವೆ ಕೂತು ಯಾರ ಪರ, ಯಾರ ವಿರುದ್ದವೂ ಮಾತನಾಡದೇ ಪರಮೇಶ್ವರನಾದ ಶಿವನು ಏನು ಉಚಿತವಾಗಿ ಕಾಣುವನೋ
ಅದನ್ನು ನನ್ನ ಮೂಲಕ ಈಡೇರಿಸಲಿ ಎಂದು ಕೋರಿಕೊಳ್ಳುತ್ತೇನೆ.
ಶ್ರೀರಾಮನು ಮಹಾನ್ ಧರ್ಮರಕ್ಷಕ, ಅವನಧರ್ಮದ ಮೇಲಿನ ಶ್ರದ್ಧೆ ನೋಡಿ ದೇವಾನುದೇವತೆಗಳೇ ತಮ್ಮ ವಂದನೆ ಅರ್ಪಿಸುತ್ತಿದ್ದಾರೆ.
ಧರ್ಮ, ಈ ಇಳೆಯನ್ನು ರಕ್ಷಿಸುತ್ತಿರುವ ಮಹಾನ್ ಶಕ್ತಿ. ಶಾಸ್ತ್ರಗಳ ಅನುಸಾರ ಧರ್ಮಕ್ಕಿಂತ ಮಿಗಿಲಾದದ್ದು ಮುರು ಲೋಕದಲ್ಲಿ ಯಾವುದೂ ಇಲ್ಲ.
ಆದರೆ....
ಶಂಕ್ರು(ರಾಮನಾಗಿ): ಆದರೆ, ಏನು ಲೋಪವಾಯಿತು ನನ್ನ ಧರ್ಮ ಪಾಲನೆಯಲ್ಲಿ.
ಅಮ್ಮ(ಋಷಿಯಾಗಿ): ಆದರೆ ಭರತನಿಗೆ ತನ್ನ ಅಣ್ಣನ ಮೇಲಿರುವ ಪ್ರೀತಿ, ಮಮಕಾರ ಬಹಳ ಆದರಣೀಯವೇ ಸರಿ.
ಶಿವು(ಭಾರತನಾಗಿ): ,ನಾನು ನನ್ನ ಅಣ್ಣನಿಗಾಗಿ ಸಕಲ ರಾಜ್ಯ ವ್ಯೆಭೋಗವನ್ನೇನು. ನನ್ನ ಪ್ರಾಣವನ್ನು ಬೇಕಾದರೂ ಅರ್ಪಿಸಲು ಸಿದ್ಧನಿದ್ದೇನೆ.
ಅಮ್ಮ(ಋಷಿಯಾಗಿ): ಭರತ, ನೀನು ಪ್ರೀತಿ ವಾತ್ಸಲ್ಯದ ಅರ್ಥವನ್ನೂ ಸರಿಯಾಗಿ ಅರಿತಿಲ್ಲ. ನಾವು ಒಂದು ವ್ಯಕ್ತಿಯನ್ನು ಮನಸಾರೆ ಪ್ರೀತಿಸಿದಾಗ ಆದರೆ ಅವರು ಬಯಸಿದಂತೆ ಬಾಳುವುದು ಕಷ್ಟವಾದ ಕಾರ್ಯ. ಶ್ರೀರಾಮಚಂದ್ರನ ಮಾತನ್ನುನೀನು ಗೌರವಿಸುವುದೇ ಆದರೆ ಅವನಾಜ್ಞೆಯಂತೆ ನೀನು ರಘುಕುಲ ತಿಲಕನಾಗಿ ಸಕಲವನ್ನೂ ಸ್ವೀಕರಿಸಿ ಸಾಮ್ರಾಜ್ಯವನ್ನು ಆಳಬೇಕು.
ಶಂಕ್ರು: ಅವ್ವ..... ನಾನು ಕಳೆದು ಹೋದೆ ಕಣವ್ವ ನಿನ್ನ ಅಭಿನಯ ನೋಡಿ.
ಶಿವು : ಅವ್ವ...... ಅದೇನ್ ಪಾತ್ರ ಮಾಡಿದವ್ವ ನೀನು. ಆಹಾ....... ಎಂಥಾ ನಟನೆನವ್ವ.
ನಿನ್ನ ಈನಟನೆ ನೋಡಿದ್ಮ್ಯಾಗೆ ಅಪ್ಪಯ್ಯ ಹಂಗೆ ಕಣ್ಮುಂದೆ ಬಂದು ಹೋದಂಗಾಯ್ತು.
ಅಮ್ಮ : ನಾನೇನ್ ಮಾಡಿದ್ದು ಕೂಸೇ? ನಿಮ್ಮಪ್ಪಯ್ಯ ಮಾಡ್ತಿದ್ರು ನೋಡು. ಇಡೀ ಊರಿನ ಜನ ಕಿಕ್ಕಿರಿದು ಬಂದು ನೋಡ್ತಿದ್ರು. ನಿಂಗೇ ಗೊತ್ತಿಲ್ವೇನ್ಲ ಮೊಗಾ, ವತಾರೆ ತನಕ ರೆಪ್ಪೆ ಅಲ್ಲಾಡಿಸದೆ ನೋಡ್ತಿದ್ದುದು. ನಿಮ್ಮಪ್ಪಯ್ಯ ಅಂದ್ರೆ ಇಡೀ ಊರಿಗೇ ಹೆಮ್ಮೆ. ಅವ್ರು ಮಾಡೋದನ್ನ ನೋಡಿ ಅಲ್ಪಸ್ವಲ್ಪ ಕಲ್ತಿರೋದು.
ನೋಡ್ರಲಾ ನೀವಿಬ್ರು ಅಪ್ಪಯ್ಯನ ಹೆಸರು ಉಳುಸ್ಬೇಕು. ಅವ್ರ ತರಾ ಊರಿಗೇ ಮಾದರಿಯಾಗಿರಬೇಕು. ಜೊತೆಗೆ ಸದಾ ಒಗ್ಗಟ್ಟಾಗಿ ಇರ್ಬೇಕು.
ಶಿವು: ಆರು ಮೂರಾಗ್ಲಿ, ಮೂರು ಆರಾಗ್ಲಿ. ನಾವಿಬ್ರೂ ಇರ್ತೀವಿ! ಆದ್ರೆ ನಮ್ಮಿಬ್ಬರಲ್ಲಿ ನಿಂಗ್ ಯಾರ್ ಮ್ಯಾಗೆ ಸ್ಯಾನೆ ಪ್ರೀತಿ?
ಅಮ್ಮ:ಕೂಸೇ, ತಾಯಿ ಪ್ರೀತಿಗೆ ಎಲ್ಲೆ ಎಲ್ಲಿದೇ ಮಗಾ.... ಗ್ಯಪ್ತಿ ಮಾಡ್ಕೊ ನೀವು, ಅಪ್ಪಯ್ಯ ಎಲ್ಲರೂ ಈಜಕ್ಕೆ ಒಂದು ನದೀತವ ಹೋಗಿದ್ರಲ್ಲ. ಆ ದಿನ ಆಕಡಿಕೆ, ಏಕದಿಕೆ ಏನಿತ್ತು.
ಶಿವು : ಎರಡು ಊರಿದ್ದೋ!
ಅಮ್ಮ:ಹಾಂ...... ಆ ಎಲ್ದೂರು ಕೂಡ ಆ ನದಿ ನೀರು ಕುಡಿದೆಯಾ ಜೀವನ ನಡುಸ್ತಿರೋದು. ಈಗ ಆ ನದಿಗೆ ಯಾವೂರು ಮ್ಯಾಗೆ ಸ್ಯಾನೆ ಪ್ರೀತಿ ಹೇಳು ನೋಡವ!
ಶಿವು : ಅದೆಂಗ್ ಹೇಳಕಾಯ್ತದೆ ಅವ್ವ?
ಅಮ್ಮ: ಹಂಗೆ...... ನಾನು ಹಾಲುಣಿಸಿ ಬೆಳೆಸಿದ ಈ ಎರಡು ಕಂದಮ್ಮಗಳಲ್ಲಿ ಯಾರ್ಮೇಲೆ ಸ್ಯಾನೆ ಪ್ರೀತಿ ಅಂತ ಹೇಂಗ ಹೇಳಲಿ
ಶಂಕ್ರು:ಅದೇನ್ ಹೇಳ್ದವ್ವಾ......... (ಅಪ್ಪಿಕೊಳ್ಳುತ್ತಾರೆ)
ಶಿವು : ನೀನು ಹೇಳಿದ್ದು ದಿಟಾ ಕಣವ್ವ. ನಾವಂತೂ ಹಿಂಗೆ ಇರ್ತೀವಿ. ನಮಗಿರೋ ಒಂದೇ ಒಂದು ಆಸ್ತಿ ಅದು ನೀನು ಕಣವ್ವ.
ಅಮ್ಮ: ಸರಿ.... ಸರಿ ಹೊತ್ತಾಯ್ತು ಊಟ ಮಾಡವ ಬನ್ನಿರ್ಲಾ.
(ಮಕ್ಕಳು ಊಟಕ್ಕೆ ಕೂರುತ್ತಾರೆ. ಅಮ್ಮ ಊಟ ಬಡಿಸಲು ಹೋಗುತ್ತಾರೆ ಅಷ್ಟರಲ್ಲಿ ಮಾವನ ಪ್ರವೇಶವಾಗುತ್ತದೆ)
ಮಾವ: ಅಕ್ಕಾ, ಅಕ್ಕಾ......! ಇದಿಯೇನಕ ಮನೇಲಿ?
ಅಮ್ಮ:ಓಹ್....... ಮಾದೇವು, ಎಷ್ಟುದಿನ ಆಯ್ತಪ್ಪ ನಿನ್ ನೋಡಿ. ಬಾ ಬಾ ಒಳಗೆ ಬಾ
ಶಿವು-ಶಂಕ್ರು:ಚೆನ್ನಾಗಿದ್ದೀರಾ ಮಾವ? ಊರ್ ಕಡೆ ಎಲ್ಲ ಹೆಂಗವ್ರೆ?
ಮಾವ:ಹೂ ಕಣಪ್ಪ ಚೆನ್ನಾಗಿದ್ದೀನಿ. ಮನೆ ಕಡೆನೂ ಎಲ್ಲ ಚೆನ್ನಾಗಿದಾರೆ ಕಣಪ್ಪ. ನೀವೆಲ್ಲಾ ಆರಾಮಾಗಿದ್ದ್ದೀರಾ?
ಶಂಕ್ರು:ನಾವು ಎಲ್ಲಾ ಚೆಂದಾಕಿದ್ದೀವಿ. ಏನು ಅಪರೂಪಕ್ಕೆ ಊರ್ ಕಡೆ ಬಂದ್ಬಿಟ್ಟಿದೀರಾ? ಏನ್ ಸಮಾಚಾರ.
ಮಾವ:ಏನಿಲ್ಲ ಕಣಪ್ಪ ನಮ್ ರಾಮಯ್ಯನ್ ಹೊಲನ ಆ ಪ್ಯಾಟಿ ಸಾವಕಾರರಿಗೆ ಪ್ಯಾಕ್ಟರಿ ಕಟ್ಟೋಕೆ ಮಾರ್ರಾಣ ಅಂತ ಬಂದಿದ್ದೆ.
ಶಂಕ್ರು: ಅವನ್ಗೆನ್ ಬಂದಿತ್ತು ದಾಡು. ಹೊಲ ಮಾರ್ಕಂಡ್ ಏನ್ ಹೊಟ್ಟೆಗ್ ಮಣ್ಣು ತಿಂತಾನಂತ.
ಮಾವ: ಅವರವರ ಜೀವನ ಏನೋ ಮಾಡ್ಕೊಳ್ಳಿ. ಅದ್ ಸರಿ ನಿಮ್ಮಾ, ಆ ರಾಮಯ್ಯಂಗು ಏನೋ ತಕರಾರು ಅಂತೆ? ಏನ್ ಸಮಾಚಾರ!
ಶಂಕ್ರು:ಏನು ಇಲ್ಲ ಕಣ್ ಮಾವ! ನಮ್ಮೂರ್ ಕಾಲುವೆ ನಮ್ಮ ಹೊಲದಾಸಿ ಆ ರಾಮಯ್ಯನ ಹೊಲಕ್ಕೆ ಹರಿದುಕೊಂಡು ಹೋಗುತ್ತೆ. ನಾವು ನಮ್ಮ ಹೊಲಕ್ಕೆ ನೀರ್ ಬಿಟ್ಕೊಂಡ್ರೆ ಆ
ರಾಮಯ್ಯ ನಾವೇ ಎಲ್ಲಾ ನೀರು ಕುಡಿಯೋಹಂಗೆ ಪ್ರತೀ ಸಲ ತಕರಾರು ತಗೀತಾನೆ. ನಮಗೂ ಹೇಳಿ ಹೇಳಿ ಸಾಕಾಗೆಯ್ತೆ.
ಅಮ್ಮ:ಏನೋ ಮಾತುಕತೆ ನೆಡೀತ್ಯೆತೆ.
ಮಾವ:ಏನಿಲ್ಲ ಕಣಕ್ಕ, ಅಳಿಯ ಮಾವಂದ್ರುದು ಇದ್ದೇ ಇರುತ್ತಲ್ಲ .
(ಅಮ್ಮ ಊಟ ಬಡಿಸಿ, ಮಕ್ಕಳಿಗೆ ಕೈತುತ್ತು ಕೊಡುತ್ತಾರೆ)
ಇದೇನಕ್ಕಾ ಇಷ್ಟೆತ್ತರ ಬೆಳೆದಿರೋ ಮಕ್ಳುಗೂ ಕೈ ತುತ್ತು ಬೇಕೆನೆಕಾ?
ಅಮ್ಮ: ಮಕ್ಳು ಎಷ್ಟೇ ಬೆಳೆದ್ರೂ ತಂದೆ ತಾಯಿಗೆ ಅವ್ರು ಮಕ್ಕಳೇ ಕಣಪ್ಪ.
ಮಾವ: ಅದೇನ್ ಕಥೆನೋ ಅಕ್ಕ ನಿಂದು. ನಾಳೆ ಹೆಂಡ್ತಿಮಕ್ಳು ಬಂದಮೇಲೆ ನೀನೆ ನೋಡ್ತಿಯಲ್ಲ ಬಿಡು. ನೋಡಕ್ಕ ಶಂಕ್ರು ಶಿವು ಇನ್ನು ಬಿಸಿರಕ್ತದ ಯುವಕ್ರು ಅವ್ರು ಮುಂದೆ ಒಂದು
ದಿನ ದುಡುಕಿ ಈ ಹೊಲದಿಂದ ಇಡೀ ಜೀವನ ಕಳೆಯೋಕೆ ಆಗಕಿಲ್ಲ ಅಂತ ತಿಳಿದಾಗ ಅದ್ರು ಬೆಲೆ ತಿಳಿದೆ ಬೇರೆ ಯಾರೋ ಮಾರಿ ಯಾಮಾರ್ಲಿ ಅಂತೀಯಾ ಅಥ್ವಾ ನನ್ನ
ಕಿತ ಸೇರಿ ಈಗ್ಲೇ ಆ ಹೊಲನ ಪ್ಯಾಕ್ಟರಿ ಕಟ್ಟೋರ್ಗೆ ಒಳ್ಳೆ ಬೆಲೆಗೆ ಮಾರಿ ಒಸಿ ಕಾಸು-ಗೀಸು ಮಾಡ್ಕಳ್ಳಿ ಅಂತೀಯಾ? ಯೋಚ್ನೆ ಮಾಡು.
(ಬುಡಬುಡಕೆ ಪ್ರವೇಶ ಆಗುತ್ತದೆ)
ಬುಡಬುಡಕೆ:ಲಕ್ಷ್ಮೀ, ವಿಚಾರ ಲಕ್ಷ್ಮೀ, ವಿಚಾರ ಧನಲಕ್ಷ್ಮೀ, ವಿಚಾರ.
ಲಕ್ಷ್ಮೀ, ವಿಚಾರ ಲಕ್ಷ್ಮೀ, ವಿಚಾರ ಧನಲಕ್ಷ್ಮೀ, ವಿಚಾರ.
ಮನೆಲಿರೋ ಮಹಾಲಕ್ಷ್ಮೀ ಈ ಬುಡಬುಡಕೆ ಸೋಮಯ್ಯಂಗೆ ಧಾನ ಮಾಡ್ಲಿ ತಾಯಿ ಧಾನ ಮಾಡ್ಲಿ.
ಈ ಬುಡಬುಡಕೆ ಸೋಮಯ್ಯಂಗೆ ಚಿನ್ನ ಬೇಡ, ಬೆಳ್ಳಿ ಬೇಡ, ಹವಳ ಬೇಡ, ರನ್ನ ಬೇಡ ತಾಯಿ, ಒಂದಿಡಿ ಅಕ್ಕಿ ಕೊಟ್ಟು ಮುಂದಾಗೋ ಲಾಭ-ನಷ್ಟ, ಏಳು-ಬೀಳು ಏನಿದ್ರು ತಿಳ್ಕಳಿ ತಾಯಿ ತಿಳ್ಕಳಿ
ಹೇಳ್ತವಳೆ ತಾಯಿ ಹೇಳ್ತವಳೆ
ಕಲ್ಲಮ್ಮ ಕಲ್ಲಮ್ಮ ಗಂಡಾಂತರ ತಾಯಿ, ಗಂಡಾಂತರ, ಒಬ್ಬೊಬ್ಬರಿಗೆ ಒಂದೊಂದು ಗಂಡಾಂತರ, ನೀರಿನಿಂದ, ಬೆಂಕಿಯಿಂದ, ಗಾಳಿಯಿಂದ! ನಿಮಗೆ ಮಣ್ಣಿನಿಂದ ತಾಯಿ ಮಣ್ಣಿನಿಂದ. ನಿಮ್ಮ ಮಣ್ಣಿನಿಂದ ನೀವೇ ಮಣ್ಣಾಗಿಹೋಗುವ ಸಾಧ್ಯತೆ ಇದೇ ತಾಯಿ ಎಚ್ಚರಿಕೆ ತಾಯಿ, ಎಚ್ಚರಿಕೆ!
ಬುಡಬುಡಕೆ ಸೋಮಯ್ಯ ಇಲ್ಲೇನು ಮಾಡಲಯ್ಯ ಕಲ್ಲಮ್ಮ ನಿನ್ನ ಪಾದಗಳಿಗೆ ಶರಣೋ ಶರಣು!
ಕಾಲಾನುಕಾಲ ನಿಂಗೆ ಅರ್ಥಯ್ತದೆ ಕಣವಾ, ನಾನು ಇನ ಬರ್ತೀನಿ.
(ಚಿಂತಾಕ್ರಾಂತಳಾಗಿ ಅಮ್ಮ ಮನೆಗೆ ಹಿಂದುರುಗುತ್ತಳೆ.)
ಅಮ್ಮ: ಓಹ್...... ಅಯ್ಯೋ ಈ ಮಾತುಕತೇಲಿ ನಿಮ್ಮಾವನ್ಗೆ ಏನಾದ್ರು ಮಾಡಿಕ್ಕದಾ ಅಂತ ಮರ್ತೆ ಹೋಗಿತ್ತು. ಹೆಂಗಿದ್ರೂ ಇವತ್ತು ಶುಕ್ರವಾರ. ಸಂತೆ ಅಲ್ವೇ? ಹೋಗಿ ಒಂದು ಕೆ.ಜಿ
ಹೆಸರುಬ್ಯಾಳೆ, ಬೆಲ್ಲ ತಗೊಂಡು ಬಾ. ಶಿವೂ ಹೋಗಪ್ಪ ಬಿರ್ನೆ ಹೆಸರುಬ್ಯಾಳೆ ಪಾಯಸ ಮಾಡವ.
ಶಿವು: ಕಾಸ್ ಕೊಡು...... ತತ್ತಾ ಇಲ್ಲಿ. (ಶಿವು ಅಲ್ಲಿಂದ ಬ್ಯಾಗ್ ತಗೊಂಡು, ಹಣ ಇಸ್ಕೊಂಡು ಹೊರಡುವನು.)
ಅಮ್ಮ ಚಿಂತಾಕ್ರಾಂತಳಾಗಿ ಕೂತಿದ್ದಾಳೆ
ಶಂಕ್ರು: ಇದ್ಯಾಕಮ್ಮಾ ಗರಬಡ್ತಿರೋ ತರ ಕೂತಿದೀಯ? ಏನಾಯ್ತು
ಅಮ್ಮ: ಏನಿಲ್ಲಾ ಮೊಗಾ...... ಆ ಬುಡಬುಡಕೆಯವನು ಅದೇನೋ ಗಂಡಾಂತರ, ಜಗಳ, ಅಪಶಕುನ ಮಣ್ಣು-ಮಸಿ ಅಂತ ಏನೆನ್ನೋ ಹೇಳ್ಬುಟ್ಟು ತಲೆ ಕೆಡುಸ್ಟ್ಟ ಕಳ್ಳಾ ಮೊಗಾ..... ನಂಗೆ ಅದೇ ಚಿಂತೆ ಆಗಬುಟ್ಟದೇ ಏನೋ ಒಂಥರಾ ಭಯ ಆಗ್ತ್ಯತೆ ಮೊಗಾ.
ಮಾವ: ಏನು? ಬುಡಬುಡಕೆಯವನು ಮಣ್ಣು-ಗಂಡಾಂತರ ಮಾತಾಡುದ್ನ?
ಅವರೂ ದೇವರ ಸ್ವರೂಪ ಕಣಮ್ಮೋ , ಅವರಬಾಯಲಿ ಮಚ್ಚೆ ಇರ್ತದೆ ಕರಿ ಮಚ್ಚೆ, ಅವ್ರು ಹೇಳಿದ್ಯಾವ್ದು ಸುಳ್ಳಾಗಿಕಲ್ಲ ನಾನ್ ಹೇಳ್ದಂಗ ಕೇಳಿ ಜಮೀನ್ ಮಾರ್ರ್ಬುಡಿ ಆ ಸಾವಕಾರ್ರುಗೆ ಎಲ್ಲಾ ಒಳ್ಳೆದಾಯ್ತದೆ.
ಅಮ್ಮ: ಎಂಥಾ ಮಾತು ಮಾತಾಡ್ತೀಯಾ ಮಾದೇವಾ! ದುಡಿದ್ ತಿಂದು ಬದುಕಕೆ ಇರೋ ಜಾಮೀನು ಮಾರಿ ನನ್ನಮಕ್ಳು ಏನು ಭಿಕ್ಷೆ ಎತ್ತಲಿ ಆ ಬುಡಬುಡಕೆಯವನ ತರ ಅಂತೀಯಾ? ಬುಡ್ತು ಅನ್ನು ಹಂಗೆಲ್ಲಾ ಮಾತಾಡಬಾರ್ದು. ಆ ಬಡಪಾಯಿಗಳ ಹೊಲದ ಮೇಲೆ ಯಾಕೋ ನಿನ್ನ ಕಣ್ಣು ಬಿದ್ದಿದೆ. ಯಾಕೋ ಅವರ ಮ್ಯಾಗೆ ಇಲ್ಲ-ಸಲ್ಲವ ಆರೋಪ ಮಾಡ್ತಿಯಾ! ಇನ್ನೊಂದ್ ಮಾತು ಅವರ ಬಗ್ಗೆ ಮಾತಾಡುದ್ರೂ ಸರಿಗಿರಕಿಲ್ಲ ನೋಡು. ಸ್ವಂತ ತಮ್ಮನೂ ಅಂತ ನೋಡ್ದೆ ಮನೆಯಿಂದ ಹೊರಗ್ ಹಾಕ್ತಿನಿ.
ಮಾವ: ಸರಿ ಬಿಡಕ್ಕೋ, ರೇಗುಬೇಡ. ನಾನೇನೋ ನಿಮ್ಮೊಳೆದಕ್ಕೆ ಅಂತ ಹೇಳ್ದೆ ಅಷ್ಟೆಯ ನೀವು ನೋಡುದ್ರೆ ನಾನೇನು ನಿನ್ ಜಮೀನ್ ತಿನ್ನೋಕ್ ಬಂದಿರೂ ಹಂಗೆ ಆಡ್ತಿರಲ್ಲ. ಆ ಶಿವು ಹೋಗಿ ತುಂಬಾ ಹೊತ್ತಾಯ್ತು ಬರೋದ್ ಎಷ್ಟೊತ್ತಾಯ್ತದೋ ಏನೋ. ನಂಗೆ ಹೊತ್ತಾಯ್ತದೆ ನಂಗೆ ಸ್ವಲ್ಪ ಕ್ಯಾಮೆ ಐತೆ ನಾ ಬರ್ತೀನಿ.
ಅಮ್ಮ: ನೋಡ್ದಾ ನಿಮ್ ಮಾವನ್ನ, ಸಲ್ಗೆಕೊಟ್ಟೇ ಅಂತ ಊರುದ್ದ ನಾಲ್ಗೆ ಚಾಚ್ತಾನೆ.
ಶಂಕ್ರು:ಅಮ್ಮ, ಮಾವನ್ ಬಗ್ಗೆ ಗೊತ್ತಿದ್ದುವ ಅವ್ರು ಕೂಟೆ ವಾದ ಮಾಡ್ತೀಯಲ್ಲಾ ಅವ್ರ ಪಾಡಿಗ್ ಅವ್ರು ಮಾತಾಡ್ಲಿ ಬುಡು. ಆದರೆ...... ಆದರೆ .......
ಅಮ್ಮ:ಅದೇನ್ ಹೇಳು ಮೊಗ......
ಶಂಕ್ರು:ಅಮ್ಮ ಒಂದ್ ಮಾತ್ ಹೇಳ್ತಿನಿ ನನ್ನ ತಪ್ಪ ತಿಳಿಬೇಡ,
ಅಮ್ಮ:ಹೇಳಪ್ಪ, ನನ್ನ-ನಿನ್ನ ಮಧ್ಯೆ ಎಂತಾ ಗುಟ್ಟೂ
ಶಂಕ್ರು: ಮಾವ ಹೇಳ್ದನ್ಗೆ ನಾಳೆದಿನ ಪರಿಸ್ಥಿತಿ ಹೆಂಗ್ ಬೇಕಾದ್ರು ಆಗ್ಬೋದು.
ಅಮ್ಮ: ಅಂದ್ರೆ? ಯಾವುದರ ಬಗ್ಗೆ ಮಾತಾಡ್ತಿದೀಯಾ ಒಸಿ ಬಿಡ್ಸಿ ಹೇಳಲಾ!
ಶಂಕ್ರು:ನಾನು-ಶಿವೂ ಅದೇಟೇ ಅನ್ನ್ಯೋನ್ಯವಾಗಿದ್ರುವ ನಾಳೆ ಮನೆಗೆ ಬರೋರ್ ಹೆಂಗಿರ್ತಾರೋ ಏನೋ. ನಂಗೆ ಈ ಆಸ್ತಿ ಮೇಲೆ ಏನು ಆಸೆ ಇಲ್ಲ. ಎಲ್ಲಾ ಆಸ್ತಿನೂ ನಾನು ಶಿವುಗೆ ಬರ್ಯವ
ಅಂತಿದ್ದೀನಿ.
ಅಮ್ಮ:ಏನ್ ಮಾತಾಡ್ತಿದೀಯಪ್ಪಾ? ನಿನ್ ಮನ್ಸು ಬಾಳ ಸುದ್ಧ ಅಂತ ಗೊತ್ತ್ಯೆತೆ ಆದ್ರೆ ಈ ಪಾಟಿ ತ್ಯಾಗ ಯಾಕಪ್ಪಬೇಕು. ಎಲ್ಲಾ ಒಟ್ಟಿಗೆ ಬದ್ಕಣ.
ಶಂಕ್ರು:ಅವ್ವ, ನಾನು ಆ ಅರ್ಥದಲ್ಲಿ ಹೇಳಲಿಲ್ಲ. ನಾವೂ ಒಟ್ಟಿಗೆ ಬಾಳಣ ಆದ್ರೆ ಶಿವುಗೆ ಎಂದೂ ನಿನ್ ಮ್ಯಾಗೆ ಮಲತಾಯಿ ಭಾವನೆ ಬರ್ದೆ ಇರ್ಲಿ ಅಂತ ನನ್ ಆಸೆ ಕಣವೊ.
ಅಮ್ಮ:ಅದೂ ಸರಿ ಕಣ್ಮಗಾ...... ಆದ್ರೆ
ಶಂಕ್ರು:ಏ! ಆದ್ರೆ ಗೀದ್ರೆ ಏನೂ ಇಲ್ಲ ಕಣವೋ...... ಇಷ್ಟ್ರಲ್ಲೇ ಇನ್ನೇನು ನಮ್ಗೆ ಲಘ್ನ ಆಗ್ತದೆ. ಅಷ್ಟರಲ್ಲಿ ನಾನು ವಕೀಲ್ರತ್ರ ಮಾತಾಡಿ, ಶಿವು ಹೆಸ್ರಿಗೆ ಆಸ್ತಿ ಬರೆಯಲು ಎಲ್ಲಾ ಯವಸ್ಥೆ ಮಾಡ್ತೀನಿ.
ಅಮ್ಮ:ಒಡ ಹುಟ್ದೆ ಇದ್ರೂ ಅವನ್ ಮ್ಯಾಗೆ ಎಂತಾ ಪ್ರೀತಿ ಕಣಪ್ಪನಿಂಗೆ, ನಿನ್ನಂತಾ ಮಗನ್ ಪಡ್ಯಕೆ ನಾನು ಏಳೇಳ್ ಜನ್ಮದ ಪುಣ್ಯ ಮಾಡಿದ್ದೀನಿ. ನಿನ್ ಕಲ್ಮಸ ಇಲ್ದಿರೋ ಮನಸ್ಗೆ ಏನ್
ತೋಚುತ್ತೋ ಅದ್ನೇ ಮಾಡು.
ಆ ದ್ಯಾವ್ರು ನಿಮ್ಮಿಬ್ರುನೂ ೧೦೦ ಕಾಲ ಚೆನ್ನಾಗ್ ಇಡ್ಲಿ.
ದೃಶ್ಯ-೩
ಮಾವ: ಯಲಾ ಕಳ್ಳಬಡ್ಡಿಮಕ್ಳ ನನ್ನ ಹತ್ರನೆ ಕಿಲಾಡಿತನ ತೋರುಸ್ತೀರಾ?. ಅದೇನೋ ಹೇಳ್ತಾರಲ್ಲಾ 'ಸ್ವಾಮಿಕಾರ್ಯ-ಸ್ವಕಾರ್ಯ' ಅಂತ ಹಂಗೆ ನಾನು ಇರೋ ಜಮೀನ್ ಮಾರ್ಸಿ
ಬಂದಿದ್ದರಲ್ಲಿ ಅವರಿಗೊಂದು ನಾಕು ಕಾಸು ಕೊಟ್ಟು ನಾನು ಒಂದು ನಾಲ್ಕು ಕಾಸು ಮಾಡ್ಕಂಡು ಉಣಕಂಡ್ ತಿನ್ಕನ್ಡ್ ಸೊಲ್ಪದಿನ ತೆಪ್ಪಗಿರಣ ಅಂತ ಅನ್ನಕಂಡ್ರೆ ಇವ್ರು ನಂಗೆ ತಿರುಗ್ಸಿ
ಬತ್ತಿ ಇಡಕ್ ನೋಡ್ತಾರಲ್ಲ, ಇಂತಾ ನನ್ಮಕ್ಕಳ್ನಾ ಎಷ್ಟು ಜನನ್ನ ನೋಡಿಲ್ಲ. ನಾನು ಏನೋ ಬೇರೆ ರೀತಿಲಿ ಹೋಗಿ ನೆಲ ತೊಗೊಳಣ ಅಂತ ಹೋದ್ರೆ ನನ್ಮೇಲೆ ತಿರುಗಿಬಿದ್ರಲ್ಲ ಈ
ನನ್ಮಕ್ಳು ಒಗ್ಗಟ್ಟು ಒಗ್ಗಟ್ಟು ಅಂತಾರಲ್ಲಾ, ಅದೇನ್ ನಾನು ನೋಡ್ದೆ ಇರ ಅಂತ ಒಗ್ಗಟ್ಟು. "ಹಣ ನೋಡುದ್ರೆ ಹೆಣನೆ ಬಾಯ್ಬಿಡೋ ಕಾಲ" ಇದು. ಅಂತದ್ರಲ್ಲಿ ಒಗ್ಗಟ್ಟಂತೆ ಬಾಂಧವ್ಯ ಅಂತೆ
ಮುರಿತೀನಿ ಆ ಒಗ್ಗಟ್ಟನ್ನ ತಗೋತೀನಿ ಆ ನೆಲನ. ಈ ಕೆಲಸಕ್ಕೆ ಸ್ವಂತಃ ನಾನೇ ಕೈ ಹಾಕ್ಬೇಕು ಇಲ್ಲಾ ಅಂದ್ರೆ ಇವ್ರು ಉದ್ಧಾರ ಆಗಲ್ಲ ನನ್ನನ್ನೂ ಉದ್ಧಾರ ಆಗಾಕ್ ಬಿಡಲ್ಲ.
(ನಮ್ಮ ಕೈಯ್ಯಾರ ಎತ್ತಾಡಿ ಬೆಳೆದಿದ್ ಮಕ್ಳು ಇವತ್ತು ನನ್ ತಲೆಗೆ ಬುದ್ಧಿ ಹೇಳಂಗೆ ಆಗೋದ್ರಲ್ಲ)
ಅವರ್ ಬಿಡ್, ನಮ್ಮಕ್ಕ ಎಂತವಳು, ಮಕ್ಳು ಬೆಳ್ದು ದೊಡ್ಡವರಾಗವ್ರೆ ಅಂತ ಒಡ ಹುಟ್ಟಿದ್ ತಮ್ಮನ್ನೆ ಮನೆಯಿಂದ ಹೊರಗಾಕ್ತಿನಿ ಅಂತಾಳಲ್ಲ. ನಂ ಕೈಚಳಕನ ತೋರುಸ್ತೀನಿ ಇವ್ರುಗೆ.
ಆ ಬಡ್ಡಿಮಗ ಶಿವೂ ಬರ್ಲಿ.
(ಬುಡಬುಡಕೆಯವನ ಪ್ರವೇಶ ಆಗುತ್ತದೆ)
ಬುಡಬುಡಕೆ:ಬುದ್ಧಿ, ನಮಸ್ಕಾರ.
ಮಾವ: ಲೋ ನಂಗಿನ್ನಾ ಮುಂದಾಗೆ ಬಂದಲ್ಲಾ,ಎಲ್ಲಾ ಹೋಗಿದೆ ಇಷ್ಟೊತನಕ?
ಬುಡಬುಡಕೆ:ಏಹ್! ಹೆಂಗಿದ್ರೂ ವೇಸ ಹಾಕಿದ್ನಲ್ಲಾ ಅದ್ಕೆ ಇನ್ನೊಂದೆರಡು ಮನೆಗೆ ಹೋಗ್ಬರವ ಅಂತ ಹೋದೆ. ಯಾರ್ಗು ನಾನ್ ನಿಜವಾದ ಬುಡಬುಡಕೆ ಅಲ್ಲ, ವೇಸ ಹಾಕಿರೋದು ಅಂತ
ಗೊತ್ತಾಗಲೇ ಇಲ್ಲ.
ಮಾವ:ಬೊಲ್ ನನ್ಮಗ ಕಣೋ ನೀನು, ಗುರುಗೆ ತಕ್ಕ ಶಿಷ್ಯ. ಹಹ್ ಹ ಹ .........!!
ಅಲ್ಲಾ ಅದೇನ್ ಪಸಂದಾಗಿ ಮಾಡ್ದೆ ಕಳ್ಳಾ..... ನಾನೇ ನಂಬಿಟ್ಟೆ
ಬುಡಬುಡಕೆ:ಅದೇನಿಲ್ಲಾ ಬುದ್ದಿ, ನಂಗೆ ಮೊದಲು ಭಯ ಆಯ್ತಿತ್ತು . ಆಮೇಕೇ ಆಕಲ್ಲು ಸಿಕ್ತು ನೋಡಿ ಅದನ್ನಿಟ್ಕಂಡು ಹಂಗೆ ಧ್ಯರ್ಯ ತಗೊಂಡು ತಲೆಗೆ ಉಳ ಬಿಟ್ಟುಬಿಟ್ಟೆ ಅವ್ರಗೇನು
ಗೊತ್ತಾಗ್ಲಿಲ್ಲ ತಾನೇ? ಮಾವ:ಇಲ್ಲ ಕಳ್ಳಾ.... ಒಂದೆಳ್ಳಷ್ಟೂ ಅನ್ಮಾನ ಬಂದಿಲ್ಲ.
ಬುಡಬುಡಕೆ:ಬುದ್ಧಿ.... ಬುದ್ಧಿ ......
ಮಾವ:ಅದೇನು ಹೇಳ್ಳಾ ಬಿರ್ನೆ
ಬುಡಬುಡಕೆ:ಅದೇ ಬುದ್ಧಿ ೧೦೦ ಬಾಕಿ ಇತ್ತಲ್ಲಾ
ಮಾವ:ಅಯ್ಯ ನಿನ್ನ ತೊಗೋ ೨೦೦ ಅದೇ..... ಇನ್ನೆರಡು ತಿಂಗಳು ಈ ಊರ್ಕಡೆ ಎಲ್ಲೂ ಕಾಣುಸ್ಕೊ ಬಾರ್ದು . ಲೇ ನಡೀಲಾ ನಡೀಲಾ ಆ ಶಿವು ಬರ್ತಾ ಇದ್ದಂಗೆ ಅವ್ನೆ
ಬುಡಬುಡಕೆ ಹೊರಡುತ್ತಾನೆ-ಶಿವುವಿನ ಪ್ರವೇಶ ಆಗುತ್ತೆ
ಶಿವು: ಏನ್ ಮಾವ ಇಲ್ಲಿ ಕೂತಿದೀಯ! ಅವ್ವ ನಿಂಗೋಸ್ಕರ ಪಾಯಸ ಮಾಡ್ತೀನಿ ಅಂದ್ಲು ನೀನ್ ನೋಡುದ್ರೆ ಎಲ್ಲೋ ಹೊರಟ್ಟಿದ್ದಂಗದೆ.
ಮಾವ:ಅದೇನಿಲ್ಲಾ ಅರ್ಜೆಂಟ್ ಆಗಿ ಹೋಗ್ಬೇಕಿತ್ತು. ನೀನು ಬರದು ತಡ ಆಯ್ತದೆ ಅಂತ ಹೊರಟಿದ್ದೆ.
ಶಿವು:ಅಯ್ಯೋ ಸಂತೇಲಿ ಜನ ಸ್ಯಾನೆ ಇದ್ರೂ ಅಡ್ಕ ತಡ ಆಗೋಯ್ತು
ಮಾವ:ಸರಿ ಆಯ್ತು ಬಿಡು, ನೀನು ಮನೆಗೆ ಹೋಗು....
(ಶಿವು ಒಂದು ಸ್ವಲ್ಪ ಮುಂದೆ ಹೋದ ಬಳಿಕ)
ಲೇ ಶಿವು ನಿಂತ್ಕೋ ಅಲ್ಲೆ. ಬಾ ಇಲ್ಲಿ ನಿನ್ನತ್ರ ಏನೋ ಮಾತಾಡದ್ಯೆತೆ
ಶಿವು :ಏನು ಹೇಳು ಮಾವ ಬಿರ್ನೆ.
ಮಾವ:ಬಾರ್ಲ ಇಲಿ ಕೂತ್ಕೋ, ಒಂದೆರಡು ಒಂದೆರಡು ನಿಮಷ ಹೋಗೀವಂತೆ
ಶಿವು:ಅಯ್ಯೋ ಮಾವಾ.......
ಮಾವ:ಬಾ ಕೂತ್ಕಳ್ಳಾ . ನಿಮ್ಮಾವ ತಾನೇ ಕರಿತಿರದು
ಶಿವು:ಅದೇನ್ ಹೇಳು ಮಾವ
ಮಾವ:ನಿಮ್ಮೂರ್ಗೆ ಒಂದು ಪ್ಯಾಕ್ಟರಿ ಬರ್ತಾಯ್ತಲ್ಲ ಅದರ ಬಗ್ಗೆ ಏನಾದ್ರೂ ಗೊತ್ತಾ ನಿಂಗೆ?
ಶಿವು: ಊ೦.... ಮಾವ, ಊರ್ ಜನ ಎಲ್ಲಾ ಮಾತಾಡ್ತಿದ್ರು,ಪ್ಯಾಕ್ಟರಿ ಎಲ್ಲಾ ಪ್ಯಾಟೀಲಿ ಇರ್ಬೇಕಲ್ಲಾ ಮಾವ! ಈ ಹಳ್ಳಿಗಾಡಿಗೆ ಬಂದು ಏನ್ಮಾಡ್ತಾರೆ ಆ ಪ್ಯಾಕ್ಟರಿಯವ್ರು
ಮಾವ:ಏನ್ ಮಾಡ್ತಾರ! ಊರಿಗೆ ಒಂದು ಪ್ಯಾಕ್ಟರಿ ಅಂತ ಬಂದ್ರೆ ಊರರ್ಗೆಲ್ಲಾ ಕೆಲಸ ಸಿಗತ್ತೆ. ನೋಡು ಆ ರಾಮಯ್ಯನ ಹೊಲನ ಎರಡರಷ್ಟು ಹಣ ಕೊಟ್ಟು ತಗೊಂಡ್ರು. ನೋಡಿನ್ಮೇಲೆ ಆ ರಾಮಯ್ಯನ್ನ ಆಳಾಗಿದ್ದೋನು ಅರಸ ಆಗಿಬಿಡ್ತಾನೆ. ಇನ್ನು ಅವನು ನಿಮ್ಮತ್ರ ಬಂದು ನೀರಿಗ್ ತಕರಾರು ಮಾಡ್ತಾನೆ ಅನ್ಕೊಂಡಿದ್ದೀಯೇನ್ಲ.
ಶಿವು:ಅಬ್ಬ...... ಹೆಂಗೋ ನೀರಿನ್ ಸಮಸ್ಯೆ ಬಗೆ ಹರೀತು ಅನ್ನು.
ಮಾವ:ಥು......... ಯಾವೋ ಇವು. ದನಾ ಬೆಳ್ದಂಗೆ ಬೆಳುದ್ರೂ ತಲೇಲಿ ಒಂಚೂರು ಬುದ್ಧಿಯಿಲ್ಲ ಬರೀ ಲದ್ದಿ ತುಂಬಿಕೊಂಡೈತೆ .
ಶಿವು: ಅದ್ಯಾಕ್ ಮಾವ ಅಂಗಂತೀಯಾ
ಮಾವ:ಇನ್ನೇನ್ಲಾ ಹೊಲ ಮಾರಿ ಜೀವ್ನ ಕಟ್ಕೋ ಅಂದ್ರೆ ಚಿಕ್ಕ ಮಕ್ಳು ತಾರಾ ತಮಾಸೆ ಮಾಡ್ತಿಯಾ ತಮಾಸೆಯಾ.
ಎಷ್ಟು ವರ್ಷ ಅಂತ ಹಿಂಗೆ ದುಡ್ಕಂಡಿರ್ತೀಯ, ನಿಂಗೂ ಇನ್ನೇನು ಮದ್ವೆ ಆಗುತ್ತೆ. ಮನೆಗೆ ಮಕ್ಳು ಬರ್ತಾರೆ ಅವರಿಗಾದ್ರು ಏನಾದ್ರೂ ಮಾಡಿಕ್ಕಳಾ. ನಿನ್ಮಕ್ಳನೂ ನಿನ್ನಂಗೆ ಇನ್ನೊಬ್ರ
ಹಂಗಲಿ ಬದುಕಂಗೆ ಮಾಡ್ಬೇಡ. ಈಗಾದ್ರೂ ಒಂಚೂರು ದುಡ್ಡು ಕಾಸು ಮಾಡಿಕ್ಕಳಾ. ನಾನು ಹೇಳ್ದಂಗೆ ಜಮೀನ್ನ ಈ ಸಾವುಕಾರರಿಗೆ ಮಾರ್ಬಿಡ್ಲಾ
ಶಿವು : ನೀನೇಳದು ಸರಿನೇ ಆದ್ರೆ
ಮಾವ:ಬೇಡ ಬಿಡು ಸುಮ್ನೆ ಯಾಕೆ ನಿಮ್ ಅಣ್ಣತಮ್ಮಂದಿರ ಮದ್ಯೆ ಜಗಳ ಯಾಕೆ?ಹೆಂಗಿದ್ರು ಇದಕ್ಕ ಒಪ್ಪಕಿಲ್ಲಾ. ಇಡೀ ಆಸ್ತಿ ಇರ್ಲಿ, ನಿನ್ ಪಾಲಿನ ಆಟಿ ಮಾರಕು ಅವ್ನು ಒಪ್ಪಲ್ಲ. ಯಾಕ್
ಪದೇ ಪದೇ ಅದರ ವಿಷ್ಯ ಮಾತಾಡದು.
ಶಿವು :ಏನು ಮಾವ ನಿನ್ ಮಾತಿನ್ ಅರ್ಥ?
ಮಾವ:ಎಲ್ಲಾ ಬಿಡ್ಸಿ ಬಿಡ್ಸಿ ಹೇಳ್ತಾರೆ ನಿಂಗೆ! ನಿಂಗಿನ್ನಾ ನಮ್ಮೂರ್ ಹುಡುಗ್ರೇ ಚುರ್ಕವರಲ್ಲೋ ನಿನ್ ಮನೇಲಿ ನಿನ್ ಮಾತು ನಡೈಕಿಲ್ಲ ಅಂತ ನಂಗೂ ಗೊತ್ತೆಯ್ತೆ . ನಿಂಗ್ ನಿಮ್ಮಪ್ಪಯ್ಯ
ಇದ್ದಿದ್ರೆ ಸರಿಯಾಗಿ ಬೆಳೆಸ್ತುದ್ನೇನೋ, ಯಾರೂ ಇಲ್ದೆ ನೀನು ಯಡ್ಡ ನನ್ಮಗ ಆಗಿದ್ದೀಯಾ
ಶಿವು :ಮಾವ........ !!
ಮಾವ:ಏನ್ ಧ್ವನಿ ಮೇಲೇರ್ತಾ ಇದೆ. ನೀನು ಬೇಕಾದ್ರೆ ಹೋಗಿ ಸುಮ್ನೆ ನಿನ್ ಪಾಲಿಂಡ್ ಬಗ್ಗೆ ಮಾತಾಡು ನಿಮ್ಮಣ್ಣ ಹೆಂಗ್ ವಿಷ್ಯ ಬದ್ಲಾಯಸ್ತನೆ ನೋಡ್ಕೋ. ಬಿಡು ಶಿವೂ..... ಏನೋ ಕಂಡಂಗ್ ಕಂಡಿದ್ ಹೇಳ್ದೆ ನಿಂಗ್ ಹೇಂಗೆ ಬೇಕೋ ಹಂಗ್ ಮಾಡು.
ಶಿವು :ಯಾಕ್ ಮಾವ ಏನೇನೋ ಮಾತಾಡ್ತಿದ್ದೀಯ? ಅಂತದ್ದೇನ್ ಕಂಡಿದ್ದೀಯಾ ನೀನು, ಹಿಂಗೆಲ್ಲಾ ಮಾತಾಡಕೆ.
ಮಾವ:ನಿಮ್ಮಣ್ಣನ್ನ ಮೊನ್ನೆ ಆ ವಕೀಲ್ರು ಜೊತೆ ಪ್ಯಾಟೀಲಿ ನೋಡ್ದೆ ಕಳ್ಳಾ ಏನೋ ಕಡತಗಳು ಇಟ್ಕೊಂಡು ಓಡಾಡ್ತಿದ್ದ. ಏನು ಸಮಾಚಾರ?
ಶಿವು :ಶಂಕ್ರುನಾ ವಕೀಲ್ರು ಜೊತೆ ನೋಡ್ದಾ?
ಮಾವ: ಹ್ಮ್ ....... ಕಣೋ ನಾನ್ಯಾಕ್ ಸುಳ್ಳು ಹೇಳ್ಳಿ ಹೋಗಿ ಅವನ್ನೇ ಕೇಳು. ಅದಿರ್ಲಿ ನಿಮ್ಮಣ್ಣ-ಅವ್ವ ಸೇರಿ ನಿಂಗೆ ನಾಮ ಹಚ್ಚು ಬಿಟ್ಟಾರು ಹುಸಾರು. ನೀನ್ ಮೊದಲೇ ಬೆಪ್ಪತಕ್ಕಡಿನನ್ಮಗ
ಏನೋ ನನಗೆ ತಿಳಿದಿರೋ ಮಟ್ಟಿಗ್ ನಾನೇಳಿದ್ದೀನಿ ಇನ್ಮಿಕ್ಕಿದ್ದೆಲ್ಲಾ ನಿನ್ ಕೈನಾಗ್ಯೆತೆ ಹೋಗು ನೋಡೋಗು .
ಸರಿ ನಂಗೆ ಹೊತ್ತಾಯ್ತು ಹೊರಡುತ್ತೀನಿ.
ದೃಶ್ಯ-೪
ಅಮ್ಮ:ಏನ್ಲಾ ಮೊಗಾ ಇಷ್ಟೊತ್ತಾ ಮಾಡದು?
ಶಿವು :ಇಷ್ಟೊತ್ತು ಅಂದ್ರೆ ಏನು?ನಾನೇನ್ ಹೈಕ್ಳು ಜೊತೆ ಗೋಲಿ ಆಡ್ತಿದ್ನ ಏನು? ಸಂತೇಲಿ ಜನ ಸ್ಯಾನೆ ಇದ್ರೆ ನಾನೇನ್ ಮಾಡ್ಲಿ!
ಸುಮ್ನೆ ಮನೇಲ್ ಇಡ್ಕೊಂಡು ಅಲ್ಲ ಮಾತಾಡದು.
ಅಮ್ಮ:ಯಾಕ್ ಶಿವೂ..... ಕೋಪ್ದಾಗಿದ್ದೀಯ , ಓಡಾಡಿ ಸುಸ್ತಾಗಿರ್ತೀಯಾ. ಕುತ್ಕೋ ನೀರ್ ತರ್ತೀನಿ.
ಶಿವು :ನೀರೇನ್ ಬೇಡ, ಕೆಲ್ಸ ಮಾಡಿ ಸುಸ್ತಾಗಿರ್ತೀರಲ್ಲಾ ನೀವೇ ಕುಡ್ಕಳಿ.
(ಅಮ್ಮ ಸಾಮಾನುಗಳು ತಗೊಂಡು ಮನೆ ಒಳಗೆ ಹೋಗ್ತಾರೆ)
(ಶಂಕ್ರು ಪ್ರವೇಶಿಸುತ್ತಾನೆ)
ಶಂಕ್ರು:ಯಾಕ್ಲ ಶಿವೂ.....
ಶಂಕ್ರು:ಯಾಕ್ಲ ಶಿವೂ ದೆವ್ವಗಿವ್ವ ಮೆಟ್ಕೋತಾ ನಿಂಗೆ , ಯಾಕಿಂಗ್ ಆಡ್ತಿದ್ದೀಯ?
(ಶಿವು ಪ್ರತಿಕ್ರಿಯಿಸುವುದಿಲ್ಲ)
ಶಂಕ್ರು:ಯಾಕ್ ಶಿವೂ ಮಾತ್ ನಿಲ್ಲಿಸ್ಬುಟ್ಟೆ? ಏನಾಯ್ತು ಸರಿಗ್ ಹೇಳು!
ಶಿವು :ಅದಿರ್ಲಿ ಮೊನ್ನೆ ವಕೀಲ್ರತ್ರ ಹೋಗಿದ್ದಂತಲ್ಲ ಏನ್ ಸಮಾಚಾರ?
ಶಂಕ್ರು:ವಕೀಲರಾ? ನಿಂಗ್ಯಾರ್ ಹೇಳುದ್ರು?
ಶಿವು :ಹೊಲ, ಪತ್ರ ವಕೀಲ ಅಂತ ಕೇಳ್ಪಟ್ಟೆ.
ಶಂಕ್ರು:ಓ ಅದಾ...... ಅದೂ....... ಅದೇನಿಲ್ಲ ಕಣೋ,ಸಣ್ಣ ದಾಖಲೆ ಸಮಸ್ಯೆ ಆಗೋಗಿತ್ತು ಅದ್ರು ಸಲುವಾಗಿ ಮಾತಾಡಕೆ ಹೋಗಿದ್ದೆ.
ಶಿವು :ಈಗ, ನಮ್ಮ ಜಮೀನ್ನ ಸರಿಯಾಗಿ ಮಾಡ್ಕೊಂಡ್ರೆ ನಂಗೂ-ನಿಂಗೂ ಎಷ್ಟು ಎಕ್ರೆ ಬರ್ತದೆ?
ಶಂಕ್ರು:ಯಾಕ್ಲ? ಏನೇನೋ ಮಾತಾಡ್ತಿದೀಯಲ್ಲ ಶಿವೂ?
ಶಿವು :ನಾನು ಕೇಳಿದ್ದಕ್ ಉತ್ತರ ಕೊಡು ಶಂಕ್ರ. ನಾನು ನನ್ನ ಪಾಲಿನ ಆಸ್ತಿನ ಆ ಪ್ಯಾಕ್ಟರಿ ಸಾವಕಾರ್ರುಗೆ ಮಾರಣ ಅಂತಿದ್ದೀನಿ.
ಶಂಕ್ರು:ಅಯ್ಯಾ, ಒಳ್ಳೆ ಹುಡ್ಗ ನೀನು. ಆ ಮಾವ ತಲೆಕೆಟ್ಟಿ ಏನೋ ಹೇಳ್ದಾ ಅಂದ್ಬುಟ್ಟು ಅದನ್ನ ಮನಸ್ಸಿಗೆ ಆಕ್ಕಂಡ್ ಹೆಂಗ್ ಮಾತಾಡ್ತಿದ್ದೀಯಾ.
ಇರು ನಂಗೀಗ ಒಂದು ಸಣ್ಣಕೆಲ್ಸ ಇದೆ ಮುಗುಸ್ಕೊಂಡ್ ಬತ್ತೀನಿ ಸಂಜೆ ಕೂತು ಎಲ್ಲಾ ಮಾತಾಡವ.
ಶಿವು :ಅಲ್ಲ, ನಾನೇನೋ ಕೇಳ್ತಿದ್ರೆ ಅಂಗೆ ಹೋಗ್ತಿದ್ದೀಯಲ್ಲಾ.....
ಶಂಕ್ರು....... ಶಂಕ್ರು.......
ಶಂಕ್ರು:ಇರು ಬಂದೇ...... ಇಲ್ಲೇ ಹೋಗಿದ್ ಬಂದುಬಿಡ್ತೀನಿ.
ಶಿವೂ:ಶಂಕ್ರು........ ಛೇ !
(ದೀರ್ಘ ಉಸಿರೆಳೆದು, ಚಿಂತಾಜನಕ ಸ್ಥಿತೀಲಿ ಶಿವು)
ಶಿವು :ಏನೋ ನಡೀತಿದೆ ಇಲ್ಲಿ, ಏನೂ ಅಂತ ತಿಳಿತಿಲ್ಲ. ಆ ಮಾವ ನೋಡುದ್ರೆ ಏನೇನೋ ಹೇಳ್ದ ಇಲ್ ಬಂದ್ ನೋಡಿಮ್ಯಾಗೆ ಇಲ್ಲೆಲ್ರು ಅದೆ ತಾಳಕ್ಕೆ ತಕ್ಕಂತೆ ಕುಣೀತಾರಲ್ಲ.
ನಿಜವಾಗ್ಲೂ ಏನಾದ್ರೂ ನಡೀತಿದ್ಯಾ ಇಲ್ಲ ಅದು ಬರೀನನ್ನ ಭ್ರಮೆನಾ.
ಮಾವ ನೋಡುದ್ರೆ ಹಂಗೇಳ್ತಾನೆ. ಅಣ್ಣ ನೋಡುದ್ರೆ ತಿಳೀದಂಗ್ ಏನೋ ಕೆಲ್ಸ ಮಾಡ್ತಿದಾನೆ.
ಛೇ....... ತಲೇಲಿ ನೂರಾರ್ ಆಲೋಚನೆಗಳು ಯಾವುದನ್ನಾ ನಂಬಲಿ ಯಾವುದನ್ನು ಬಿಡಲಿ.
ಇದುವರ್ಗು ಇವನು ನನ್ನ ಬಿಟ್ಟು ಒಂದು ಕೆಲ್ಸಕ್ಕೂ ಕೈ ಹಾಕ್ತಿರ್ಲಿಲ್ಲ ಈಗೇನು ಅಂತಾ ಗನಂಧಾರಿ ಕೆಲ್ಸ ಅಂತ ನನ್ನತ್ರನೇ ಮುಚ್ಚಿಡ್ತಾನೆ. ಹಾಂ........ ಈಗ್ ಅರ್ಥ ಆಯ್ತು . ಮಾವ ಹೇಳ್ದಂಗೆ ಏನೋ ಸಂಚು ಮಾಡ್ತಿದಾನೆ! ಪ್ರೀತ ಅನ್ನೋ ಬಟ್ಟೆ ಇಂದಾ ನನ್ ಕಣ್ಣು ಮುಚ್ಚಿ ನನ್ನ ದಡ್ಡಾ ಮಾಡ್ಬಿಟ್ರಲ್ಲಾ..... ತಪ್ಪು ಮಾಡ್ಬಿಟ್ಟ ಶಂಕ್ರ ಬಹಳ ದೊಡ್ಡ ತಪ್ಪು ಮಾಡ್ಬುಟ್ಟೆ.
ಅವ್ವ, ಎಲ್ಲಿದ್ಯವ್ವಾ ನೋಡವ್ವ..... ತಾಯಿಯಿಲ್ಲದ ತಬ್ಬಲಿ ಅಂತ ಯಾವ ರೀತಿ ಮೋಸ ಮಾಡ್ತಾವ್ರೆ. ನನೀನ್ ಇದ್ದಿದ್ರೆ ಹಿಂಗೆಲ್ಲ ಆಗಕ್ ಬಿಡ್ತಿದ್ದೆನವ್ವಾ ನೀನು. ನಂಗೆ ನ್ಯಾಯ ಬೇಕವ್ವಾ, ಇವ್ರ್ಗೆಲ್ಲಾ ಮೋಸ ಮಾಡಕ್ ಮನಸ್ಸಾದ್ರು ಹೆಂಗ್ ಬರುತ್ತವ್ವ.
ಹೌದು, ಇದನ್ನ ಇಲ್ಲೇ ಬಿಡೋದ್ ಬೇಡ. ಇವರ್ನಿಂಗೆ ಬಿಟ್ರೇ ಇವತ್ ಆಸ್ತಿಗ್ ಕೈ ಹಾಕ್ದವು ನಾಳೆ ಪ್ರಾಣಕ್ ಕೈ ಹಾಕ್ದೆ ಇರ್ತರಾ ಇಷ್ಟುದಿನ ಅಣ್ಣ-ಅಮ್ಮ ಅನ್ನೋ ಅಭಿಮಾನಕ್ಕೆ ಕೈ ಕಟ್ಟಿ ಅವರ್ ಹೇಳಿದ ಕೆಲ್ಸನ ಮೈ ಬಗ್ಗಿ ಮಾಡುದ್ನಲ್ಲ ಅದಕ್ಕೆ ಸಿಕ್ಕಿರೋ ಪುರಸ್ಕಾರ ಇದು.
ಶಂಕ್ರ..... ಶಂಕ್ರ...... ಎಂಥಾ ನೀಚ ಕೆಲ್ಸ ಮಾಡ್ಬಿಟ್ಟೋ. ನಿನ್ನನ್ನಾ ಬುಟ್ಟುಬಿಡ್ತೀನಾ? ಊರೋರ್ ಮುಂದೆ ನಿಜವಾದ ಬಣ್ಣ ಬಯಲು ಮಾಡಿ ನಿನ್ನುನ್ನಾ ಈ ಊರೇ ಬಿಟ್ಟು ಓಡುಸ್ಲಿಲ್ಲಾ ಕೇಳು
ಬಾ....... ನಾಳೆ ಸೂರ್ಯ ಹುಟ್ಟೋದ್ರೊಳಗೆ ಈ ಊರಲ್ಲಿ ಇಲ್ಲ ನೀನ್ ಇರ್ಬೇಕು ಇಲ್ಲ ನಾನ್ ಇರ್ಬೇಕು.
ದೃಶ್ಯ-೫
(ದೃಶ್ಯ-೧ ರಿಂದ ಮುಂದುವರೆಯುತ್ತದೆ)
(ಅಮ್ಮ ಬಿಂದಿಗೆ ಇಳಿಸಿ ನೋಡುತ್ತಾರೆ ಅಷ್ಟರಲ್ಲಿ ಶಿವೂ ಶಂಕ್ರು ತಲೆಗೆ ಹೊಡೆದು ಬೀಳಿಸುತ್ತಾನೆ. ಅಮ್ಮ ದಿಗ್ಭ್ರಾಂತಳಾಗಿ ಬಂದು ಶಂಕ್ರುವನ್ನು ಎತ್ತಿ ತೊಡೆ ಮೇಲೆ ಕೂರಿಸಿ ಸಾಂತ್ವಾನ ಮಾಡಿ...... ನೀರು ಚಿಮುಕಿಸಿ ಶಿವು ಕಡೆ ನೋಡ್ತಾಳೆ)
ಅಮ್ಮ:ಎಂಥಾ ಕೆಲ್ಸ ಮಾಡ್ಡೋ..... ನೀನೇನ್ ಮನಷ್ಯನೋ ಮೃಗನೋ ಏನೋ ದೊಡ್ಡರೋಗ ಬಂದಿರೋದು ನಿಂಗೆ? ಏನೋ ಮಾಡ್ದೆ ನನ್ಮಗನಿಗೆ.
ಶಿವು :ಓಹ್ ನಿನ್ಮಗ? ಹಂಗಾದ್ರೆ ನಾನ್ಯಾರಮ್ಮ......
ಎಷ್ಟೇ ಆದ್ರೂ ಸಾಕು ಮಗ ಸಾಕು ಮಗ ಅಲ್ವಾ! ನಿನ್ ಮಗಾ...... ನಿನ್ ಮಗಾ..... ಏನ್ಮಾಡವ್ನೆ ಗೊತ್ತಾ?ನಂಗೆ ಬರ್ಬೇಕಾಗಿರೋ ಆಸ್ತಿನಾ ನನಗೇ ಗೊತ್ತಿಲ್ದೆ ಹೊಡಿಯೋ ಸಂಚು ಮಾಡಿದಾನೆ ಅದನ ಕೇಳಕ್ ಹೋದ್ರೆ ನನ್ನತ್ರನೇ ಮುಚ್ಚು ಮರೆ ಮಾಡ್ತಾವ್ನೆ.
ಅಮ್ಮ:ಏನ್ ಮಾತಾಡ್ತಿದ್ದೀಯಾ......? ಮುಚ್ಚು ಬಾಯಿ
ಶಿವು :ನನ್ಬಾಯ ಯಾಕಮ್ಮ ಮುಚ್ಚಿಸ್ತಿದ್ದೀಯಾ? ನಿಜ ಗೊತ್ತಾಯ್ತು ಅಂತನಾ?
ಅಮ್ಮ:ಅಯ್ಯೋ ದೇವರೇ.... ನನ್ ಕೈತುತ್ತು ತಿಂದು ಬೆಳೆದಿದ್ ಮಗನಾ ಇವ್ನು?ಶಂಕ್ರು ನಿನ್ ಚೆನ್ನಾಗಿರ್ಬೇಕು ಅಂತ ಹೇಳಿ ನಿನ್ನ ಕುಟುಂಬ ಚೆನ್ನಾಗಿ ಆಗಬೇಕು ಅಂತ ಹೇಳಿ, ನಿನ್ ಸಂತೋಷಕ್ಕೋಸ್ಕರ ತನ್ನ ಸಂಪೂರ್ಣ ಆಸ್ತಿ ನಿನ್ನ ಹೆಸರಿಗೆ ಬರೆಯೋಕೆ ಹೊರ್ಟಿರೋ ನಿಮ್ಮಣ್ಣನ ಮೇಲೆ ಇಂಥಾ ಆರೋಪ ಮಾಡ್ತಿದ್ದೀಯಲ್ಲಾ ಆ ದ್ಯಾವ್ರು ಮೆಚ್ಚುತ್ತಾನಾ ನಿನ್ನಾ?
ನಿಮ್ಮವ್ವಾ ಎತ್ಕೊಟ್ಟುಬಿಟ್ಟು ಆ ಶಿವನಪಾದ ಸೇರ್ಬುಟ್ಲು. ಆವಾಗಿಂದ ನಿಂಗೇ ಎಲ್ಲೂ ಆ ನೋವು ಕಾಡ್ಬಾರ್ದು ಅಂತ ಹೇಳಿ, ನಿಂಗೇ.... ಎಲ್ಲೂ ಕಡಿಮೆ ಮಾಡ್ದೆ ಸ್ವಂತ ಮಗನ್ಗಿನ್ನಾ ಹೆಚ್ಚಾಗಿ ಸಾಕಿದ್ನಲ್ಲೋ. ನೀನ್ ನೋಡುದ್ರೆ ಊರೋರ್ ಮಾತು ಕಟ್ಕಂಡ್ ನಿಮ್ಮಣ್ಣನ ಮೇಲೆ ಕೈ ಮಾಡಿದ್ದೀಯಲ್ಲೋ. ಯಾರೋ ನಿಂಗ್ ತಲೆ ಕೆಡ್ಸಿದ್ದು?
(ಅಮ್ಮ ಶಿವೂ ಬಳಿ ಹೋಗಿ ನೀರು ಕುಡಿಸಿ, ಕ್ಷೇಮ ನೋಡಿ ಬರುತ್ತಾಳೆ)
ನೋಡ್ ಶಿವೂ, ಕಾಂಚಾಣದ್ ಮೇಲಿನ ಮೋಹ ಅಣ್ಣತಮ್ಮಂದಿರನ್ನೂ ದಾಯಾದಿಗಳ ಮಾಡುತ್ತಂತೆ. ಆ ಪಕ್ಕದೂರಿನಲ್ಲಿ ಏನಾಯ್ತು ಅಂತ ನೀನೇ ನೋಡ್ದಲ್ಲ. ಆ ಬಸವರಾಜು ಅವನ್ಯಾವನೋ ದಾಸಯ್ಯನ ಮಾತು ಕಟ್ಕೊಂಡು ಸೊಂತ ಅಣ್ಣನ ಹಲ್ಲೆ ಮಾಡಿ, ಇರೋ ಜಮೀನ್ ಮಾರಿ ಬಂದಿದ್ದ ದುಡ್ಡೆಲ್ಲಾ ನುಂಗಿ ನೀರು ಕುಡಿದೂ ಇವತ್ತು ಕೂಲಿ ಕೆಲ್ಸ ಮಾಡ್ತಾವ್ನೆ ಇಂತಾ ಪರಿಸ್ಥಿತಿ ನನ್ಮಕ್ಳುಗೆ ಬರಬಾರ್ದು. ಅಷ್ಟೇಯಾಕೆ ನಮ್ಮೂರಲ್ಲಿ ಇಂತಾ ಅದೆಷ್ಟೋ ಸಮಸ್ಯೆಗಳನ್ನ ಕುಂತು ಬಗೆಹರಿಸಿಲ್ವಾ! ಅದ್ಬಿಟ್ಟು ನಿನ್ನಂಗ್ ಕತ್ತಿ ಮಸಿದ್ರೆ ಇವತ್ತು ನಾವ್ಯಾರು ಇಲ್ಲಿರ್ತಾನೆ ಇರಲಿಲ್ಲ ತಿಳ್ಕೊ.
ಏನು? ನೀನು ನಿನ್ ಪಾಲಿಂದು ಕೇಳಕ್ ಬಂದಾ?ಇಲ್ನೋಡೋ ನಿಮ್ಮಣ್ಣಂದೂ ಎಂಥಾ ದೂರಾಲೋಚನೆ, ಎಂಥಾ ತ್ಯಾಗ ಅವನ ಪಾಲಿಂದೂ ಸೇರಿಸಿ ನಿಂಗ್ ಬರ್ಯೋಕೆ ಹೊರ್ಟಿದಾನೆ.
ನೋಡು ಶಿವೂ, ಜನಾನೆ ಹಿಂಗ್ ಕಣಪ್ಪ, ನಿನ್ನಿಂದ ಏನಾದ್ರೂ ಲಾಭ ಆಯ್ತದೆ ಅಂದ್ರೆ, ಹೆಂಗಾರೂ ಸಂಚು ಮಾಡಿ ತಲೆ ಹೊಡೀತಾರೆ. ಹಂಗೇ ನಿಂಗು ಯಾರೋ ತಲೆ ಕೆಡ್ಸಿದಾರೆ.ಆಗಿದ್ದು ಆಗೋಯ್ತು ಹೋಗಿ ನಿಮ್ಮಣ್ಣನತ್ರ ಆಗಿದ್ಕೆಲ್ಲಾ ಕ್ಷಮೆ ಕೇಳಿ ಅವನ ಕಾಲಿಗ್ ಬಿದ್ದೂ ತಪ್ಪೊಪ್ಪಿಕೊಂಡು ಇನ್ಮೇಲಾದ್ರೂ ಸರಿಯಾಗಿ ಬಾಳೋದು ಕಲಿ.
ಈ ದೊಡ್ದು-ದೊಡ್ಡೋರೆ ತಮ್ಮ ಲಾಭಕ್ಕೆ, ಪದವಿಗೆ, ಗೌರವಕ್ಕೇ ಈ ಅಮಾಯಕ ಜನ್ರನಾ ಬಳಿ ತಗತಾರೆ.
ಶಿವು :ಅಣ್ಣಾ ಅದಿರ್ಲಿ ಮೊನ್ನೆ ನೋಡಕೋಗಿದ್ವಲ್ಲ ಏನಾಯ್ತು ಆ ಹುಡ್ಗಿ ಕಥೆ
ಶಂಕ್ರು:ಅದಾ ನಂಗ್ಯಾಕೋ ಆ ಸಂಭಂದ ಬೇಡ ಅನ್ನುಸ್ತು ಕಲ
ಶಿವು :ಹಂಗಾ ಸರಿ ಸರಿ, ಯಾಕಣ್ಣ ಹುಡ್ಗಿ ಅಂತು ಲಕ್ಷಣವಾಗಿದ್ಲಲ್ವ ಏನ್ ಕಮ್ಮಿಯಾಗಿತ್ತು
ಅಮ್ಮ:ಲೇ ಕಳ್ಳ ಅದ್ಯಾಕೆ ಒಳ್ಳೆ ಕಳ್ ಕೊರ್ಮನ್ ತರ ಮಾತಾಡ್ತೀಯಾ ನೀನು ಯಾವ ಉದ್ದೇಶ ಇಟ್ಕೊಂಡು ಈ ಮಾತ್ ಕೇಳ್ತಿದ್ಯ ಅಂತ ನಂಗ್ ಚೆನ್ನಾಗ್ಗೊತ್ತು
ಶಿವು :ಏನಕಂದ್ರಮ್ಮ ನಂಗೇನು ಅರ್ಥ ಆಗ್ತಿಲ್ಲ
ಅಮ್ಮ:ನೀನ್ ಆ ಹುಡ್ಗಿ ತಂಗಿ ಜೊತೆ ಕದ್ದು ಮುಚ್ಚಿ ಮಾತಾಡ್ತಿದ್ದ್ ನಾನು ನಿಮ್ಮಣ್ಣ ನೋಡಿಲ್ಲ ಅನ್ಕೊಂಡ ನಿಮ್ ಅಣ್ಣಂಗೂ ಆ ಸಂಭಂದ ಇಷ್ಟ ಐತೆ ಕಣ ಸುಮ್ನೆ ನಿನ್
ಗೊಳ್ಳೋಒಯ್ಕಾಂತವ್ನೆ ಅಷ್ಟೆಯಾ
ಅಕ್ಕ ತಂಗಿನ ಮದ್ವೆ ಆಗೋಣ
ಶಿವು :ಸರಿ, ಸರಿ ವೊ ಬರಿ ಮಾತಲ್ಲೆ ಹೊಟ್ಟೆ ತುಂಬಿಸ್ತ್ಯ ಇಲ್ಲ ಅಡ್ಗೆ ಗಿಡ್ಗೆ ಮಾಡ್ತಿಯವ್ವ
ಅಮ್ಮ:ಒಂದತ್ ನಿಮಿಷ ಹಿಂಗೆ ಕುಂತ್ ಮಾತಾಡ್ತಿರಿ ಹಿಟ್ ಮಾಡ್ಕೊಂಡು ತರ್ತೀನಿ ಅವ್ರೆಕಾಳ್ ಸಾರ್ ಮಾಡಿವ್ನಿ
ಮಾವ:ಅಕ್ಕ ಅಕ್ಕ ಇದ್ದೀಯ ಮನೇಲಿ
ಶಿವು :ಓ ಮಾವ ಬನ್ನಿ ಬನ್ನಿ , ಅವ್ವ ನೋಡವ್ವ ನಿನ್ ಹುಡ್ಕಂಡ್ ಯಾರ್ ಬಂದವ್ರೆ
ಮಾವ :ಲೇ ತರ್ಲೆ ನನ್ಮಗನೇ ಕುಕ್ಕುರ್ಸಲ ಸುಮ್ನೆ ಏನ್ರಪ್ಪ ಎಲ್ಲ ಸಂದಾಗಿದ್ದೀರಾ
ಶಿವು :ಎಲ್ಲ ಚೆನ್ನಾಗಿದ್ದೀವಿ ಮಾವ
ಏನೇ ಹೇಳು ಅಕ್ಕ ನಮ್ ಭಾವ ರಾಜೀವಪ್ಪ ಹೋಗಕ್ ಮುಂಚೆ ಮಕ್ಳುಗೆ ಎಲ್ಲ ಚೆನ್ನಾಗ್ ಮಾಡಿಟ್ ಹೋದ ಒಂದ್ ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಮಾಡ್ಲಿಲ್ಲ ಆವಯ್ಯ
ನಿನ್ ಮಗ ಹೇಳ್ಬೇಕ ಅಕ್ಕ ಈ ಮನೆ ಮಹಾಲಕ್ಷ್ಮಿ ನೀನು ಶಿವುಗೆ ಯಾವತ್ತು ಅವರವ್ವ ಇಲ್ದೆ ಇರೊ ಕೊರಗೆ ಇಲ್ದೆ ಸಾಕಿದ್ದಿಯ ನಮ್ ಶಂಕ್ರುನು ಅಷ್ಟೇ ಅವ್ನನ್ನ ಸ್ವಂತ ತಮ್ಮನ್ ತರನೇ ಅವ್ನ್ ಅದೃಷ್ಟ ಮಾಡಿದ್ದ ಬಿಡು ನಮ್ ಶಿವು
ಅಮ್ಮ:ಅಲ್ವ ಮತ್ತೆ ನನ್ ಮಕ್ಳನ್ದ್ರೆ ತಮಾಸೆನ ಈ ಹಳೆ ಜೀವಕ್ಕೆ ಎರಡ್ ಕಣ್ಣು ಕಣಪ್ಪ ಇವ್ರು.